
ವಾಸಂತಿ ತನ್ನ ಮಗಳ ಮನೆಯಲ್ಲಿ ವಾಸಿಸಲು ಶುರು ಮಾಡಿ ಆಗಲೇ ಎರಡು ವರುಷಗಳಾಗುತ್ತಾ ಬಂದಿತ್ತು. ವಾಸಂತಿಯ ಯಜಮಾನರು ತೀರಿಕೊಂಡ ಮೇಲೆ, ತನ್ನ ಒಬ್ಬಳೇ ಮಗಳು ತುಂಬ ಒತ್ತಾಯ ಮಾಡಿದಳು ಅಂತ ಮಗಳ ಮನೆಗೆ ಬಂದು ತನ್ನ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದಳು. ವಾಸಂತಿಗೆ ಇನ್ನು ಹದಿನೆಂಟು ತುಂಬುವ ಮೊದಲೇ ಅವರ ಮನೆಯವರು ಮದುವೆ ಮಾಡಿಬಿಟ್ಟಿದ್ದರು. ವಾಸಂತಿಗೆ ೨೦ ವರುಷ ಆಗುವುದರೊಳಗೆ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಳು. ವಾಸಂತಿಗೆ ನಲ್ವತ್ತು ವರುಷ ಆಗಬೇಕಾದರೆ ಅವಳ ಮಗಳು ಮದುವೆ ವಯಸ್ಸಿಗೆ ಬಂದು ಬಿಟ್ಟಿದ್ದಳು. ತಾಯಿ ಮಗಳನ್ನು ಎಲ್ಲರು ಅಕ್ಕ ತಂಗಿ ತರಹ ಇದ್ದೀರಾ ಅಂತ ಅನ್ನುತ್ತಿದ್ದರು. ಮಗಳ ಮದುವೆ ಮಾಡಿಕೊಟ್ಟ ಕೆಲವೇ ವರುಷಗಳಲ್ಲಿ ದುರದೃಷ್ಟವಶಾತ್ ವಾಸಂತಿಯ ಗಂಡ ಹೃಧಯಾಘಾತದಿಂದ ತೀರಿಕೊಂಡು ಬಿಟ್ಟರು. ಆಗ ಒಬ್ಬಳೇ ಇದ್ದ ಅಮ್ಮನಿಗೆ “ಮಗಳು ಅಮ್ಮ ಒಬ್ಬರೇ ಊರಲ್ಲಿ ಇರುವುದು ಬೇಡ, ತನ್ನ ಮಗಳನ್ನು ಡೇ ಕೇರ್ ನಲ್ಲಿ ಕಳುಹಿಸುವ ಬದಲು ನೀನೆ ಬಂದು ನೋಡಿಕೊಳ್ಳಮ್ಮ, ನನಗು ಮನಸ್ಸಿಗೆ ನೆಮ್ಮದಿ, ನಿನ್ನ ಆರೋಗ್ಯದ ಬಗ್ಗೆಯು ನಮಗೆ ಚಿಂತೆ ಇರುವುದಿಲ್ಲ, ನಮ್ಮ ಬಳಿಯೇ ಬಂದು ಇದ್ದು ಬಿಡು” ಅಂತ ಒತ್ತಾಯ ಮಾಡಿ ಕರೆಸಿಕೊಂಡುಬಿಟ್ಟಿದ್ದಳು. ಮಗಳ ಗಂಡ ಸಹಿತ ಕೇಳಿಕೊಂಡಿದ್ದರಿಂದ ಇಲ್ಲ ಎನ್ನಲಾಗದೆ ಮಗಳ ಬಳಿ ಬಂದು ಅವಳ ಜೊತೆಯಲ್ಲಿ ಇದ್ದಳು.
