ಆತ್ಮೀಯ ಸ್ನೇಹಿತರೆ,
ಕೊರೊನದಿಂದ ಯಾವುದೇ ಶಾಲಾ ಕಾಲೇಜುಗಳು ಪ್ರಾರಂಭ ಆಗಿಲ್ಲ. ಆಗುವ ಸೂಚನೆಗಳು ಕೂಡ ಕಂಡು ಬರುತ್ತಿಲ್ಲ. ಈಗ ಕೊರೊನ ಸೋಂಕು ಹರಡುತ್ತಿರುವ ಪರಿ ನೋಡಿದರೆ ಮಕ್ಕಳನ್ನು ಕಳುಹಿಸದೆ ಇದ್ದರೇನೇ ಒಳ್ಳೆಯದು. ಆದರೆ ಅವರ ಶಿಕ್ಷಣದ ಬಗ್ಗೆ ನಾವು ಗಮನ ಹರಿಸಲೇ ಬೇಕು. ಇತ್ತೀಚಿಗೆ ನನ್ನ ತೀರ್ಥಹಳ್ಳಿಯ ಸ್ನೇಹಿತ ನಾಗೇಶ್ ಸೋಮಯಾಜಿ ಅವನ ಹತ್ತಿರ ಮಕ್ಕಳ ಶಿಕ್ಷಣ ಹೀಗೆ ತೊಂದರೆಗೊಳಗಾದ್ರೆ ಮುಂದೆ ಅವರ ಭವಿಷ್ಯ ಹೇಗೆ ಎಂದು ಮಾತನಾಡುತ್ತ ಇರುವಾಗ ಅವನು ನಾನು ಮತ್ತು ನನ್ನ ಮಿತ್ರ ಉಪನ್ಯಾಸಕರು ಪಿಯುಸಿ ಮಕ್ಕಳಿಗೆ ಆಫ್ ಲೈನ್ ಕ್ಲಾಸ್ ಮಾಡುತ್ತ ಇದ್ದೇವೆ ಎಂದ. ನನಗೆ ಕೇಳಿ ಬಹಳ ಕುತೂಹಲ ಆಯಿತು ಹೇಗೆ? ಯಾವ ರೀತಿ? ಎಂದು ಕೇಳಿದೆ. ಅವನು ನನಗೆ ವಿವರವಾಗಿ ತಿಳಿಸಿದ ಅದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಣ, ಸಾಧ್ಯವಾದರೆ ಈ ರೀತಿಯಾಗಿ ಬೇರೆ ಉಪನ್ಯಾಸಕರು ಶುರು ಮಾಡಿದರೆ ಅನೇಕ ವಿದ್ಯಾರ್ಥಿಗಳಿಗೆ ಉಪಯೋಗ ಆಗ್ಬಹುದು.
ನನ್ನ ಸ್ನೇಹಿತ ನಾಗೇಶ್ ಸೋಮಯಾಜಿ ವೃತ್ತಿಯಲ್ಲಿ ಸರಕಾರಿ ಕಾಲೇಜಿನ ಉಪನ್ಯಾಸಕನಾದರೂ ಯಾವಾಗಲು ಅನೇಕ ಚಟುವಟಿಕೆಗಳಿಂದ ತನ್ನನ್ನು ತಾನು ತೊಡಗಿಸಿಕೊಂಡಿರುವ ವ್ಯಕ್ತಿ. ಆಕಾಶ ವೀಕ್ಷಣೆ ಯಲ್ಲಿ ತುಂಬ ಪರಿಣಿತಿ ಹೊಂದಿದವರಲ್ಲಿ ಇವನು ಒಬ್ಬ. ನಾನು ಕೆಲವು ನಕ್ಷತ್ರಗಳ ಹೆಸರು ಹೆಸರು ಹೇಳುತ್ತೇನೆ ಅಂದರೆ ಅದು ಅವನಿಂದನೆ ಕಲಿತದ್ದು. ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಈತ ಆಫ್ ಲೈನ್ ಕ್ಲಾಸ್ ಮಾಡುತ್ತಿದ್ದಾನೆ. ಯಾಕಂದರೆ ಅವನ ಎಲ್ಲ ವಿದ್ಯಾರ್ಥಿಗಳು ಬರುವುದು ಹಳ್ಳಿಗಳಿಂದ ಹಾಗು ಎಲ್ಲ ಮಕ್ಕಳ ಹತ್ತಿರ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟ್ಯಾಪ್ ಇಲ್ಲ. ಹಾಗಾಗಿ ಆನ್ ಲೈನ್ ನಲ್ಲಿ ಪಾಠ ಮಾಡುವುದು ಆಗದ ಮಾತು. ಮೊದಲಿಗೆ ಎಲ್ಲ ಮಕ್ಕಳಿಗೆ ಮಾಡುವ ಪಾಠದ ನೋಟ್ಸ್ ಗಳನ್ನೂ ಪಿಡಿಎಫ್ ಫೈಲ್ನಲ್ಲಿ ಅವರ ಪೋಷಕರ ಫೋನಿಗೆ ವಾಟ್ಸಪ್ಪ್ ನಲ್ಲಿ ಕಳುಹಿಸಿದ್ದಾನೆ. ವಾಟ್ಸಾಪ್ಪ್ನಲ್ಲಿ ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳನ್ನು ಎರಡು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿದ್ದಾನೆ. ಪೋಷಕರು ಅವರ ಕೆಲಸ ಮುಗಿಸಿ ಮನೆಗೆ ಹೋದಮೇಲೆ ಮಕ್ಕಳಿಗೆ ಮೊದಲೇ ಡೌನ್ಲೋಡ್ ಆದ ಫೈಲ್ ಅನ್ನು ಅವರಿಗೆ ನೀಡುತ್ತಾರೆ. ಕೆಲವರು ಅದರಿಂದ ಕಾಪಿ ಮಾಡಿಕೊಳ್ಳುತ್ತಾರೆ. ಕೆಲ ಪೋಷಕರು ಪ್ರಿಂಟ್ ಕೂಡ ಮಾಡಿಕೊಳ್ಳುತ್ತಾರೆ. ನಂತರ ಪ್ರತಿ ದಿನ ಒಂದು ಚಾಪ್ಟರ್ನ ಬಗ್ಗೆ ವಿವರಿಸುವ ೧೦ ನಿಮಿಷಗಳ ಕಾಲದ ಒಂದು ವಿಡಿಯೋವನ್ನು ಮಾಡಿ ಅವರ ಪೋಷಕರಿಗೆ ಕಳುಹಿಸುತ್ತಾನೆ. ಮಕ್ಕಳು ಆ ವಿಡಿಯೋ ನೋಡಿ ಏನೇ ಸಂದೇಹಗಳು ಇದ್ದರು ವಾಟ್ಸಪ್ಪ್ ನಲ್ಲಿ ಪ್ರತ್ಯೇಕವಾಗಿ ಇವನಿಗೆ ಕಳುಹಿಸುತ್ತಾರೆ. ಇವನು ಕೊಡುವ ಅಸೈನ್ಮೆಂಟ್ ಗಳನ್ನೂ ಕೂಡ ಪೂರ್ತಿ ಮಾಡಿ ಪ್ರತ್ಯೇಕವಾಗಿ ಇವನಿಗೆ ಕಳುಹಿಸುತ್ತಾರೆ. ಅವರಿಗೆ ಲೈವ್ ಆಗಿ ಪಾಠ ಸಿಗುತ್ತಿಲ್ಲವಾದರೂ ಯಾವ ಪಾಠವು ತಪ್ಪುತ್ತಿಲ್ಲ. ಈ ಪೂರ್ತಿ ಚಟುವಟಿಕೆ ಸ್ವಲ್ಪ ಉದ್ದವಾದರೂ ಮಕ್ಕಳು ಪಾಠದಿಂದ ವಂಚಿತರಾಗುತ್ತಿಲ್ಲ ಎಂಬುದು ಸಮಾಧಾನದ ವಿಷಯ. ಇಂತ ಸಮಯದಲ್ಲಿ ಪೋಷಕರು ಮತ್ತು ಉಪನ್ಯಾಸಕರು ಇಬ್ಬರಿಗೂ ಸಣ್ಣ ಪುಟ್ಟ ತೊಂದರೆಗಳು ಆಗುವುದು ಸಹಜ ಆದರೆ ಇಬ್ಬರು ಸೇರಿ ಮಕ್ಕಳ ಭವಿಷ್ಯ ರೂಪಿಸಬೇಕು ಹಾಗಾಗಿ ತೊಂದರೆ ಸಹಿಸಿಕೊಳ್ಳಲೇ ಬೇಕು ಮತ್ತು ಇದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯ ಕೂಡ. ಸರಕಾರೀ ಕಾಲೇಜು ಅಂತ ಮೂಗು ಮುರಿಯುವವರಿಗೆ ಈ ಉಪನ್ಯಾಸಕರು ಅವರ ಕೆಲಸದಿಂದ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ.
ಶ್ರೀ
ಥಿಂಕ್ ರೈಟ್