ವಸಂತ ಕಾಲ ಮುಗಿದು ಬೇಸಿಗೆ ಕಾಲ ಶುರುವಾಗುತ್ತಿದೆ ( ನೆದರ್ಲ್ಯಾಂಡ್ ) ಇಲ್ಲಿ . ಹೊರಗಡೆ ಜನರ ಓಡಾಟ ಕಾಣಿಸುತ್ತಿದೆ. ಬಿಸಿಲಿಗೆ ಮೈ ಒಡ್ಡುತ್ತಿದ್ದಾರೆ. ಚಳಿಯ ಅನುಭವ ಮರೆಯಾಗಿ ಬಿಸಿಯ ತಾಪ ಶುರುವಾಗುತ್ತಿದೆ. ಕೊರೊನ್ಹ ವೈರಸ್ ಆವರಸಿ ಹೊರಗಡೆಯ ಅದ್ಭುತ ಪ್ರಕೃತಿ ಆಸ್ವಾದಿಸುದಕ್ಕೆ ಕಷ್ಟ ಆಗುತ್ತಿದೆ, ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿದೆ.
ಇಂದು ಬೆಳಿಗ್ಗೆ ಬಾಲ್ಕನಿ ಯಲ್ಲಿ ಕೂತು ಟೀ ಕುಡಿಯತ್ತ ಹೊರಗಡೆ ನೋಡುತ್ತಾ ಕುಳಿತ್ತಿದ್ದಾಗ ಹಳೆಯ ನೆನಪುಗಳು ಶುರುವಾಯಿತು. ನನ್ನ ಶಾಲೆಯ ದಿನಗಳು, ಕಾಲೇಜು ದಿನಗಳು, ಸ್ನೇಹಿತರು ಅಲ್ಲಿಂದ ಮುಂದೆ ನನ್ನ ಮೊದಲ ಕೆಲಸ … ಹೀಗೆ ಎಲ್ಲಿಂದ ಎಲ್ಲಿಗೆ ನನ್ನ ಪಯಣ ಸಾಗುತ್ತಿದೆ ಎಂದು.
ಮಲೆನಾಡಿನ ಹಚ್ಚ ಹಸಿರಿನ ನಡುವೆ ಬೆಳೆದರು ಅದೇಕೋ ಗೊತ್ತಿಲ್ಲ ನನಗೆ ಕಾಡಿಗಿಂತ ಸುಮುದ್ರ ತೀರಾ ತುಂಬ ನೆಚ್ಚು. ಸಮುದ್ರದ ಅಲೆಗಳನ್ನು ನೋಡುತ್ತಾ ಕೂತರೆ ಸಮಯದ ಪರಿವೆ ಇರುತ್ತಿರಲಿಲ್ಲ. ಊರು ಸಾಗರ ಆದ್ರೂ ಅಲ್ಲಿಗಿಂತ ಬೈಂದೂರು ತುಂಬ ಅಚ್ಚುಮೆಚ್ಚು , ಅಲ್ಲಿನ ನೆನೆಪೇ ತುಂಬ ಇದೆ ಅನಿಸುತ್ತೆ. ಅಲ್ಲಿನ ಸ್ನೇಹಿತರು ತುಂಬ ಕಮ್ಮಿ ಅಥವಾ ನೆನಪೇ ಇಲ್ಲ ಅಂತ ಹೇಳಬಹುದು.
