ಅಪ್ಪ ಅಮ್ಮ ಇಬ್ಬರು ಆಫೀಸು ಕೆಲಸ ಮುಗಿಸಿ ಸುಸ್ತು ಆಗಿ ಮನೆ ಒಳಗಡೆ ಬಂದರು. ಬಾಗಿಲಲ್ಲೇ ಅವರನ್ನೇ ಕಾಯುತ್ತಿದ್ದ ಮಗ ಅಪ್ಪ ಅಮ್ಮನ ಹತ್ತಿರ ಓಡಿಬಂದ. ಇಬ್ಬರು ತುಂಬಾ ಸುಸ್ತು ಆಗಿದೆ ಪುಟ್ಟ ಆಮೇಲೆ ಬಾ ಎಂದು ಹೇಳಿ ವಾಪಸು ಕಳಿಸಿದರು. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಅವರಿಬ್ಬರ ಹತ್ತಿರ ಬಂದ. ಅಪ್ಪ ಅಮ್ಮ ಇಬ್ಬರು ಮೊಬೈಲ್ ನೋಡುತ್ತಾ ಬ್ಯುಸಿ ಆಗಿದ್ದರು. ಅವನ ಕಡೆ ಗಮನ ಕೊಡಲಿಲ್ಲ. ದಿನಗಳು ಕಳೆದಂತೆ ಮಗ ಅಪ್ಪ ಅಮ್ಮನ ಹತ್ತಿರ ಬರುವುದನ್ನು ನಿಲ್ಲಿಸಿದ. ಕಾಲ ಚಕ್ರ ಉರುಳಿತು. ಮಗ ಆಫೀಸಿನಿಂದ ಮನೆಗೆ ಬಂದ. ಅವನ ಹತ್ತಿರ ಮಾತನಾಡಲು ಅಪ್ಪ ಅಮ್ಮ ಕಾಯುತ್ತಿದ್ದರು. ಮಗ ಸುಸ್ತು ಆಗಿದೆ ಆಮೇಲೆ ಮಾತನಾಡೋಣ ಅಂದನು. ಸ್ವಲ್ಪ ಹೊತ್ತು ಬಿಟ್ಟು ಅವನ ಹತ್ತಿರ ಮಾತನಾಡಲು ಬಂದರು. ಮಗ ಮೊಬೈಲ್ ನೋಡುತ್ತಾ ಬ್ಯುಸಿ ಆಗಿದ್ದ. ಅವರ ಕಡೆ ಗಮನ ಕೊಡಲಿಲ್ಲ.
– ಶ್ರೀನಾಥ್ ಹರದೂರ ಚಿದಂಬರ