ಮಕ್ಕಳಿಗೆ ದೊಡ್ಡವರ ಜೊತೆಯಲ್ಲಿ ಆಡುವಾಗ ಅವರು ತುಂಬಾ ಇಷ್ಟ ಪಡುವ ಆಟ ಎಂದರೆ ಕೂಸುಮರಿ. ಮಕ್ಕಳಿಗೆ ನಾವು ಆಟಕ್ಕೆ ಕರೆಯಬೇಕು ಅಂದರೆ ಅವರಿಗೆ ನಾವು ಆಸೆ ತೋರಿಸುವದೇ ” ಬಾ ಕೂಸುಮರಿ ಮಾಡ್ತೀನಿ” ಅಂತ. ತಾತಂದಿರು ಬಿಡಿ ಅವರಿಗೆ ಆನೆಮರಿ, ಕೂಸುಮರಿ ಮಾಡ್ತಾ ದಿನವಿಡೀ ಕಾಲ ಕಳೆದು ಬಿಡ್ತಾರೆ ಮಕ್ಕಳ ಜೊತೆ. ನೀವು ಅಷ್ಟೇ ಸ್ನೇಹಿತರೆ, ಎಷ್ಟು ಆಗೋತ್ತೋ ಅಷ್ಟು ಮಕ್ಕಳ ಜೊತೆ ಆಡಿ, ಯಾಕೆಂದರೆ ಮಕ್ಕಳು ೧೩-೧೪ ದಾಟಿದ ಮೇಲೆ ಸ್ವತಂತ್ರರಾಗ್ತಾ ಹೋಗುತ್ತಿದ್ದಂತೆ ಅವರ ಜೊತೆ ಸ್ನೇಹಿತರಾಗಿ ಆಟ ಮತ್ತು ಸಮಯ ಕಳೆಯಬಹದು ಬಿಟ್ರೆ ಮಕ್ಕಳಾಗಿ ಅವರ ಜೊತೆ ಆಡಲಿಕ್ಕೆ ಆಗೋಲ್ಲ. ಮತ್ತೆ ನೀವು ಆ ಅನುಭವ ಪಡೆಯಬೇಕು ಅಂದ್ರೆ ನಿಮಗೆ ಮೊಮ್ಮಕ್ಕಳು ಬರಬೇಕು. ನಿಮ್ಮ ಅಪ್ಪ ಅಮ್ಮನಿಗೆ ಎಷ್ಟೇ ವಯಸ್ಸಾಗಿದ್ದರೂ ನಿಮ್ಮ ಮಕ್ಕಳ ಜೊತೆ ಅವರು ಮಕ್ಕಳಾಗಿ ಆಡುವುದು ಅವರು ಅಷ್ಟು ವರ್ಷ ಕಳೆದುಕೊಂಡಿದ್ದ ಆ ಸಮಯವನ್ನು ಮತ್ತೆ ನಿಮ್ಮ ಮಕ್ಕಳ ಮೂಲಕ ವಾಪಸು ಪಡೆಯಲು ನೆನಪಿರಲಿ.
ಅಮ್ಮ ಮತ್ತು ಅಜ್ಜಿ ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಮಾಡುವ ಕೂಸುಮರಿಯಲ್ಲಿ ಮಕ್ಕಳಿಗೆ ಅಕ್ಕರೆ ಇರುತ್ತದೆ. ಅಜ್ಜ ಮತ್ತು ಅಪ್ಪ ತನ್ನ ಭುಜದ ಮೇಲೆ ಕೂರಿಸಿಕೊಂಡು ಮಾಡುವ ಕೂಸುಮರಿಯಲ್ಲಿ ಮಕ್ಕಳಿಗೆ ಅಚ್ಚರಿ ಇರುತ್ತದೆ.
