– ಶ್ರೀನಾಥ್ ಹರದೂರ ಚಿದಂಬರ
ಅವನು ಅವಳ ಹತ್ತಿರ ತನ್ನ ಪ್ರೀತಿಯನ್ನು ಹೇಳಿಕೊಂಡ. ಅವಳು ಅದನ್ನು ಒಪ್ಪಿಕೊಂಡಳು. ಅವನು ಅವಳ ಧರ್ಮ ಕೇಳಲಿಲ್ಲ, ಅವಳು ಅವನ ಧರ್ಮ ಕೇಳಲಿಲ್ಲ. ಪ್ರೀತಿಯ ದೀಪ ಹೊತ್ತಿಕೊಂಡಿತು.
ಅವಳ ಮನೆಯವರಿಗೆ ತಿಳಿದು ಅವನನ್ನು ಚೆನ್ನಾಗಿ ಹೊಡೆದು ಅವಳ ಸುದ್ದಿಗೆ ಬಂದರೆ, ಅದು ನಮ್ಮ ಧರ್ಮದ ಸುದ್ದಿಗೆ ಬಂದಂತೆ , ಅವಳನ್ನು ಮತ್ತೊಮ್ಮೆ ಭೇಟಿ ಮಾಡಿದರೆ ಜೀವ ಸಹಿತ ಬಿಡುವುದಿಲ್ಲ ಅಂದರು. ಧರ್ಮ ದ್ವೇಷದ ಬೆಂಕಿ ಹೊತ್ತಿಕೊಂಡಿತು.
ಅವನ ಧರ್ಮದವರಿಗೆ ವಿಷ್ಯ ತಿಳಿದು ಅವಳ ಮನೆಯವರ ಮೇಲೆ ದಾಳಿ ಮಾಡಿದರು. ಅವಳ ಮನೆಯ ಮೇಲೆ ಆದ ದಾಳಿ ತಿಳಿದು ಅವಳ ಮನೆಯವರು ಆ ಧರ್ಮದವರ ಮೇಲೆ ದಾಳಿ ಮಾಡಿದರು. ಧರ್ಮ ದ್ವೇಷದ ಗಾಳಿ ಜೋರಾಗಿ ಊರಿಗೆಲ್ಲ ಬೆಂಕಿ ಹೊತ್ತಿಕೊಂಡಿತು.
ಜನ ಅವರಿಬ್ಬರನ್ನು ಮರೆತು ಧರ್ಮಕ್ಕಾಗಿ ಒಬ್ಬರೊನ್ನಬ್ಬರು ಕೊಂದುಕೊಂಡರು. ಇದನ್ನೆಲ್ಲ ನೋಡಿ ಅವನು ಮತ್ತು ಅವಳು ನಮ್ಮ ಪ್ರೀತಿ ಉಳಿಯಲ್ಲ ಅಂತ ಜೀವ ಬಿಟ್ಟರು. ಪ್ರೀತಿಯ ದೀಪ ಆರಿತು. ಹತ್ತಿದ ಬೆಂಕಿ ಆರಿ ತಣ್ಣಗಾಯಿತು.
ಅವರಿಬ್ಬರು ನಮ್ಮನ್ನು ನಾವು ಕೊಂದುಕೊಂಡರೆ ಪ್ರೀತಿ ಉಳಿಯುತ್ತೆ ಅಂದುಕೊಂಡರು. ಜನರು ಜನರನ್ನು ಕೊಂದರೆ ಧರ್ಮ ಉಳಿಯುತ್ತೆ ಅಂದುಕೊಂಡರು.