ಯೋಗೀಶನಿಗೆ ವಿಪರೀತ ಸಿನಿಮಾ ನೋಡುವ ಹುಚ್ಚು. ಅದರಲ್ಲೂ ಪತ್ತೇದಾರಿ, ಸಾಹಸಗಳಿದ್ದ ಸಿನಿಮಾ ಅಂದರೆ ಪಂಚಪ್ರಾಣ. ಸಿನೆಮಾದಿಂದ ಪ್ರೇರಿತನಾಗಿ ತಾನು ಪತ್ತೇದಾರ ಆಗಬೇಕೆಂಬುದು ಅವನ ಬಯಕೆಯಾಗಿತ್ತು. ಕಾಲೇಜಿಗೆ ಬರುವ ಹೊತ್ತಿಗೆ, ನಾನು ಪತ್ತೇದಾರ ಆಗೇ ಆಗುತ್ತೇನೆಂದು ಅವನು ನಿರ್ಧಾರ ಮಾಡಿಬಿಟ್ಟಿದ್ದ. ಹಾಗಾಗಿ ಊರಿನಲ್ಲಿ ಏನೇ ನಡೆದರೂ ಅದರ ತನಿಖೆಗೆ ಇಳಿದು ಬಿಡುತ್ತಿದ್ದ. ಅನೇಕ ರಾತ್ರಿ ಏನಾದರೂ ಪತ್ತೆ ಮಾಡಬೇಕೆಂದು ಒಬ್ಬನೇ ಓಡಾಡುತ್ತಿದ್ದ. ಅವನ ಸ್ನೇಹಿತರು ಅವನ ಹಿಂದೆ ಅವನ ಬಗ್ಗೆ ಮಾತನಾಡುವುದು ಅವನಿಗೆ ಗೊತ್ತಿತ್ತು. ಯಾರೇ ಏನೇ ಹೇಳಿದರು ಅದನ್ನು ಕಂಡು ಹಿಡಿದು ಅವರಿಗೆ ಅದನ್ನು ಯಾವಾಗ, ಎಲ್ಲಿ, ಎಷ್ಟು ಸಮಯದಲ್ಲಿ, ಯಾರಿಗೆ ಹೇಳಿದ್ದು, ಯಾರು ಯಾರು ಇದ್ದರು ಎಲ್ಲವನ್ನು ತನಿಖೆ ಮಾಡಿ, ಅವರ ಹತ್ತಿರಾನೆ ಹೇಳಿ ತಲೆಬಿಸಿ ಮಾಡುತ್ತಿದ್ದ. ಅವನ ಪತ್ತೇದಾರಿ ಕೆಲಸ ದಿನ ದಿನಕ್ಕೂ ಜಾಸ್ತಿಯಾಗುತ್ತಿತ್ತು.
ಒಂದು ರಾತ್ರಿ ಊಟ ಮಾಡಿ ಮನೆಯ ಹಿಂಭಾಗದಲ್ಲಿಯೇ ಇದ್ದ ಉದ್ಯಾನವನದಲ್ಲಿ ಟಾರ್ಚ್ ಹಿಡಿದುಕೊಂಡು, ನಡೆದುಕೊಂಡು ಹೋಗುತ್ತಿದ್ದ. ಆ ಉದ್ಯಾನವನ ಮುಗಿದ ನಂತರ ಕಾಡು ಶುರುವಾಗುತ್ತಿತ್ತು. ಅಂತಹ ದಟ್ಟ ಕಾಡು ಅಲ್ಲದಿದ್ದರೂ, ತುಂಬ ಮರ, ಪೊದೆಗಳು ಬೆಳೆದಿದ್ದವು. ಯೋಗೀಶನಿಗೆ ಕಾಡಿನಲ್ಲಿ ಏನೋ ಬೆಳಕು ಕಾಣಿಸಿತು. ಏನು ಅಂತ ನೋಡುವಷ್ಟರಲ್ಲಿ ಬೆಳಕು ಮಾಯವಾಯಿತು. ಬೆಳಕಿನ ಹುಳು ಇರಬಹುದು ಅಂತ ಅಂದುಕೊಂಡ. ಆದರೆ ಮತ್ತೆ ದೊಡ್ಡದಾಗಿ ಬೆಳಕು ಕಾಣಿಸಿತು. ಯೋಗೀಶನಿಗೆ ಅದು ಟಾರ್ಚಿನ ಬೆಳಕು ಅಂತ ಗೊತ್ತಾಯಿತು. ಕ್ಷಣಗಳಲ್ಲಿ ಮತ್ತೆ ಬೆಳಕು ಮಾಯವಾಯಿತು. ಯೋಗೀಶನ ಒಳಗಡೆ ಇದ್ದ ಪತ್ತೇದಾರ ಎಚ್ಚರವಾದ. ಕೂಡಲೇ ಆ ಬೆಳಕು ಕಾಣಿಸಿದ ಕಡೆ ಜೋರಾಗಿ ನಡೆಯತೊಡಗಿದ. ಅವನು ಅದರ ಹತ್ತಿರ ಹೋದಂತೆ ಅದು ಕೂಡ ದೂರವಾಗುತ್ತಿತ್ತು. ಯೋಗೀಶ ಅದು ಏನು ಅಂತ ಕಂಡು ಹಿಡಿಯಲೇ ಬೇಕು ಅಂತ ಜೋರಾಗಿ ನಡೆಯುತ್ತಿದ್ದವನು, ಓಡತೊಡಗಿದ. ಬೆಳಕು ಕಾಡಿನ ಒಳಗಡೆಯಿಂದ ಪಕ್ಕದಲ್ಲಿದ್ದ ರಸ್ತೆಗೆ ಬಂತು. ಯೋಗೀಶ ಓಡುತ್ತಿದ್ದವನು ನಿಂತು ಸೂಕ್ಷ್ಮವಾಗಿ ಗಮನಿಸಿ ನೋಡಿದ, ಅವನಿಗೆ ಇಬ್ಬರು ಹೋಗುತ್ತಿದ್ದಂತೆ ಕಾಣಿಸಿದರು.