ಅಮ್ಮ ಅಥವಾ ಅಜ್ಜಿ ತನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಮಕ್ಕಳನ್ನು ಮುದ್ದುಗರೆಯುತ್ತ, ಏನೋ ಹಾಡುತ್ತ ಆಟ ಆಡಿಸುವಾಗ ಪ್ರೀತಿ ಮಮತೆ ಉಕ್ಕಿ ಹರಿಯುತ್ತಿರುತ್ತದೆ. ” ಕೂಸುಮರಿ ಬೇಕೇ ಕೂಸುಮರಿ” ಎಂದು ಕೇಳುತ್ತ ಮಕ್ಕಳನ್ನು ಆಡಿಸುವ ರೀತಿ ನೋಡುವುದೇ ಒಂದು ಸುಂದರ ಅನುಭವ. ಮಕ್ಕಳಿಗಂತೂ ಅದೊಂದು ಅಕ್ಕರೆಯ ಕೂಸುಮರಿ.
ಮಕ್ಕಳಿಗೆ ಅಪ್ಪ ಮತ್ತು ತಾತಂದಿರು ಮಾಡುವ ಕೂಸುಮರಿ ಮೇಲೆ ಸ್ವಲ್ಪ ಆಕರ್ಷಣೆ ಜಾಸ್ತಿ ಯಾಕಂದರೆ ಅವರು ತಮ್ಮ ಭುಜಗಳ ಮೇಲೆ ಕೂರಿಸಿಕೊಂಡು ಕೂಸುಮರಿ ಮಾಡುವುದು. ಪುಟ್ಟ ಮಕ್ಕಳಿಗೆ ಕಾಣುವ ಪ್ರತಿಯೊಂದು ವಸ್ತುವು ಬಹಳ ದೊಡ್ಡದಾಗೇ ಕಾಣುತ್ತದೆ. ದೊಡ್ಡವರ ಕಾಲುಗಳ ಎತ್ತರದಷ್ಟು ಏನು ಕಾಣುತ್ತದೆಯೋ ಅಷ್ಟೇ ನೋಡುವ ಮಕ್ಕಳಿಗೆ ಯಾವಾಗ ಅಪ್ಪನ ಅಥವಾ ತಾತನ ಭುಜದ ಮೇಲೆ ಕೂರುತ್ತಾರೋ ಇಡೀ ಜಗತ್ತೇ ತಮಗೆ ಕಾಣಿಸುತ್ತಿರುವ ಹಾಗೆ ಅನಿಸುತ್ತದೆ. ಪುಟ್ಟ ಮಕ್ಕಳಿಗೆ ಪಾಪ ಪ್ರತಿಯೊಂದನ್ನು ತಲೆ ಎತ್ತಿ ನೋಡಬೇಕಾದ ಪರಿಸ್ಥಿತಿ, ಹಾಗಿರಬೇಕದಾಗ ಎತ್ತರದಿಂದ ತಲೆ ಬಗ್ಗಿಸಿ ಎಲ್ಲವನ್ನು ನೋಡುವ ಆನಂದ ಮತ್ತು ಅಚ್ಚರಿಗಳು ಅಪ್ಪ ಮತ್ತು ಅಜ್ಜ ಮಾಡುವ ಕೂಸುಮರಿಯಲ್ಲಿ ಸಿಗುತ್ತದೆ. ಕೆಲವು ಅಪ್ಪಂದಿರು ಕೂಸುಮರಿಯ ಜೊತೆಗೆ ಬೇರೆ ಕಸರತ್ತುಗಳನ್ನು ಮಾಡಿಸುವುದರಿಂದ ಮಕ್ಕಳಿಗೆ ಅಚ್ಚರಿ ಜೊತೆಗೆ ಅದೊಂದು ಸಾಹಸಮಯ ಆಟವು ಆಗಿರುತ್ತದೆ.