ಸ್ನೇಹದ ರುಚಿ ನನಗೆ ಸಿಕ್ಕಿದ್ದು ತೀರ್ಥಹಳ್ಳಿ ಅಲ್ಲಿ . ನಾನು ಭೇಟಿ ಆದ ಮೊದಲ ವ್ಯಕ್ತಿ ಈಗ ಕೂಡ ಅಂದರೆ ೨೮ ವರ್ಷಗಳ ನಂತರವು ನನ್ನ ಒಳ್ಳೆಯ ಸ್ನೇಹಿತನಾಗಿ ಇದ್ದಾನೆ. ಸ್ನೇಹ ಬೇಕು ಅಂತ ಮಾಡಿಕೊಳ್ಳಕ್ಕೆ ಆಗಲ್ಲ ಅದು ತಾನೇ ಆಗುತ್ತೆ ಅನ್ನೋದು ನನ್ನ ವಿಷಯದಲ್ಲಿ ಸತ್ಯ ಆಯಿತು. ಸ್ನೇಹಿತರು ಅಂದ್ರೆ ಹೀಗಿರಬೇಕೇ ಅನ್ನೋ ಮಟ್ಟಕ್ಕೆ ನಮ್ಮ ಗೆಳೆತನ ಇವತ್ತಿಗೂ ಮುಂದುವರಿತಿದೆ. ಹಾಗೆ ಸ್ನೇಹಿತರು ಇದ್ದಾರೆ ಆದ್ರೆ ಜೊತೆಗಿಲ್ಲ ಅನ್ನೋ ನೋವು ಇದೆ. ಸ್ನೇಹಿತರು ಅಂದ್ರೆ ನಂಬಿಕೆ, ಪ್ರೀತಿ, ಗೌರವ, ಸಂತೋಷ , ಶಕ್ತಿ, ತಮಾಷೆ …. ಎಷ್ಟು ಬರೆದ್ರು ಕಮ್ಮಿನೆ. ನಿನ್ನ ಜಯ ಮತ್ತು ಅಪಜಯ ಎರಡರಲ್ಲೂ ಕಾಲು ಎಳೆಯೆದು ಮತ್ತೆ ಜೊತೆಗೆ ನಿಲ್ಲೋದು ಅವನಿಗೆ ಮಾತ್ರ ಸಾಧ್ಯ ಅಲ್ವಾ ?
ಶಾಲೆ, ಕಾಲೇಜು ಎಲ್ಲ ಕಡೆ ಹುಡುಗಿಯ ಪ್ರೀತಿಗೆ ಪ್ರಯತ್ನ ಪಟ್ಟಿದ್ದೆ ಪಟ್ಟಿದ್ದು ಆದ್ರೆ ಸಿಕ್ಕಿದ್ದು ಬೆಂಗಳೂರಿನಲ್ಲಿ ಅದು ಕೆಲಸ ಶುರುವಾದ ಮೇಲೆ. ನಂತರ ಜೀವನದ ದಿಕ್ಕು ತುಂಬ ಬದಲಾಯ್ತು , ಅದನ್ನು ನಾನು ಯಾವತ್ತೂ ಯೋಚನೆ ಕೂಡ ಮಾಡಿರಲಿಲ್ಲ ಆ ರೀತಿಯಾಗಿ ಬಲಾಗಿದೆ. ಶಾಲಾ ಮತ್ತು ಕಾಲೇಜಿನಲ್ಲಿ ಪ್ರೀತಿಗಾಗಿ ನಡೆದ ಪ್ರಯತ್ನಗಳು , ರೋಚಕ ಹೊಡೆದಾಟಗಳು , ಹುಡುಗಿಯರ ಹಿಂದೆ ಅಲೆದಿದ್ದು ಎಲ್ಲವು ಸಿನಿಮಾ ರೀಲಿನಂತೇ ಬಂದು ಹೋಯಿತು. ಶಾಲೆ, ಕಾಲೇಜಿನಲ್ಲಿ ಆದದ್ದು ಪ್ರೀತಿ ಅಲ್ಲ ಅಂತ ತಿಳಿಲಿಕ್ಕೆ ತುಂಬ ವರ್ಷನೆ ಬೇಕಾಯ್ತು. ಶಾಲಾ ಮತ್ತು ಕಾಲೇಜಿನಲ್ಲಿ ಪ್ರೀತಿ ಪಡೆಯುವ ಎಲ್ಲ ಪ್ರಯತ್ನದಲ್ಲಿ ನನ್ನ ಸ್ನೇಹಿತರ ಪಾತ್ರ ತುಂಬ ದೊಡ್ಡದಿದೆ . ಈಗ ನನಗೆ ಸಿಕ್ಕ ಪ್ರೀತಿಯೆ ನನ್ನ ಶಕ್ತಿ , ಸ್ಪೂರ್ತಿ. ಪ್ರೀತಿ ಅಂದ್ರೆ ಪಡೆಯುವದಲ್ಲ ಕೊಡುವುದು ಅಂತ ಅರ್ಥ ಆಗಿದೆ.
