ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ
ಜೀವನದಲ್ಲಿ ಪ್ರತಿಯೊಬ್ಬರು ಬೇರೆಯವರಿಂದ ಸಹಾಯ ಪಡೆದಿರುತ್ತಾರೆ ಮತ್ತು ಬೇರೆಯವರಿಗೆ ಸಹಾಯ ಮಾಡಿರುತ್ತಾರೆ. ಬೇರೆಯವರ ಕಷ್ಟಕಾಲದಲ್ಲಿ ಅವರಿಗೆ ಕೈಲಾದ ಸಹಾಯ ಮಾಡುವುದು ಬಹಳ ಒಳ್ಳೆಯ ಗುಣ. ನಮ್ಮ ಸಹಾಯ ಹಸ್ತ ಅವರ ಜೀವನದಲ್ಲಿ ಬರುವ ಕಷ್ಟಕಾಲ ಹೋಗಲಾಡಿಸಬೇಕೆ ಹೊರತು ನಮ್ಮ ಹಸ್ತ ಅವರ ಇಡೀ ಜೀವನದಲ್ಲಿ ಕೈಯಾಡಿಸಬಾರದು.
ಕಬಂದ ಬಾಹು ಬಗ್ಗೆ ನಾವೆಲ್ಲ ರಾಮಾಯಣದ ಅರಣ್ಯ ಕಾಂಡದಲ್ಲಿ ಕೇಳಿರುತ್ತೀವಿ. ಆತ ಒಂದು ಕಣ್ಣು, ಹೊಟ್ಟೆಯ ಭಾಗದಲ್ಲಿ ಬಾಯಿ ಮತ್ತು ಉದ್ದವಾದ ಕೈಗಳು ಇದ್ದ ಒಬ್ಬ ರಾಕ್ಷಸ. ಆತನ ಕೈಗಳು ೮ ಮೈಲುಗಳಷ್ಟು ಉದ್ದವಿತ್ತು. ತನ್ನ ಉದ್ದವಾದ ಕೈಗಳಿಂದ ದೂರದಿಂದಲೇ ಬರುವ ಮನುಷ್ಯರನ್ನು ಹಿಡಿದು ತಿನ್ನುತ್ತಿದ್ದ. ಅವನ ಬಾಹುಗಳೇ ಅವನ ಶಕ್ತಿಯಾಗಿತ್ತು. ಅವನ ಬಾಹುಗಳಲ್ಲಿ ಬಂದಿತರಾದರೆ ಅದರಿಂದ ಬಿಡಿಸಿಕೊಳ್ಳಲು ಸಾಮಾನ್ಯ ಮನುಷ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವನಿಗೆ ಕಬಂದ ಅನ್ನುವ ಜೊತೆಗೆ ಅವನ ಉದ್ದವಾದ ಹಾಗು ಬಲಿಷ್ಠವಾದ ಬಾಹುಗಳನ್ನೂ ನೋಡಿ ಅವನನ್ನು ಕಬಂದ ಬಾಹು ಎಂದು ಅನ್ನುತ್ತಿದ್ದರು. ಶ್ರೀ ರಾಮ ಮತ್ತು ಲಕ್ಷ್ಮಣ ಈ ಕಬಂದಬಾಹುವನ್ನು ಸಾಯಿಸಿ, ಅವನನ್ನು ಶಾಪದಿಂದ ವಿಮುಕ್ತಿ ಮಾಡುತ್ತಾರೆ. ನಂತರ ಕಬಂದ ಬಾಹು ರಾಮನಿಗೆ ಋಷ್ಯಮುಖಕ್ಕೆ ಹೋಗಿ ಸುಗ್ರೀವನನ್ನು ಭೇಟಿಯಾಗಲು ಹೇಳಿ ರಾಮನಿಗೆ ಸೀತೆಯನ್ನು ಹುಡುಕಲು ಸಹಾಯ ಮಾಡುತ್ತಾನೆ.
