ನಮ್ಮ ದೇಶದ ಬಹುತೇಕ ಸಮಸ್ಯೆಗಳ ಬಗ್ಗೆ ಚರ್ಚೆ ಶುರುವಾದರೆ, ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪದೋಷಗಳೇ ಕಾರಣ ಎಂದು ಕೊನೆಯಾಗುತ್ತದೆ. ವಿಪರ್ಯಾಸ ಅಂದರೆ ನಮ್ಮ ದೇಶದ ಪುರಾತನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ ಬ್ರಿಟಿಷರು ತಮ್ಮಲ್ಲಿ ಅದೇ ಶಿಕ್ಷಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು. ಭಾರತದಲ್ಲಿ ಮಕ್ಕಳು ಜಾಸ್ತಿ ಅಂಕ ಪಡೆಯುವದಕ್ಕಿಂತ ಜಾಸ್ತಿ ಜ್ಞಾನ ಪಡೆಯಬೇಕು ಎಂಬ ಮೂಲ ಉದ್ದೇಶವನ್ನಿಟ್ಟುಕೊಂಡು, ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನ ಪಡುತ್ತಿರುವುದು ಸಂತಸದ ವಿಚಾರ. ಇದನ್ನು ಕೂಡ ವಿರೋಧ ಮಾಡುತ್ತಿರುವದನ್ನು ನೋಡಿದರೆ, ಶಿಕ್ಷಣದಿಂದ ಜನರಲ್ಲಿ ವಿಚಾರತೆ ಬೆಳೆದರೆ ಅವರ ಬೇಳೆ ಮುಂದೆ ಬೇಯುವುದಿಲ್ಲ ಎಂಬ ದುರುದ್ದೇಶ ಎದ್ದು ಕಾಣುತ್ತಿದೆ.
ಸರಿ ಸುಮಾರು ೩೪ ವರುಷಗಳ ಬಳಿಕ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಬಹು ದೊಡ್ಡ ಬದಲಾವಣೆ ಆಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಾ ಚರ್ಚೆ ಆರಂಭವಾಗಿ ಬಹಳ ವರುಷಗಳೇ ಕಳೆದುಹೋಗಿದೆ. ನೂತನ ಶಿಕ್ಷಣ ನೀತಿಯು ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡುವುದರ ಜೊತೆಗೆ ಸಮಾನ ಮತ್ತು ಸ್ಪಂದನ ಶೀಲ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಮಕ್ಕಳಿಗೆ ಮೂಲಭೂತ ಹಕ್ಕುಗಳು, ಸಂವಿಧಾನದ ಮೌಲ್ಯಗಳು, ಮಾನವೀಯ ಮೌಲ್ಯಗಳು, ದೇಶದ ಬಗ್ಗೆ ಪ್ರೀತಿ ಬೆಳೆಯುವಲ್ಲಿ ಹಾಗು ದೇಶದ ಅಭಿವೃದ್ಧಿಗೆ ಸಹಕರಿಸಲು ಪ್ರತಿಯೊಬ್ಬನ ಕರ್ತವ್ಯಗಳೇನು ಎಂಬುವದರ ಆಳವಾದ ಜ್ಞಾನ ಈ ನೂತನ ಶಿಕ್ಷಣ ನೀತಿಯಿಂದ ಸಿಗುತ್ತದೆ.
