ಅನಾದಿಕಾಲದಿಂದಲೂ ಇತಿಹಾಸದ ಪ್ರತಿ ಪುಟದಲ್ಲೂ ನಾವು ಓದುವ ಒಂದು ವಾಕ್ಯ ” ನಮ್ಮನ್ನು ರಾಜ ಮಹಾರಾಜರು ಅಳುತ್ತಿದ್ದರು ” ಎಂದು. ಇತಿಹಾಸ ಓದುತ್ತ ಹೋದರೆ ಪ್ರಖ್ಯಾತ ಮತ್ತು ಕುಖ್ಯಾತ ರಾಜ ಮಹಾರಾಜರು ವರುಷಾನುಗಟ್ಟಲೆ ಭಾರತವನ್ನ ಆಳಿರುವ ಮಾಹಿತಿ ಇದೆ. ನಮ್ಮವರಲ್ಲದೆ ಹೊರಗಿನಿಂದ ಬಂದ ಮುಘಲರು, ಬ್ರಿಟಿಷರು ಸಹಿತ ನೂರಾರು ವರ್ಷಗಳ ಕಾಲ ನಮ್ಮನ್ನು ಆಳಿದರು ಎಂದೇ ಹೇಳುತ್ತೇವೆ. ಸ್ವಾತಂತ್ರ ತರುವಾಯ ಭಾರತದಲ್ಲಿ ಆಳುವ ವ್ಯವಸ್ಥೆ ಕೊನೆಯಾಗಿ, ಶುರುವಾಗಿದ್ದೇ ” ಪ್ರಜಾಪ್ರಭುತ್ವ – ಪ್ರಜೆಗಳೇ, ಪ್ರಜೆಗಳಿಂದ , ಪ್ರಜೆಗಳಿಗೋಸ್ಕರ ” ಎನ್ನುವ ವ್ಯವಸ್ಥೆ. ಈಗಿರುವ ಪ್ರಶ್ನೆ ಏನೆಂದರೆ ನಿಜವಾಗಿಯೂ ಪ್ರಜೆಗಳಿಂದ ಆರಿಸಲ್ಪಟ್ಟ ಪ್ರಜೆ ( ಜನ ಪ್ರತಿನಿಧಿಗಳು) ಪ್ರಜೆಗಳಿಗೋಸ್ಕರ ಕೆಲಸ ಮಾಡುತ್ತಿದ್ದಾರೆಯೇ ಎಂದು ? ಪ್ರಜಾಪ್ರಭುತ್ವ ಪಾಲಿಸಲಾಗುತ್ತಿದೆಯೇ ?
ನನ್ನ ಉತ್ತರ ಖಂಡಿತ ಇಲ್ಲ. ಜನ ಪ್ರತಿನಿಧಿಗಳು ಪ್ರತಿನಿಧಿಸುತ್ತಿರುವುದು ಜಾತಿ ಮತ್ತು ಧರ್ಮವನ್ನು. ವಿಪರ್ಯಾಸ ಅಂದರೆ ಪ್ರಜೆಗಳು ಆರಿಸುತ್ತಿರುವುದು ಕೂಡ ಅದನ್ನೇ ತಾನೇ. ಪ್ರಜೆಗಳು ಆರಿಸಿದ ಜನ ಪ್ರತಿನಿಧಿ ತಮ್ಮ ತಮ್ಮ ಊರಲ್ಲಿ ಏನು ಅಭಿವೃದ್ಧಿ ಮಾಡುತ್ತಾನೆ ಅನ್ನುವುದಕ್ಕಿಂತ ತಮ್ಮ ಜಾತಿ ಮತ್ತು ಧರ್ಮಕ್ಕೆ ಏನು ಮಾಡುತ್ತಾನೆ ಅನ್ನುವದಕ್ಕೆ ಮೊದಲ ಆದ್ಯತೆ ಕೊಡುತ್ತಾರೆ. ಹೀಗಾದರೆ ದೇಶದ ಅಭಿವೃದ್ಧಿ ಹೇಗೆ ಸಾಧ್ಯ?