ಕಬಂದ ಬಾಹು ಮತ್ತು ನಾವು ಮಾಡುವ ಸಹಾಯಕ್ಕೆ ಎಲ್ಲಿಂದ ಸಂಬಂಧ ಅನ್ನುತ್ತೀರಾ? ಕಬಂದಬಾಹು ಮೊದಲು ಶ್ರೀ ರಾಮನಿಗೆ ತೊಂದರೆ ಕೊಟ್ಟು ನಂತರ ಅವನಿಗೆ ಸಹಾಯ ಮಾಡುತ್ತಾನೆ. ಆದ್ರೆ ಇಲ್ಲಿ ಸ್ವಲ್ಪ ವ್ಯತ್ಯಾಸ ಏನೆಂದರೆ, ಕೆಲವರು ಬೇರೆಯವರಿಗೆ ಸಹಾಯ ಮಾಡಿ ನಂತರ ತೊಂದರೆ ಕೊಡುತ್ತ ಅವರಿಗೆ ಕಬಂದಬಾಹುರಾಗುತ್ತಾರೆ. ಕೆಲವೊಮ್ಮೆ ಕಷ್ಟದಲ್ಲಿರುವವರಿಗೆ ನಮ್ಮ ಸಹಾಯ ಹಸ್ತ ನೀಡುವುದರ ಜೊತೆಗೆ, ಮಾಡಿದ ಸಹಾಯ ನಾವು ಅವರಿಗೆ ನೀಡಿದ ಭಿಕ್ಷೆ ಮತ್ತು ನಮಗೆ ಅವರ ಜೀವನದ ಶೈಲಿಯನ್ನೇ ಬದಲಾಯಿಸುವ ಹಕ್ಕಿದೆ ಎಂದುಕೊಳ್ಳುತ್ತೀವಲ್ಲ, ಆಗ ನಮ್ಮ ಸಹಾಯ ಹಸ್ತ ನಮಗೆ ಗೊತ್ತಿಲ್ಲದೇ ಅವರಿಗೆ ಕಬಂದ ಬಾಹುವಾಗಿರುತ್ತದೆ. ಸಹಾಯ ಪಡೆದವರು ಅದರಿಂದ ಬಿಡಿಸಿಕೊಳ್ಳಲಾಗಲಾರದೆ ಸಹಾಯದ ಮುಲಾಜಿಗೆ ಬಿದ್ದು ನೋವು ಅನುಭವಿಸಿರುತ್ತಿರುತ್ತಾರೆ. ಬಹಳಷ್ಟು ಸಲ ಇದು ಸಹಾಯ ಮಾಡುವವರಿಗೆ ಗೊತ್ತೇ ಆಗುವದಿಲ್ಲ. ನಾವು ಮಾಡುತ್ತಿರುವದು ಸರಿ ಎಂದುಕೊಂಡೆ ಅವರ ಜೀವನದಲ್ಲಿ ಮೂಗು ತೂರಿಸುತ್ತಿರುತ್ತಾರೆ.
ಯಾರೇ ಆಗಲಿ ಸಹಾಯ ಅಂತ ಕೇಳಿ ಬಂದವರು ಯಾವುದೋ ಒಂದು ಸಮಸ್ಯೆಗೆ ಸಹಾಯಕ್ಕೆ ನಮ್ಮ ಹತ್ತಿರ ಬರುತ್ತಾರೆ. ಕೆಲಸ ಕೊಡಿಸುವ ವಿಚಾರ ಆಗಿರಬಹುದು, ಹಣದ ಸಹಾಯ ಆಗಿರಬಹುದು, ಸಂಬಂಧ ಸರಿ ಪಡಿಸುವ ವಿಚಾರ ಆಗಿರಬಹುದು ಅಥವಾ ತಾವು ದೂರದ ಊರಿನಲ್ಲಿ ಇರುವಾಗ ನಮಗೆ ಅವರ ತಂದೆ ತಾಯಿಯ ಬಗ್ಗೆ ಸ್ವಲ್ಪ ಗಮನವಿಡಿ ಅಂತ ಹೇಳಿರಬಹುದು, ಸಂಜೆ ಮಕ್ಕಳು ಕೆಲಸದಿಂದ ಬರುವವರೆಗೆ ನಮಗೆ ಸ್ವಲ್ಪ ಸಮಯ ನೋಡಿಕೊಳ್ಳಲು ಹೇಳಿರಬಹುದು, ಕೆಲವರು ತಮ್ಮ ಸಂಸಾರದ ವಿಷ್ಯದ ಬಗ್ಗೆ ನಮ್ಮ ಹತ್ತಿರ ಸಲಹೆ ಕೇಳಬಹುದು, ಹೀಗೆ ಅನೇಕ ರೀತಿಯಲ್ಲಿ ಯಾವುದೊ ಒಂದು ಸಮಸ್ಯೆಗೆ ನಮ್ಮ ಹತ್ತಿರ ಸಹಾಯ ಕೇಳುತ್ತಾರೆ ವಿನಃ ಅವರ ಇಡೀ ಜೀವನವನ್ನು ನೀವೇ ನೋಡಿಕೊಳ್ಳಬೇಕು ಅಂತ ಬರುವುದಿಲ್ಲ.
