ಮಕ್ಕಳ ಜೊತೆಗೆ ನಾವು ಊರಿಗೆ ಹೊರಟಾಗ ದಾರಿ ಉದ್ದಕ್ಕೂ ನಮಗೆ ಮಕ್ಕಳು ಕೇಳುವ ( ಕಾಡಿಸುವ) ಪ್ರಶ್ನೆಗಳು ಅಂದರೆ ಅಮ್ಮ ಊರು ಬಂತಾ ? ಇನ್ನು ಎಷ್ಟೋತ್ತು? ಯಾವಾಗ ತಲುಪುತ್ತೀವಿ?ಎಂದು. ಈ ರೀತಿಯಾಗಿ ಪ್ರತಿ ಅರ್ಧ ಗಂಟೆಗೊಮ್ಮೆ ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಕೊನೆ ಕೊನೆಗೆ ನಾವು ರೋಸಿ ಹೋಗಿ, ಅದು ಬಂದಾಗ ಬರುತ್ತೆ, ಸುಮ್ಮನೆ ಕೂತುಕೊಳ್ಳಿ ಅನ್ನುವ ಮಟ್ಟಿಗೆ ನಮ್ಮನ್ನು ಅವರು ಕಾಡಿಸುತ್ತಾರೆ. ಅವರಲ್ಲಿ ಊರು ನೋಡುವ ತವಕ, ಆದಷ್ಟು ಬೇಗ ಊರು ಸೇರಿಬಿಡಬೇಕು ಅನ್ನುವ ಅವಸರ, ಊರಿಗೆ ಹೋಗಿ ಆಡುವ ಉತ್ಸಾಹ, ಆದರೆ ಇವೆಲ್ಲವೂ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಿಸುತ್ತಿರುತ್ತದೆ. ಅವರಿಗೆ ಬಸ್, ರೈಲು ಹಾಗು ಕಾರು ಯಾವುದಾದರೂ ಸರಿ, ಹೊರಡುವಾಗ ಇರುವ ಸಡಗರ ಬಹಳ ಬೇಗ ಕರಗಿ, ಬೇಜಾರು ತರಿಸುತ್ತದೆ. ಅದಕ್ಕೆ ಕಾರಣ ಪ್ರತಿ ಕ್ಷಣ ಹೊಸತನ್ನು ಬಯಸುವ, ಏನೆನ್ನೋ ತಿಳಿದುಕೊಳ್ಳುವ ಕುತೂಹಲ, ಅವರ ಪುಟ್ಟ ಬೆರಗು ಕಣ್ಣುಗಳಿಗೆ ದೊಡ್ಡ ಪ್ರಪಂಚದಲ್ಲಿರುವ ಎಲ್ಲವನ್ನು ಒಟ್ಟಿಗೆ ನೋಡುವ ತವಕ ಹಾಗು ಜೊತೆಯಲ್ಲಿ ಪ್ರಯಾಣ ಮಾಡುವಾಗ ಆಟ ಆಡಲಿಕ್ಕೆ ಆಗುವುದಿಲ್ಲ ಅನ್ನುವ ಸಂಕಟ. ಎಲ್ಲದಕ್ಕಿಂತ ಮುಖ್ಯವಾಗಿ ಊರು ಬರುವವರೆಗೂ ಕಾಯುವ ತಾಳ್ಮೆ ಇರುವುದಿಲ್ಲ. ನಮಗೂ ಈ ರೀತಿ ಅನುಭವ ಚಿಕ್ಕವರಿದ್ದಾಗ ಆಗಿದೆ. ನಾವು ಕೂಡ ಹಾಗೆಯೇ ಮಾಡಿದ್ದೇವೆ. ಈಗ ನಮ್ಮ ಮಕ್ಕಳು ಮಾಡುತ್ತಿದ್ದಾರೆ ಅಷ್ಟೇ. ಮಕ್ಕಳ ವಯಸ್ಸು ಹತ್ತು ದಾಟುತ್ತಿದ್ದಂತೆ ನಿಧಾನವಾಗಿ ಈ ರೀತಿ ಕೇಳುವುದನ್ನು ನಿಲ್ಲಿಸುತ್ತಾರೆ. ಕೆಲವರು ಪ್ರಯಾಣಿಸುವಾಗ ಅವರಿಗೆ ಇಷ್ಟವಾದ ಚಟುವಟಿಕೆ ಮಾಡಿಕೊಂಡು ಪ್ರಯಾಣದ ಸಮಯ ತಳ್ಳುತ್ತಾರೆ. ಕೆಲವರು ಪ್ರಯಾಣ ಪೂರ್ತಿ ನಿದ್ದೆ ಮಾಡುತ್ತಲೇ ಇರುತ್ತಾರೆ ಬಿಡಿ. ಜೊತೆಯಲ್ಲಿ ಅವರ ವಯಸ್ಸಿನ ಮಕ್ಕಳು ಇದ್ದರೆ ಅವರ ಪಾಡಿಗೆ ಆಡುವ ಮಕ್ಕಳು ಕೂಡ ಇದ್ದಾರೆ.