ಶಿಕ್ಷಣದಲ್ಲಿ ವೈವಿಧ್ಯತೆ, ನ್ಯಾಯಬದ್ಧ ಶಿಕ್ಷಣ, ಎಲ್ಲರ ಒಳಗೂಡುವಿಕೆ , ಸಮುದಾಯದ ಶಿಕ್ಷಣ, ಪ್ರಾಯೋಗಿಕ ಶಿಕ್ಷಣ, ತಂತ್ರಜ್ಞಾನ ಉಪಯೋಗ, ಏಕಮಾತ್ರ ಸಾಮರ್ಥ್ಯ , ವಿಮರ್ಶಾತ್ಮಕ ಚಿಂತನೆ, ಸೃಜನ ಶೀಲತೆ ಮತ್ತು ನಿರಂತರ ಸಮೀಕ್ಷೆ ಇವೆಲ್ಲವೂ ನೂತನ ಶಿಕ್ಷಣ ನೀತಿಯ ಮೂಲ ತತ್ವಗಳು. ನೂತನ ಶಿಕ್ಷಣ ನೀತಿಗೆ ನಮ್ಮ ಭಾರತದ ಪುರಾತನ ಹಾಗು ಶ್ರೀಮಂತ ಪರಂಪರೆ , ಶಾಶ್ವತ ಜ್ಞಾನ ಮತ್ತು ಆಲೋಚನೆಗಳು ಮಾರ್ಗದರ್ಶಿಯಾಗಿದೆ. ನಮ್ಮ ಪ್ರಾಚೀನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನ, ಸತ್ಯ ಮತ್ತು ಬುದ್ದಿವಂತಿಕೆಯಿಂದ ಕೂಡಿದ ಅನ್ವೇಷಣೆ ಮತ್ತು ತತ್ವಜ್ಞಾನ ಮುಖ್ಯ ಗುರಿಯಾಗಿತ್ತು. ಕ್ರಮೇಣ ನಮ್ಮ ಮೇಲೆ ಇತರ ದೇಶದವರಿಂದ ನಡೆದ ದಾಳಿಗಳಿಂದಾಗಿ ಅವೆಲ್ಲವೂ ನಾಶವಾಗಿ, ಇತ್ತೀಚಿನ ದಿನಗಲ್ಲಿ ಕೇವಲ ಅಂಕಗಳನ್ನು ಗುರಿಯಾಗಿಟ್ಟುಕೊಂಡು ಓದುವ ಶಿಕ್ಷಣವಾಗಿ ಬದಲಾಗಿತ್ತು. ಶಾಲಾ ಕಾಲೇಜುಗಳಿಂದ ಮಕ್ಕಳು ಜ್ಞಾನ ಪಡೆಯುವದರ ಬದಲು ಒಂದು ರೀತಿಯ ಯಂತ್ರ ಮಾನವರಾಗಿ ಬದಲಾಗಿ ಬರುತ್ತಿದ್ದರು. ಈ ನೂತನ ಶಿಕ್ಷಣ ನೀತಿಯಿಂದ ನಮ್ಮ ಹಳೆ ವೈಭವದ ಶಿಕ್ಷಣ ಪರಂಪರೆಯನ್ನು ಮತ್ತೆ ವಾಪಸು ತರುವ ಪ್ರಯತ್ನ ಆಗುತ್ತಿದೆ.
ನೂತನ ಶಿಕ್ಷಣ ನೀತಿಯಲ್ಲಿ, ವಿವಿಧ ಬಾಷೆಗಳು, ವಿಜ್ಞಾನ, ಸಮಾಜ ವಿಜ್ಞಾನ, ಮಾನವೀಯ ಮೌಲ್ಯಗಳು, ವಿವಿಧ ಕ್ರೀಡೆಗಳ ಬಗ್ಗೆ ಸಮಗ್ರ ಶಿಕ್ಷಣ ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿ ಬರುವ ಅಂಕಗಳಿಗಿಂತ ಶಾಲೆಯಲ್ಲಿ ಪಡೆವ ಜ್ಞಾನಕ್ಕೆ ಒತ್ತು ನೀಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿನ ಅನನ್ಯ ಜ್ಞಾನವನ್ನು ಗುರುತಿಸಿ ಆತನಿಗೆ ಆಯಾ ವಿಷಯಗಳಲ್ಲಿ ಸಮಗ್ರ ಶಿಕ್ಷಣ ನೀಡುವ ಗುರಿ ಹೊಂದಿದೆ. ವಿದ್ಯಾರ್ಥಿ ತನಗೆ ಇಷ್ಟವಾಗುವ ವಿಷಯಗಳನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ಅನ್ವೇಷಣೆಗೆ ಬೇಕಾಗುವ ಸೃಜನ ಶೀಲತೆ ಮತ್ತು ಸೃಜನ ಶೀಲಾ ಆಲೋಚನೆಯನ್ನು ಹೆಚ್ಚಿಸಲು ಉತ್ತೇಜನ ನೀಡಲಾಗುತ್ತದೆ. ತುಂಬ ಮುಖ್ಯವಾಗಿ ಪ್ರಾಯೋಗಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಲು ತುಂಬ ಒತ್ತು ಕೊಟ್ಟಿದ್ದಾರೆ. ನಿಮ್ಮ ಮಾತೃ ಭಾಷೆಯಲ್ಲಿಯೇ ೫ನೇ ವರ್ಗದ ತನಕ ಓದಬಹುದಾಗಿದೆ.