ನಮಗೆ ಶಾಲೆಗೆ ರಜೆ ಬಂದರೆ ನಮ್ಮ ಠಿಕಾಣಿ ಯಾವಾಗಲು ಮಾವನ ಮನೆ, ಚಿಕ್ಕಮ್ಮನ ಮನೆ, ದೊಡ್ಡಪ್ಪನ ಮನೆ, ಹೀಗೆ ಒಂದೊಂದು ರಜೆಯಲ್ಲಿ ಒಬ್ಬರ ಮನೆ ನಮ್ಮ ಅಡ್ಡ ಆಗುತಿತ್ತು. ಚಿಕ್ಕಮ್ಮನ ಮಕ್ಕಳು, ಮಾವನ ಮಕ್ಕಳು, ದೊಡ್ಡಮ್ಮನ ಮಕ್ಕಳು ದೊಡ್ಡ ಸೈನ್ಯನೇ ಇರುತಿತ್ತು. ಏನೇ ಸಮಾರಂಬ ಆದರೂ ನಮ್ಮ ಸೈನ್ಯ ಕೆಲಸಕ್ಕೆ ರೆಡಿ ಇರುತಿತ್ತು. ಈಗ ಅವರೆಲ್ಲ ಎಲ್ಲಿ ಅನ್ನುವ ಹಾಗೆ ಆಗಿದೆ. ಎಲ್ಲರು ಅವರ ಅವರ ಜೀವನದಲ್ಲೂ ತುಂಬ ಬ್ಯುಸಿ ಕೆಲವರ ಬಗ್ಗೆ ಯೋಚನೆ ಮಾಡೋವಾಗೆಲ್ಲ ನನಗೆ ಅನಿಸೋದು ನನ್ನಿಂದ ಏನಾದ್ರು ತಪ್ಪಾಯ್ತಾ ಅಂತ ? ಸ್ನೇಹ ಮತ್ತು ಪ್ರೀತಿಯಲ್ಲಿ ಮಾತು ತಪ್ಪು ಮಾತುಗಳು ಬಂದ್ರೆ ಕೆಲವೆ ದಿನಗಳಲ್ಲಿ ಸರಿಯಾಗುತ್ತೆ ಆದರೆ ಸಂಬಂದಿಕರಲ್ಲಿ ಈ ರೀತಿಯಾಗಿ ಯಾಕೆ ಆಗೋಲ್ಲ ಅಂತ ಯಕ್ಷ ಪ್ರಶ್ನೆ? ಸ್ನೇಹ ಮತ್ತು ಪ್ರೀತಿಯಲ್ಲಿ ಅವು ಹುಟ್ಟಿದ ಮೇಲೆ ಸಂಬಂಧ ಬೆಳೆಯುತ್ತೆ ಆದರೆ ಹುಟ್ಟಿದ ಕೂಡಲೇ ಸಂಬಂಧ ಇರೋದು ಸಂಬಂಧಿಕರಲ್ಲಿ, ಆದರೂ ನಮ್ಮಲ್ಲಿನ ಬೇಡದ ಬಿಗುಮಾನ , ಅರ್ಥವಿಲ್ಲದ ಅಸೂಯೆ, ಅನಗತ್ಯ ಅಹಂಕಾರ ಎಲ್ಲವನ್ನು ಒಂದೇ ಏಟಿಗೆ ಹಾಳು ಮಾಡುತ್ತವೆ. ಈಗಂತು ಅವರೆನ್ನೆಲ್ಲ ವಾಟ್ಸಾಪ್ , ಫೇಸ್ಬುಕ್ ನಲ್ಲಿ ನೋಡೊ ಹಾಗಾಗಿದೆ. ಎಲ್ಲರನ್ನು ಮತ್ತೆ ಒಂದು ಕಡೆ ಸೇರಿಸಿ ಹಳೆಯ ನೆನಪುಗಳನ್ನು ತಾಜಾ ಮಾಡುವ ಸಮಯ ಬಂದಿದೆ.
ನಿಮ್ಮ ಪ್ರೀತಿಯ
ಶ್ರೀ