ಛಾಯಾಚಿತ್ರಣ: ಅಂಕಿತ
ಕಥೆ: ಶ್ರೀನಾಥ್ ಹರದೂರ ಚಿದಂಬರ

ಆತ ಏದುಸಿರು ಬಿಡುತ್ತ ಬೆಟ್ಟವನ್ನು ಹತ್ತುತ್ತಿದ್ದ. ಆತನ ಮನಸ್ಸಿನಲ್ಲಿ ಹತಾಶೆ, ಬೇಸರ, ದುಃಖ, ಸಿಟ್ಟು, ಅಸಾಯಹಕತೆ ಸಂಪೂರ್ಣವಾಗಿ ಆವರಸಿ, ಇನ್ನು ನಾನು ಬದುಕಿ ಯಾವುದೇ ಪ್ರಯೋಜನವಿಲ್ಲಾ, ನನ್ನ ಸಾವೇ ಇದಕ್ಕೆಲ್ಲ ಉಳಿದಿರುವ ಹಾದಿ ಎಂದುಕೊಂಡು ಬೆಟ್ಟ ಹತ್ತುವುದನ್ನು ಜೋರು ಮಾಡಿದ. ಕೇವಲ ಎರಡು ದಿನಗಳ ಸಮಯದಲ್ಲಿ ಆತ ತನ್ನ ಕೆಲಸ, ಪ್ರೇಯಸಿ ಹಾಗು ತನ್ನ ತಂದೆಯನ್ನು ಕಳೆದುಕೊಂಡಿದ್ದ. ಕೊರೋನಾ ಎಂದು ನೆಪವೊಡ್ಡಿ, ಅವನ ಮೇಲಧಿಕಾರಿ ಅವನಿಗೆ ಯಾವುದೇ ಪ್ರಾಜೆಕ್ಟ್ ಇಲ್ಲ, ಹಾಗಾಗಿ ನಿನ್ನನ್ನು ಕೆಲಸದಿಂದ ತೆಗೆಯುತ್ತಿದ್ದೇವೆ ಅಂದಾಗ ಕಾಲ ಕೆಳಗಿನ ನೆಲ ಕುಸಿದಂತಾಗಿತ್ತು. ಅದೇ ಸಂಜೆ ಅವನ ಗೆಳತಿ ಯಾವುದೇ ಕಾರಣ ಹೇಳದೆ ಅವನನ್ನು ಬಿಟ್ಟು ಹೋಗಿದ್ದಳು. ಮಾರನೆಯ ದಿವಸ ಅವನ ತಂದೆ ಹಠಾತ್ತಾಗಿ ಹೃದಯಾಘಾತದಿಂದ ಮರಣ ಹೊಂದಿದ್ದರು. ತಾಯಿಯನ್ನು ಮೊದಲೇ ಕಳೆದುಕೊಂಡಿದ್ದ ಅವನು, ಎರಡು ದಿವಸಗಳಲ್ಲಿ ಅವನಿಗೆ ತನ್ನವರು ಅಂತ ಯಾರು ಇಲ್ಲದೆ ಅನಾಥವಾಗಿ ಹೋಗಿದ್ದ. ಒಂದರ ನಂತರ ಒಂದು ನಡೆದ ಘಟನೆಗಳಿಂದ ಮನಸ್ಸು ಪ್ರಕ್ಷುಬ್ಧಗೊಂಡಿತ್ತು. ಬೆಟ್ಟದಿಂದ ಹಾರಿ ಸಾಯುವ ನಿರ್ಧಾರ ಮಾಡಿ ಬೆಟ್ಟವನ್ನು ಹತ್ತಲು ಶುರು ಮಾಡಿದ್ದ್ದ. ಮನಸ್ಸಿಗೆ ಸಂತೋಷವಾದಾಗ, ಗೆಳತಿಯನ್ನು ಭೇಟಿ ಮಾಡಲು , ತಂದೆಯೊಂದಿಗೆ ಅನೇಕ ಸಲ ಸಮಯ ಕಳೆಯಲು ಯಾವ ಬೆಟ್ಟಕ್ಕೆ ಬರುತ್ತಿದ್ದನೋ ಅದೇ ಬೆಟ್ಟದಿಂದ ಹಾರಿ ಸಾಯಲು ನಿರ್ಧಾರ ಮಾಡಿದ್ದ.
ಬೆಟ್ಟ ಹತ್ತಿ ಅದರ ತುದಿಗೆ ಬಂದು ನಿಂತು, ಒಮ್ಮೆ ಹಿಂದಿನ ಸಂತೋಷದ ದಿನಗಳು, ಗೆಳತಿಯೊಂದಿಗೆ ಕಳೆದ ಸಮಯ, ತಂದೆಯ ನೆನಪುಗಳು, ತನ್ನ ಕೆಲಸ, ಹೀಗೆ ಎಲ್ಲವನ್ನು ಒಮ್ಮೆ ನೆನಪಿಸಿಕೊಂಡು ಬೆಟ್ಟದಿಂದ ಹಾರಲು ತಯಾರಾದ. ಆಗ ಅವನು ನಿಂತ ಜಾಗದ ಪಕ್ಕದಲ್ಲಿದ್ದ ಒಂದು ದೊಡ್ಡ ಮರದಿಂದ ಪಕ್ಷಿಗಳು ಜೋರಾಗಿ ಕೂಗುವ ಧ್ವನಿ ಕೇಳಿಸಿದಾಗ ತಲೆ ಎತ್ತಿ ನೋಡಿದ. ಅವನು ಕೇಳಿದ ಕೂಗು ಮರದ ಮೇಲಿದ್ದ ಪಕ್ಷಿಗಳ ಗೂಡಿನ ಕಡೆಯಿಂದ ಬರುತ್ತಿತ್ತು. ಅಲ್ಲಿ ಒಂದು ಹಾವು ಅಲ್ಲಿದ್ದ ಪಕ್ಷಿಗಳ ಗೂಡಿನಲ್ಲಿದ್ದ ಚಿಕ್ಕ ಮರಿಗಳನ್ನು ತಿನ್ನಲು ಬಂದಿತ್ತು. ಇವನು ನೋಡುವಾಗ ಆಗಲೇ ಹಾವು ತನ್ನ ಬಾಯಲ್ಲಿ ಒಂದು ಮರಿಯನ್ನು ಹಿಡಿದು ಕೊಂಡಿತ್ತು. ತಾಯಿ ಪಕ್ಷಿ ಮತ್ತು ತಂದೆ ಪಕ್ಷಿ ಹಾವಿನ ಜೊತೆ ಜೋರಾಗಿ ಕೂಗುತ್ತ ಹೋರಾಡಲು ಶುರು ಮಾಡಿದ್ದವು. ಅದೇ ಕೂಗು ಅವನ ಕಿವಿಗೆ ಬಿದ್ದಿದ್ದು. ತಂದೆ ಪಕ್ಷಿ ಹಾವನ್ನು ಕುಕ್ಕಲು ಶುರು ಮಾಡಿತು. ನೋವಿಗೋ ಏನೋ ಹಾವು ಮರಿಯನ್ನು ತನ್ನ ಬಾಯಿಂದ ಬಿಟ್ಟಿತು. ಆ ಮರಿ ಮೇಲಿನಿಂದ ನೆಲದ ಬಿದ್ದು ನೋಡ ನೋಡುತ್ತಲೇ ಒದ್ದಾಡುತ್ತ ತನ್ನ ಪ್ರಾಣ ಬಿಟ್ಟಿತು. ಹಾವು ಕೂಡ ತಂದೆ ಪಕ್ಷಿಯ ಮೇಲೆ ದಾಳಿ ಶುರು ಮಾಡಿತು. ಆ ಹೋರಾಟದಲ್ಲಿ ತಂದೆ ಪಕ್ಷಿಯ ಮೈಯಲ್ಲ ರಕ್ತ ಸಿಕ್ತವಾಗಿ, ಅದರ ರೆಕ್ಕೆಯ ಪುಕ್ಕಗಳು ಗಾಳಿಯಲ್ಲೆಲ್ಲ ಹಾರಾಡತೊಡಗಿತ್ತು. ಅದು