ಛಾಯಾಚಿತ್ರಣ: ಅಂಕಿತ
ಬರೆಹ: ಶ್ರೀನಾಥ್ ಹರದೂರ ಚಿದಂಬರ
ಈ ಪ್ರಳಯದ ಕಥೆಯ ಮೂಲ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇಕ್ಕೇರಿ. ನಾನು ಚಿಕ್ಕವನಿದ್ದಾಗ ನನ್ನೂರು ಸಾಗರದ ಇಕ್ಕೇರಿಯಾ ಅಘೋರೇಶ್ವರ ದೇವಸ್ಥಾನಕ್ಕೆ ಪ್ರತಿ ತಿಂಗಳು ತಪ್ಪಿಸದೆ ಹೋಗಿ ಭೇಟಿ ನೀಡುತ್ತಿದ್ದೆ. ಸಾಗರದಿಂದ ಕೇವಲ ಆರು ಕಿಲೋಮೀಟರು ದೂರದಲ್ಲಿದೆ. ಅವಾಗೆಲ್ಲ ನಾವು ಒಳ ಹಾದಿಯಲ್ಲಿ ಇಕ್ಕೇರಿಗೆ ನಡೆದುಕೊಂಡೇ ಹೋಗುತ್ತಿದ್ದೆವು. ಇಕ್ಕೇರಿಯಲ್ಲಿ ಇರುವ ಅಘೋರೇಶ್ವರ ದೇವಸ್ಥಾನವು ಕಲ್ಲಿನಿಂದ ( ಗ್ರಾನೈಟ್ ಕಲ್ಲು ) ಕಟ್ಟಿದ ಹಾಗು ಅತಿ ಸುಂದರವಾದ ದೇವಸ್ಥಾನ. ಹಿಂದೆ ಇಕ್ಕೇರಿ ಕೆಳದಿಯನ್ನು ಆಳುತ್ತಿದ್ದ ನಾಯಕ ರಾಜವಂಶದವರ ರಾಜಧಾನಿ ಆಗಿತ್ತು. ನಾಯಕರ ಕಾಲದಲ್ಲಿ ಕಟ್ಟಿದ್ದು ಅಂತ ಹೇಳುತ್ತಾರೆ. ಇಡೀ ದೇವಸ್ಥಾನದ ಕಲ್ಲಿನ ಕೆತ್ತನೆ ದ್ರಾವಿಡ ವಾಸ್ತುಶಿಲ್ಪದ ಮೇಲೆ ಆಧಾರವಾಗಿದೆ. ದೇವಸ್ಥಾನದ ಗರ್ಭಗುಡಿಯನ್ನು ದೊಡ್ಡ ದೊಡ್ಡ ಕಲ್ಲುಗಳಿಂದ ಕಟ್ಟಿದ್ದಾರೆ. ಇಡೀ ದೇವಸ್ಥಾನದ ಗೋಡೆಯ ಮೇಲೆಲ್ಲಾ ಸುಂದರವಾದ ಕಲ್ಲಿನ ಕೆತ್ತನೆ ಇದೆ. ದೇವಸ್ಥಾನದ ಎದುರು ತುಂಬಾ ದೊಡ್ಡದಾದ ಕೂತಿರುವ ದೊಡ್ಡ ಕಲ್ಲಿನ ನಂದಿ ಇದೆ. ದೇವಸ್ಥಾನದ ದ್ವಾರ ಬಾಗಿಲಿಗೆ ಎರಡು ಕಲ್ಲಿನ ದೊಡ್ಡ ಆನೆಯ ವಿಗ್ರಹಗಳಿವೆ. ಜೀವನದಲ್ಲಿ ಒಮ್ಮೆ ನೋಡಬೇಕಾದ ಸ್ಥಳ ಇಕ್ಕೇರಿ.

ನಾನು ಇಕ್ಕೇರಿಯ ದೇವಸ್ಥಾನಕ್ಕೆ ಹೋದಾಗಲೆಲ್ಲ ದೇವಸ್ಥಾನದ ಎದುರು ಇದ್ದ ನಂದಿಯ ಕಾಲಿನ ನಡುವೆ ನುಸುಳಿ ಬರುತ್ತಿದ್ದೆ. ನಮ್ಮ ಮನೆಗೆ ಯಾರೇ ನೆಂಟರು ಬಂದರೂ, ಅವರನ್ನು ಅಲ್ಲಿಗೆ ಕರೆದುಕೊಂಡು ಹೋದಾಗೆಲ್ಲ ನಂದಿಯ ಕಾಲಿನ ನಡುವೆ ನುಸುಳುವ ಸಾಹಸವನ್ನು ಪ್ರದರ್ಶನ ಮಾಡುತ್ತಿದ್ದೆ. ದೇವಸ್ಥಾನದ ಎಡ ಭಾಗದಲ್ಲಿ, ಗೋಡೆಯಲ್ಲಿ ಒಂದು ಬೋರ್ಡ್ ಮಾದರಿಯ ಒಂದು ಕಲ್ಲಿದೆ. ಅದನ್ನು ನೀವು ಇನ್ನೊಂದು ಕಲ್ಲಿನಿಂದ ಕುಟ್ಟಿದರೆ ಒಳಗಡೆ ಕಾಲಿ ಇರುವ ಹಾಗೆ ಅನಿಸುತ್ತದೆ. ನಾವು ಅದರಲ್ಲಿ ಹಿಂದಿನ ಕಾಲದ ರಾಜರು ನಿಧಿ ಇಟ್ಟಿದ್ದಾರಂತೆ ಅಂತ ಗುಸು ಗುಸು ಅಂತ ಮಾತನಾಡಿಕೊಳ್ಳುತ್ತಿದ್ದೆವು. ಈಗ ನೆನಸಿಕೊಂಡರೆ ನಗು ಬರುತ್ತೆ.
ಈಗ ಪ್ರಳಯದ ವಿಷಯಕ್ಕೆ ಬರೋಣ. ತುಂಬ ಮುಖ್ಯವಾದ ವಿಷಯ ಏನೆಂದರೆ ದೇವಸ್ಥಾನದ ಹೊರಗಡೆ ಗೋಡೆಯ ಒಂದು ಭಾಗದಲ್ಲಿ ಎರಡು ಹಲ್ಲಿಯ ಕೆತ್ತನೆ ಇದೆ. ಆ ಎರಡು ಹಲ್ಲಿಗಳು ಎದುರು ಬದುರು ಒಂದೊಕ್ಕೊಂದು ನೋಡುತ್ತಾ ಇರುವ ಹಾಗೆ ಕೆತ್ತನೆ ಮಾಡಿದ್ದಾರೆ. ನಮಗೆ ಯಾವಾಗ ಆ ಎರಡು ಹಲ್ಲಿಗಳ ಮೂತಿ ಒಂದೊಕ್ಕೊಂದು ಕೂಡುತ್ತವೋ ಅವಾಗ ಪ್ರಳಯ ಆಗುತ್ತದೆ ಅಂತ ಯಾರೋ ಹೇಳಿದ್ದರು. ಆ ವಿಷಯವನ್ನು ನಾನು ಮತ್ತು ನನ್ನ ಸ್ನೇಹಿತ ಬಹಳ ಗಂಭೀರವಾಗಿ ತೆಗೆದುಕೊಂಡಿದ್ವಿ. ಹಾಗಾಗಿ ನಾವು ಪ್ರತಿ ತಿಂಗಳು ಭೇಟಿ ನೀಡಿ ಆ ಹಲ್ಲಿಗಳು ಎಷ್ಟು ಹತ್ತಿರಕ್ಕೆ ಬಂದಿದ್ದಾವೆ ಅಂತ ನೋಡಿ, ನಮ್ಮ ನಮ್ಮಲ್ಲಿಯೇ ಬಹಳ ವಿಚಾರ ಮಾಡುತ್ತಿದ್ದೆವು.