ವಾಸಂತಿಯ ಸ್ನೇಹಿತೆ ಸಿಕ್ಕಾಗೆಲ್ಲ , ಇನ್ನು ನಿನ್ನ ವಯಸ್ಸು ನಲವತ್ತೈದರ ಆಸುಪಾಸು ಅಷ್ಟೇ, ಯಾಕೆ ನೀನು ಬೇರೆ ಸಂಗಾತಿಯನ್ನು ನೋಡಿಕೊಳ್ಳಬಾರದು, ಒಂಟಿಯಾಗಿ ಇನ್ನೆಷ್ಟು ದಿನ, ಅಳಿಯ ಮಗಳು ಅವರ ಕೆಲಸದಲ್ಲಿ ವ್ಯಸ್ತರಾಗಿಬಿಡುತ್ತಾರೆ , ನಿನ್ನ ಮೊಮ್ಮಗಳು ದೊಡ್ಡವಳಾದರೆ ಅವಳು ತನ್ನ ಲೋಕದಲ್ಲಿ ಮುಳುಗಿಬಿಡುತ್ತಾಳೆ, ಆಗ ನೀನು ಮತ್ತೆ ಒಬ್ಬಂಟಿ ಆಗಿ ಬಿಡುತ್ತೀಯ, ನೋಡು ಒಳ್ಳೆಯಾ ಸಂಗಾತಿಯನ್ನು ನಾನು ಹುಡುಕುತ್ತೇನೆ, ಈಗಂತೂ ಸಂಗಾತಿಯನ್ನು ಹುಡುಕಲು ಅನೇಕ ವೆಬ್ಸೈಟ್ ಗಳಿವೆ, ನಾನೇ ನಿನ್ನ ಪ್ರೊಫೈಲ್ ಅದಕ್ಕೆ ಅಪ್ಲೋಡ್ ಮಾಡ್ತೀನಿ, ಮದುವೆ ಗಿದುವೇ ಅಂತ ಜಂಜಾಟ ಇರುವುದಿಲ್ಲ, ಸ್ನೇಹಿತರಾಗೇ ಒಂಟಿತನ ಕಳೆಯಬಹುದು ಅಂತ ಸಮಯ ಸಿಕ್ಕಾಗೆಲ್ಲ ಹೇಳುತ್ತಿದ್ದಳು. ವಾಸಂತಿ ಮಾತ್ರ ” ಬೇಡ ಬಿಡೆ, ನಾನು ಹೀಗೆ ಇದ್ದು ಬಿಡುತ್ತೇನೆ” ಅಂತ ಉತ್ತರ ಕೊಡುತ್ತಿದ್ದಳು.
ಒಂದು ದಿನ ಮಗಳು, ಅಳಿಯ ಮತ್ತು ಮೊಮ್ಮಗಳು ಎಲ್ಲರು ಟ್ರಿಪ್ಗೆ ಅಂತ ಹೊರಗಡೆ ಹೋದರು. ಮೂರು ದಿನ ವಾಸಂತಿ ಒಬ್ಬಳೇ ಮನೆಯಲ್ಲಿ ಇದ್ದಾಗ ಯಾಕೋ ತುಂಬ ಒಂಟಿ ಅಂತ ಅನಿಸಿಬಿಡ್ತು. ಒಂದು ವಾರದ ನಂತರ ಸ್ನೇಹಿತೆಗೆ ಸಂಗಾತಿ ಬಗ್ಗೆ ತನ್ನ ನಿರ್ಧಾರ ಹೇಳಿದಳು. ಸ್ನೇಹಿತೆಗೆ ತುಂಬ ಖುಷಿಯಾಗಿ ಈವತ್ತೇ ನಿನ್ನ ಪ್ರೊಫೈಲ್ ಅಪ್ಲೋಡ್ ಮಾಡ್ತೀನಿ ಅಂತ ಹೇಳಿದಳು. ವಾಸಂತಿಯ ಬಗ್ಗೆ ಎಲ್ಲ ಗೊತ್ತಿದ್ದ ಸ್ನೇಹಿತೆ ಅವಳ ಬಗ್ಗೆ ಎಲ್ಲ ವಿಷ್ಯಗಳನ್ನು ವೆಬ್ಸೈಟ್ ಹಾಕಿ, ಯಾವ ರೀತಿಯ ಸಂಗಾತಿ ಬೇಕು ಅನ್ನುವ ವಿವರ ಹಾಕಿದಳು. ಆದರೆ ಅವಳ ಫೋಟೋ ಹಾಕಲಿಲ್ಲ ಹಾಗು ವಯಸ್ಸನ್ನು ಹತ್ತು ವರುಷ ಕಮ್ಮಿ ಹಾಕಿದಳು. ಅವಳು ವಾಸಂತಿಯ ಮೊಬೈಲ್ ಸಂಖ್ಯೆ ಬದಲು ತನ್ನ ಸಂಖ್ಯೆ ಕೊಟ್ಟಳು. ಆದಾಗಿ ಕೆಲವು ದಿನಗಳ ನಂತರ ಅವಳ ಸ್ನೇಹಿತೆಗೆ ಫೋನ್ ಬಂತು, ಮಾತನಾಡಿದವನು ನನಗೆ ನಿಮ್ಮ ವಿವರ ಇಷ್ಟವಾಗಿದೆ, ನಾನು ನಿಮ್ಮನ್ನು ಭೇಟಿ ಮಾಡಬಹುದಾ ಅಂತ ಕೇಳಿದನು. ಅದಕ್ಕೆ ಸ್ನೇಹಿತೆ ಮೊದಲು ನಿಮ್ಮ ಪ್ರೊಫೈಲ್ ನೋಡಿ ಆಮೇಲೆ ವಿಷಯ ತಿಳಿಸುತ್ತೇನೆ ಅಂತ ಹೇಳಿದಳು. ನಂತರ ಅವಳು ಮತ್ತು ವಾಸಂತಿ ಇಬ್ಬರು ಕೂತು ಅವನ ಪ್ರೊಫೈಲ್ ಚೆಕ್ ಮಾಡಿ ನೋಡಿದರು. ಅಲ್ಲಿ ಅವನ ಫೋಟೋ ಇರಲಿಲ್ಲ, ವಿವರ ಮಾತ್ರ ಇತ್ತು. ಅವನು ಕೊಟ್ಟ ವಿವರ ವಾಸಂತಿಯ ನೀರಿಕ್ಷೆಗೆ ತಕ್ಕಂತೆ ಮ್ಯಾಚ್ ಆಗುತ್ತಿತ್ತು. ವಯಸ್ಸು ಕಮ್ಮಿ ಹಾಕಿದ್ದನ್ನು ವಾಸಂತಿ ನೋಡಿ ಸ್ನೇಹಿತೆಗೆ ” ಯಾಕೆ ತಪ್ಪು ಹಾಕಿದ್ದೀಯಾ ? ತಪ್ಪಲ್ವಾ ?” ಅಂತ ಕೇಳಿದ್ದಕ್ಕೆ ಸ್ನೇಹಿತೆ ” ನಿನ್ನ ನೋಡಿದರೆ ಯಾರಿಗೂ ಗೊತ್ತಾಗಲ್ಲ ಬಿಡೆ, ಎಲ್ಲರು ಸುಳ್ಳೇ ಡೀಟೇಲ್ಸ್ ಕೊಡೋದು ” ಅಂತ ಸುಮ್ಮನಾಗಿಸಿದಳು. ಮೊದಲು ಮೀಟ್ ಮಾಡಿ , ಅವನ ಜೊತೆ ಮಾತನಾಡಿ ಕೊನೆಯಲ್ಲಿ ನಿರ್ಧಾರ ಮಾಡಿದರಾಯಿತು ಅಂತ ಅಂದುಕೊಂಡರು.
ಸ್ನೇಹಿತೆ ಅವನಿಗೆ ಯಾವ ಹೋಟೆಲ್ನಲ್ಲಿ ಭೇಟಿ ಮಾಡಬಹುದು ಅಂತ ಮೆಸೇಜ್ ಮಾಡಿದಳು. ಅವನು ಓಕೆ, ಆ ಹೋಟೆಲ್ಲಿನ ಟೇಬಲ್ ನಾನೇ ಬುಕ್ ಮಾಡ್ತೀನಿ ಅಂದ. ಭೇಟಿಯ ದಿನದಂದು ವಾಸಂತಿ ರೆಡಿ ಆಗಿ, ನಿಗದಿ ಯಾಗಿದ್ದ ಸಮಯಕ್ಕೆ ಸರಿಯಾಗಿ ಬಂದು ಬುಕ್ ಆಗಿದ್ದ ಟೇಬಲ್ ನಲ್ಲಿ ಕುಳಿತಳು. ಅವಳು ಹೋಟೆಲಿನ ಬಾಗಿಲಿಗೆ ಬೆನ್ನು ಮಾಡಿ ಕುಳಿತ್ತಿದ್ದಳು. ವಾಸಂತಿ ಕುಳಿತ ಎರಡೇ ನಿಮಿಷಕ್ಕೆ ಅವಳ ಹಿಂದೆ ಯಾರೋ ಬಂದು ನಿಂತ ಹಾಗೆ ಆಯಿತು. ವಾಸಂತಿಯ ಎದೆ ಬಡಿತ ಒಮ್ಮೆಲೇ ಜಾಸ್ತಿ ಆಯಿತು. ಹಿಂದಿನಿಂದ ಅವನು ಅವಳ ಎದುರು ಬಂದವನೇ ” ಹಲೋ” ಅಂತ ಹೇಳಿ ಕೈಗೆ ಹೂವನ್ನು ಕೊಡಲು ಬಂದವನು ಹಾಗೆ ನಿಲ್ಲಿಸಿ ಅವಾಕ್ಕಾಗಿ ಮುಜುಗರ, ಅವಮಾನ ಆದಂತೆ ಕುಳಿತುಬಿಟ್ಟ. ವಾಸಂತಿ ಅವನು ಯಾರು ಅಂತ ನೋಡಿ ಅವಳ ಮನಸ್ಸಿಗೆ ಆದ ಆಘಾತ ಅಷ್ಟಿಷ್ಟಲ್ಲ.
ಅವನು ವಾಸಂತಿಯ ಅಳಿಯನಾಗಿದ್ದ.
– ಶ್ರೀನಾಥ್ ಹರದೂರ ಚಿದಂಬರ