ಮಕ್ಕಳಿದ್ದಾಗ ತೋರುವ ಈ ಅವಸರ ಪ್ರಯಾಣಕ್ಕೆ ಸೀಮಿತ ಆದರೆ ಪರವಾಗಿಲ್ಲ. ಅದೇ ಮುಂದುವರಿದು ಏನಾದರೂ ಸಾದಿಸುವ ಸಮಯದಲ್ಲಿ ತಾಳ್ಮೆ ಕಳೆದುಕೊಂಡು ಅವಸರ ಮಾಡಿದರೆ ಮಾತ್ರ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ. ಜೀವನದ ಎಲ್ಲ ಘಟ್ಟಗಳಲ್ಲಿ ಏನಾದರೂ ಸಾಧಿಸುವ ತುಡಿತ, ವಿಶ್ವಾಸ ಮತ್ತು ನಂಬಿಕೆ ಇರಬೇಕು ಆದರೆ ಅವಸರ ಒಳ್ಳೆಯದಲ್ಲ. ಇವತ್ತಿನ ಯುವ ಸಮೂಹ ಪ್ರತಿಯೊಂದು ವಿಷಯದಲ್ಲೂ ತಾವು ಅತಿ ಬೇಗ ತಮ್ಮ ಗುರಿಯನ್ನು ತಲುಪಬೇಕು, ಅಂದುಕೊಂಡಿದ್ದನ್ನು ಪಡೆಯಬೇಕು, ಸಾಧಿಸಬಿಡಬೇಕು, ಹೆಚ್ಚು ಹಣ ಸಂಪಾದಿಸಿಬಿಡಬೇಕು ಎಂದು ಅವರು ಹೋಗುತ್ತಿರುವ ವೇಗ ತುಂಬ ಚಿಂತನೆಗೆ ದೂಡಿದೆ. ಅನೇಕರು ಇದೆಕ್ಕೆಲ್ಲ ಇನ್ನು ಎಷ್ಟೋತ್ತು ? ಅನ್ನುವ ಮನೋಭಾವ ಹೊಂದಿದ್ದಾರೆ. ಓದಿ ಮುಗಿಸಿಕೊಂಡು ಹೊರಬಂದ ಕೂಡಲೇ ಕೈ ತುಂಬ ಸಂಬಳ ಬರಬೇಕು ಅನ್ನುವ ದಾಟಿಯಲ್ಲಿ ಹೋಗುವ ಅನೇಕ ಯುವಕ ಯುವತಿಯರು ತಮ್ಮ ವೃತ್ತಿ ಜೀವನಕ್ಕೆ ಸರಿಯಾದ ಅಡಿಪಾಯ ಹಾಕಿಕೊಳ್ಳುವುದಲ್ಲಿ ಎಡವುತ್ತಾರೆ. ಅನೇಕ ಸಲ ಕೆಲಸದ ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ನಾನು ಕೇಳುವ ಪ್ರಶ್ನೆ, ಒಳ್ಳೆ ಸಂಬಳ ಬೇಕಾ? ಒಳ್ಳೆ ತರಬೇತಿ ಬೇಕಾ? ಎಂದು. ಬಾಯಲ್ಲಿ ತರಬೇತಿ ಅಂದರೂ , ಅವರು ಆಕರ್ಷಿತರಾಗೋದು ಸಂಬಳದ ಕಡೆಗೆನೇ. ವೃತ್ತಿ ಜೀವನದ ಮೊದಲ ಹೆಜ್ಜೆ ಯಾವತ್ತಿಗೂ ದುಡ್ಡಿನ ಹಿಂದೆ ಇಡಬಾರದು, ಮೊದಲ ಹೆಜ್ಜೆ ಯಾವತ್ತಿಗೂ ನಿಮಗೆ ಸಿಗುವ ತರಬೇತಿ ಹಾಗು ಅನುಭವದ ಹಿಂದೆ ಇರಬೇಕು. ಅವಕಾಶಗಳಿಗೆ ಕಾಯುವ ತಾಳ್ಮೆ ಇರಬೇಕು. ಬೇರೆ ಕಡೆ ಕೆಲಸ ಮಾಡುವುದಾದರೂ ಸರಿ ಅಥವಾ ನಿಮ್ಮದೇ ಸ್ವಂತ ವ್ಯವಹಾರ ಮಾಡುವುದಾದರೂ ಸರಿ, ವಿಶ್ವಾಸ, ತಾಳ್ಮೆ ಮತ್ತು ಉತ್ತಮ ಸಿದ್ಧತೆ ಇಲ್ಲದೆ ಯಾವತ್ತಿಗೂ ಮುಂದುವರಿಯಬಾರದು.