ಎರಡು ಹಲ್ಲಿಗಳ ಮೂತಿಯ ನಡುವೆ ನಮ್ಮ ಕಿರು ಬೆರಳನಿಟ್ಟು, ಅವುಗಳ ಮೂತಿ ಒಂದೊಕ್ಕೊಂದು ಎಷ್ಟು ಹತ್ತಿರ ಇದೆ, ಅವುಗಳ ನಡುವೆ ಎಷ್ಟು ಅಂತರ ಇದೆ ಅಂತ ಒಂದು ಅಳತೆ ಮಾಡಿಕೊಂಡಿದ್ದೆವು. ನಮ್ಮ ಒಂದು ಕಿರುಬೆರಳನ್ನು ಒಂದು ಹಲ್ಲಿಯ ಮೂತಿಗೆ ತಾಕಿಸಿ, ಕಿರು ಬೆರಳಿನ ಇನ್ನೊಂದು ಭಾಗ ಎರಡನೇ ಹಲ್ಲಿಯ ಮೂತಿಗೆ ಎಷ್ಟು ದೂರ ಇದೆ ಹಾಗು ಕಿರುಬೆರಳಿನ ಆ ಭಾಗದಲ್ಲಿ ಸಣ್ಣಗೆ ಗುರುತಿಗೆ ಒಂದು ಗೀಟು ಹಾಕಿದ್ದೆವು. ಪ್ರತಿ ಭಾರಿ ಹೋಗುತ್ತಿದ್ದುದೇ ಹಲ್ಲಿಗಳ ಮೂತಿಯಾ ನಡುವೆ ನಮ್ಮ ಕಿರುಬೆರಳನಿಟ್ಟು ಅವು ಹತ್ತಿರ ಏನಾದರೂ ಬಂದಿದೆಯಾ ಅಂತ ನೋಡಲಿಕ್ಕೆ. ಹೀಗೆ ಸರಿ ಸುಮಾರು ೬ ತಿಂಗಳು ಹೋಗುವುದು, ನೋಡುವುದು ಮಾಡುತ್ತಲೇ ಇದ್ದೆವು. ಆದರೆ ಅಂತರ ಏನು ಕಮ್ಮಿ ಆಗಿರಲಿಲ್ಲ. ಮಳೆಗಾಲ ಶುರುವಾದ ಮೇಲೆ ಇಕ್ಕೇರಿಗೆ ನಮಗೆ ಹೋಗಲಾಗಲಿಲ್ಲ. ನಂತರ ಹಬ್ಬ, ದಸರಾ ರಜೆ ಅಂತ ಊರಿಗೆ ಹೋಗಿದ್ದರಿಂದ ಇಕ್ಕೇರಿಗೆ ಐದಾರು ತಿಂಗಳು ಹೋಗಲಾಗಲಿಲ್ಲ. ದಸರಾ ರಜೆ ಮುಗಿಸಿ ಶಾಲೆ ಶುರುವಾದ ಮೇಲೆ ಒಂದು ಭಾನುವಾರ ಇಕ್ಕೇರಿಗೆ ಹಲ್ಲಿಗಳನ್ನು ನೋಡಲು ಹೊರಟೆವು. ಇಕ್ಕೇರಿಗೆ ಹೋಗಿ ಹಲ್ಲಿಗಳ ಮೂತಿಯ ನಡುವೆ ನನ್ನ ಕಿರು ಬೆರಳನಿಟ್ಟೆ, ಅಷ್ಟೇ ನನ್ನ ಎದೆ ಧಸಕ್ಕೆಂದಿತು. ಅವುಗಳ ಅಂತರಕ್ಕೆ ನಾವು ಮಾಡಿದ್ದ ಗೀಟು ನನ್ನ ಕಿರುಬೆರಳಿಂದ ಮುಚ್ಚಿ ಹೋಗಿತ್ತು. ಅವುಗಳು ಒಂದೊಕ್ಕೊಂದು ಹತ್ತಿರ ಬಂದಿದ್ವು. ನಾನು ನನ್ನ ಸ್ನೇಹಿತ ಇಬ್ಬರಿಗೂ ಖಚಿತ ಆಗಿ ಹೋಯ್ತು, ಪ್ರಳಯ ಆಗೇ ಆಗುತ್ತೆ. ಸೀದಾ ಊರಿಗೆ ಬಂದು ಉಳಿದ ಸ್ನೇಹಿತರಿಗೆಲ್ಲ ನಾವಿಬ್ಬರು ” ಪ್ರಳಯ ಆಗೇ ಆಗುತ್ತೆ, ನೋಡ್ತಾ ಇರಿ ” ಅಂತ ಹೇಳಿದೆವು.

