ಛಾಯಾಚಿತ್ರಣ : ಪ್ರತಿಮಾ
ಬರೆಹ: ಶ್ರೀನಾಥ್ ಹರದೂರ ಚಿದಂಬರ

ಬೆಳಗಿನ ಜಾವ ಸಣ್ಣಗೆ ಚಳಿ ಹುಟ್ಟಿಸುವಂತೆ ತಂಗಾಳಿ ಬೀಸುತಿತ್ತು. ತೋಟದಲ್ಲಿ ಅಡಿಕೆ ಮರ ಮತ್ತು ತೆಂಗಿನ ಮರಗಳು ಉಲ್ಲಾಸದಿಂದ ತಮ್ಮ ತಮ್ಮ ತಲೆಗಳನ್ನೂ ಅತ್ತಿಂದಿತ್ತ ಅಲ್ಲಾಡಿಸುತ್ತ ಬೆಳಗ್ಗಿನ ಜಾವದ ಸುಂದರ ವಾತಾವರಣವನ್ನು ಅನುಭವಿಸುತ್ತ ಏನೋ ಗುಸು ಗುಸು ಪಿಸು ಪಿಸು ಅಂತ ಇದ್ದವು.
ಅಡಿಕೆ ಮರ ತೆಂಗಿನ ಮರಕ್ಕೆ ಕೇಳಿತು ” ಈಗ ಹೆಂಗಿದೆ ಬೆಲೆ ನಿಂದು ?”
ಅದಕ್ಕೆ ತೆಂಗಿನ ಮರ ಹೇಳಿತು ” ಅಯ್ಯೋ ಬಿಡಪ್ಪ , ನಮ್ದೇನು ಆರಕ್ಕೆ ಏರಲ್ಲ , ಮೂರಕ್ಕೆ ಇಳಿಯಲ್ಲ, ನಂದು ಬಿಡು, ನಿನ್ನ ಬೆಲೆ ಹೆಂಗಿದೆ?”.
ಅಡಿಕೆ ಮರ ಹೇಳಿತು” ಮೊನ್ನೆ ಏನೋ ಜಾಸ್ತಿ ಬೆಲೆ ಬಂದಿದೆ ಅಂತೇ, ಮತ್ತೆ ಜನ ಜರ್ದಾ, ಬೀಡಾ ಎಲ್ಲ ತಿನ್ನಕ್ಕೆ ಶುರು ಮಾಡಿರ್ಬೇಕು ಅನಿಸುತ್ತೆ, ಕೊರೋನಾ ಬಗ್ಗೆ ಹೆದರಿಕೆ ಕಮ್ಮಿ ಆಯ್ತೆನೋ, ಅದಕ್ಕೆ ಬೆಲೆ ಜಾಸ್ತಿ ಆಗಿರ್ಬೇಕು , ತೋಟದಲ್ಲಿ ಕೆಲಸ ಮಾಡೋರು ಮಾತಾಡ್ತಾ ಇದ್ರು , ಕೇಳಿಸ್ಕೊಂಡೆ”
ತೆಂಗಿನ ಮರ ಕೇಳಿತು ” ಹೌದ, ನೀನು ತುಂಬ ಅದೃಷ್ಟವಂತ ಬಿಡಪ್ಪ, ಹಂಗಾದ್ರೆ ಒಳ್ಳೆ ಆರೈಕೆ ಆಗುತ್ತೆ ಬಿಡು ಈ ವರ್ಷ ನಿಂಗೆ, ಹೋಗ್ಲಿ ಪೂರ್ತಿ ಕೊಯ್ಲು ಆಯ್ತಾ “?
ಅದಕ್ಕೆ ಅಡಿಕೆ ಮರ” ಆಗ್ತಾ ಇದೆ ಮಾರಾಯ, ಕೆಲಸದೋರು ನನ್ ಮೇಲೆ ಹತ್ತಿ ಇಳಿದು, ಆ ಕಡೆ ಈ ಕಡೆ ಎಳೆಸಿಕೊಂಡು ಸಿಕ್ಕಾಪಟ್ಟೆ ಮೈಕೈ ಎಲ್ಲ ನೋವು ಆಗಿದೆ , ಅದರ ಮದ್ಯೆ ಮಂಗಗಳು ಬೇರೆ ಮೈಮೇಲೆ ಹತ್ತುತ್ತವೆ, ಸಾಕಾಗಿ ಹೋಗಿದೆ, ಯಾವತ್ತೂ ಮುಗಿಯತ್ತೋ ಏನೋ ” ಅಂತ ಹೇಳಿತು.
ತೆಂಗಿನ ಮರ ” ಸುಮ್ಮನೆ ತಿಂದು ಉದ್ದ ಬೆಳೆದ್ರೆ ಆಗಲಪ್ಪಾ, ನನ್ ತರ ಸ್ವಲ್ಪ ದಪ್ಪ ಕೂಡ ಆಗ್ಬೇಕು, ಇಲ್ಲಾಂದ್ರೆ ಹಿಂಗೇ ನೋವು ತಿನ್ನಬೇಕಾಗುತ್ತೆ” ಅಂತ ಹೇಳಿತು.
