ಹರಿಣಿ ಕಾಲೇಜಿನ ಕೊನೆ ವರುಷದಲ್ಲಿ ಓದುತ್ತಾ ಇದ್ದಳು. ಕಾಲೇಜಿನಲ್ಲಿ ಅವಳ ಸೌಂದರ್ಯಕ್ಕೆ ಮನಸೋಲದವರೇ ಇರಲಿಲ್ಲ . ಪ್ರತಿ ವರುಷ ಏನಿಲ್ಲ ಅಂದರು ಕನಿಷ್ಠ ಪಕ್ಷ ೧೫ ರಿಂದ ೨೦ ಹುಡುಗರು ಬಂದು ಅವಳ ಹತ್ತಿರ ತಮ್ಮ ಪ್ರೇಮ ನಿವೇದನೆ ಮಾಡುತ್ತಿದ್ದರು. ಹರಿಣಿ ಯಾರಿಗೂ ಒಪ್ಪಿಗೆ ನೀಡಿರಲಿಲ್ಲ. ತಾನಾಯಿತು ತನ್ನ ಓದಾಯಿತು ಅನ್ನುವ ಹಾಗೆ ಇದ್ದಳು. ಆದರೆ ಅವಳು ಅದೇ ಕಾಲೇಜಿನ ಉಪನ್ಯಾಸಕ ಅಶೋಕನ ಪ್ರೇಮದ ಬಲೆಯಲ್ಲಿ ಬಿದ್ದಿದ್ದ ಸಂಗತಿ ಯಾರಿಗೂ ಗೊತ್ತಿರಲಿಲ್ಲ. ಎರಡು ವರುಷಗಳಿಂದ ಅವರ ಪ್ರೇಮ ಸಲ್ಲಾಪ ನಡೆಯುತ್ತಿತ್ತು. ಈ ಗುಟ್ಟು ಅವನು ಮತ್ತು ಅವಳನ್ನು ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ. ಅವನು ತನ್ನ ಕೆಲಸಕ್ಕೆ ತೊಂದರೆ ಆಗುತ್ತೆ, ಹಾಗಾಗಿ ಯಾರಿಗೂ ಹೇಳಬೇಡ, ಸಮಯ ನೋಡಿ , ನಿನ್ನ ಓದು ಮುಗಿದ ಕೂಡಲೇ ಮದುವೆಗೆ ಪ್ರಸ್ತಾಪ ಮಾಡುತ್ತೇನೆ ಅಂತ ಹೇಳಿ ಅವಳ ಹತ್ತಿರ ಮಾತು ತೆಗೆದುಕೊಂಡಿದ್ದ. ಪ್ರೀತಿಯ ಸೆಳೆತದಲ್ಲಿ ಅವರಿಬ್ಬರೂ ಬಹಳ ಮುಂದುವರೆದು ಬಿಟ್ಟಿದ್ದರು. ಪರೀಕ್ಷೆ ಶುರುವಾಗುವ ಮುನ್ನ ಅವಳು ತಾನು ಗರ್ಭಿಣಿಯಾಗಿದ್ದೇನೆ ಅಂತ ಅಶೋಕನ ಹತ್ತಿರ ಹೇಳಿದಳು. ಅದಕ್ಕೆ ಅಶೋಕ ನೀನು ಏನು ಯೋಚನೆ ಮಾಡಬೇಡ, ನಿನ್ನ ಪರೀಕ್ಷೆ ಮುಗಿದ ಕೂಡಲೇ ಮದುವೆಗೆ ನಾನು ಮನೆಯಲ್ಲಿ ಮಾತನಾಡುತ್ತೇನೆ ಎಂದು ಅವಳಿಗೆ ಸಮಾಧಾನ ಮಾಡಿದನು. ಹರಿಣಿಯು ಸುಮ್ಮನಾಗಿ ಪರೀಕ್ಷೆಗೆ ತಯಾರಿ ನಡೆಸಿದಳು. ಪರೀಕ್ಷೆ ಮುಗಿಸಿ ಅಶೋಕನ ಭೇಟಿ ಮಾಡಲು ಪ್ರಯತ್ನ ಮಾಡಲು ಮಾಡಿದಳು. ಆದರೆ ಅಶೋಕ ಕಾಲೇಜಿನಲ್ಲಿ ಎಲ್ಲೂ ಕಾಣಲಿಲ್ಲ. ಕಾಲೇಜಿನ ಆಫೀಸಿನಲ್ಲಿ ವಿಚಾರಿಸಿದಾಗ ಅವರು ರಜದಲ್ಲಿ ಇದ್ದಾರೆ ಅಂತ ಹೇಳಿದರು. ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು. ಒಂದು ತಿಂಗಳು ಹಾಗೆ ಕಳೆಯಿತು. ಅಶೋಕನ ಸುದ್ದಿಯೇ ಇರಲಿಲ್ಲ. ಹರಿಣಿ ಕಾಲೇಜಿಗೆ ಹೋಗಿ ಮತ್ತೆ ವಿಚಾರಿಸಿದಾಗ ಅಶೋಕನ ಮದುವೆ ಆಗಿ, ಅವನು ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಟುಹೋಗಿದ್ದ ವಿಷಯ ತಿಳಿಯಿತು. ಹರಿಣಿಗೆ ತಾನು ಮೋಸ ಹೋಗಿದ್ದು ಗೊತ್ತಾಯಿತು. ಮನೆಯಲ್ಲಿ ಧೈರ್ಯ ಮಾಡಿ ಈ ವಿಷಯ ತಿಳಿಸಿದಾಗ ಅಪ್ಪ ಅಮ್ಮ ಭೂಮಿ ಆಕಾಶ ಒಂದು ಮಾಡಿದರು. ಅಪ್ಪ ಅಂತೂ ಹರಿಣಿಯನ್ನು ಸಾಯಿಸುವ ಮಟ್ಟಕ್ಕೆ ಹೊರಟುಬಿಟ್ಟಿದ್ದರು. ಹರಿಣಿಯ ಚಿಕ್ಕಪ್ಪ ಅವಳ ಅಪ್ಪ ಅಮ್ಮನನ್ನು ಸಮಾಧಾನ ಮಾಡಿ, ಯಾರಿಗೂ ಗೊತ್ತಿಲ್ಲದಂತೆ ಅವಳಿಗೆ ಅಬಾರ್ಶನ್ ಮಾಡಿಸಿದರಾಯಿತು, ವಿಷಯವನ್ನು ಇಲ್ಲಿಗೆ ಮುಚ್ಚಿ ಹಾಕಿ ಬಿಡೋಣ ಅಂತ ನಿರ್ಧಾರ ಮಾಡಿದರು.
ಹರಿಣಿಯ ಚಿಕ್ಕಪ್ಪ ಅಬಾರ್ಶನ್ ಮಾಡಿಸಲು ಅವಳನ್ನು ಬೇರೆ ಊರಿಗೆ ಕರೆದುಕೊಂಡು ಹೋದರು. ಆದರೆ ಸಮಯ ಮೀರಿ ಹೋಗಿದ್ದರಿಂದ ಅಬಾರ್ಶನ್ ಮಾಡಲು ಸಾಧ್ಯವಿಲ್ಲ, ಜೀವಕ್ಕೆ ಅಪಾಯ ಅಂತ ಕ್ಲಿನಿಕ್ಕಿನಲ್ಲಿ ಹೇಳಿದ್ದರಿಂದ ಮುಂದೇನು ಎಂಬ ಸಮಸ್ಯೆ ಎದುರಾಯಿತು. ಅವಳ ಚಿಕ್ಕಪ್ಪ ಹರಿಣಿಯ ಅಪ್ಪ ಅಮ್ಮನ ಹತ್ತಿರ ಮಾತನಾಡಿ ಅವಳನ್ನು ದೂರದ ಬಂದುಗಳ ಒಬ್ಬರ ಮನೆಗೆ ಕರೆದುಕೊಂಡು ಹೋದರು. ಹರಿಣಿಯಾ ಹೆರಿಗೆಯನ್ನು ಅಲ್ಲಿಯೇ ಮಾಡಿಸುವುದು ಅಂತ ತೀರ್ಮಾನ ಮಾಡಿದ್ದರು. ಹರಿಣಿ ಏನು ಮಾಡಲು ಅಥವಾ ಮಾತನಾಡದ ಪರಿಸ್ಥಿತಿಯಲ್ಲಿದ್ದಳು. ಹೆರಿಗೆ ಆದ ಮೇಲೆ ಮಗುವನ್ನು ಯಾರಿಗಾದರೂ ಕೊಟ್ಟು ಬಿಡುವ ಅಂತ ಅವಳ ಚಿಕ್ಕಪ್ಪ ಹೇಳಿದ ಮಾತುಗಳನ್ನು ಕೇಳಿ ಹರಿಣಿ ಅದನ್ನು ತುಂಬ ವಿರೋಧಿಸಿದಳು. ತಾನು ಸಮಾಜವನ್ನು ಎದುರಿಸಲು ತಯಾರು ಅಂತ ಹೇಳಿದರು, ಅವಳ ಮಾತನ್ನು ಕೇಳಲು ಯಾರು ಇರಲಿಲ್ಲ. ಅವಳು ಮಾಡಿದ ತಪ್ಪನ್ನೇ ಎತ್ತಿ ತೋರಿಸಿ, ಅವಳನ್ನು ಮಾತನಾಡದಂತೆ ಕಟ್ಟಿಹಾಕಿದ್ದರು. ಹರಿಣಿ ಅತಿಯಾದ ಮಾನಸಿಕ ಹಿಂಸೆಯಿಂದ ನರಳುತ್ತಾ ದಿನ ಕಳೆಯುತ್ತಿದ್ದಳು. ಹರಿಣಿಗೆ ಒಂಬತ್ತು ತಿಂಗಳು ಆಗುತ್ತಿದ್ದಂತೆ, ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಮಗುವಿನ ಬಲಗಣ್ಣಿನ ಹುಬ್ಬಿನ ಮೇಲುಗಡೆ ಒಂದು ದೊಡ್ಡ ಮಚ್ಚೆ ಇತ್ತು. ಅದು ಮಗುವನ್ನು ಇನ್ನು ಮುದ್ದಾಗಿ ಕಾಣುವಂತೆ ಮಾಡಿತ್ತು. ಅವಳು ಆ ಮಗುವನ್ನು ಬಿಡಲು ತಯಾರು ಇರಲಿಲ್ಲ. ಹದಿನೈದು ದಿನ ಅದಕ್ಕೆ ಹಾಲು ಕುಡಿಸಿ ಅದರ ಲಾಲನೆ ಪಾಲನೆಯಲ್ಲಿ ಮುಳುಗಿದಳು. ಅವಳ ಚಿಕ್ಕಪ್ಪ ಹರಿಣಿ ಸುಧಾರಿಸಿಕೊಂಡಿದ್ದು ನೋಡಿ ಅವಳನ್ನು ವಾಪಸು ಊರಿಗೆ ಕರೆದುಕೊಂಡು ಹೊರಡುವ ತೀರ್ಮಾನ ಮಾಡಿದರು. ಎಷ್ಟೇ ಗೋಗೆರೆದರು ಚಿಕ್ಕಪ್ಪ ಮಗುವನ್ನು ಜೊತೆಯಲ್ಲಿ ಕರೆದುಕೊಂಡುಹೋಗಲು ಬಿಡಲಿಲ್ಲ. ನೀನು ಆ ಮಗುವನ್ನು ಮರೆಯಲೇ ಬೇಕು ಅಂತ ಹೇಳಿ ಅದನ್ನು ಯಾರಿಗೋ ಕೊಟ್ಟುಬಿಟ್ಟು ಅಲ್ಲಿಂದ ಹರಿಣಿಯನ್ನು ಕರೆದುಕೊಂಡು ಹೊರಟುಬಿಟ್ಟರು.