ಈಗಿನ 10+2 ಶಿಕ್ಷಣ ಪದ್ದತಿ ಬದಲಾಗಿ 5+3+3+4 ಮಾದರಿಯ ಬೋಧನಾ ಕಲಿಕೆಯನ್ನು ತರಲಾಗುತ್ತಿದೆ. ಹಿಂದಿನ ಶಿಕ್ಷಣ ಮಾದರಿಯ ಪ್ರಕಾರ ವಿದ್ಯಾರ್ಥಿಗಳು 6 -16 ರ ವಯಸ್ಸಿನ ಅನುಗುಣವಾಗಿ ವರ್ಗ 1 ರಿಂದ ವರ್ಗ 10ರ ತನಕ ಓದಿ, ನಂತರ ಎರಡು ವರುಷ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಹಿಂದಿನ ಶಿಕ್ಷಣ ವ್ಯವಸ್ಥೆಯಲ್ಲಿ 3-6 ವರುಷದ ಮಕ್ಕಳಿಗೆ ಪಠ್ಯಕ್ರಮ ಇರಲಿಲ್ಲ. ನೂತನ ಶಿಕ್ಷಣ ವ್ಯವಸ್ಥೆಯಲ್ಲಿ 3-6 ವರುಷದ ಮಕ್ಕಳಿಗೆ ಪಠ್ಯಕ್ರಮವನ್ನು ಸಿದ್ದಪಡಿಸಲಾಗಿದೆ. ನೂತನ ಶಿಕ್ಷಣ ವ್ಯವಸ್ಥೆಯು Early childhood care and education (ECCE) ಅವರು ಹಾಕಿಕೊಟ್ಟ ಅಡಿಪಾಯದ ಪ್ರಕಾರ 3-6 ವರುಷದ ಮಕ್ಕಳ ಒಟ್ಟಾರೆ ಶಿಕ್ಷಣ, ಬೆಳವಣಿಗೆ ಹಾಗು ಮಕ್ಕಳ ಹಿತ ಕಾಪಾಡುವ ಗುರಿ ಹೊಂದಿದೆ. 3-6 ವರುಷದ ಮಕ್ಕಳಲ್ಲಿ ಕಲಿಕೆಯ ಹಾಗು ಗ್ರಹಿಕೆಯ ಶಕ್ತಿ ಆಗಾಧವಾಗಿರುತ್ತದೆ. Early childhood care and education (ECCE)ಯ ಮುಖ್ಯ ಗುರಿ ಅಂದರೆ ಈ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಾಹಿತ್ಯ, ಮಾನವೀಯ ಮೌಲ್ಯಗಳು, ಸಾಮಾಜಿಕ, ಕಲೆ, ಬಾಷೆಗಳ ಅರಿವು ಮೂಡಿಸುವುದು. 3-6 ವರುಷದ ಮಕ್ಕಳಿಗೆ ಬಾಲವಾಟಿಕಾ ಅಥವಾ preparaoty claas ಎಂಬ ವಿಭಾಗವನ್ನು ಈ ನೂತನ ಶಿಕ್ಷಣ ವ್ಯವಸ್ಥೆಯಲ್ಲಿ ತಂದಿದ್ದಾರೆ. ಈ ನೂತನ ಶಿಕ್ಷಣ ವ್ಯವಸ್ಥೆಯ ಆಶಯ ಏನೆಂದರೆ ಒಂದೇ ಸೂರಿನಡಿ ಸೂಕ್ತ ಶಿಕ್ಷಣವನ್ನು ಮಕ್ಕಳಿಗೆ ಒದಗಿಸುವುದು.
5+3+3+4 ಮಾದರಿಯಲ್ಲಿ ವಯಸ್ಸಿನ ಆಧಾರದ ಮೇಲೆ ಅಂದರೆ 3-8, 8 -11, 11-14, ಮತ್ತು 14-18 ವಯಸ್ಸಿನ ಪ್ರಕಾರ 4 ಬಾಗವಾಗಿ ವಿಂಗಡಣೆ ಮಾಡಲಾಗಿದೆ.
