
ಬೆಳಿಗ್ಗೆ ಮಗಳು ಶಾಲೆಗೇ ಹೋಗುವ ಗಡಿಬಿಡಿಯಲ್ಲಿ ಏನು ತಿನ್ನದೇ ಹೋಗುತ್ತಾಳೋ ಅನ್ನುವ ಸಂಕಟದಿಂದ ನಾವೇ ತಿನ್ನಿಸಿ ಶಾಲೆಗೇ ಕಳುಹಿಸಿಬಿಡುತ್ತೇವೆ. ಇನ್ನು ಮದ್ಯಾಹ್ನ ಶಾಲೆಯಲ್ಲಿ ಅವರಿಗೆ ತಿನ್ನುವುದಕ್ಕಿಂತ ಆಟದ ಕಡೆ ಗಮನ ಜಾಸ್ತಿ, ಕೈ ಸರಿಯಾಗಿ ತೊಳೆದು ತಿನ್ನುತ್ತಾರೋ ಇಲ್ಲವೊ ಅಂದುಕೊಂಡು ಚಮಚ ಹಾಕಿ ಬಾಕ್ಸ್ ಕಳಿಸುತ್ತೇವೆ. ರಾತ್ರಿ ಊಟಕ್ಕೆ ಕರೆದರೆ, ತಟ್ಟೆ ಮುಂದೆ ಕುಳಿತು ” ಅಮ್ಮ, ಚಮಚ ಕೊಡಮ್ಮ” ಅಂತ ಕೂಗುತ್ತಾಳೆ. ಕೈ ಬೆರಳುಗಳು ಅನ್ನಕ್ಕಾಗಲಿ ಅಥವಾ ತಿನ್ನುವ ಯಾವ ಪದಾರ್ಥಗಳಿಗೆ ಮುಟ್ಟುವ ಪ್ರಮೇಯವೇ ಇಲ್ಲ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿ ಬಾಳೆ ಎಲೆ ಮುಂದೆ ಊಟಕ್ಕೆ ಕುಳಿತರೆ ಚಮಚ ಇಲ್ವಾ ಅನ್ನುವ ಮಟ್ಟಕ್ಕೆ ನಾವೇ ತಂದುಬಿಟ್ಟಿದ್ದೀವಿ ಅನಿಸುತ್ತೆ. ವಿಜ್ಞಾನ ಜಗತ್ತು ಕೂಡ ಕೈಲಿರುವ ಕೆಲವು ಸಣ್ಣ ಸಣ್ಣ ಬ್ಯಾಕ್ಟೀರಿಯಾ ನಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ ಎಂದು ಒಪ್ಪಿಕೊಂಡಿರುವಾಗ ನಾವು ಮಾತ್ರ ಮಕ್ಕಳಿಗೆ ಕೈಯಲ್ಲಿ ತಿನ್ನುವುದನ್ನು ಹೇಳಿಕೊಡುವುದನ್ನು ಬಿಟ್ಟು, ಅವರ ಕೈಗೆ ಸ್ವಚ್ಛತೆ ಹೆಸರಿನಲ್ಲಿ ಚಮಚ ಕೊಟ್ಟುಬಿಟ್ಟಿದ್ದೇವೆ. ತಮ್ಮ ಕೈಯಲ್ಲೇ ತುತ್ತು ತಿನ್ನದ ಮಕ್ಕಳಿಗೆ ಇನ್ನು ನಾವು ತಿನ್ನುತ್ತಿದ್ದ ಕೈ ತುತ್ತಿನ ಬಗ್ಗೆ ಹೇಳಿದರೆ ಹೇಗೆ ಅರ್ಥವಾಗುತ್ತೆ ಆಲ್ವಾ?
