
ಎನ್ಸೈಕ್ಲೋಪೀಡಿಯಾ ಓದುತ್ತಿದ್ದ ಮಗಳು ನನ್ನ ಹತ್ತಿರ ಬಂದು ” How many eggs will an African queen termite produce in her lifetime? ” ಅಂತ ಕೇಳಿದಳು. ಅವಳ ಮುಖದಲ್ಲಿ ಆಶ್ಚರ್ಯ ಮತ್ತು ಒಂದು ರೀತಿಯ ನಂಬಲು ಸಾಧ್ಯವಾಗದ ಒಂದು ವಿಷಯ ಕೇಳಿದಾಗ ಆಗುವ ಉತ್ಸಾಹ ಎದ್ದು ಕಾಣುತಿತ್ತು. ನಾನು ಎಷ್ಟೋ ಸಾವಿರ ಮೊಟ್ಟೆಗಳು ಇರಬೇಕು ಮಗಳೇ, ಗೆದ್ದಲು ಹುಳಗಳು ಸಾವಿರ ಸಾವಿರದಲ್ಲಿ ಮೊಟ್ಟೆ ಇಡುತ್ತವೆ ಎಂದೇ. ಅದಕ್ಕೆ “ಅಪ್ಪ ನಿನ್ನ ಉತ್ತರ ತಪ್ಪು, ಇದು ೬೫೦ ಮಿಲಿಯನ್ ಮೊಟ್ಟೆಗಳನ್ನು ಇಡುತ್ತಂತೆ ” ಅಂದಳು. ಕೇಳಿ ನನಗು ತುಂಬ ಆಶ್ಚರ್ಯದ ಜೊತೆಗೆ ಕುತೂಹಲ ಕೂಡ ಹುಟ್ಟಿ ಅವಳ ಜೊತೆ ಓದಲು ಕುಳಿತೆ. ಅವಳು ಮೊದಲೇ ಓದಿದ್ದರಿಂದ ನನಗೆ ಓದಲು ಬಿಡದೆ ತಾನೇ ಎಲ್ಲ ವಿವರಣೆ ಕೊಡಲು ಶುರು ಮಾಡಿದಳು.
ಗೆದ್ದಲು ಹುಳಗಳಲ್ಲಿ ರಾಣಿ, ರಾಜ, ಸೈನಿಕ ಮತ್ತು ಕೆಲಸಗಾರರು ಎಂಬ ನಾಲ್ಕು ವಿಂಗಡಣೆಗಳಿವೆ, ಹೇಗೆ ಗೆದ್ದಲು ಹುಳಗಳ ರಾಜ ಮತ್ತು ರಾಣಿ ತಮ್ಮ ವಾಸಸ್ಥಾನವನ್ನು ಮಣ್ಣಿನಿಂದ ವಿವಿಧ ಗೋಪುರದ ಆಕಾರಗಳಲ್ಲಿ ಕಟ್ಟುತ್ತವೆ, ಹೇಗೆ ಏರ್ ಕಂಡೀಶನ್ ತರಹ ಗೋಪುರದ ತುದಿಯಲ್ಲಿ ಗಾಳಿ ಬೆಳಕಿಗೆ ಕಿಂಡಿ ಬಿಡುತ್ತವೆ, ಗೋಪುರದಲ್ಲಿ ಹೇಗೆ ಸುರಂಗ ಮತ್ತು ಕೋಣೆಗಳನ್ನು ನಿರ್ಮಿಸುತ್ತವೆ, ಅವು ೫೦ ವರ್ಷಗಳ ಕಾಲ ಬದುಕುತ್ತವೆ, ರಾಣಿ ಪ್ರತಿದಿನ ೩೬೦೦೦ ಸಾವಿರ ಮೊಟ್ಟೆಗಳನ್ನು ಇಡುತ್ತದೆ, ಸೈನಿಕರು ಹೇಗೆ ಉಳಿದ ಗೆದ್ದಲು ಹುಳಗಳನ್ನು ಕಾಪಾಡುತ್ತವೆ, ಮರಗಳನ್ನು ಹೇಗೆ ತಿಂದು ಮುಗಿಸುತ್ತ ಹೋಗುತ್ತವೆ, ಸೈನಿಕ ಗೆದ್ದಲು ಹುಳಗಳು ಅವಶ್ಯಕತೆ ಬಂದರೆ ತಮ್ಮನ್ನು ತಾವು ನಾಶ ಮಾಡಿಕೊಂಡು ಹೇಗೆ ಬೇರೆ ಗೆದ್ದಲು ಹುಳಗಳನ್ನು ಕಾಪಾಡುತ್ತವೆ, ಹೀಗೆ ಅವುಗಳ ಬಗ್ಗೆ ವಿವರಣೆ ನೀಡುತ್ತಾ ಹೋದಳು. ಎಲ್ಲ ಮುಗಿದ ಮೇಲೆ ಕೊನೆಯಲ್ಲಿ ನಿಂಗೆ ಏನು ಗೊತ್ತಿಲ್ಲ ಬಿಡಪ್ಪ ಅಂತ ಹೇಳಿ ಹೋದಳು. ಅದು ಸರಿ ಬಿಡು ಎಂದು ಸುಮ್ಮನಾದೆ. ನಗರ ಪ್ರದೇಶಗಳಲ್ಲಿ ಬೆಳೆದ ಮಕ್ಕಳಿಗೆ ಗೆದ್ದಲು ಹುಳಗಳ ಬಗ್ಗೆ ಪುಸ್ತಕದಲ್ಲಿಯೇ ಓದಿ ತಿಳ್ಕೊಬೇಕು ಬಿಡಿ.