ಅದಕ್ಕೆ ಅಡಿಕೆ ಮರ ” ನಿನ್ ಬಿಡಪ್ಪ , ಅವರಿಗೆ ಕಾಮಧೇನು ನೀನು, ಚೆನ್ನಾಗಿ ತಿನ್ನಕ್ಕೆ ಹಾಕ್ತಾರೆ, ದಪ್ಪ ಇರದೇ ಏನು”? ಅಂತ ಹೇಳಿತು.
ತೆಂಗಿನ ಮರ ಹೇಳಿತು ” ಅಯ್ಯೋ , ಅವೆಲ್ಲ ಈಗೆಲ್ಲ ಇಲ್ಲ, ಸ್ವಲ್ಪ ಕಾಯಿಲೆ ಬಂದ್ರೆ ನಮ್ಮನ್ನ ಸಾಯಿಸಿಯೇ ಬಿಡ್ತಾರೆ ಈಗ, ದೇವ್ರು ಗೀವ್ರು ಅನ್ನೋದೆಲ್ಲ ಹಳೆ ಕಾಲ, ಮೊದಲು ಒಳ್ಳೆ ತೋಟದ್ದ್ ಗೊಬ್ಬರ ಹಾಕೋರು, ಈಗ ಯಾವುದೊ ಕೆಟ್ಟ ವಾಸನೆ ಬರೋ ಔಷಧಿ ಹಾಕ್ತಾರೆ, ವಾಂತಿ ಬಾರೋ ಹಂಗೆ ಆಗುತ್ತೆ, ಈ ರೋಗಗಳೆಲ್ಲ ಅವಾಗೆಲ್ಲ ಇರಲಿಲ್ಲ ಬಿಡು “
ಅದಕ್ಕೆ ಅಡಿಕೆ ಮರ ಹೇಳಿತು ” ಅದು ಸರಿ ಅನ್ನು, ಕಾಲ ಕೆಟ್ಟೋಯ್ತು ಬಿಡು, ಮೊದಲು ಇಡೀ ಸಂಸಾರನೇ ಬಂದು ತೋಟದಲ್ಲಿ ಕೆಲಸ ಮಾಡ್ತಾ ಇದ್ರೂ, ಈಗ ಮಕ್ಕಳೆಲ್ಲ ಪೇಟೆಗೆ ಹೋಗಿ ಸೆಟ್ಲ್ ಆಗಿಬಿಟ್ಟಿದ್ದಾರೆ, ಇನ್ನು ಅವರ ಮಕ್ಳು ರಜಕ್ಕೆ ಇಲ್ಲಿಗೆ ಬಂದು ನಮ್ಮ ಮುಂದೆ ನಿಂತು ಒಂದಷ್ಟು ಸೆಲ್ಫಿ ತೆಕ್ಕೊಂಡು ಹೋಗ್ತಾರೆ, ಅವುಕ್ಕೆ ಅಡಿಕೆ, ತೆಂಗು ಹೆಂಗೆ ಬೆಳೆಯುತ್ತೆ ಅಂತ ಗೊತ್ತಿರಲ್ಲ, ಈ ಅಜ್ಜಂದಿರು ತೀರ್ಕೊಂಡು ಬಿಟ್ರೆ ನಮ್ ಕಥೆ ಅಷ್ಟೇ ಅನಿಸುತ್ತೆ”
ಅದಕ್ಕೆ ತೆಂಗಿನ ಮರ ” ಸರಿ ಹೇಳ್ದೆ ನೋಡು, ಏನ್ ಕಥೇನೋ ಏನೋ, ಸರಿ ಬಿಡು ಯಾರೋ ಬರ್ತಿರೋ ಹಾಗಿದೆ, ಸಂಜೆ ಮಾತನಾಡೋಣ ” ಅಂತ ಹೇಳಿತು.
ಅದಕ್ಕೆ ಅಡಿಕೆ ಮರ ” ಕೊಯ್ಲಿಗೆ ಜನ ಬರ್ತಿರ್ಬೇಕು, ಸಂಜೆ ತನಕ ಅವ್ರ ಕಾಟ ತಡ್ಕೋ ಬೇಕು, ಸಂಜೆ ಮಾತನಾಡೋಣ” ಅಂತ ಹೇಳಿತು.
ಎರಡು ಮರಗಳು ಗುಸು ಗುಸು ಪಿಸು ಪಿಸು ನಿಲ್ಲಿಸಿ ಗಾಳಿಗೆ ಅಲ್ಲಾಡುತ್ತ ನಿಂತವು.
👌👌☺
LikeLike
Thank you 😊
LikeLike
👍👍👍
LikeLike
Thank you Lathish 😊
LikeLike