ಅಲ್ಲಿಂದ ಸುಮಾರು ಎರಡು ಮೂರು ವರ್ಷ ಅಲ್ಲಿಗೆ ಹೋಗಿ, ಅಳತೆ ಮಾಡಿ ಬರುವುದು ನಮ್ಮ ಜೀವನದ ಒಂದು ಭಾಗವಾಗಿತ್ತು. ಪ್ರತಿ ವರುಷ ಅವುಗಳ ಮೂತಿ ಹತ್ತಿರ ಹತ್ತಿರ ಬರುತ್ತಲೇ ಇತ್ತು. ನಮಗೆ ಪ್ರಳಯ ಹತ್ತಿರ ಬರುತ್ತಲೇ ಇದೆ ಅನಿಸುತ್ತಿತ್ತು. ಒಂದು ದಿನ ಅಲ್ಲಿ ನಾವು ಅಳತೆ ಮಾಡುವಾಗ ಒಬ್ಬರು ವಯಸ್ಸಾದವರು ನಿಂತು ನಮ್ಮನ್ನೇ ನೋಡುತ್ತಿದ್ದರು. ಆಮೇಲೆ ಹತ್ತಿರ ಬಂದು ಏನು ಮಾಡುತ್ತಿದ್ದೀರಿ ಅಂತ ಕೇಳಿದರು. ಅದಕ್ಕೆ ನಾವು ಏನೋ ಕಂಡುಹಿಡಿದ ರೀತಿ ಎಲ್ಲವನ್ನು ವಿವರಿಸಿ, ” ನೋಡಿ ಪ್ರಳಯ ಆಗೇ ಆಗುತ್ತೆ ” ಅಂತ ಅಂದ್ವಿ. ಅವರು ನಗಾಡುತ್ತಾ ತಮ್ಮ ಕಿರು ಬೆರಳನ್ನು ಹಲ್ಲಿಗಳ ಮೂತಿಯ ನಡುವೆ ಇಟ್ಟರು. ಅವುಗಳ ಮೂತಿ ಅವರ ಕಿರುಬೆರಳಿನ ಎರಡು ಕಡೆ ತಾಗುತ್ತಿತ್ತು. ಆಮೇಲೆ ಅವರು ಹೇಳಿದರು ಪ್ರತಿ ವರುಷ ನೀವು ಬೆಳೆದು, ನಿಮ್ಮ ಕಿರು ಬೆರಳು ದೊಡ್ಡದಾಗಿದೆ ಅಷ್ಟೇ, ಅವುಗಳು ಹತ್ತಿರ ಬಂದಿಲ್ಲ , ಅವು ಇದ್ದಲ್ಲಿಯೇ ಇವೆ ಅಂತ. ನಮ್ಮ ದಡ್ಡತನವನ್ನು ನಾವು ಒಪ್ಪಿಕೊಳ್ಳಲು ತಯಾರು ಇರಲಿಲ್ಲ. ಹಾಗಾಗಿ ಅವರಿಗೆ ” ಪ್ರಳಯ ಆಗೇ ಆಗುತ್ತೆ, ನೋಡ್ತಾ ಇರಿ ” ಅಂತ ಹೇಳಿ ಅಲ್ಲಿಂದ ಹೊರಟೆವು.
👌😁
LikeLike
Thank you 😊
LikeLike