ಬರಹಗಾರರು : ಶ್ರೀನಾಥ್ ಹರದೂರ ಚಿದಂಬರ
ಪುಟ್ಟ ಹಸುಗೂಸು ಮನೆಯ ವರಾಂಡದಲ್ಲಿ ಆಡುತಿತ್ತು. ತಾಯಿ ಆಗಷ್ಟೇ ಹಾಲು ಕುಡಿಸಿ ಮಗುವನ್ನು ಆಡಲು ಬಿಟ್ಟು, ಅದು ಆಡುವುದನ್ನು ನೋಡುತ್ತಾ ಕುಳಿತಳು. ಮಗು ಆಗಾಗ ತಾಯಿಯ ಕಡೆ ನೋಡುತ್ತಾ ಅವಳು ಇದ್ದಾಳೋ ಇಲ್ಲವೊ ಅಂತ ಖಚಿತಪಡಿಸಿಕೊಂಡು ತನ್ನ ಪಾಡಿಗೆ ತಾನು ಆಡುತಿತ್ತು. ಅಷ್ಟರಲ್ಲಿ ಅವಳ ಗಂಡ ಮನೆಯೊಳಗೇ ಬಂದ. ಮೈಮೇಲೆ ಜ್ಞಾನವಿಲ್ಲದಷ್ಟು ಕುಡಿದು ಬಂದಿದ್ದ. ಊಟ ಬಡಿಸು ಹಸಿವಾಗಿದೆ ಅಂದ. ಅವಳು ಗಡಬಡಿಸಿ ಹೆದರಿ ಊಟ ತರಲು ಅಡುಗೆ ಮನೆಗೆ ಓಡಿದಳು. ಊಟ ತಟ್ಟೆಗೆ ಬಡಿಸುತ್ತಿರುವಾಗ ಹೊರಗಡೆ ಮಗು ಅಳಲು ಶುರು ಮಾಡಿತು. ಊಟ ಬಡಿಸುವುದನ್ನು ಬಿಟ್ಟು ಹೊರಗಡೆ ಓಡಿ ಬಂದಳು. ಮಗು ತಾಯಿಯನ್ನು ನೋಡಿ , ಅವಳು ಎಲ್ಲೂ ಹೋಗಿಲ್ಲ ಅಂತ ಸಮಾಧಾನವಾಗಿ ಅಳುವುದನ್ನು ನಿಲ್ಲಿಸಿ ಮತ್ತೆ ಆಡಲು ಶುರು ಮಾಡಿತು. ಗಂಡ ಊಟ ಬಡಿಸುವದಕ್ಕೆ ಯಾಕೆ ಇಷ್ಟು ನಿಧಾನ ಎಂದು ಕೋಪಗೊಂಡು ಕುಡಿದ ಮತ್ತಿನಲ್ಲಿ ಹೆಂಡತಿಯನ್ನು ಹೊಡೆಯಲು ಶುರುಮಾಡಿದ. ಅವಳನ್ನು ದರದರನೆ ಮನೆ ಹೊರಗಡೆ ಎಳೆದು ತಂದು ಹೊಡೆಯಲು ಶುರುಮಾಡಿದ. ಅವನ ಕೂಗಾಟ ಕೇಳಿ ಸುತ್ತಮುತ್ತಲಿನ ಮನೆಯ ಜನರು ಹೊರಬಂದರು. ಎಲ್ಲರು ಯಾವುದೊ ಧಾರಾವಾಹಿ ನೋಡುವಂತೆ ನೋಡಲು ಶುರುಮಾಡಿದರು. ಕೆಲವರು ವೀಡಿಯೋ ಚಿತ್ರೀಕರಣ ಮಾಡಲು ತೊಡಗಿದರು. ಅವಳಿಗೆ ಬೇರೆ ಸಂಬಂಧ ಇದೆಯಂತೆ, ಗೊತ್ತಾಗಿ ಹೊಡೆಯುತ್ತಿದ್ದಾನೆ ಅಂತ ಕೆಲವರು ಗುಸು ಗುಸು ಅಂತ ಮಾತಾಡತೊಡಗಿದರು. ಜನರು ತಮ್ಮ ಎಲ್ಲ ಸಮಸ್ಯೆಗಳನ್ನು ಮರೆತು ನಡೆಯುತ್ತಿದ್ದ ಘಟನೆಯನ್ನು ಆನಂದಿಸತೊಡಗಿದ್ದರು. ಅಷ್ಟರಲ್ಲಿ ಗಂಡನಿಗೆ ಅವಳನ್ನು ಹೊಡೆದು ಸುಸ್ತಾಗಿ, ಒಳಗಡೆ ಹೋಗಿ ಊಟ ಮಾಡಲು ಶುರು ಮಾಡಿದ. ಅವಳಿಗೆ ಮೈಮೇಲೆ ಬಾಸುಂಡೆಗಳು ಬರುವ ಹಾಗೆ ಪೆಟ್ಟು ಬಿದ್ದಿತ್ತು. ಅವಳು ಅಳುತ್ತ ಅವಮಾನದಿಂದ ಒಳಗಡೆ ಹೋದಳು. ಇದನ್ನೆಲ್ಲಾ ಮಗು ಏನು ಅರ್ಥವಾಗದೆ ಪಿಳ ಪಿಳ ಅಂತ ನೋಡುತ್ತಾ ಕೂತಿತ್ತು. ಜನರು ಅಯ್ಯೋ ಇಷ್ಟು ಬೇಗ ಮುಗಿಯಿತಾ ಅಂತ ಬೇಜಾರಾಗಿ ತಮ್ಮ ತಮ್ಮ ಮನೆ ಒಳಗಡೆ ಹೋಗಲು ಶುರು ಮಾಡಿದರು. ಕೆಲವರು ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಪ್ರಸಾರ ಮಾಡತೊಡಗಿದರು. ಎಲ್ಲರಿಗು ತಾವು ಪ್ರಸಾರ ಮಾಡಿದ ವಿಡಿಯೋವನ್ನು ಎಷ್ಟು ಜನ ನೋಡುತ್ತಾರೆ ಅನ್ನುವ ಕುತೂಹಲ. ಅವಳು ಬರುತ್ತಿದ್ದ ಅಳುವನ್ನು ನುಂಗಿಕೊಂಡು ಮಗುವಿನ ಹತ್ತಿರ ಹೋದಳು. ಮಗು ಅಮ್ಮನನ್ನು ನೋಡಿ ನಕ್ಕು ಅಮ್ಮನನ್ನು ಹತ್ತಿ ಮುದ್ದು ಮಾಡಿತು. ಮಗುವಿನ ಕೈ ಸ್ಪರ್ಶ ಅವಳ ನೋವನ್ನು ಕಮ್ಮಿ ಮಾಡಿ ಅವಳ ತಾಯೀನೇ ಬಂದು ಸಮಾಧಾನ ಮಾಡಿದಂತಾಯಿತು ಅವಳಿಗೆ. ಏನು ಅರಿವಿರಿದ ಮಗು ಅದಕ್ಕೆ ಗೊತ್ತಿಲ್ಲದಂತೆ ಅವಳ ಕೈ ಹಿಡಿಯಿತು. ಆದರೆ ಅರಿವಿದ್ದ ಸಮಾಜದ ಜನರು ಅವಳ ಕೈ ಬಿಟ್ಟರು.
Good one
LikeLike
Thank you 😊 Lathish
LikeLike