ಮಂಜಣ್ಣನವರು ಒಂದೇ ಕಂಪನಿಯಲ್ಲಿ ಸರಿ ಸುಮಾರು ೨೫ ವರುಷದಿಂದ ಕೆಲಸ ಮಾಡುತ್ತಿದ್ದರು. ಬಹಳ ಸಜ್ಜನ ಹಾಗು ಒಳ್ಳೆಯ ಕೆಲಸಗಾರ ಎಂದು ಹೆಸರು ಮಾಡಿದ್ದರು. ಯಾವತ್ತಿಗೂ ಯಾರಿಗೂ ಕೆಟ್ಟದಾಗಿ ಅವರು ಮಾತನಾಡಿದ್ದು ಯಾರು ನೋಡಿರಲಿಲ್ಲ. ಕೈಲಾದರೆ ಯಾರಿಗಾದರೂ ಸಹಾಯ ಮಾಡುತ್ತಿದ್ದರು, ಇಲ್ಲ ಅಂದರೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಯಾರಿಗೂ ತನ್ನಿಂದ ಯಾವತ್ತಿಗೂ ತೊಂದರೆ ಆಗಬಾರದು ಅನ್ನುವುದು ಅವರ ಸಿದ್ದಾಂತವಾಗಿತು. ಸಾಲ ಏನಾದ್ರೂ ತೆಗೆದುಕೊಂಡರೆ ಅದನ್ನು ಒಂದು ಪೈಸೆ ಬಿಡದೆ ತೀರಿಸುವ ತನಕ ಅವರಿಗೆ ಸಮಾಧಾನವಿರುತ್ತಿರಲಿಲ್ಲ. ಮನೆ ಕಟ್ಟಲು ಮಾಡಿದ ಸಾಲ ಸಹಿತ ತಮ್ಮ ಮಗನ ಮೇಲೆ ಬಿಡಬಾರದು, ನಾನು ಮಾಡಿದ್ದು ನಾನೇ ತೀರಿಸಬೇಕು ಅನ್ನುವ ಸ್ವಾಭಿಮಾನಿ ಮನುಷ್ಯ. ಅವರಿಗೆ ಒಬ್ಬನೇ ಗಂಡು ಮಗ. ಅವನು ಒಳ್ಳೆ ರೀತಿಯಲ್ಲಿ ಓದಿ ಕೆಲಸ ಮಾಡಲು ಶುರು ಮಾಡಿದ್ದನು. ಎಷ್ಟು ಕರೆದರೂ ಸಿಟಿಯಲ್ಲಿದ್ದ ತಮ್ಮ ಮಗನ ಬಳಿಗೆ ಹೋಗಿರಲಿಲ್ಲ. ತಾವು ಮಾಡಿದ ಅಷ್ಟು ಸಾಲವನ್ನು ತೀರಿಸಿದ ನಂತರವೇ ಅವರು ಕೆಲಸ ಬಿಟ್ಟು, ಅವರೇ ಕಟ್ಟಿಸಿದ ಮನೆಯಲ್ಲಿ ಇರತೊಡಗಿದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪೆನ್ಷನ್ ಏನು ಬರುತ್ತಿರಲಿಲ್ಲ. ಸ್ವಂತ ಮನೆ ಹಾಗು ಯಾವುದೇ ಸಾಲ ಇರದ ಕಾರಣ, ಮಗ ಪ್ರತಿ ತಿಂಗಳು ಕಳುಹಿಸುತ್ತಿದ್ದ ಹಣ ಜೀವನಕ್ಕೆ ಸಾಕಾಗುತ್ತಿತ್ತು.
ಇಷ್ಟವಿಲ್ಲದಿದ್ದರು, ಹೆಂಡತಿ ಮತ್ತು ಮಗನ ಬಲವಂತದಿಂದ ನಿವೃತ್ತಿ ಜೀವನ ಮಾಡುತ್ತಿದ್ದರು. ಅವರಿಗೆ ಮಗನ ಬಳಿ ಹಣ ತೆಗೆದುಕೊಂಡು ಜೀವನ ಮಾಡುವುದು ಯಾಕೋ ಬಹಳ ಕಸಿ ವಿಸಿ ಉಂಟು ಮಾಡುತ್ತಿತ್ತು. ಆದರೂ ಮಗ ಬೇಜಾರು ಮಾಡಿಕೊಳ್ಳುತ್ತಾನೆಂದು ತೋರಿಸಿಕೊಳ್ಳದೆ ದಿನ ದೂಡತೊಡಗಿದರು. ಒಂದು ದಿನ ಇದ್ದಕ್ಕಿದ್ದಂತೆ ಜ್ಞಾನ ತಪ್ಪಿ ಬಿದ್ದು ಬಿಟ್ಟರು. ಆಸ್ಪತ್ರೆಗೆ ಅಡ್ಮಿಟ್ ಮಾಡಿ ಎಲ್ಲ ಚೆಕ್ ಮಾಡಿಸಿದಾಗ, ಅವರಿಗೆ ಲಂಗ್ ಕ್ಯಾನ್ಸರ್ ಇರುವುದು ಗೊತ್ತಾಯಿತು. ಡಾಕ್ಟರ್ ಕೀಮೋ ಥೆರಪಿ ಮತ್ತು ಸಣ್ಣ ಸರ್ಜರಿ ಮಾಡಿಸಬೇಕು ಅಂದರು. ಹೆಂಡತಿ ಮತ್ತು ಮಗ ಟ್ರೀಟ್ಮೆಂಟ್ ಕೊಟ್ಟರೆ ಅಪ್ಪ ಸರಿಯಾಗುತ್ತಾರೆ ಅಂತ ಯೋಚನೆ ಮಾಡುತ್ತಾ ಇದ್ದರೆ, ಮಂಜಣ್ಣನವರು ಮಗನಿಗೆ ಸಿಕ್ಕಾಪಟ್ಟೆ ಖರ್ಚು, ಅದು ನನ್ನಿಂದ ತೊಂದರೆ ಆಗುತ್ತಿದೆ ಅಂತ ಕೊರಗು. ಆಗ ಮಗ ನೀವೇನು ಯೋಚನೆ ಮಾಡ್ಬೇಡಿ, ನನಗೆ ಕಂಪನಿಯಿಂದ ಇನ್ಶೂರೆನ್ಸ್ ಇದೆ, ನಾನೇನು ಕೈಯಿಂದ ದುಡ್ಡು ಹಾಕುವುದಿಲ್ಲ ಅಂದ ಮೇಲೆ ಅವರಿಗೆ ಸ್ವಲ್ಪ ಸಮಾಧಾನವಾಯಿತು.