ಹಾವನ್ನು ಕುಕ್ಕಲು ಬಂದಾಗೆಲ್ಲ ಹಾವು ತಾನು ದಾಳಿ ಮಾಡಿ ಅದನ್ನು ಕಚ್ಚುತ್ತಿತ್ತು. ಸುಮಾರು ಸಮಯ ಹೋರಾಟ ಮುಂದುವರೆದು ತಂದೆ ಪಕ್ಷಿಯ ಬಲ ಕುಂದಿ ಅದು ಕೂಡ ನೆಲಕ್ಕೆ ಬಿತ್ತು. ಆದರೆ ತಾಯಿ ಪಕ್ಷಿ ಮಾತ್ರ ಛಲ ಬಿಡದೆ ಹಾವನ್ನು ಎದುರಿಸಲು ಶುರು ಮಾಡಿತು. ಕೊನೆಗೆ ಹಾವು ನಿತ್ರಾಣವಾಗಿ ಹೋರಾಡಲು ಶಕ್ತಿ ಇಲ್ಲದೆ ನಿಧಾನವಾಗಿ ಮರದಿಂದ ಇಳಿದು ಹೊರಟು ಹೋಯಿತು. ತಂದೆ ಪಕ್ಷಿ ಕೆಳಕ್ಕೆ ಬಿದ್ದು ಒದ್ದಾಡತೊಡಗಿತ್ತು. ತಾಯಿ ಮೊದಲು ತನ್ನ ಉಳಿದ ಮರಿಗಳನ್ನು ಗೂಡಿನಲ್ಲಿ ಜೋಪಾನ ಮಾಡಿ, ಕೆಳಗೆ ತನ್ನ ಸಂಗಾತಿಯ ಸುತ್ತ ಹಾರಾಡತೊಡಗಿತು. ಸ್ವಲ್ಪ ಹೊತ್ತಿನಲ್ಲಿ ಸಂಗಾತಿಯ ಚಲನೆ ನಿಂತಿತು. ಅದು ತನ್ನ ಪ್ರಾಣವನ್ನು ಬಿಟ್ಟಿತ್ತು. ಗೂಡಿನಲ್ಲಿದ್ದ ಮರಿಗಳಿಗೆ ಇದ್ಯಾವುದರ ಪರಿವೆ ಇರಲಿಲ್ಲ. ತಾಯಿ ಪಕ್ಷಿ ಸ್ವಲ್ಪ ಹೊತ್ತು ತನ್ನ ಸತ್ತ ಮರಿ ಹಾಗು ಸಂಗಾತಿಯ ಸುತ್ತ ಕೂಗುತ್ತ, ಹಾರುತ್ತ, ಅವುಗಳ ಹತ್ತಿರ ಹೋಗಿ ಕೊಕ್ಕಿನಿಂದ ಮೂಸುತ್ತಾ ಸಂಕಟ ಪಟ್ಟಿತು. ನಂತರ ಗೂಡಿನಲ್ಲಿದ್ದ ಮರಿಗಳು ಕೂಗುವ ಧ್ವನಿ ಕೇಳಿ ಹಾರಿ ಹೋಗಿ ಮರಿಗಳ ಪಕ್ಕದಲ್ಲಿ ಕುಳಿತಿತು. ಸ್ವಲ್ಪ ಹೊತ್ತಿನಲ್ಲಿ ತಾಯಿ ಪಕ್ಷಿ ತನ್ನ ಮರಿಗಳಿಗೆ ಆಹಾರ ತರಲು ಹೋಯಿತು. ಇದೆನ್ನೆಲ್ಲ ಆತ ಹಾಗೆ ಕಣ್ಣು ಮಿಟುಕಿಸದೆ ಹಾಗೆ ನೋಡುತ್ತಾ, ತಾನು ಏನು ಮಾಡಬೇಕೆಂದಿದ್ದನೋ ಅದನ್ನು ಮರೆತು ಕುಳಿತಿದ್ದ.
