ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ
ಕಥೆ: ಶ್ರೀನಾಥ್ ಹರದೂರ ಚಿದಂಬರ

ಅಂಜಲಿ ಅವತ್ತು ಬೆಳಗಿನ ಜಾವ ಮೂರೂವರೆಗೆ ಹೊರಡುವ ವಿಮಾನದಲ್ಲಿ ದುಬೈಗೆ, ತನ್ನ ಗಂಡನ ಹತ್ತಿರ ಹೊರಟ್ಟಿದ್ದಳು. ಅಂಜಲಿ ಮತ್ತು ಅವಳ ಗಂಡ ಸುಮಿತ್ ಮದುವೆ ಆದ ಮೇಲೆ ದುಬೈಗೆ ಹೋಗಿ ನೆಲೆಸಿದ್ದರು. ಹೋಗಿ ಎರಡು ವರುಷಗಳ ನಂತರ ಅಂಜಲಿ ಆರು ತಿಂಗಳ ಗರ್ಭಿಣಿ ಆಗಿದ್ದಾಗ, ಡೆಲಿವರಿಗೆ ಅಂತ ಭಾರತಕ್ಕೆ ಬಂದಿದ್ದಳು. ಡೆಲಿವರಿ ಆದ ಮೇಲೆ , ಮೂರು ತಿಂಗಳು ಅಮ್ಮನ ಬಳಿ ಬಾಣಂತನ ಮಾಡಿಸಿಕೊಂಡು ಮತ್ತೆ ವಾಪಸು ಸುಮಿತನ ಹತ್ತಿರ ಮಗುವನ್ನು ಕರೆದುಕೊಂಡು ಹೊರಟ್ಟಿದ್ದಳು. ಅಂಜಲಿಗೆ ಆ ಪುಟ್ಟ ಮಗುವನ್ನು ಹೇಗಪ್ಪಾ ಒಬ್ಬಳೇ ಕರೆದುಕೊಂಡು ಹೋಗುವುದು ಅಂತ ಬಹಳ ಆತಂಕವಾಗಿತ್ತು. ವಿಮಾನದಲ್ಲಿ ಅಳಲು ಶುರು ಮಾಡಿದರೆ ಹೇಗೆ ಸಮಾಧಾನ ಮಾಡುವುದು, ಏನಾದರೂ ಅರೋಗ್ಯ ಕೈ ಕೊಟ್ಟರೆ ಏನು ಮಾಡುವುದು ಅಂತ ಬೇಡದ ಯೋಚನೆಗಳು ಬಂದು ಸ್ವಲ್ಪ ಉದ್ವೇಗಕ್ಕೆ ಒಳಗಾಗಿದ್ದಳು. ವಿಮಾನ ಮೇಲೆ ಏರಬೇಕಾದರೆ ಮತ್ತು ಇಳಿಯಬೇಕಾದರೆ ಮಗುವಿಗೆ ಹಾಲು ಕುಡಿಸುತ್ತಾ ಇರು, ಇಲ್ಲದಿದ್ದರೆ ಅದಕ್ಕೆ ಕಿವಿ ನೋವು ಬಂದು ಅಳಬಹುದು, ಆದಷ್ಟು ಮಲಗಿಸಲು ಪ್ರಯತ್ನ ಪಡು, ಗಗನ ಸಖಿಯರು ಸಹಾಯ ಮಾಡುತ್ತಾರೆ, ನೀನೇನು ಅಷ್ಟು ಭಯಪಡಬೇಕಾಗಿಲ್ಲ… ಹೀಗೆ ವಿಮಾನ ನಿಲ್ದಾಣದೊಳಗೆ ಹೋಗುವವರೆಗೂ ಅನೇಕ ಸಲಹೆಗಳು ಎಲ್ಲರಿಂದ ಬರುತ್ತಿದ್ದವು. ಅಂಜಲಿ ವಿಮಾನ ನಿಲ್ದಾಣಕ್ಕೆ ಅವಳನ್ನು ಬಿಡಲು ಬಂದಿದ್ದ ಅಪ್ಪ ಅಮ್ಮನಿಗೆ ಹೋಗಿ ಬರುತ್ತೇನೆ ಅಂತ ಹೇಳಿ ನಿಲ್ದಾಣದೊಳಗೆ ಬಂದಳು. ನಂತರ ಬೋರ್ಡಿಂಗ್ ಪಾಸ್ ತೆಗೆದುಕೊಂಡು, ಭದ್ರತಾ ತಪಾಸಣೆ ಮುಗಿಸಿ, ವಿಮಾನದೊಳಗೆ ಹೋಗುವ ಬಾಗಿಲ ಬಳಿ ಬಂದು ಕೂತು, ಅಪ್ಪ ಅಮ್ಮನಿಗೆ ಫೋನ್ ಮಾಡಿ , ನೀವೇನು ಯೋಚನೆ ಮಾಡಬೇಡಿ , ಅಲ್ಲಿಗೆ ತಲುಪಿ ನಿಮಗೆ ಫೋನ್ ಮಾಡುತ್ತೇನೆ ಅಂತ ತಿಳಿಸಿದಳು.