ಹರಿಣಿ ಕೆಲವು ತಿಂಗಳುಗಳ ಕಾಲ ಮಗುವಿನ ನೆನಪಲ್ಲಿ ಕೊರಗುತ್ತಾ ಕಾಲ ಕಳೆದಳು. ವರುಷಗಳು ಕಳೆಯುತ್ತಿದ್ದಂತೆ ನೆನಪುಗಳು ಮಾಸತೊಡಗಿ, ಆದ ಘಟನೆಗಳಿಂದ ಹೊರಬಂದು, ಹೊಸ ಜೀವನ ಶುರು ಮಾಡಲು ಕೆಲಸಕ್ಕೆ ಸೇರಿಕೊಂಡಳು. ಹೊಸ ಕೆಲಸ, ಹೊಸ ಜನಗಳ ನಡುವೆ ಬೆರೆಯುತ್ತಾ ಹಳೆಯ ದಿನಗಳನ್ನು ಸಂಪೂರ್ಣವಾಗಿ ಮರೆತು ಹೋದಳು. ಮನೆಯಲ್ಲಿ ಮದುವೆಯ ಪ್ರಸ್ತಾಪ ಶುರು ಮಾಡಿದರು. ಅವಳು ಎದುರು ಮಾತನಾಡದೆ ಅಪ್ಪ ಅಮ್ಮ ಹೇಳಿದ ಹುಡುಗನನ್ನು ಮದುವೆ ಆದಳು. ಗಂಡನ ಮನೆ ಬೇರೆ ಊರಿನಲ್ಲಿದ್ದ ಕಾರಣ, ತಾನು ಮಾಡುತ್ತಿದ್ದ ಕೆಲಸ ಬಿಟ್ಟು ಅಲ್ಲಿಗೆ ಹೋದಳು. ಆ ಊರಿನಲ್ಲಿ ಗಂಡನ ಜೊತೆಯಲ್ಲಿ ಹೊಸ ಜೀವನ ಶುರು ಮಾಡಿದಳು. ವರುಷಗಳು ಉರುಳಿತ್ತಿದ್ದಂತೆ, ಎರಡು ಮಕ್ಕಳ ತಾಯಿಯಾದಳು. ಮಕ್ಕಳ ಮುಖ ನೋಡಿದಾಗೆಲ್ಲ ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ, ವರುಷಗಳ ಹಿಂದೆ ಬಿಟ್ಟಿದ್ದ ಮಗುವಿನ ಆ ಮುಖ ಕಾಣಿಸುತ್ತಿತ್ತು. ಭೂತಕಾಲದಲ್ಲಿ ಹುದುಗಿಹೋಗಿದ್ದ ವಿಷಯ ಹೊರ ಬಂದರೆ ಜೀವನ ಹಾಳಾಗಿ ಹೋಗುತ್ತದೆ ಎಂದು ಬರುತ್ತಿದ್ದ ನೆನಪುಗಳನ್ನು ಮತ್ತೆ ಹೃದಯದ ಒಳಗೆ ಹೂತು ಹಾಕಿದಳು.
ಸಮಯ ಉರುಳುತ್ತ ಹೋಯಿತು, ಮಕ್ಕಳು ಓದಿ ಮುಗಿಸಿ ಆಗಲೇ ಕೆಲಸಕ್ಕೆ ಸೇರಿದ್ದರು. ಮಗಳು ಫ್ಯಾಷನ್ ಡಿಸೈನರ್ ಆಗಿದ್ದಳು. ಮಗ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ. ಕಾಲ ಬಹಳ ಬದಲಾಗಿತ್ತು. ಮಕ್ಕಳು ತಮ್ಮ ಜೀವನ, ತಮ್ಮ ನಿರ್ಧಾರ ಅನ್ನುವ ಮಟ್ಟಕ್ಕೆ ಬೆಳೆದಿದ್ದರು. ಮಗಳು ಒಂದು ದಿನ ಬಂದು ನಾನು ಒಬ್ಬ ಹುಡುಗನ್ನ ಪ್ರೀತಿಸುತ್ತಿದ್ದೇನೆ, ಅವನನ್ನೇ ಮದುವೆಯಾಗ ಬೇಕು ಅಂದಾಗ, ಹರಿಣಿಗೆ ತನ್ನ ಜೀವನದ ಹಳೆಯ ನೆನಪುಗಳು ಒಮ್ಮೆ ಬಂದು ಹೋಯಿತು. ಅಂದು