ಯೋಗೀಶನ ಒಳಗಡೆ ಇದ್ದ ಪತ್ತೇದಾರ, ಅವರನ್ನು ಗಂಧ ಕಳ್ಳರೇ ಅಂತ ನಿರ್ಧಾರ ಮಾಡಿತು. ಹೇಗಾದರೂ ಮಾಡಿ ಅವರು ಯಾರು ಅಂತ ಕಂಡು ಹಿಡಿಯಲೇ ಬೇಕು ಅಂತ ಜೋರಾಗಿ ಓಡತೊಡಗಿದ. ಓಡುತ್ತಿದ್ದ ಆ ಇಬ್ಬರಿಗೆ ಇವನು ಓಡಿಬರುತ್ತಿದ್ದನ್ನು ನೋಡಿ ಗಾಭರಿಯಾಯಿತೇನೋ ಅವರು ಮತ್ತೂ ಜೋರಾಗಿ ಓಡತೊಡಗಿದರು. ಆದರೆ ಯೋಗೀಶನ ಓಟದ ಮುಂದೆ ಅವರು ಸೋತರು. ಯೋಗೀಶ ಅವರ ಹತ್ತಿರ ಹೋಗಿಯೇಬಿಟ್ಟ. ಅವರ ಹತ್ತಿರ ಹೋಗಿ ನೋಡಿದರೆ ಅವರಿಬ್ಬರೂ ಹೆಂಗಸರು ಅಂತ ಗೊತ್ತಾಯಿತು. ಅವರಿಬ್ಬರೂ ಯೋಗೀಶ ತಮ್ಮ ಹತ್ತಿರ ಬಂದಿದ್ದು ನೋಡಿ ಹೆದರಿ ಅಲ್ಲಿಯೇ ನಿಂತುಬಿಟ್ಟರು. ಯೋಗೀಶನಿಗೆ ಅಂತೂ ಏನೋ ಸಾಧಿಸಿಬಿಟ್ಟೆ ಅನ್ನುವ ಭಾವನೆ. ಅವರ ಹತ್ತಿರ ಹೋದವನೇ ಅವರ ಮೇಲೆ ತನ್ನ ಹತ್ತಿರ ಇದ್ದ ಟಾರ್ಚ್ನಿಂದ ಬೆಳಕು ಬಿಟ್ಟ, ಅವರ ಕೈಯಲ್ಲಿ ದೊಡ್ಡ ಗೋಣಿ ಚೀಲ ಇತ್ತು. ಅದನ್ನು ನೋಡಿ ಏನನ್ನು ಕದಿಯಲು ಬಂದಿದ್ದು ಅಂತ ಸ್ವಲ್ಪ ಹೆದರಿಸುವಂತೆ ಕೇಳಿದ. ಅವರು ಕೊಟ್ಟ ಉತ್ತರದಿಂದ ಅವನಲ್ಲಿದ್ದ ಪತ್ತೇದಾರ ಸ್ವಲ್ಪ ಗಲಿಬಿಲಿಗೊಂಡ. ಯಾಕೆಂದರೆ ಅವರು ತಮ್ಮ ಮನೆಯಲ್ಲಿದ್ದ ಬೆಕ್ಕನ್ನು ಕಾಡಿನಲ್ಲಿ ಬಿಟ್ಟು ಬರಲು ಬಂದಿದ್ದರು. ಹತ್ತಿರದಲ್ಲೇ ಬಿಟ್ಟರೆ ಮತ್ತೆ ವಾಪಸು ಬರುತ್ತೆ, ರಾತ್ರಿ ಕತ್ತಲಲ್ಲಿ ಬಿಟ್ಟರೆ ವಾಪಸು ಬರುವುದಿಲ್ಲ ಅಂತ ಆ ರಾತ್ರಿ ಕಾಡಿಗೆ ಬೆಕ್ಕನ್ನು ಗೋಣಿಚೀಲದಲ್ಲಿ ಹಾಕಿ ತಂದಿದ್ದರು.
ಯೋಗೀಶ ಅವತ್ತಿನಿಂದ ಪತ್ತೇದಾರಿ ಕೆಲಸ ಮಾಡುತ್ತಿಲ್ಲ.
– ಶ್ರೀನಾಥ್ ಹರದೂರ ಚಿದಂಬರ
ಹಹಹ್ಹ್ಹಹಹಾ. ಚನಾಗಿದೆ. ಎಲ್ಲಿಂದ ಹುಡಕ್ಕೊಂಡು ಓದಿ ಬರಿತಿರಾ?
LikeLike
All are previous experience 😀
LikeLike