ಬರೆಹ : ಶ್ರೀನಾಥ್ ಹರದೂರ ಚಿದಂಬರ
ಅವನ ಬೆರಳುಗಳು ಮೊಬೈಲ್ ಪರದೆಯ ಮೇಲೆ ಫೇಸ್ಬುಕ್ ನ ಒಂದೊಂದೇ ಪುಟವನ್ನು ಕೆಳಗಿನಿಂದ ಮೇಲೆಕ್ಕೆ ತಳ್ಳುತಿತ್ತು. ಯಾವುದು ಅಂತಹ ಒಳ್ಳೆಯ ವಿಡಿಯೋಗಳಾಗಲಿ, ಫೋಟೋಗಳಾಗಲಿ ಕಾಣುತ್ತಿರಲಿಲ್ಲ. ಆದರೂ ಮೊಬೈಲ್ ಕೆಳಗಿಡಲು ಮನಸ್ಸಿಲ್ಲದೆ ಅವನ ಕಣ್ಣುಗಳು ಮೊಬೈಲ್ ಪರದೆಯನ್ನೇ ನೋಡುತ್ತಿದ್ದವು. ಹೆಂಡತಿ ಮಗಳ ಶಾಲೆಗೆ ರಜಾ ಅಂತ ಮಗಳನ್ನು ಕರೆದುಕೊಂಡು ಊರಿಗೆ ಹೋಗಿ ಒಂದು ವಾರವಾಗಿತ್ತು. ಒಬ್ಬನೇ ಆದ್ದರಿಂದ ಅವನ ಮೊಬೈಲ್ ಸದ್ಯಕ್ಕೆ ಅವನ ಸಂಗಾತಿಯಾಗಿತ್ತು. ಮೊಬೈಲ್ ನೋಡುತ್ತಿರುವಾಗಲೇ ಒಂದು ಮೆಸೇಜ್ ಬಂತು. ಅದರಲ್ಲಿ ಒಬ್ಬರೇ ಇದ್ದು ಬೇಜಾರು ಆಗಿದಿಯೇ? ಸಂಗಾತಿಯನ್ನು ಬಯಸುತ್ತಿರುವಿರಾ? ಹಾಗಾದರೆ ಈ ಕೆಳಗಿನ ನಂಬರ್ ಗೆ ಬ್ಲಾಂಕ್ ಮೆಸೇಜ್ ಮಾಡಿ ಅಂತ ಇತ್ತು. ಹೆಂಡತಿ ಬೇರೆ ಮನೆಯಲ್ಲಿ ಇರಲಿಲ್ಲ, ಯಾಕೆ ಒಂದು ಚಾನ್ಸ್ ನೋಡಬಾರದು ಎಂಬ ಆಸೆ ಶುರುವಾಯಿತು. ಅದರ ಹಿಂದೇನೆ ಹೆಂಡತಿಗೆ ಮೋಸ ಮಾಡಬಾರದು ಅಂತ ಆತ್ಮ ಸಾಕ್ಷಿ ಒಳಗಡೆ ಚುಚ್ಚತೊಡಗಿತು. ಆದರೆ ಆಸೆ ಮತ್ತು ಆತ್ಮಸಾಕ್ಷಿ ಮಧ್ಯದ ಹೋರಾಟದಲ್ಲಿ, ಆತ್ಮಸಾಕ್ಷಿ ಸೋತು ಆಸೆ ಗೆದ್ದಿತು. ದುಡ್ಡು ತುಂಬಾ ಕೇಳಿದರೆ ಬೇಡ ಅಂದರಾಯಿತು ಅಂತ ಯೋಚನೆ ಮಾಡಿ ಬ್ಲಾಂಕ್ ಮೆಸೇಜ್ ಮಾಡಿದ. ಆದಾಗಿ ೨ ನಿಮಿಷಕ್ಕೆ ಬೇರೆ ನಂಬರ್ ನಿಂದ ಒಂದು ಫೋನ್ ಕಾಲ್ ಬರತೊಡಗಿತು. ಅವನು ಫೋನ್ ಕಾಲ್ ರಿಸೀವ್ ಮಾಡಿದ. ಆ ಕಡೆಯಿಂದ ಒಂದು ಸುಂದರವಾದ ಹೆಣ್ಣಿನ ಧ್ವನಿ ಕೇಳಿತು. ಅವನ ಹೃದಯದ ಬಡಿತ ನಿಧಾನವಾಗಿ ಜಾಸ್ತಿಯಾಗತೊಡಗಿತು. ಅವಳು ನಮ್ಮನ್ನು ಸಂಪರ್ಕ ಮಾಡಿದ್ದಕ್ಕೆ ಧನ್ಯವಾದಗಳು, ನಿಮಗೆ ಬೇಕಾದ ರೀತಿಯಲ್ಲಿ ನಾವು ಸಂಗಾತಿಯ ವ್ಯವಸ್ಥೆ ಮಾಡುತ್ತೇವೆ, ಈ ಸೇವೆಯನ್ನು ಗಂಟೆಗಳಲ್ಲಿ, ದಿನಗಳಲ್ಲಿ ಹಾಗು ವಾರಗಳಲ್ಲಿ ಬೇಕಾದರೂ ನೀಡುತ್ತೇವೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಸೇವೆಯನ್ನು ನೀವು ಆಯ್ಕೆ ಮಾಡಬಹುದು ಎಂದು ವಿವರಿಸಿದಳು. ಅವನು ಎಷ್ಟು ಹಣ ಆಗುತ್ತದೆ ಎಂದು ಕೇಳಿದ. ಅವಳು ಈ ಸೇವೆಗೆ ನಾವು ಯಾವುದೇ ಹಣ ತೆಗೆದುಕೊಳ್ಳುವುದಿಲ್ಲ ಎಂದಳು. ಅವನಿಗೆ ಯಾಕೋ ನಂಬಲಾಗದೆ ಮತ್ತೆ ಅವಳಲ್ಲಿ ಯಾಕೆ ಹಣ ತೆಗೆದುಕೊಳ್ಳುವುದಿಲ್ಲ, ನನಗೆ ನಂಬಲಾಗುತ್ತಿಲ್ಲ, ಎಂದು ಹೇಳಿದ. ಅವಳು ಇದು ನಮ್ಮಿಂದ ಮಾಡಲಾಗುತ್ತಿರುವ ಒಂದು ಸಣ್ಣ ಸಮಾಜ ಸೇವೆ, ನಿಮ್ಮಂತೆ ಸಂಗಾತಿ ಬಯಸುತ್ತಿರುವವರನ್ನು ಒಟ್ಟು ಗೂಡಿಸುವ ಒಂದು ಕೆಲಸ ಅಷ್ಟೇ, ನಿಮ್ಮ ವಾಟ್ಸ್ ಆಪ್ಗೆ ಕೆಲವು ಫೋಟೋ ಕಳಿಸುತ್ತೇವೆ, ನೀವು ಯಾರನ್ನು ಸಂಗಾತಿಯನ್ನಾಗಿ ಆರಿಸುತ್ತೀರಾ ಎನ್ನುವದನ್ನು ತಿಳಿಸಿ ಸಾಕು ಅಂದಳು. ಅವನು ಅವಳು ಹೇಳಿದ್ದನ್ನು ಅರಗಿಸಿಕೊಳ್ಳುತ್ತಿರುವಾಗಲೇ ಅವನ ಮೊಬೈಲ್ಗೆ ಫೋಟೋಸ್ಗಳು ಬಂದವು. ಅವುಗಳನ್ನು ನೋಡಿ ಸ್ವರ್ಗವೇ ಕಣ್ಣ ಮುಂದೆ ಇಳಿದಂತಾಯಿತು. ಅದರಲ್ಲಿ ಒಂದು ಫೋಟೋ ಸೆಲೆಕ್ಟ್ ಮಾಡಿ, ಅದನ್ನು ಅವರು ಹೇಳಿದ ನಂಬರ್ ಗೆ ವಾಪಸು ಕಳಿಸಿದ. ಆದಾಗಿ ೨ ನಿಮಿಷಕ್ಕೆ ಅವಳು ಮತ್ತೆ ಕಾಲ್ ಮಾಡಿದಳು. ನೀವು ಮನೆಯಲ್ಲಿ ಭೇಟಿ ಮಾಡುತ್ತೀರಾ? ಅಥವಾ ಹೊರಗಡೆ ಮೀಟ್ ಮಾಡುತ್ತೀರಾ ಎಂದು ಕೇಳಿದಳು. ಅವನು ಮನೆಯಲ್ಲಿ ಭೇಟಿ ಮಾಡುತ್ತೇನೆ ಅಂತ ಹೇಳಿದ. ಅವಳು ಹಾಗಾದರೆ ನೀವು ಟ್ಯಾಕ್ಸಿ ಚಾರ್ಜ್ Rs.750 ಕೊಡಬೇಕಾಗುತ್ತೆ ಅಂದಳು. ಅವನು ಆಯಿತು ಅದನ್ನು ನಾನು ಕೊಡುತ್ತೇನೆ ಅಂದನು. ಅವಳು ನಾವು ಒಂದು ಲಿಂಕ್ ಕಳಿಸುತ್ತೇವೆ, ನೀವು ಆ ಲಿಂಕಿಗೆ ನಿಮ್ಮ ಕ್ರೆಡಿಟ್ ಕಾರ್ಡ್ನಿಂದ ಪೇ ಮಾಡಿ, ನಂತರ ಅರ್ಧ ಗಂಟೆಯಲ್ಲಿ ಅವರು ನಿಮ್ಮ ಮನೆಯಲ್ಲಿ ಇರುತ್ತಾರೆ ಅಂದಳು. ಅದರಂತೆ ಸ್ವಲ್ಪ ಹೊತ್ತಿನಲ್ಲಿ ಲಿಂಕ್ ಬಂತು, ಅವನು ತನ್ನ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಹಾಕಿ, ಪೇ ಅಂತ ಕ್ಲಿಕ್ ಮಾಡಿ ಅವರಿಂದ ಬರುವ ಮೆಸೇಜ್ ಕಾಯುತ್ತ ಕುಳಿತ. ಕಣ್ಣಲ್ಲಿ ಮನೆಗೆ ಬರುವವರನ್ನು ನೆನಸಿಕೊಂಡು ಕನಸು ಕಾಣುತ್ತ ಕುಳಿತ. ೫ ನಿಮಿಷದ ನಂತರ ಅವನ ಮೊಬೈಲ್ಗೆ ಮೆಸೇಜ್ ಬಂತು. ಅದರಲ್ಲಿ ಅವನ ಕ್ರೆಡಿಟ್ ಕಾರ್ಡ್ನಿಂದ ಐವತ್ತು ಸಾವಿರದ ಟಿವಿಯನ್ನು ಪರ್ಚೆಸ್ ಮಾಡಿದ್ದರು. ಅವನ ಓದಿ ನಂಬಲಾಗದೆ ಮತ್ತೊಮ್ಮೆ, ಮಗದೊಮ್ಮೆ ಓದಿದ. ಅವನಿಗೆ ತಾನು ಮೋಸ ಹೋಗಿದ್ದು ಗೊತ್ತಾಗಿ ಅವನಿಗೆ ಬಂದ ಫೋನ್ ನಂಬರಗೆ ಕಾಲ್ ಮಾಡಿದ. ನಂಬರ್ ಸ್ವಿಚ್ ಆಫ್ ಅಂತ ಬರತೊಡಗಿತ್ತು. ಅಲ್ಲಿಯೇ ಕುಸಿದು ಕುಳಿತ. ಸಿಟ್ಟಿನಿಂದ ಮೊಬೈಲ್ ಅನ್ನು ಬಿಸಾಡಿದ. ಮೊಬೈಲ್ ದೂರದಲ್ಲಿ ಹೋಗಿ ಬಿದ್ದು, ಸ್ವಿಚ್ ಆಫ್ ಆಯಿತು. ಹೊರಗಿನ ಸಂಗಾತಿ ಕೈ ಕೊಟ್ಟಳು. ಕೈಲಿದ್ದ ಸಂಗಾತಿ ಆಫ್ ಆದಳು. ಅವನ ಆಸೆ ಅಳುತಿತ್ತು, ಅವನ ಆತ್ಮಸಾಕ್ಷಿ ನಗುತಿತ್ತು.
Superb
LikeLike
Thank you 😊
LikeLike
😀👌
LikeLike
👏👏😁 “ಅತಿಯಾಸೆ ಗತಿಕೇಡು”
LikeLike
೧೦೦ ಪ್ರತಿಶತ ಸತ್ಯ… ಧನ್ಯವಾದಗಳು…
LikeLike
ನಿಜಕ್ಕೂ ಪೆದ್ದಾ ಕಂಡ್ರೀ ಅವನು😀
LikeLike
ಆಸೆಯೇ ದುಃಖಕ್ಕೆ ಮೂಲ….
LikeLiked by 1 person