ಕಣ್ಣೆದುರೇ ಆ ಪಕ್ಷಿ ತನ್ನ ಮರಿ ಹಾಗು ಸಂಗಾತಿಯನ್ನು ಕಳೆದುಕೊಂಡಿತ್ತು. ಅದಕ್ಕೆ ಆಗಿರುವ ನೋವು ಅಸಾಧ್ಯವಾದದ್ದು. ಆದರೆ ಮನಸ್ಸಿಗೆ ಆದ ನೋವನ್ನ ಹಾಗೆ ನುಂಗಿಕೊಂಡು ಬದುಕ್ಕಿದ್ದ ಮರಿಗಳಿಗೋಸ್ಕರ ಬದುಕನ್ನು ಸಾಗಿಸಲು ಹೊರಟ ಆ ಪಕ್ಷಿಯನ್ನು ನೋಡಿ ಅವನಿಗೆ ತಾನು ತೆಗೆದುಕೊಂಡ ನಿರ್ಧಾರ ಎಂತ ಮೂರ್ಖತನ ಅನಿಸತೊಡಗಿತು. ಜೀವನದಲ್ಲಿ ಬರುವ ಸಮಸ್ಯೆಗಳು, ಅಗಲುವ ವ್ಯಕ್ತಿಗಳು, ನಮ್ಮಿಂದ ದೂರ ಆಗುವವರು ಯಾವುದು ಶಾಶ್ವತ ಅಲ್ಲ. ಅದನ್ನು ಮುಂದಿಟ್ಟುಕೊಂಡು ನಮ್ಮ ಜೀವನವನ್ನು ಕೊನೆಗೊಳಿಸಿ ಕೊಳ್ಳುವುದಕ್ಕೆ ಅರ್ಥವೇ ಇಲ್ಲ. ಸೋಲು ಗೆಲುವು ನಾವು ಮಾಡುವ ಪ್ರಯತ್ನಗಳ ಫಲ ಅಷ್ಟೇ. ಸೋಲು ಬಂದ ಕೂಡಲೇ ಜೀವನ ಅಂತ್ಯವಾಗುವುದಿಲ್ಲ. ಅದು ನಮ್ಮ ಸಾಧನೆಗೆ ಮತ್ತೊಂದು ಹಾದಿಯನ್ನು ತೋರಿಸುತ್ತದೆ. ಅದನ್ನು ನಾವು ಕಂಡುಕೊಳ್ಳಬೇಕಷ್ಟೆ. ಎಂಥ ಮೂರ್ಖ ಕೆಲಸ ಮಾಡಲು ಹೊರಟ್ಟಿದ್ದೆ ನಾನು ಅಂತ ಅಂದುಕೊಂಡು, ಬೆಟ್ಟದ ತುದಿಯಲ್ಲಿ ನಿರಾಳವಾಗಿ ಕುಳಿತು, ಪ್ರಕೃತಿಯನ್ನು ಸವಿಯಲು ಅಲ್ಲಿಯೇ ಕುಳಿತ. ಅವತ್ತು ಜೊತೆಯಲ್ಲಿ ಸಂಗಾತಿ ಅಥವಾ ತಂದೆ ಇರಲಿಲ್ಲ. ಆದರೆ ಜೀವನದ ಸಾರ ಮತ್ತು ಬದುಕಿನ ಹೋರಾಟ ಏನು ಎಂಬುದು ಅರ್ಥವಾಗಿತ್ತು.