ಮನೆಯಲ್ಲಿ ಗೆದ್ದಲು ಹಿಡಿದರೆ ಅದಕ್ಕೆ ಕ್ರಿಮಿನಾಶಕ ಸಿಂಪಡಿಸಿ ಅವುಗಳಿಂದ ಮುಕ್ತಿ ಪಡೆಯಬಹುದು ಆದರೆ ಮನಸ್ಸಿಗೆ ಚಿಂತೆ ಎಂಬ ಗೆದ್ದಲು ಹಿಡಿದರೆ, ಹೇಗೆ ಮುಕ್ತಿ ಪಡೆಯಬಹುದು ಎಂಬ ಪ್ರಶ್ನೆ ಶುರುವಾಯಿತು. ಗೆದ್ದಲು ಹುಳಗಳು ನಿಮಗೆ ಹೊರಗಡೆ ನೇರವಾಗಿ ಕಾಣಸಿಗುವುದಿಲ್ಲ. ಹಿಂದಿನ ಕಾಲದ ಮಣ್ಣಿನ ಮನೆಯ ಗೋಡೆಯಲ್ಲಿ ಸೇರಿಕೊಂಡರೆ ಗೋಡೆ ಬೀಳುವ ಹಂತಕ್ಕೆ ಬಂದಾಗಲೇ ನಿಮಗೆ ಗೊತ್ತಾಗುತ್ತಿತ್ತು ಒಳಗಡೆ ಪೂರ್ತಿಯಾಗಿ ಗೆದ್ದಲು ಹುಳಗಳು ತಿಂದು ಮುಗಿಸಿರುವುದು. ಮನಸ್ಸಿನಲ್ಲಿ ಬೇಡದ ಚಿಂತೆಗಳು ಕೂಡ ನಿಮ್ಮನ್ನು ಒಳಗೊಳಗೇ ತಿನ್ನುತ್ತ ನಿಮ್ಮ ಅರೋಗ್ಯ, ನೆಮ್ಮದಿ ಮತ್ತು ಕೊನೆಗೆ ಪೂರ್ತಿಯಾಗಿ ನಿಮ್ಮ ಜೀವನವನ್ನೇ ತಿಂದು ಮುಗಿಸುವುದು ಗೊತ್ತೇ ಆಗುವುದಿಲ್ಲ.
ಆಸೆ ಎಂಬುದು ರಾಣಿ ಗೆದ್ದಲು ಹುಳುವಿನ ತರಹ. ಅವು ಹೇಗೆ ದಿನಕ್ಕೆ ಸಾವಿರ ಸಾವಿರ ಮೊಟ್ಟೆಗಳು ಇಡುತ್ತವೋ ಅದೇ ತರಹ ನಮ್ಮಲ್ಲಿ ಕೂಡ ದಿನಕ್ಕೆ ಸಾವಿರಾರು ಅನವಶ್ಯಕ ಆಸೆಗಳು ಮತ್ತು ಆಕಾಂಕ್ಷೆಗಳು ಹುಟ್ಟುತ್ತವೆ. ನಮ್ಮಲ್ಲಿರುವ ಚಂಚಲತೆ ಸೈನಿಕ ಗೆದ್ದಲು ಹುಳಗಳ ತರಹ. ಉಳಿದ ಗೆದ್ದಲು ಹುಳುಗಳನ್ನು ಕಾಪಾಡಲು ತನ್ನನ್ನು ತಾನು ನಾಶ ಮಾಡಿಕೊಳ್ಳುವುದೋ ಹಾಗೆ ಆಸೆಗಳನ್ನು ಹತ್ತಿಕ್ಕಲು ನಾವು ಮಾಡುವ ಪ್ರಯತ್ನಗಳನ್ನು ಈ ಚಂಚಲತೆ ನಾಶ ಮಾಡುವುದು. ನಾವು ಆಸೆಗಳನ್ನು ಪೂರೈಸಿಕೊಳ್ಳಲು ಮಾಡುವ ಯೋಚನೆಗಳು ಕೆಲಸ ಮಾಡುವ ಗೆದ್ದಲು ಹುಳಗಳ ಗುಂಪಿನ ತರಹ. ಅವುಗಳೇ ರಾಣಿಯ ಆಶಯದಂತೆ ನೆಲಸಲು ಗೋಪುರಗಳನ್ನು ಕಟ್ಟುವುದು. ನಾವು ಅನವಶ್ಯಕ ಆಸೆಗಳನ್ನು ಈಡೇರಿಸಿಕೊಳ್ಳಲು ಯೋಚನೆಗಳ ಶಿಖರಗಳನ್ನೇ ಕಟ್ಟಿಬಿಡುತ್ತೇವೆ. ಮೊದಲು ಯಾವುದೊ ಒಂದನ್ನು ಪಡೆಯಲು ನಾವು ಮಾಡುವ ಯೋಚನೆ ಅಥವಾ ಉಪಾಯಗಳು, ಕಾಲ ಕ್ರಮೇಣ ಸಮಸ್ಯೆಗಳಾಗಿ ಬದಲಾಗಿ ಚಿಂತೆಯ ಗೋಪುರದ ಹಾಗೆ ಬೆಳೆಯತೊಡಗುತ್ತದೆ.