ನಮ್ಮ ಕೈಲಿ ಆದರೆ ಅವರು ಕೇಳುವ ಸಮಸ್ಯಗೆ ಪರಿಹಾರ ಅಥವಾ ಸಹಾಯ ಮಾಡಬೇಕೆ ಹೊರತು ಸಹಾಯ ಮಾಡಿದ ನಂತರ ಅವರ ಮುಂದಿನ ಜೀವನದಲ್ಲಿ ನಮ್ಮ ತಲೆ ಹಾಕಬಾರದು. ತುಂಬ ಜನಕ್ಕೆ ತಾವು ಮಾಡುತ್ತಿರುವ ಈ ತಪ್ಪು ಗೊತ್ತಾಗುವುದೇ ಇಲ್ಲ. ಮೊದಲಿಗೆ ಸಹಾಯ ಪಡೆದವರು ಮುಲಾಜಿಗೆ ಬಿದ್ದು ಇವರು ಹೇಳುವ ಎಲ್ಲ ಸಲಹೆಗಳನ್ನು ಸ್ವೀಕರಿಸುತ್ತಾರೆ. ನಾವು ಅದನ್ನು ನಾವು ಏನು ಹೇಳಿದರು ಅವರು ಮಂಜೂರು ಮಾಡುತ್ತಾರೆ ಅಂದುಕೊಂಡು ಅವರ ಜೀವನ ಶೈಲಿಯನ್ನು ಬದಲಾಯಿಸಲು ಹೊರಟುಬಿಡುತ್ತೇವೆ. ನೀವು ಹೀಗೆ ಊಟ ಮಾಡಬೇಕು, ಬಟ್ಟೆ ಹಾಕಿಕೊಳ್ಳಬೇಕು, ನೀವು ಮಾಡುತ್ತಿರುವುದು ಅದು ಸರಿಯಲ್ಲ, ಇದು ಸರಿಯಲ್ಲ, ಅದು ನಿಮಗೇಕೆ, ಇದು ನಿಮಗೇಕೆ ಎನ್ನುವ ಮಟ್ಟಿಗೆ ಹೋಗಿರುತ್ತದೆ. ಅವರ ಜೀವನ ಮತ್ತು ಜೀವನ ಶೈಲಿಯನ್ನು ನಿಯಂತ್ರಣಕ್ಕೆ ತೆಗೆದು ಕೊಳ್ಳಲು ನೋಡುತ್ತೇವೆ. ಇದು ನಾವು ಮಾಡುತ್ತಿರುವುದು ಅವರ ಒಳ್ಳೆಯದಕ್ಕೆ , ಅವರಿಗೆ ಏನು ಗೊತ್ತಾಗುವುದಿಲ್ಲ ಎಂದು ಅಂದುಕೊಳ್ಳುವುದರ ತಪ್ಪು ಗ್ರಹಿಕೆ. ಅವರು ನಮ್ಮ ಸಹಾಯ ಕೇಳಿದ್ದು ಯಾವುದೊ ಒಂದು ಸಮಸ್ಯೆಗೆ ಹೊರತು ಅವರಿಗೆ ಜೀವನ ಮಾಡಲು ಬರುವುದಿಲ್ಲ ಎಂದಲ್ಲ ಅನ್ನುವುದನ್ನು ಮರೆತುಬಿಡುವುದರ ಒಂದು ಪರಿಣಾಮ ಅಷ್ಟೇ.
ನಾವು ಸಹಾಯ ಮಾಡುವಾಗ ಅಥವಾ ಮಾಡಿ ಆದ ಮೇಲೆ ಇದನ್ನು ಗಮನದಲ್ಲಿಟ್ಟುಕೊಂಡರೆ ನಿಜವಾಗಿಯೂ ನಾವು ನಮ್ಮ ಸಹಾಯ ಹಸ್ತ ನೀಡಿದಂತೆ ಆಗುವುದು ಇಲ್ಲದಿದ್ದರೆ ನಮ್ಮ ಹಸ್ತ ಅವರಿಗೆ ಕಬಂದಬಾಹುಗಳಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.
ಶ್ರೀ
ಥಿಂಕ್ ರೈಟ್