ಪ್ರಯಾಣಕ್ಕೂ ಮುನ್ನ ನಮ್ಮ ಸಿದ್ಧತೆ ಹೇಗೆ ಇರುತ್ತದೆಯೋ ನಮ್ಮ ಪ್ರಯಾಣ ಕೂಡ ಹಾಗೆ ಇರುತ್ತದೆ. ಅಂತದ್ರಲ್ಲಿ ಜೀವನ ಪ್ರಯಾಣದ ಸಿದ್ದತೆ ಹೇಗಿರಬೇಕು ಎಂಬುವದನ್ನು ಅರಿಯದೆ ಪ್ರಯಾಣ ಶುರು ಮಾಡಿದರೆ, ಪ್ರಯಾಣದಲ್ಲಿ ಎಲ್ಲ ಹಂತದಲ್ಲೂ ಎದುರಿಸುವ ಅನೇಕ ಸವಾಲುಗಳಿಗೆ ಉತ್ತರ ಕೊಡುವುದು ಕಷ್ಟ ಆಗುತ್ತದೆ. ಅನಿರೀಕ್ಷಿತ ಸವಾಲುಗಳು ಜೀವನದಲ್ಲಿ ಬಂದೆ ಬರುತ್ತವೆ. ಆದರೆ ನೀರಿಕ್ಷಿತ ಸವಾಲುಗಳಿಗೆನೇ ನಮ್ಮ ಸಿದ್ದತೆಗಳು ಸರಿಯಿಲ್ಲ ಅಂದರೆ, ನಮ್ಮ ಶಕ್ತಿ ಅವುಗಳನ್ನು ಎದುರಿಸುವಲ್ಲಿಯೇ ಕುಂದು ಹೋಗಿ, ಕೊನೆಗೆ ಅನಿರೀಕ್ಷಿತ ಸವಾಲುಗಳನ್ನು ಎದುರಿಸಲಾದೆ ಸೋತು ಬಿಡುತ್ತೇವೆ. ಅನೇಕ ಸ್ಟಾರ್ಟ್ ಅಪ್ ಕಂಪನಿಗಳು ಶುರುವಾಗಿ ಮುಚ್ಚಿ ಹೋಗಲು ಇದೆ ಕಾರಣ. ಬರಿ ಹುರುಪು, ಉತ್ಸಾಹ, ಏನಾದರೂ ಸಾದಿಸುವ ತುಡಿತ ಇದ್ದರೆ ಸಾಲದು, ಬೇಕಾದ ಸಿದ್ದತೆಗಳು ಮಾಡಿಕೊಳ್ಳದೆ ಮುಂದುವರಿದರೆ ನಿಮ್ಮ ವಿಶ್ವಾಸ ಬಹಳ ದಿನ ಉಳಿಯುವುದಿಲ್ಲ.
ಚಿಕ್ಕವರಿದ್ದಾಗ ಪ್ರಯಾಣ ಮಾಡುವಾಗ ಇನ್ನು ಎಷ್ಟೋತ್ತು ಅಂತ ಕೇಳಿದರೆ ಉತ್ತರ ಹೇಳಲು ಅಪ್ಪ ಅಮ್ಮ ಇರುತ್ತಾರೆ, ನಿಮ್ಮದೇ ಪ್ರಯಾಣ ಶುರುವಾಗುವಾಗ ನಿಮ್ಮ ನಿಲ್ದಾಣ ಯಾವುದು, ಯಾವಾಗ ಸೇರುತ್ತೀರಿ? ಎಷ್ಟೋತ್ತಿಗೆ ? ಎಂಬ ಪ್ರಶ್ನೆಗಳಿಗೆ ಉತ್ತರ ನಿಮ್ಮಲ್ಲಿಯೇ ಇರುತ್ತದೆ.
ಜೀವನದ ಪ್ರಯಾಣದಲ್ಲಿ ಬಂತಾ ? ಇನ್ನು ಎಷ್ಟೋತ್ತು ? ಎನ್ನುವ ಪ್ರಶ್ನೆಗಳಿಗೆ ಉತ್ತರ , ಸವಾಲುಗಳನ್ನು ಎದುರಿಸಲು ನೀವು ಮಾಡಿಕೊಂಡ ಸಿದ್ಧತೆ, ನಿಮ್ಮ ಮೇಲೆ ನಿಮಗಿರುವ ನಂಬಿಕೆ ಮತ್ತು ವಿಶ್ವಾಸ ಹಾಗು ಕಾಯುವ ತಾಳ್ಮೆ ಮೇಲೆ ನಿಂತಿದೆ.
– ಶ್ರೀನಾಥ್ ಹರದೂರ ಚಿದಂಬರ
👌👌…ಜೀವನದ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀಯ really fantastic lines 👏👏
LikeLike
Thank you 😊
LikeLike
Liked this insight…
LikeLike
Thank you Lathish 😊🙏
LikeLike