ಚಿಂತೆ ಮತ್ತು ಆಲೋಚನೆ ಮದ್ಯೆ ಒಂದು ಸಣ್ಣ ಗೆರೆಯ ವ್ಯತ್ಯಾಸ ಅಷ್ಟೇ.
ನೀವು ಮಾಡುವ ಕೆಲಸಕ್ಕೆ ಪ್ರಯತ್ನ ಬಹಳ ಮುಖ್ಯ. ಸೋಲು ಮತ್ತು ಗೆಲುವು ನಾವು ಮಾಡುವ ಪ್ರಯತ್ನಗಳ ಪರಿಣಾಮ.
ಪ್ರಯತ್ನದ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಆದರೆ ಪರಿಣಾಮಗಳ ಬಗ್ಗೆ ಚಿಂತೆ ಮಾಡುತ್ತೇವೆ.
ಹೇಗೆ ಎದುರಿಸುವುದು ಅನ್ನುವುದು ಆಲೋಚನೆ, ಹೇಗಪ್ಪಾ ಎದುರಿಸುವುದು ಅನ್ನುವುದು ಚಿಂತೆ.
ಹೀಗೆ ಆಯಿತು ಅನ್ನುವುದು ನೆನಪು, ಹೀಗಾಯ್ತಲ್ಲ ಅಂತ ಕೊರಗುವುದು ಚಿಂತೆ.
ಏನು ಮಾಡುವುದು ಅನ್ನುವುದು ಯೋಚನೆ, ಏನಪ್ಪಾ ಮಾಡುವುದು ಅನ್ನುವುದು ಚಿಂತೆ.
ಪರಿಣಾಮಗಳ ಬಗ್ಗೆ ಭಯ ಪಡಬೇಡಿ. ನಿಮ್ಮ ಪ್ರಯತ್ನಗಳ ಬಗ್ಗೆ ನಂಬಿಕೆ ಇಡಿ.
ಚಿಂತೆ ನಿಮ್ಮನ್ನು ಜೀವಂತವಾಗಿ ಸುಡುವ ಚಿತೆ ಎನ್ನುವ ಮಾತು ಮರೆತರೆ ಅದು ನಿಮ್ಮನ್ನು ಒಳಗಿನಿಂದ ತಿಂದು ಲಡ್ಡು ಮಾಡಿ ನಿಮ್ಮ ಕುಸಿತಕ್ಕೆ ಕಾರಣವಾಗುತ್ತದೆ. ಚಿಂತೆ ಎಂಬ ಗೆದ್ದಲು ಹುಳುಗಳನ್ನು ನಿಮ್ಮ ತಲೆಯಲಿ ನೆಲಸಲು ಬಿಡಬೇಡಿ. ಗೆದ್ದಲು ಹುಳಗಳನ್ನು ಸಾಯಿಸಲು ಕ್ರಿಮಿನಾಶಕ ಹೊರಗಡೆ ಸಿಗುತ್ತದೆ. ಚಿಂತೆ ಎಂಬ ಗೆದ್ದಲು ಹುಳಗಳನ್ನೂ ಸಾಯಿಸಲು ಬೇಕಾದ ಕ್ರಿಮಿನಾಶಕ ನಿಮ್ಮಲ್ಲೇ ಇದೆ.
ಶ್ರೀ
ಥಿಂಕ್ ರೈಟ್