ಸ್ವಲ್ಪ ಹೊತ್ತಿಗೆ ಮಗುವಿನೊಟ್ಟಿಗೆ ವಿಮಾನದೊಳಗೆ ಹೋಗಿ ಕುಳಿತಳು. ವಿಮಾನ ಹೊರಡುವಾಗ ಮಗುವಿಗೆ ಹಾಲು ಕುಡಿಸುತ್ತಾ ಇದ್ದಿದ್ದರಿಂದ ಮಗು ಚೂರು ಅಳಲಿಲ್ಲ. ಅಂಜಲಿಗೆ ಸ್ವಲ್ಪ ಸಮಾಧಾನವಾಗಿ, ಇದ್ದ ಆತಂಕ ದೂರವಾಯಿತು. ಆದರೆ ಮನಸ್ಸಿನಲ್ಲಿದ್ದ ಭಯ ಕಮ್ಮಿ ಆಗಿರಲಿಲ್ಲ. ಹಿಂದಿನ ತಿಂಗಳಷ್ಟೇ ಮಲೇಷ್ಯಾ ಏರ್ಲೈನ್ ಅಪಘಾತಕ್ಕೀಡಾಗಿ ಒಬ್ಬರು ಬದುಕುಳಿದಿರಲಿಲ್ಲ. ಎಲ್ಲೋ ಮನಸ್ಸಿನ ಮೂಲೆಯಲ್ಲಿ ಆ ವಿಷಯ ಬೇರೆ ಕೊರೆಯುತ್ತಿತ್ತು. ದೇವರೇ ಏನು ಆಗದೆ ಸುರಕ್ಷಿತವಾಗಿ ಸೇರುವಂತೆ ಮಾಡು ಕಣ್ಣು ಮುಚ್ಚಿ ದೇವರನ್ನು ನೆನೆಯುತ್ತ ಕುಳಿತಳು.
ವಿಮಾನ ಭಾರತ ಬಿಟ್ಟು ಆಗಲೇ ೨ ಗಂಟೆಗಳಾಗಿತ್ತು. ಅಂಜಲಿ ಕಿಟಕಿಯನ್ನು ತೆಗೆದು ಹೊರಗಡೆ ನೋಡಿದಳು. ಹೊರಗಡೆ ಏನು ಕಾಣಿಸಲಿಲ್ಲ ಅಷ್ಟು ಕಗ್ಗತ್ತಲಿತ್ತು. ವಿಮಾನದ ರೆಕ್ಕೆಯ ಮೇಲಿನ ಕೆಂಪು ದೀಪ ಆಗಾಗ ಮಿಣುಕು ಮಿಣುಕು ಅಂತ ಹೊಳೆಯುವುದು ಬಿಟ್ಟರೆ ಏನು ಕಾಣಿಸುತ್ತಿರಲಿಲ್ಲ, ಆಗಾಗ ದೂರದಲ್ಲಿ ಎಲ್ಲೋ ಮಿಂಚಿನ ಬೆಳಕು ಕಾಣಿಸುತ್ತಿತ್ತು. ಅವಳು ಕಿಟಕಿ ಮುಚ್ಚಿ ಮತ್ತೆ ಕಣ್ಣು ಮುಚ್ಚಿದಳು. ಆಗ ಇದ್ದಕ್ಕಿದ್ದಂತೆ ವಿಮಾನ ಜೋರಾಗಿ ಅಲುಗಾಡತೊಡಗಿತು. ಪೈಲಟ್ ಹೊರಗಡೆ ವಾತಾವರಣ ಚೆನ್ನಾಗಿಲ್ಲ, ಎಲ್ಲರು ಕುಳಿತುಕೊಳ್ಳ ಬೇಕು ಹಾಗು ಸೀಟ್ ಬೆಲ್ಟ್ ಹಾಕಿಕೊಳ್ಳಿ, ಯಾರು ಟಾಯ್ಲೆಟ್ ಉಪಯೋಗಿಸಬೇಡಿ ಅಂದು ಅನೌನ್ಸ್ ಮಾಡಿದ. ಕೆಲವರು ಸ್ವಲ್ಪ ಆತಂಕಕ್ಕೆ ಈಡಾದರು, ವಿಮಾನದಲ್ಲಿ ಯಾವಾಗಲು ಓಡಾಡುವವರು ಇವೆಲ್ಲ ಸಾಮಾನ್ಯ ಎಂಬಂತೆ ಆರಾಮಾಗಿದ್ದರು.