ಹಿಂದೆ ತಿಂಗಳಿಗೆ ಒಂದು ಸಾರಿಯಾದರೂ ಬೆಳದಿಂಗಳ ಕೈ ತುತ್ತು ಮನೆಯಲ್ಲಿ ನಡೆಯುತ್ತಿತ್ತು. ಒಂದು ದೊಡ್ಡ ಪಾತ್ರೆಯಲ್ಲಿ ಅನ್ನ ಹುಳಿ ಅಥವಾ ಅಣ್ಣ ಮೊಸರು ಕಲಸಿ ಕುಳಿತರೆ, ಅಮ್ಮನ ಮುಂದೆ ಅರ್ಧ ವೃತ್ತಾಕಾರವಾಗಿ ಕುಳಿತು, ನಮ್ಮ ತುತ್ತಿನ ಸರದಿಗೆ ಕಾಯುತ್ತಿದ್ದ ಆ ದಿನಗಳು ನಾವು ಯಾರು ಮರೆತಿರುವುದಿಲ್ಲ. ರಜದಲ್ಲಿ ಊರಿಗೆ ಹೋದರೆ ಅಜ್ಜಿ ಕೈ ತುತ್ತು ಕೊಡಲು ಕುಳಿತರೆ ಸುತ್ತ ಮೊಮ್ಮಕ್ಕಳ ದೊಡ್ಡ ಸೈನ್ಯನೇ ತಿನ್ನಲು ತಯಾರಾಗಿರುತ್ತಿತ್ತು. ನಮ್ಮ ಪುಟ್ಟ ಬಾಯಿಗೆ ಅವರು ಕೈಗೆ ಕೊಡುತ್ತಿದ್ದ ತುತ್ತು ಎಷ್ಟು ದೊಡ್ಡದಿರುತ್ತಿತ್ತೆಂದರೆ ಅಜ್ಜಿ ೬ ಜನರಿಗೆ ಕೈ ತುತ್ತು ಕೊಟ್ಟು ಮತ್ತೆ ನಮ್ಮ ಸರದಿಗೆ ಬರುವ ಹೊತ್ತಿಗೂ ಕೂಡ ಮೊದಲು ಕೊಟ್ಟ ತುತ್ತು ತಿಂದು ಮುಗಿದಿರುತ್ತಿರಲಿಲ್ಲ. ಕೇವಲ ಮೂರು ನಾಲ್ಕು ತುತ್ತಿಗೆ ಹೊಟ್ಟೆ ತುಂಬಿದ ಹಾಗೆ ಅನಿಸುತ್ತಿತ್ತು. ಕೈ ತುತ್ತು ತಿಂದ ದಿವಸ ಮೃಷ್ಟಾನ್ನ ಭೋಜನ ಮಾಡಿದ ಅನುಭವ ನಮಗೆ. ಅದರ ರುಚಿ ಇವತ್ತಿನ ಮಕ್ಕಳಿಗೆ ನಾವು ಕೊಡಿಸುತ್ತಿರುವ ಪಿಜ್ಜಾ, ಬರ್ಗ ಗೆ ಹೋಲಿಸಲು ಸಾಧ್ಯವಿಲ್ಲ ಬಿಡಿ. ಮನೆಯಲ್ಲಿ ಈಗ ಪಾರ್ಟಿ ಮಾಡಿ ತಿನ್ನುತ್ತಿರುವ ಬಿರ್ಯಾನಿ , ಪಲಾವ್ ಕೂಡ ಆ ಕೈ ತುತ್ತಿನ ರುಚಿಗೆ ಸರಿ ಸಾಟಿಯಾಗಲ್ಲ. ಕೈ ತುತ್ತಿನಲ್ಲಿ ಅಡಗಿರುತ್ತಿದ್ದ ಅಜ್ಜಿಯ ಪ್ರೀತಿ ಬರಿ ಮೊಸರನ್ನವನ್ನು ಕೂಡ ಪರಮಾನ್ನವಾಗಿ ಬದಲಾಯಿಸುತ್ತಿತ್ತು ಅಂತ ಅನಿಸುತ್ತೆ.