ಟ್ರೀಟ್ಮೆಂಟ್ ಕೊಡುತ್ತ ಹೋದಂತೆ, ಸ್ವಲ್ಪ ಸ್ವಲ್ಪ ಗುಣಮುಖರಾಗುತ್ತಾ ಹೋದರು. ಅವರ ಮಗ ತಮ್ಮ ಕಂಪನಿಯಿಂದ ಸಿಗುತ್ತಿದ್ದ ಇನ್ಶೂರೆನ್ಸ್ ಕ್ಲೇಮ್ ಮಾಡಿಕೊಂಡು ಆಸ್ಪತ್ರೆ ಬಿಲ್ ಕಟ್ಟುತ್ತಾ ಹೋದನು. ಆದರೆ ಕೆಲವು ತಿಂಗಳ ನಂತರ ಮಂಜಣ್ಣನವರ ಆರೋಗ್ಯದಲ್ಲಿ ಏರುಪೇರು ಉಂಟಾಗಲು ಶುರುವಾಯಿತು. ಡಾಕ್ಟರ್ ಮತ್ತೆ ಕೀಮೋ ಥೆರಪಿ ಮಾಡಿಸಬೇಕು ಅಂದರು. ಆದರೆ ಮಗನ ಇನ್ಶೂರೆನ್ಸ್ ಲಿಮಿಟ್ ಮುಗಿದುಹೋಗಿತ್ತು. ಆಗುವ ಖರ್ಚೆಲ್ಲ ಮಗನೆ ಕೈಯಿಂದ ಹಾಕ ಬೇಕಾದ ಪರಿಸ್ಥಿತಿ ಬಂತು. ಈ ವಿಷಯ ಮಂಜಣ್ಣನವರಿಗೂ ಗೊತ್ತಾಯಿತು. ಇಷ್ಟು ದಿನ ಮಗನಿಗೆ ಇನ್ಶೂರೆನ್ಸ್ ದುಡ್ಡು ಬರುತ್ತಿದೆ, ಮಗನಿಗೆ ನನ್ನಿಂದ ಯಾವುದೇ ತೊಂದರೆ ಆಗುತ್ತಿಲ್ಲ ಅಂತ ಸಮಾಧಾನದಿಂದ ಇದ್ದ ಮಂಜಣ್ಣನವರಿಗೆ ಇದು ಸಹಿಸಲಾಗಲಿಲ್ಲ. ಮಗ ನಾಳೆ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರ ಬಗ್ಗೆ ಹಾಗು ಖರ್ಚಿಗೆ ಸಾಲ ಮಾಡುವುದರ ಬಗ್ಗೆ ಅಮ್ಮನ ಬಳಿ ಮಾತನಾಡುತ್ತಿದ್ದನ್ನು ಕೇಳಿಸಿಕೊಂಡರು. ನಂತರ ಏನೋ ನಿರ್ಧಾರ ಮಾಡಿದಂತೆ ನೆಮ್ಮದಿಯಿಂದ ಮಲಗಿಕೊಂಡರು.
ಬೆಳಿಗ್ಗೆ ಹೆಂಡತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮಂಜಣ್ಣನವರನ್ನು ಎಬ್ಬಿಸಲು ಅವರ ಕೋಣೆಗೆ ಬಂದರು. ಆದರೆ ಮಂಜಣ್ಣನವರು ಏಳಲಿಲ್ಲ. ಅವರು ಮಲಗಿದ್ದಲ್ಲೇ ಚಿರ ನಿದ್ರೆಗೆ ಜಾರಿದ್ದರು. ಮುಖದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ ಮೇಲೆ ಕಾಣುವ ಕಿರು ನಗೆ ಕಾಣಿಸುತ್ತಿತ್ತು. ಸ್ವಾಭಿಮಾನಿಯಾದ ಅವರು ಯಾರಿಗೂ ತನ್ನಿಂದ ತೊಂದರೆ ಆಗಬಾರದು ಅನ್ನುವ ಅವರ ಸಿದ್ಧಾಂತವನ್ನು ಉಳಿಸಿಕೊಂಡಿದ್ದರು.
– ಶ್ರೀನಾಥ್ ಹರದೂರ ಚಿದಂಬರ
👍👍👍
LikeLike
Thank you Lathish 😊🙏
LikeLike