ನಾನು ಇಷ್ಟು ಧೈರ್ಯವಾಗಿ ನಿರ್ಧಾರ ತೆಗೆದುಕೊಂಡಿದ್ದರೆ ಆ ಮಗುವನ್ನು ಅನಾಥನನ್ನಾಗಿ ಮಾಡುವುದು ತಪ್ಪುತ್ತಿತ್ತು ಅಂತ ಅಂದುಕೊಂಡಳು. ಆದರೆ ಕಾಲ ಮಿಂಚಿ ಬಹಳ ವರುಷಗಳೇ ಕಳೆದಿತ್ತು. ಹರಿಣಿ ಮತ್ತು ಅವಳ ಗಂಡ ಮಗಳಿಗೆ ಹುಡುಗನ್ನು ಕರೆದುಕೊಂಡು ಮನೆಗೆ ಬಾ ಮಾತನಾಡೋಣ ಅಂತ ಹೇಳಿದರು. ಮಾರನೆಯ ದಿವಸ ಮಗಳು ತಾನು ಮದುವೆ ಆಗುವ ಹುಡುಗನ್ನು ಕರೆದುಕೊಂಡು ಬಂದಳು. ಮಗಳ ಜೊತೆಗೆ ನಿಂತಿದ್ದ ಹುಡುಗನ ಮುಖ ನೋಡಿ ಹರಿಣಿ ಅಲ್ಲಿಯೇ ಕುಸಿದುಬಿದ್ದಳು. ಆ ಹುಡುಗನ ಬಲಗಣ್ಣಿನ ಹುಬ್ಬಿನ ಮೇಲಿದ್ದ ಮಚ್ಚೆ ಅವಳು ಯಾವತ್ತಿಗೂ ಮರೆಯಲು ಸಾದ್ಯವಿರಲಿಲ್ಲ. ಹರಿಣಿಗೆ ಏನಾಯಿತು ಅಂತ ಅಲ್ಲಿದ್ದವರಿಗೆ ಅರ್ಥ ಆಗಲಿಲ್ಲ. ಎಚ್ಚರವಾದ ಹರಿಣಿಗೆ ಅವರಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಮಗ ಮಗಳನ್ನು ಮದುವೆಯಾಗಲು ಬಂದಿದ್ದ!!
– ಶ್ರೀನಾಥ್ ಹರದೂರ ಚಿದಂಬರ
ದುರ್ವಿಧಿ
LikeLike
ವಿಧಿಯ ಆಟ ಬಲ್ಲವರು ಯಾರು?
LikeLike
ಅಬ್ಬಾ! ಈಗ ಸತ್ಯ ವಿಷಯ ನ ಹೇಳ್ಲೇಬೇಕಲ್ವ? …….
🤤🤤ಇದು ಸತ್ಯ ಘಟನೆ ಪ್ರೇರೇಪಿತ ನ?
ಈ ಥರ ನಿಜ ಜೀವನದಲ್ಲಿ ನಡೆಯತ್ತಾ?
ಸುಧಾ, ತರಂಗ ಗಳಲ್ಲಿ ಓದ್ತಾ ಇದ್ದಿದ್ದು ನೆನಪು. …
LikeLike
😊 thank you.. inspired by some incident happened long back..
LikeLike
ಅಯ್ಯೋ; ಅದು ಯಾವುದೋ ತಪ್ಪು ಎಮೋಜಿ ನ ಹಾಕ್ಬಿಟ್ಟಿದಿನಿ, ಕೀ ಬೋರ್ಡ್ ಅಲ್ಲಿ ಕಾಣಿಸ್ಲೇ ಇಲ್ಲ. ಅದನ್ನ ಅಳಿಸ್ಲಿಕ್ಕಾಗತ್ತಾ?
LikeLike
No issues.. I can understand.. need not change 😁
LikeLike
ಆಡಿಸುವಾತನ ಕೈ ಚಳಕದಲಿ ಎಲ್ಲಾ ಅಡಗಿದೆ… 😣ದುರ್ವಿಧಿ
LikeLike
Always unpredictable 😔
LikeLike