ಬರಹಗಾರರು : ಶ್ರೀನಾಥ ಹರದೂರ ಚಿದಂಬರ
ಮಧ್ಯರಾತ್ರಿ ಸುಮಾರು ೧:೩೦ರ ಸಮಯ, ರಾತ್ರಿ ಪಾಳಿಯಲ್ಲಿದ್ದ ವೈದ್ಯ ತನ್ನ ರೂಮಿನಲ್ಲಿ ಕೂತು ತೂಕಡಿಸುತ್ತಿದ್ದ. ಆಸ್ಪತ್ರೆಯಲ್ಲಿ ಕೆಲವು ರೋಗಿಗಳು ಆಗಾಗ ನರಳುವ ಶಬ್ದ ಬಿಟ್ಟು ಬೇರೇನೂ ಕೇಳಿಸದೇ ನಿಶ್ಯಬ್ದವಾಗಿತ್ತು. ಗೋಡೆಯ ಮೇಲಿದ್ದ ಒಂದು ಹಲ್ಲಿ ಲೊಚಗುಟ್ಟಿದ ಸದ್ದಿಗೆ ಕತ್ತೆತ್ತಿ ಮೇಲೆ ನೋಡಿ ” ಥುತ್, ಇದ್ರೊದ್ದೊಂದು ಕಾಟ ಬೇರೆ ” ಅಂತ ಗೊಣಗುಟ್ಟಿ ವೈದ್ಯ ಮತ್ತೆ ತೂಕಡಿಸತೊಡಗಿದ. ಅಷ್ಟರಲ್ಲಿ ದಾದಿ ಓಡಿಬಂದು ” ನಂಬರ್ ೨೦ ರ ರೋಗಿ ಉಸಿರಾಡಲಿಕ್ಕೆ ಕಷ್ಟ ಪಡ್ತಾ ಇದ್ದಾರೆ, ಸ್ಥಿತಿ ಗಂಭೀರವಾಗಿದೆ, ವೆಂಟಿಲೇಟರ್ ಬೇರೆ ಯಾವ್ದು ಇಲ್ಲ, ಏನು ಮಾಡೋದು ಸಾರ್?” ಅಂತ ಕೇಳಿದಳು. ವೈದ್ಯರು ಅದಕ್ಕೆ ” ರೋಗಿ ಸಂಖ್ಯೆ ೮೦ ರ ಕಥೆಯೇನು? ” ಅಂತ ಕೇಳಿದ. ಅದಕ್ಕೆ ದಾದಿ ” ಉಳಿಯೋದು ಕಷ್ಟ ಸಾರ್” ಅಂದಳು. ಅದಕ್ಕೆ ಡಾಕ್ಟರ್ ಈ ರೋಗಿಯನ್ನು ಆ ವೆಂಟಿಲೇಟರ್ ಗೆ ವರ್ಗಾಯಿಸಿ , ನಂಬರ್ ೮೦ ರ ರೋಗಿಯನ್ನು ಸಾಮಾನ್ಯ ವಿಭಾಗಕ್ಕೆ ವರ್ಗಾಯಿಸಿ, ಅವರ ಮನೆ ಕಡೆಯವರಿಗೆ ಆಗಲ್ಲ ಅಂತ ತಿಳ್ಸಿಬಿಡಿ, ಈ ರೋಗಿನಾದರೂ ಉಳಿತಾನ ನೋಡೋಣ” ಅಂತ ಹೇಳಿದ. ದಾದಿ ” ಆಯಿತು ಸಾರ್, ಹಾಗೆ ಮಾಡ್ತೀನಿ ” ಅಂತ ಹೊರಗಡೆ ಹೋಗುತ್ತಾಳೆ. ಅವಳು ಹೋದ ಮೇಲೆ ವೈದ್ಯರು “ಇಷ್ಟು ದಿವಸ ಸರಕಾರಿ ಆಸ್ಪತ್ರೆನ ಮೂಸಿ ನೋಡದ ಸರಕಾರಗಳು ಈಗ ಏಕಾಏಕಿ ಎಲ್ಲಾ ವ್ಯವಸ್ಥೆ ಮಾಡ್ತೀವಂದ್ರೆ ಹಿಂಗೇ ಆಗೋದು” ಎಂದು ಗೊಣಗುತ್ತ ಮತ್ತೆ ತೂಕಡಿಸಿಡಲು ಶುರು ಮಾಡಿದ. ಸ್ವಲ್ಪ ಹೊತ್ತಿಗೆ ಅದೇ ನಿಶ್ಯಬ್ಧ ಮನೆ ಮಾಡುತ್ತೆ, ಮತ್ತೆ ಅದೇ ಹಲ್ಲಿ ಲೊಚಗುಟ್ಟತ್ತೆ. ಆದರೆ ವೈದ್ಯನಿಗೆ ಹಲ್ಲಿ ಲೊಚಗುಟ್ಟಿದ್ದು ಯಾಕೋ ಯಾರೋ ಗಹಗಹಿಸಿ ನಕ್ಕಂಗಾಯ್ತು. ನಕ್ಕಿದ್ದು ನಮ್ಮ ಜನರ ಅವಸ್ಥೆಗೋ ಅಥವಾ ನಮ್ಮ ದೇಶದ ವ್ಯವಸ್ಥೆಗೋ ಅಂತ ಗೊತ್ತಾಗಲಿಲ್ಲ.
ಶ್ರೀ
ಥಿಂಕ್ ರೈಟ್
ವೈದ್ಯರ ನಿರ್ಲಕ್ಷ್ಯದ ಕುರಿತಾದ ಲೇಖನವೊಂದನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದ್ದೇನೆ. ಸಮಯವಿದ್ದಾಗ ಓದಿ ಅಭಿಪ್ರಾಯ ತಿಳಿಸಿ
LikeLike
Sure… I will read definitely .. thank you 😊
LikeLike