ಆತ್ಮೀಯ ಸ್ನೇಹಿತರೆ,
ಪ್ರತಿ ವರುಷ ಎಸ್ಎಸ್ಎಲ್ಸಿ , ಪಿಯುಸಿ ಮತ್ತು ಪದವಿ ಪರೀಕ್ಷೆಯಾ ಫಲಿತಾಂಶ ಬಂದಾಗ ನೀವೆಲ್ಲರು ಸಾಮಾನ್ಯವಾಗಿ ಕೇಳುವ ಸುದ್ದಿ ಎಂದರೆ “ಈ ವರ್ಷವೂ ಪರೀಕ್ಷೆಯ ಫಲಿತಾಂಶದಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ” ಅಂತ ಅಲ್ವಾ ? ಪರೀಕ್ಷೆಯ ಫಲಿತಾಂಶದ ವಿಷ್ಯದಲ್ಲಿ ಮಾತ್ರ ಈ ತರಹದ ಸುದ್ದಿ ಕೇಳಲು ಸಿಗುತ್ತದೆ. ಓದುವಾಗ ಎಲ್ಲ ವಿಷಯಗಳಲ್ಲೂ ಮುಂದಿರುವ ಹೆಣ್ಣು ಮಕ್ಕಳು ಓದು ಮುಗಿದ ಮೇಲೆ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಹಿನ್ನಡೆ ಆಗಲು ಕಾರಣಗಳೇನು ? ಅವಕಾಶ ಸಿಗುವುದಿಲ್ಲವೇ ಅಥವಾ ಕೊಡುವುದಿಲ್ಲವೇ? ಸಾಮಾಜಿಕ ಅಘೋಷಿತ ನಿರ್ಬಂಧವೇ? ಸಮಾನತೆ ಇಲ್ಲವೇ? ಏನು ಕಾರಣ?
ನಾನು ನೋಡಿದ ಹಾಗೆ ಅನೇಕ ಕಡೆ ಹೆಣ್ಣು ಮಕ್ಕಳ ಓದು ಮುಗಿಯುವ ಮುಂಚೆನೇ ಮದುವೆ ಮಾಡಿ ಬಿಡುತ್ತಾರೆ. ಗಂಡನ ಮನೆಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ. ಅನೇಕ ಕುಟುಂಬಗಳಲ್ಲಿ ಮಗಳು ಓದಿದರೆ ಒಳ್ಳೆ ಹುಡುಗ ಸಿಗುತ್ತಾನೆ ಅಂತ ಓದಿಸುತ್ತಾರೆಯೇ ಹೊರತು ಅವಳು ಏನಾದರು ಸಾಧಿಸಲಿ ಅನ್ನುವ ಆಲೋಚನೆಯೇ ಇರುವುದಿಲ್ಲ. ಎಷ್ಟೋ ಮನೆಗಳಲ್ಲಿ ಮದುವೆ ವಯಸ್ಸು ( ೧೬ -೧೮) ಬರುವವರೆಗೆ ಸಮಯ ಕಳೆಯಲಿ ಅಂತ ಓದಿಗೆ ಕಳಿಸುತ್ತಾರೆ. ಅವರಲ್ಲಿರುವ ಪರಿಣಿತಿಯನ್ನು ಸಾಧನೆಗೆ ಉಪಯೋಗಿಸಲು ಅವಕಾಶವೇ ಕೊಡುವುದಿಲ್ಲ. ಮದುವೆ ಆಗಿ ಗಂಡನ ಮನೆಗೆ ಕಳಿಸುವಾಗ “ಗಂಡ ಹೇಳಿದ ಹಾಗೆ ಕೇಳಬೇಕು ಆಯ್ತಾ ” ಅಂತ ಬೇರೆ ತಾಯಿ ಹೇಳಿ ಕಳಿಸುತ್ತಾಳೆ. ಮನೆಯಲ್ಲಿಯೇ ತಮ್ಮ ಹೆಣ್ಣು ಮಕ್ಕಳ ಸಾಮರ್ಥ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿರುವಾಗ ಹೊರಗಡೆ ಸಮಾಜದಲ್ಲಿ ಸಮಾನತೆ ಬಗ್ಗೆ ಪ್ರಶ್ನೆ ಮಾಡುವುದು ಒಂದು ತಮಾಷೆ ಅನಿಸುವುದಿಲ್ಲವೇ? ಹಾಗಾದರೆ ಸಮಾನತೆ ಬಗ್ಗೆ ಎಲ್ಲಿ ಪ್ರಶ್ನೆ ಕೇಳಬೇಕು ? ಮನೆಯಲ್ಲಿಯೋ ಅಥವಾ ಸಮಾಜದಲ್ಲಿಯೋ ? ಅದಕ್ಕಿಂತ ಸಮಾನತೆಯನ್ನು ಕೇಳಿ ಪಡೆಯಬೇಕಾ ಎಂಬುದು ಪ್ರಶ್ನೆ ? ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ಎಂಬುವುದು ಕೇವಲ ಒಂದು ಚರ್ಚೆಯ ವಿಷಯವಾಗಿದೆಯೇ ಹೊರತು ಯಾರು ಅದಕ್ಕೆ ಉತ್ತರ ಇದ್ದರು ಸಹ ಕಾರ್ಯಗತ ಮಾಡಲು ಪ್ರಯತ್ನ ಪಡುತ್ತಿಲ್ಲ ಅಷ್ಟೇ.
ಯಾಕೆಂದರೆ ಉತ್ತರ ಮನೆಯಿಂದಲೇ ಶುರುವಾಗುತ್ತದೆ. ಮೊದಲು ನಮ್ಮಲ್ಲಿರುವ ಮಕ್ಕಳನ್ನು ಬೆಳೆಸುವ ಮನಸ್ಥಿತಿ ಬದಲಾಗ್ಬೇಕು ಅಷ್ಟೇ. ಮನೆಕೆಲಸ ಕೇವಲ ಹೆಣ್ಣು ಮಕ್ಕಳಿಗೆ ಸೀಮಿತ ಅನ್ನುವ ಭಾವನೆ ಗಂಡುಮಕ್ಕಳಿಗೆ ಬರುವ ಹಾಗೆ ಮಾಡುವುದು ನಾವೇ ತಾನೇ ? ಮನೆ ಕೆಲಸ ಅನ್ನುವುದು ಲೆಕ್ಕಕ್ಕೆ ಇಲ್ಲ ಅನ್ನುವ ಭಾವನೆ ಹೆಣ್ಣು ಮತ್ತು ಗಂಡು ಇಬ್ಬರಿಗೂ ಇರಬಾರದು. ಮನೆಕೆಲಸದ ಬಗ್ಗೆ ಗಂಡು ಮಕ್ಕಳಿಗೆ ಇರುವ ಅಭಿಪ್ರಾಯ ( ಅಸಡ್ಡೆ, ನನಗಲ್ಲ) ಮೊದಲು ಬದಲಾಗಬೇಕು. ಹಿಂದಿನ ಕಾಲದಲ್ಲಿ ಗಂಡ ಯುದ್ಧಕ್ಕೆ ಹೋಗುತ್ತಿದ್ದಾಗ ಮನೆಯ ಅಷ್ಟು ಜವಾಬ್ಧಾರಿಗಳನ್ನು ಹೆಣ್ಣು ತಾನೊಬ್ಬಳೇ ನಿಭಾಯಿಸುತ್ತಿದ್ದಳು. ಕಾಲ ಬದಲಾದ ಹಾಗೆ ಗಂಡ ಕೆಲಸಕ್ಕೆ ಹೋಗುವಾಗಲೂ ಅವಳೇ ಎಲ್ಲ ಮನೆ ಕೆಲಸಗಳನ್ನು ನಿಭಾಯಿಸುತ್ತಿದಳು. ಈಗ ಹೆಣ್ಣು ಮಕ್ಕಳು ಹೊರಗಡೆ ಕೆಲಸಕ್ಕೆ ಹೋಗಲು ಶುರು ಮಾಡಿದ್ದಾರೆ. ಆದರೂ ಮನೆಯ ಎಲ್ಲ ಕೆಲಸಗಳನ್ನು ಅವಳೇ ನೋಡಿಕೊಳ್ಳುತ್ತಿದ್ದಾಳೆ. ಹೆಣ್ಣು ಮಕ್ಕಳು ಮನೆಯಲ್ಲಿ ಮತ್ತು ಹೊರಗಡೆ ತಾನು ಮಾಡುವ ಕೆಲಸವನ್ನು ನಿಭಾಯಿಸುವ ಪರಿ ಅಬ್ಬಾ ಅನಿಸುತ್ತೆ. ಮನೆಯ ಎಲ್ಲ ಜವಾಬ್ಧಾರಿ ಅಂದರೆ ಮಕ್ಕಳ ಕಲಿಕೆ, ಅತ್ತೆ ಮಾವನ ಆರೋಗ್ಯ , ದುಡ್ಡಿನ ಲೆಕ್ಕಾಚಾರ, ಮನೆ ಅಲಂಕಾರ…. ಹೀಗೆ ಲೆಕ್ಕವಿಲ್ಲದಷ್ಟು ಕೆಲಸಗಳು ಅವಳೊಬ್ಬಳೆ ನಿಭಾಯಿಸುವ ರೀತಿ ನಿಜಕ್ಕೂ ಶ್ಲಾಘನೀಯ. ಕೆಲವು ಮನೆಗಳಲ್ಲಿ ಇವೆಲ್ಲ ಕೆಲಸಗಳ ನಡುವೆ ಮನೆಯಲ್ಲಿ ಗಂಡನ ಸೇವೆ ಬೇರೆ ಇರುತ್ತೆ ಬಿಡಿ. ಗಂಡಿಗೆ ಹೊರಗಡೆ ಮಾಡುವ ಕೆಲಸ ಮತ್ತು ಆ ಕೆಲಸದ ಒತ್ತಡ ತಡೆದುಕೊಳ್ಳುವುದು ಮಾತ್ರ ಅವನ ಜವಾಬ್ಧಾರಿನ ? ಹಾಗಿದ್ದರೆ ಹೆಣ್ಣು ಮಕ್ಕಳು ಮನೆ ಕೆಲಸವನ್ನು ನಿಭಾಯಿಸಿ , ಹೊರಗಡೆ ಕೆಲಸಕ್ಕೂ ಹೋಗಿ, ಕೆಲಸದ ಒತ್ತಡವನ್ನು ನಿಭಾಯಿಸುತ್ತಿರುವಾಗ ಅವಳು ಪುರುಷರಿಗೆ ಹೇಗೆ ಸಮನಾಗುತ್ತಾಳೆ !! ಅವನಿಗಿಂತ ಅವಳು ಹೆಚ್ಚಲ್ವೇ ? ಇವೆಲ್ಲವೂ ಸಮಾಜದಲ್ಲಿರುವವರಿಗೆ ಗೊತ್ತಿಲ್ಲ ಅಂದುಕೊಂಡಿರಾ ? ಖಂಡಿತ ಗೊತ್ತಿದೆ.