ಫೌಂಡೇಶನಲ್ ಸ್ಟೇಜ್ : ಮತ್ತೆ ಇದರಲ್ಲಿ 3-8 ವಯಸ್ಸಿನ ಮಕ್ಕಳನ್ನು ೨ ವಿಭಾಗ ಮಾಡಿದ್ದಾರೆ. ಮೊದಲ ೩ ವರುಷ ಬಾಲವಾಡಿ/ ಪ್ರೀಸ್ಕೂಲ್, ನಂತರ 2 ವರುಷ ಪ್ರಾಥಮಿಕ ಶಾಲೆ ( ಪ್ರೈಮರಿ ಸ್ಕೂಲ್) ಗ್ರೇಡ್ 1-2
ಪ್ರಿಪರೇಟರಿ ಸ್ಟೇಜ್ : ವಯಸ್ಸು 8 -11 ( ಗ್ರೇಡ್ 3-5)
ಮಿಡ್ಲ್ ಸ್ಟೇಜ್ : ವಯಸ್ಸು 11-14 ( ಗ್ರೇಡ್ 6-8)
ಸೆಕೆಂಡರಿ ಸ್ಟೇಜ್: ವಯಸ್ಸು 14-18 ( ಗ್ರೇಡ್ 9-12 – ಇದರಲ್ಲಿ 2 ಹಂತ ಇದೆ. ಮೊದಲ ಹಂತ 9 – 10, ಎರಡನೇ ಹಂತ 11- 12)

ಫೌಂಡೇಶನಲ್ ಸ್ಟೇಜ್ನಲ್ಲಿ ಹೇಳಿಕೊಡುವ ಯಾವುದೇ ವಿಷಯಗಳು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಕೂರುತ್ತದೆ. ಈ ಸ್ಟೇಜ್ನಲ್ಲಿ ನಮ್ಮ ದೇಶದ ಪರಂಪರೆ, ಸಂಸ್ಕೃತಿ, ಕಲೆ, ಮಾನವೀಯ ಮೌಲ್ಯಗಳು, ಜವಾಬ್ಧಾರಿ ಹಾಗು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಿದರೆ ಅವರು ಮುಂದಿನ ಭವ್ಯ ಭಾರತದ ಒಳ್ಳೆಯ ಪ್ರಜೆಯಾಗಿ ರೂಪುಗೊಳ್ಳುವುದ್ರಲ್ಲಿ ಯಾವುದೇ ಅನುಮಾನವಿಲ್ಲ.
ತಮಗಿಷ್ಟವಾದ ವಿಷಯಗಳ ಆಯ್ಕೆ, ಬಾಷೆಗಳ ಆಯ್ಕೆ, ಮಾತೃಬಾಷೆಯಲ್ಲಿ ಕಲಿಕೆ, ಅಗತ್ಯ ಕೌಶಲ್ಯಗಳು, ಸಾಮರ್ಥ್ಯಗಳು ಹಾಗು ವಿವಿಧ ವಿಷ್ಯಗಳ ಪಠ್ಯಕ್ರಮಗಳ ಏಕೀಕರಣ, ಸ್ಥಳೀಯ ವಿಷಯಗಳ ಬಗ್ಗೆ ಪ್ರಾಮುಖ್ಯತೆ ನೀಡುವ ಪಠ್ಯ ಪುಸ್ತಕಗಳು, ವಿದ್ಯಾರ್ಥಿಯನ್ನು ಅಂಕಗಳಿಂದ ಅಳೆಯದೆ ಆತನ ಜ್ಞಾನದ ಮೇಲೆ ಮೌಲ್ಯಮಾಪನ ಮಾಡುವ ಹೊಸ ಕ್ರಮವನ್ನು ನೂತನ ಶಿಕ್ಷಣ ವ್ಯವಸ್ಥೆ ಹೊಂದಿದೆ. ವಿಶಿಷ್ಟ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಾಗುತ್ತದೆ.ಆದಷ್ಟು ಸ್ಥಳೀಯ ಟೀಚರ್ಸ್ ನ್ನು 30:1 ಅನುಪಾತದಲ್ಲಿ ನೇಮಕ ಮಾಡಲು ನಿರ್ಧರಿಸಿದೆ. ಈಗಿರುವ ಟೀಚರ್ಸ್ ಹಾಗು ಮುಂದೆ ಬರುವ ಟೀಚರ್ ಗಳನ್ನೂ ನೂತ ಶಿಕ್ಷಣದ ಪಠ್ಯಕ್ರಮಗಳಿಗೆ ತಕ್ಕಂತೆ ಅವರಿಗೆ ತರಬೇತಿ ನೀಡಲಾಗುವುದು.
ನಿಮಗೆಲ್ಲ ಒಂದು ವಿಷಯ ಗಮನದಲ್ಲಿರಲಿ ಈ ನೂತನ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಸರಕಾರ ನಿಗದಿ ಮಾಡಿರುವ ಅವಧಿ ೨೦ ವರುಷಗಳು. ಅಂದರೆ ಈ ನೂತನ ಶಿಕ್ಷಣ ನೀತಿ ೨೦೪೦ಗೆ ಸಂಪೂರ್ಣವಾಗಿ ಕಾರ್ಯಗತವಾಗಿ ಚಾಲನೆಗೆ ಬರುತ್ತದೆ. ಕೇವಲ ತಿಂಗಳುಗಳಲ್ಲಿ ಅಥವಾ ವರುಷಗಳಲ್ಲಿ ಹೊಸ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗವುದಿಲ್ಲ. ನೂರಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈಗಿರುವ ಶಾಲಾ ಕಟ್ಟಡಗಳು, ಟೀಚೆರ್ಸ್ಗಳು, ಪಠ್ಯಕ್ರಮಗಳು, ತರಬೇತಿಗಳು… ಹೀಗೆ ಅನೇಕ ಹಳೆಯ ವ್ಯವಸ್ಥೆಗಳನ್ನು ಬದಲಾಯಿಸಲು ಸಮಯ ಮತ್ತು ಪ್ರಯತ್ನ ಮಾಡಬೇಕಾಗಿದೆ.
ಈಗಿರುವ ವ್ಯವಸ್ಥೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಸಣ್ಣ ಹಳ್ಳಿಗಳಲ್ಲಿರುತ್ತವೆ, ಹಾಗು ಹಿರಿಯ ಪ್ರಾಥಮಿಕ ಶಾಲೆಗಳು ಸಣ್ಣ ಊರುಗಳಲ್ಲಿರುತ್ತವೆ. ಪ್ರೌಢ ಶಾಲೆಗಳ ಮತ್ತು ಪದವಿ ಪೂರ್ವ ಕಾಲೇಜುಗಳ ಸಂಖ್ಯೆ ಬಹಳ ಕಮ್ಮಿ ಹಾಗು ಅವುಗಳು ಒಂದೋ ತಾಲ್ಲೂಕ ಅಥವಾ ಕೆಲವು ದೊಡ್ಡ ಹಳ್ಳಿಗಳಿರುತ್ತವೆ. ಒಂದೇ ಸೂರಿನಡಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ತರಲು ಬಹಳ ಸಮಯ ಬೇಕು ಯಾಕಂದರೆ ಹಳ್ಳಿಗಳಲ್ಲಿರುವ ಶಾಲೆಗಳನ್ನೂ ಊರಿನಲ್ಲಿರುವ ಶಾಲೆಗಳ ಜೊತೆಗೆ ಸೇರಿಸಲು ಪ್ರಯತ್ನ ಮಾಡಿದರೆ ಹಳ್ಳಿಗಳಲ್ಲಿರುವ ಚಿಕ್ಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳು ಜಾಸ್ತಿ. ಅದೇ ರೀತಿ ಊರುಗಳಲ್ಲಿರುವ ಪ್ರೌಢ ಶಾಲೆಗಳನ್ನು ಮತ್ತು ಪದವಿ ಪೂರ್ವ ಕಾಲೇಜುಗಳನ್ನು ಹಳ್ಳಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳೊಂದಿಗೆ ಸೇರಿಸುವ ಪ್ರಯತ್ನ ಮಾಡಲು ಸಾಧ್ಯವೇ ಎನ್ನುವುದು ಈಗಿರುವ ದೊಡ್ಡ ಸವಾಲು. ಒಂದೇ ಸೂರಿನಡಿ ಇಡೀ ಶಿಕ್ಷಣ ವ್ಯವಸ್ಥೆ ಮಾಡಿದಾಗ ಪದವಿ ಪೂರ್ವ ಕಾಲೇಜಿನ ಮುಖ್ಯಸ್ಥರಿಗೆ ಉಳಿದ ಶಾಲೆಯ ಮುಖ್ಯ ಶಿಕ್ಷಕರು ವರದಿ ನೀಡಬೇಕಾಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಮುಖ್ಯ ಶಿಕ್ಷಕರು ಹಳ್ಳಿಗಳಿಂದ ಊರಿಗೆ ಬಂದು ವರದಿ ಒಪ್ಪಿಸಬೇಕಾಗುತ್ತದೆ.