ಇತ್ತೀಚಿಗೆ ತಿಂಗಳಿಗೊಮ್ಮೆ ಬರಿ ಉಪ್ಪು, ತುಪ್ಪ ಮತ್ತು ಅನ್ನ ಸೇರಿಸಿ ತಟ್ಟೆಯಲ್ಲಿ ಕಲಿಸಿ ಕೊಟ್ಟರೆ, ಮಗಳು ತನ್ನ ಕೈಯಲ್ಲೇ ತುತ್ತು ಮಾಡಿಕೊಂಡು ಬಾಯಲ್ಲಿ ಇಟ್ಟುಕೊಂಡು ” ಅಮ್ಮ ಸಖತ್ತಾಗಿದೆ, ಯಮ್ಮಿ ” ಅಂತ ಚಪ್ಪರಿಸಿಕೊಂಡು ತಿನ್ನುತ್ತಾಳೆ. ನಿಧಾನವಾಗಿ ಕೈ ತುತ್ತಿನ ಮಹಿಮೆ ಗೊತ್ತಾಗತೊಡಗಿದೆ. ಆದಷ್ಟು ಮಕ್ಕಳಿಗೆ ಕೈಯಲ್ಲಿ ತಿನ್ನುವ ಅಭ್ಯಾಸ ಮಾಡಿಸಿ. ಕೈಯಲ್ಲಿ ತಿನ್ನುವ ಆಹಾರದ ರುಚಿಯು ಜಾಸ್ತಿ ಇರುತ್ತೆ. ಹಣ್ಣುಗಳನ್ನು ಕಚ್ಚಿ ತಿನ್ನಲು ಹೇಳಿ. ನೀವೇ ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಕೊಡಬೇಡಿ. ಆದಷ್ಟು ಎಲ್ಲರು ಜೊತೆಯಲ್ಲಿ ಊಟ ಮಾಡಲು ಪ್ರಯತ್ನಿಸಿ. ಜೊತೆಯಲ್ಲಿ ಕುಳಿತು ಟಿವಿಯಿಂದ ದೂರವಾಗಿ ಕೇವಲ ಊಟದ ಕಡೆ ಗಮನ ಇರಲಿ. ಮೈಕ್ರೋ ಫ್ಯಾಮಿಲಿ ಆದರೂ ಸರಿ ತಿಂಗಳಿಗೊಮ್ಮೆ ನೀವೇ ಜೊತೆಯಲ್ಲಿ ಕೈ ತುತ್ತು ಮಾಡಿಕೊಂಡು ನಿಮ್ಮಲ್ಲೇ ಹಂಚಿಕೊಂಡು ತಿನ್ನಿ. ಯಾವಾಗಲಾದರೂ ಎಲ್ಲರು ಜೊತೆ ಸೇರಿದರೆ, ಹಿರಿಯರ ಕೈಯಲ್ಲಿ ಕೈ ತುತ್ತು ಮಾಡಿಸಿಕೊಂಡು ನಿಮ್ಮ ಮಕ್ಕಳೊಂದಿಗೆ ಕೂತುಕೊಂಡು ತಿನ್ನಿ.
– ಶ್ರೀನಾಥ್ ಹರದೂರ ಚಿದಂಬರ
ನಮಸ್ತೇ ಶ್ರೀನಾಥರವರೆ ದೂರದ ನೆದರ್ಲ್ಯಾಂಡ್ಸ್ ನಲ್ಲಿದ್ದರೂ ಭಾರತೀಯ ಜೀವನ ವ್ಯವಸ್ಥೆ ಅದರ ಶ್ರೇಷ್ಠತೆಯನ್ನು ಸದಾ ಅನುಸರಿಸುತ್ತ ಅದನ್ನು ಬರಹದ ಮುಖೇನವೂ ತಿಳಿಸುವ ಮನೋಜ್ಞ ಲೇಖನಗಳ ಕೊಡುಗೆಗಾಗಿ ಅಭಿವಂದನೆಗಳು. ಹೀಗೆ ಸಾಗಲಿ ಲೇಖನಯಶಃಸರಣಿ. ಶುಭಮ್ ಅಸ್ತು ನಿತ್ಯಮ್ ಉತ್ತರೋತ್ತರಂ ಭವತು ಚ
LikeLike
ಧನ್ಯವಾದಗಳು… ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ…
LikeLike