ಪ್ರಜೆಗಳೇ ಮತ್ತು ಪ್ರಜೆಗಳಿಗೋಸ್ಕರ ನಡುವೆ ಇರುವ ಪ್ರಜೆ ( ಜನ ಪ್ರತಿನಿಧಿ) ನಮ್ಮಿಂದ ದೂರವಾಗಿದ್ದಾನೆ. ನಮ್ಮನ್ನು ಪ್ರತಿನಿಧಿಸಿಬೇಕಾಗಿದ್ದ ಜನ ಪ್ರತಿನಿಧಿಗಳು ಈಗ ರಾಜರಾಗಿದ್ದಾರೆ ಮತ್ತು ಪ್ರಜೆ ಆಳಾಗಿದ್ದಾನೆ. ಹಿಂದಿನಂತಯೇ ನಮ್ಮನ್ನು ಆಳುವ ರಾಜರ ಕಾಲ ಪುನರಾವರ್ತನೆ ಆಗುತ್ತಿದೆ ಎಂದು ಅನಿಸುತ್ತಿದೆ ರಾಜರು ರಾಜ್ಯಭಾರ ಮಾಡಬೇಕಾದರೆ ಮಂತ್ರಿಯು ಪ್ರಜೆಗಳ ಮತ್ತು ರಾಜರ ನಡುವೆ ಸೇತುವೆ ಥರ ಕೆಲಸ ಮಾಡುತ್ತಿದ್ದ. ಆತನು ಜನರ ಎಲ್ಲ ಸಮಸ್ಯೆಗಳನ್ನು ಅರಿತು ರಾಜನಿಗೆ ಅದರ ಬಗ್ಗೆ ಮನವರಿಕೆ ಮಾಡಿಕೊಟ್ಟು ಪರಿಹಾರ ಸಿಗುವಂತೆ ನೋಡಿಕೊಳ್ಳುತ್ತಿದ್ದ. ಹಾಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಂತ್ರಿಗಳಿಗೆ ರಾಜರ ಸ್ಥಾನ ಕೊಟ್ಟು ಪ್ರಜೆಗಳ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಲಾಗಿದೆ. ದುಃಖದ ಸಂಗತಿ ಏನೆಂದರೆ ಸಮಸ್ಯೆಗಳನ್ನು ಅವರೇ ಹುಟ್ಟುಹಾಕಿ ಪ್ರಜೆಗಳನ್ನ ದಾರಿ ತಪ್ಪಿಸಿ ಮತ್ತು ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ರಾಜರಂತೆ ಆಳಲು ಶುರುಮಾಡಿದ್ದಾರೆ.
ಈಗಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ ಇರಲಿ, ಪಂಚಾಯತ್ ಸದಸ್ಯನು ಕೂಡ ರಾಜನಾಗಿದ್ದಾನೆ ಅಂದರೆ ನಮ್ಮ ಈ ವ್ಯವಸ್ಥೆಗೆ ಅರ್ಥ ಇದೆಯೇ ? ನಿಮ್ಮ ಸಮಸ್ಯೆಗಳನ್ನೂ ಪರಿಹಾರ ಮಾಡುವುದು ನಂತರದ ಮಾತು, ಮೊದಲು ಅವರು ಸಮಸ್ಯೆಗಳನ್ನು ಅಲಿಸಿದರೆ ಹೆಚ್ಚು. ದುಡ್ಡು, ಧರ್ಮ ಜಾತಿ ಆಧಾರದ ಮೇಲೆ ಕೆಲಸಗಳು ಅಥವಾ ಪರಿಹಾರಗಳು ಸಿಗುತ್ತವೆ ಹೊರತು ನೀವೊಬ್ಬ ಪ್ರಜೆ ನಿಮಗೂ ಕೇಳುವ ಮತ್ತು ಪಡೆಯುವ ಹಕ್ಕಿನ ಆಧಾರದ ಮೇಲೆ ಸಿಗುವದು ಕನಸಿನ ಮಾತು. ನಮ್ಮಿಂದಲೇ ಆರಿಸಲ್ಪಟ್ಟು ನಮಗೋಸ್ಕರ ಕೆಲಸ ಮಾಡುವ ಅಧಿಕಾರ ಪಡೆದು ಆಡಳಿತ ನಡೆಸಬೇಕಾಗಿದ್ದ ರಾಜಕೀಯ ಪಕ್ಷಗಳು ಅಕ್ಷರಶ ನಮ್ಮನ್ನು ಆಳುತ್ತಿದ್ದಾರೆಯೇ ಹೊರತು ಆಡಳಿತ ನೋಡಿಕೊಳ್ಳುತ್ತಿದೆ ಅನ್ನುವುದು ಸುಳ್ಳಾಗಿದೆ.
ಪ್ರಜೆಗಳು ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ತಾವೇ ಆಡಳಿತ ನಡೆಸಲು ಕಳಿಸಿಕೊಟ್ಟ ಪ್ರಜೆಯಿಂದ ಯಾವುದೇ ಸಹಾಯ ಸಿಗದೇ ತಮ್ಮನ್ನು ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ – ಆಡಳಿತ ಪಕ್ಷವೇ ಅಥವಾ ಅಳುವ ಪಕ್ಷವೇ ಎಂದು ?
ಶ್ರೀ
ಥಿಂಕ್ ರೈಟ್