ಹೆಣ್ಣಿಗೆ ಸಮಾನತೆ ಕೊಡಬೇಕು ಅನುವುದಕ್ಕಿಂತಲೂ ಗಂಡಿಗೆ ಸಮಾನ ಜವಾಬ್ಧಾರಿಯಾ ಅರಿವು ಮೂಡಿಸಬೇಕಾಗಿದೆ. ಇದು ಮನೆಯಿಂದಲೇ ಶುರುವಾಗಬೇಕಿದೆ. ಯಾವುದೊ ಸುಳ್ಳು ಪ್ರಚಾರಕ್ಕಾಗಿ ಸಮಾನತೆ ಬೇಕು ಎಂದು ಹೋರಾಡುವ ಬದಲು ಗಂಡಿಗೆ ಸಮಾನ ಜವಾಬ್ದಾರಿ ಬಗ್ಗೆ ಅರಿವು ಮೂಡಿಸಿವ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಗಂಡಿಗೆ ಪುರುಷ ಸಮಾಜ ಅಂತ ಹೇಳಿಕೊಳ್ಳುವ ಮುನ್ನ ಹೆಣ್ಣಿನ ಸಾಮರ್ಥ್ಯ, ಸ್ಥಾನ, ಆಲೋಚನೆ, ತ್ಯಾಗ, ಪ್ರೀತಿ, ಅಭಿಮಾನ, ಅಂತರಾಳ …. ಅರಿಯಬೇಕಾಗಿದೆ. ಇದರ ಮುನ್ನುಡಿ ಮನೆಯಲ್ಲಿಯೇ ಶುರು ಆಗಬೇಕು, ಗಂಡು ಮಕ್ಕಳನ್ನು ಬೆಳೆಸುವಾಗಲೇ ಮನೆಯಲ್ಲಿಯೇ ಇದರ ಕುರಿತು ತಿಳಿ ಹೇಳಬೇಕು. ತಂದೆ ಮತ್ತು ತಾಯಿ ಆಗಿ ನಾವು ಹೇಗೆ ನಡೆದುಕೊಳ್ಳುತ್ತೀವೋ ಮಕ್ಕಳು ಹಾಗೆಯೆ ಬೆಳೆಯುತ್ತಾರೆ ಅಲ್ಲವೇ. ಅವರಿಗೆ ಮನೆಯಲ್ಲಿಯೇ ತಿಳಿವಳಿಕೆ ನೀಡದಿದ್ದರೆ ಹೊರಗಡೆ ಮತ್ತು ಮುಂದೆ ಅವರ ಜೀವನದಲ್ಲಿ ಹೆಣ್ಣುಮಕ್ಕಳನ್ನು ಸಮನಾಗಿ ನೋಡಲು ಸಾಧ್ಯ?
ಎಲ್ಲದರಲ್ಲೂ ಗಂಡಿಗಿಂತ ಮೇಲಿರುವ ಹೆಣ್ಣಿಗೆ ಸಮಾನತೆ ನೀಡಬೇಕು ಅನ್ನುವದೆ ತಪ್ಪು ಅನ್ನುವುದು ನನ್ನ ಅಭಿಪ್ರಾಯ. ಇಬ್ಬರಿಗೂ ಅವರದೇ ಆದ ಸಾಮರ್ಥ್ಯಗಳಿವೆ. ಅದನ್ನು ಹೋಲಿಕೆ ಮಾಡುವುದು ಸರಿಯಲ್ಲ. ಸಮಾನತೆ ಬದಲು ಹೆಣ್ಣು ಮತ್ತು ಗಂಡು ಸಮಾನವಾಗಿ ಜವಾಬ್ಧಾರಿಯನ್ನು ಹಂಚಿಕೊಳ್ಳಬೇಕಾಗಿದೆ. ಇದು ಮನೆಯಲ್ಲಿಯೇ ಶುರುವಾಗಬೇಕು ಏನಂತೀರಿ?
ಶ್ರೀ
ಥಿಂಕ್ ರೈಟ್
Nobel thoughts Shree…
LikeLike
Thank you Lathish 😊
LikeLike
Rightly said. ಮನೆಯೇ ಮೊದಲ ಪಾಠ ಶಾಲೆ. ಬದಲಾವಣೆ ಮೊದಲು ಮನೆಯಿಂದ ಶುರುವಾಗಬೇಕು.
LikeLike
Yes … everything needs to be start first at home …
LikeLike