ಚಿಕ್ಕವರಿದ್ದಾಗ ನಾವು ಹೊರಗಡೆ ತಿರುಗಾಡಲು ಹೊರಟರೆ ಅಪ್ಪನ ಮೇಲೆ ಕೂಸುಮರಿಯಾಗಲು ಅಣ್ಣ ಮತ್ತು ಅಕ್ಕನ ಜೊತೆ ಯಾವಾಗಲು ಸ್ಪರ್ಧೆ ನಡೆಯುತ್ತಿತ್ತು. ಆದರೆ ಕೊನೆಯಾದಾಗಿ ಹುಟ್ಟಿದ ಕೂಸಾದ ನನಗೆ ಗೆಲುವು ಸಿಗುತ್ತಿತ್ತು. ಚಿಕ್ಕವು ಅಂತ ಸ್ವಲ್ಪ ಜಾಸ್ತಿ ಮುದ್ದು ಇರುತ್ತದಲ್ಲ ಅದಕ್ಕೆ. ಜಾತ್ರೆಗಳಲ್ಲಿ ಅಪ್ಪನ ಭುಜದ ಮೇಲೆ ಕೂತು ಹೊರಟರೆ ಇಡೀ ಜಾತ್ರೆ ಅವತ್ತು ನನ್ನದೆ ಅನ್ನೋ ಭಾವನೆ. ವಾಪಸು ಬರುವಾಗ ಏನು ಮಾಡದೆ ಜಾತ್ರೆಯಲ್ಲಿ ಬರಿ ಆಟ ಆಡಿ, ಕೊಡಿಸಿದ್ದೆನ್ನೆಲ್ಲ ತಿಂದು ಕೊನೆಗೆ ಪಾಪ ಸುಸ್ತು ಆಗಿದೆ ಇದಕ್ಕೆ ಅಂತ ಅವರು ಮತ್ತೆ ಭುಜದ ಮೇಲೆ ಕೂರಿಸಿಕೊಂಡರೆ ಮನಸ್ಸಿನಲ್ಲೇ ಒಳೊಗೊಳಗೆ ಏನೋ ಸಂತೋಷ. ಕೂಸುಮರಿ ಜೊತೆಗೆ ಕೈಯಲ್ಲಿ ಒಂದು ಬಲೂನ್ ಹಿಡ್ಕೊಂಡು ಬರುತ್ತಿದ್ದ ಅನುಭವ ಮನಸ್ಸಿನಲ್ಲಿ ಅಚ್ಚೋತ್ತಿ ಕುಳಿತಿದೆ. ನಿಮಗೂ ಕೂಡ ನಿಮ್ಮ ಮಕ್ಕಳಿಗೆ ಕೂಸುಮರಿ ಮಾಡುವಾಗ ಈ ರೀತಿಯ ನೆನಪುಗಳೆಲ್ಲ ಒಂದು ಸಾರಿ ಕಣ್ಣಮುಂದೆ ಬರುತ್ತದೆ ಅಲ್ವಾ ?
ಮಕ್ಕಳಿಗೋಸ್ಕರ ನಾವು ಮಕ್ಕಳಾಗಿ ಆಡುವ ಆಟಗಳಲ್ಲಿ ಒಂದು ಆಟ ಈ ಕೂಸುಮರಿ. ಮಕ್ಕಳಿಗೆ ನಾವು ಮಾಡುವ ಕೂಸುಮರಿಯಾ ನೆನಪುಗಳು ಶಾಶ್ವತವಾಗಿ ಅಚ್ಚಹಸಿರಾಗಿ ಅವರ ಮನಸ್ಸಿನಲ್ಲಿ ಉಳಿಯುತ್ತದೆ.
ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಿಮ್ಮ ಮಕ್ಕಳಿಗೆ ” ಕೂಸುಮರಿ ಬೇಕೇ ಕೂಸುಮರಿ ” ಅಂತ ಆಡುತ್ತಾ ಅಕ್ಕರೆ ಮತ್ತು ಅಚ್ಚರಿ ಎರಡು ನೀಡಲು ಪ್ರಯತ್ನ ಮಾಡಿ.
ಶ್ರೀ
ಥಿಂಕ್ ರೈಟ್
ನಮ್ಮ ಮಕ್ಕಳು ಚಿಕ್ಕವರಿದ್ದಾಗ ಕೂಸುಮರಿ ಮಾಡಿದ
ನೆನಪು ನಿಜವಾಗಲೂ ಕಣ್ಣ ಮುಂದೆ ಬಂತು
LikeLike
ನೆನಪುಗಳು ಎಂದಿಗೂ ಸುಮದುರ …
LikeLike