೫ ನಿಮಿಷಗಳ ನಂತರ ಅಲುಗಾಟ ವಿಪರೀತ ಜೋರಾಯಿತು. ಇದ್ದಕ್ಕಿದ್ದಂತೆ ಭಾರಿ ಸದ್ದು ಕೇಳಿಸಿತು. ಪೈಲೆಟ್ ಮತ್ತೆ ಅನೌನ್ಸ್ ಮಾಡಿದ, ವಿಮಾನದ ಇಂಜಿನ್ನಲ್ಲಿ ತೊಂದರೆ ಕಾಣಿಸಿದೆ, ಹಾಗಾಗಿ ನಾವು ತುರ್ತಾಗಿ ಲ್ಯಾಂಡ್ ಮಾಡಬೇಕಾಗಿದೆ, ಉಸಿರಾಟದ ತೊಂದರೆ ಆದರೆ ಆಕ್ಸಿಜನ್ ಮಾಸ್ಕ್ ಉಪಯೋಗಿಸಿ ಅಂತ ಹೇಳುತ್ತಿರುವಾಗಲೇ, ತಲೆಯ ಮೇಲಿಂದ ಆಕ್ಸಿಜನ್ ಮಾಸ್ಕ್ ಕೆಳಕ್ಕೆ ಬಂದಿತು. ಆಗ ಒಳಗಿದ್ದ ಎಲ್ಲರಿಗು ಪರಿಸ್ಥಿತಿಯ ಅರಿವಾಗಿ ಭಯದಿಂದ ನಡುಗತೊಡಗಿದರು, ಎಲ್ಲರು ಮಾಸ್ಕ್ ಹಾಕಿಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಬಾರಿ ಸದ್ದು ಕೇಳಿತು. ಅಂಜಲಿ ಹೆದರಿ, ಮಗುವನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಳು. ವಿಮಾನದ ಒಳಗೆ ನಿಧಾನವಾಗಿ ಹೊಗೆ ತುಂಬಿಕೊಂಡು ಯಾರಿಗೆ ಯಾರು ಕಾಣಸಿದ ಹಾಗೆ ಆಯಿತು. ಪ್ರತಿಯೊಬ್ಬರಿಗೆ ಇನ್ನು ನಾವು ಯಾರು ಬದುಕಲ್ಲ ಅಂತ ಅನಿಸತೊಡಗಿತು. ಹೆಂಗಸರು, ಮಕ್ಕಳು ಭಯದಿಂದ ಜೋರಾಗಿ ಕೂಗತೊಡಗಿದರು. ಅಂಜಲಿ ಭಯಕ್ಕೆ ಮಗುವನ್ನು ಗಟ್ಟಿಯಾಗಿ ಹಿಡಿಕೊಂಡು ಕಣ್ಣುಮುಚ್ಚಿ ಕುಳಿತ್ತಿದ್ದಳು. ಅಷ್ಟರಲ್ಲಿ ಪೈಲಟ್ ” ಇನ್ನು ನಾಲಕ್ಕು ನಿಮಿಷಗಳಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡುತ್ತಿದ್ದೇವೆ, ಪ್ರತಿಯೊಬ್ಬರು