ಈಗಿರುವ ಪ್ರೌಢ ಶಾಲೆಯ ಟೀಚರ್ಗಳು ಹಿರಿಯ ಪ್ರಾಥಮಿಕ ಶಾಲೆಯ ಪಠ್ಯಕ್ರಮಗಳನ್ನು ಹೇಳಿಕೊಡುವ ತರಬೇತಿ ಪಡೆಯಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿರುವವರು ಪ್ರೌಢ ಶಾಲೆಯ ಮಕ್ಕಳಿಗೆ ಪಾಠ ಮಾಡಬೇಕಾಗುವುದು. ಅವರು ಇದನ್ನು ಒಪ್ಪುತ್ತಾರೆಯೇ? ನೂತನ ಶಿಕ್ಷಣ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆಗಲೇ ಕೆಲವು ಕಡೆ ಶುರು ಮಾಡಿದ್ದಾರೆ. ಹಳ್ಳಿಯಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಸ್ಥರು ಇನ್ನೊಂದು ಊರಿನಲ್ಲಿರುವ ಕಾಲೇಜಿಗೆ ಹೋಗಿ ಬಂದು ವರದಿ ನೀಡುತ್ತಿದ್ದಾರೆ. ಪ್ರೌಢ ಶಾಲೆಯ ಶಿಕ್ಷಕರು ಮೊದಲು ೮ನೇ ತರಗತಿ ಇಂದ ೧೦ ನೇ ತರಗತಿ ತನಕ ಪಾಠ ಮಾಡುತ್ತಿದ್ದರು. ಈಗ ೮ನೇ ತರಗತಿ ಪ್ರಾಥಮಿಕ ಶಿಕ್ಷಣಕ್ಕೆ ಸೇರಿದ್ದರಿಂದ ಅವರಿಗೆ ಕೆಲಸ ಕಮ್ಮಿ ಆಗಿದೆ. ಪದವಿ ಪೂರ್ವ ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೆ ಪ್ರೌಢ ಶಾಲೆಯ ೯ ಮತ್ತು ೧೦ ನೇ ತರಗತಿಯ ಪಾಠ ಮಾಡಬೇಕಾಗಿದೆ ಹಾಗು ಅವರ ಕೆಲಸ ಜಾಸ್ತಿ ಆಗಿದೆ. ಇವೆಲ್ಲವು ಸದ್ಯಕ್ಕೆ ಮೇಲೆ ಕಾಣುತ್ತಿರುವ ಕೆಲವೇ ಕೆಲವು ಸವಾಲುಗಳು. ಇನ್ನು ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಶಾಲೆಯವರು ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಅವರು ಈ ಹೊಸ ನೀತಿಗಳನ್ನು ಜಾರಿಗೆ ಬರಲು ಬಿಡುತ್ತಾರೆಯೇ? ರಾಜ್ಯ ಸರಕಾರಗಳು ಇದಕ್ಕೆ ಬೆಂಬಲ ನೀಡುತ್ತಾರೆಯೇ? ಈ ರೀತಿಯ ಅನೇಕ ಪ್ರಶ್ನೆಗಳು ಹಾಗು ಸವಾಲುಗಳು ನಮ್ಮೆದುರು ಇದೆ.
ಆದರೆ ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲವು ತೊಂದರೆಗಳನ್ನು ಸಹಿಸಿಕೊಂಡು, ನೂತನ ಶಿಕ್ಷಣ ನೀತಿಯನ್ನು ಕಾರ್ಯಗತಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪೋಷಕರು ನೂತನ ಶಿಕ್ಷಣ ವ್ಯವಸ್ಥೆ ತರಲು ಸರಕಾರಗಳಿಗೆ ಆದಷ್ಟು ಒತ್ತಾಯ ಹಾಗು ಬೆಂಬಲ ನೀಡಬೇಕು.
ಆದಷ್ಟು ಬೇಗ ಮಕ್ಕಳು ಪುಸ್ತಕಗಳನ್ನು ಮೂಟೆಯಂತೆ ಹೊರದೆ, ಪಡೆಯುವ ಅಂಕಗಳೇ ಬುದ್ದಿವಂತಿಕೆಯಾ ಮೌಲ್ಯಮಾಪನ ಎಂಬ ತಪ್ಪು ಗ್ರಹಿಕೆಯಿಂದ ಹೊರಬಂದು, ವಿಚಾರವಂತರಾಗಿ, ಅತ್ತ್ಯುತ್ತಮ ಜ್ಞಾನ ಪಡೆದು ಶಾಲೆಗಳಿಂದ ಹೊರಬರಲಿ ಎಂದು ಹಾರೈಸೋಣ.
ಶ್ರೀ
ಥಿಂಕ್ ರೈಟ್
Thankyou for this article
LikeLike
Touched all the corners of NEP NEW POLICY.
EXCELLENT..
Need these kind of informative article regarding NEP2020.
Tqqqq ji.
LikeLike
Thank you very much for your support…
LikeLike