ಬಗ್ಗಿ ಮುಂದಿನ ಸೀಟಿಗೆ ತಲೆ ಇಟ್ಟು ಕುಳಿತುಕೊಳ್ಳಿ ” ಎಂದು ಅನೌನ್ಸ್ ಮಾಡಿದ. ಅಂಜಲಿ ಮನಸ್ಸಿನಲ್ಲಿ ” ಸುಮಿತ್ ನಿನ್ನ ನೋಡದೆ ನಾನು ಸತ್ತೇ ಹೋಗುತ್ತೀನೋ ಏನೋ, ನನ್ನ ಪಾಪುವನ್ನು ಕಾಪಾಡು ದೇವರೇ ಎಂದು ಬೇಡಿಕೊಳ್ಳುತ್ತ, ಮಗುವನ್ನು ಮುದ್ದು ಮಾಡಿ, ಮುಂದಿನ ಸೀಟಿಗೆ ತಲೆ ಒತ್ತಿ ಇಟ್ಟು ಬಗ್ಗಿ ಕುಳಿತಳು. ವಿಮಾನ ರನ್ ವೇಗೆ ಲ್ಯಾಂಡಿಂಗ್ ಆಗುತ್ತಿದ್ದಂತೆ ವಿಮಾನ ಜೋರಾಗಿ ಎತ್ತಿ ಕುಟ್ಟಿದಂತೆ ಆಗಿ, ಅಂಜಲಿಯಾ ಸೀಟ್ ಬೆಲ್ಟ್ ಕಿತ್ತು ಮೇಲೆ ಹಾರಿ ಕೆಳಕ್ಕೆ ಬಿದ್ದಳು. ಬಿದ್ದ ಹೊಡೆತಕ್ಕೆ ಮಗು ಕೈಯಿಂದ ಜಾರಿ ಹೋಯಿತು. ಅಂಜಲಿ “ಪಾಪು ” ಎಂದು ಜೋರಾಗಿ ಕೂಗಿ ತನ್ನ ಕೈಯನ್ನು ಪಾಪುವನ್ನು ಹಿಡಿಯಲು ಮುಂದೆ ಮಾಡಿದಳು. ಆದರೆ ಪಾಪು ಕೈ ತಪ್ಪಿ ಜಾರಿ ಹೊಗೆಯಲ್ಲಿ ಕಾಣದಾಯಿತು.
ಆಗ ಯಾರೋ ” ಮ್ಯಾಡಮ್” ಅಂತ ಕರೆದು ಅಂಜಲಿಯ ಭುಜ ಹಿಡಿದು ಅಲ್ಲಾಡಿಸಿದರು. ಗಗನ ಸಖಿ ನಿದ್ದೆಯಲ್ಲಿ ಜೋರಾಗಿ ಕೂಗಿದ್ದ ಅಂಜಲಿಯನ್ನು ಎಚ್ಚರ ಮಾಡಿದ್ದಳು. ಕೆಟ್ಟ ಕನಸಿಗೆ ಹೆದರಿ, ಅಂಜಲಿ ಬೆವೆತುಹೋಗಿದ್ದಳು. ದೇವರ ನೆನೆಯುತ್ತ ಕಣ್ಣು ಮುಚ್ಚಿದ ಕೂಡಲೇ ಅಂಜಲಿ ನಿದ್ದೆಗೆ ಜಾರಿದ್ದಳು. ಅಂಜಲಿಗೆ ಅವಳ ಮನದ ಮೂಲೆಯಲ್ಲಿದ್ದ ಭಯ ಕೆಟ್ಟ ಕನಸಾಗಿ ಬಿದ್ದಿತ್ತು.
ಅಂಜಲಿ ಪಾಪುವಿನ ಕಡೆ ನೋಡಿದಳು. ಕೈಲಿದ್ದ ಪಾಪು ಗಾಢ ನಿದ್ರೆಯಲ್ಲಿತ್ತು.