
ರಾಜೀವನ ಹೆಂಡತಿ ಉಮಾ ಒಂದು ದಿನದ ಮಟ್ಟಿಗೆ ಒಬ್ಬಳೇ ಯಾರದೋ ನೆಂಟರ ಮದುವೆಗೆ ಊರಿಗೆ ಹೋಗಿದ್ದಳು. ಬೆಳೆಗ್ಗೆ ಊರಿಗೆ ಹೋಗುವ ಮುಂಚೆ ರಾಜೀವನಿಗೆ ತಿಂಡಿ ಮತ್ತು ಮದ್ಯಾಹ್ನಕ್ಕೆ ಊಟದ ಡಬ್ಬಿ ಕೂಡ ತಯಾರು ಮಾಡಿಟ್ಟು ಹೋಗಿದ್ದಳು. ಹೇಗಿದ್ದರೂ ಸಂಜೆ ಮನೆಗೆ ವಾಪಸು ಬರುತ್ತೀನಿ, ಬಂದ ಮೇಲೆ ಅನ್ನ ಒಂದು ಮಾಡಿದರಾಯಿತು, ಮಾಡಿದ ಸಾಂಬಾರು ಹೇಗೂ ಇರತ್ತಲ್ಲ, ಅಂತ ಅವಳ ಯೋಜನೆಯಾಗಿತ್ತು. ರಾಜೀವ ಅವತ್ತಿನ ಕೆಲಸ ಮುಗಿಸಿ, ಸಂಜೆ ಮನೆಗೆ ಬಂದು ಕೈ ಕಾಲು ತೊಳೆದು ಟಿವಿ ನೋಡುತ್ತಾ ಕುಳಿತ. ರಾಜೀವ ಮದ್ಯಾಹ್ನ ಬೇಗ ಊಟ ಮಾಡಿದ್ದರಿಂದ ತಿಂದಿದ್ದೆಲ್ಲ ಕರಗಿ ಹಸಿವಾಗಿ ಹೊಟ್ಟೆ ಚುರುಗುಡುತ್ತಿತ್ತು. ತಿಂಡಿ ಏನಾದರೂ ಇದೆಯಾ ಅಂತ ಅಡುಗೆ ಮನೆಗೆ ಹೋಗಿ ನೋಡಿದ, ಆದರೆ ಅಲ್ಲಿ ತಿನ್ನಲು ಏನು ಇರಲಿಲ್ಲ. ಅವನಿಗೆ ಮತ್ತೆ ಅನ್ನ ಸಾಂಬಾರ್ ತಿನ್ನಲು ಮನಸಾಗಲಿಲ್ಲ. ಮತ್ತೆ ಅಡುಗೆ ಮನೆಯಿಂದ ವಾಪಸು ಬಂದು ಟಿವಿ ಮುಂದೆ ಕುಳಿತ.
ಹೊರಗಡೆ ಮಳೆ ಬೇರೆ ಶುರುವಾಗಿತ್ತು. ಟಿವಿ ಮುಂದೆ ಕೂತ ರಾಜೀವನಿಗೆ ಯಾಕೋ ಹಸಿವು ತಡೆಯಾಗಲಿಲ್ಲ. ಹೊರಗಡೆ ಹೋಟೆಲ್ಗೆ ಹೋಗೋಣ ಅಂದರೆ ಮಳೆ ಬೇರೆ, ಏನಪ್ಪಾ ಮಾಡುವುದು ಅಂತ ಮತ್ತೆ ಅಡುಗೆ ಮನೆಗೆ ಹೋದ. ಅಡುಗೆ ಮನೆ ಪೂರ್ತಿ ಹುಡುಕಿದರೂ ತಿನ್ನಲು ಏನು ಸಿಗಲಿಲ್ಲ. ಅಲ್ಲೇ ಪಕ್ಕದಲ್ಲಿದ್ದ ರವೆ ಕಾಣಿಸಿ, ಉಪ್ಪಿಟ್ಟು ಮಾಡಿಕೊಂಡರೆ ಹೇಗೆ ಅಂತ ಯೋಚನೆ ಮಾಡಿ, ತಡ ಮಾಡದೆ ಉಪ್ಪಿಟ್ಟು ಮಾಡಲು ಶುರು ಹಚ್ಚಿಕೊಂಡ. ಯಾವತ್ತೂ ಅಡುಗೆ ಮನೆಗೆ ಕಾಲಿಡದ ರಾಜೀವ ಉಪ್ಪಿಟ್ಟು ಮಾಡಲು ಹೊರಟ್ಟಿದ್ದ.
ಮೊದಲು ರಾಜೀವ ತಾನು ಎಷ್ಟು ಉಪ್ಪಿಟ್ಟು ತಿನ್ನಬೇಕೋ ಅಷ್ಟು ರವೆ ತೆಗೆದುಕೊಂಡ. ಈರುಳ್ಳಿ, ಮೆಣಸಿನಕಾಯಿ, ಮತ್ತು ಟೊಮ್ಯಾಟೋ ಹೆಚ್ಚಿಕೊಂಡ. ದೊಡ್ಡ ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ ಹಾಕಿದ. ಉಪ್ಪಿಟ್ಟಿಗೆ ಜಾಸ್ತಿ ಎಣ್ಣೆ ಹಾಕಿದರೆ ಉಪ್ಪಿಟ್ಟು ತುಂಬಾ ಚೆನ್ನಾಗಿ ಆಗುತ್ತೆ ಅಂತ ಯಾರೋ ಹೇಳಿದ್ದು ನೆನಪಾಗಿ ಮತ್ತಷ್ಟು ಎಣ್ಣೆ ಹಾಕಿದ. ಮುಂದೆ ಒಗ್ಗರಣೆಗೆ ಬೇರೆ ಏನು ಹಾಕಬೇಕು ಅಂತ ಗೊತ್ತಾಗಲಿಲ್ಲ. ಸಾಸಿವೆ ಚಟ ಪಟ ಅನ್ನುವಾಗ ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಮತ್ತು ಟೊಮ್ಯಾಟೋ ವನ್ನು ಅದಕ್ಕೆ ಹಾಕಿದ. ಐದು ನಿಮಿಷ ಹುರಿದು ಅದಕ್ಕೆ ತೆಗೆದುಕೊಂಡಿದ್ದ ರವೆಯಾ ಮೂರರಷ್ಟು ನೀರು ಹಾಕಿದ. ನೀರು ಕುದಿಯುವಾಗ ಅದಕ್ಕೆ ರವೆ ಹಾಕಿ, ಸ್ವಲ್ಪ ಉಪ್ಪು ಹಾಕಿ ತಿರುವತೊಡಗಿದ. ನೀರು ಸಾಕಾಗಲ್ಲ ಅಂತ ಮತ್ತೆ ನೀರು ಹಾಕಿದ, ಸ್ವಲ್ಪ ಹೊತ್ತಿಗೆ ರವೆ ಬೆಂದು ಅರಳಿದಾಗ ಹಾಕಿದ ನೀರು ಸಾಕಾಗದೆ, ಮತ್ತೆ ನೀರು ಹಾಕಿದ. ನೋಡ ನೋಡುತ್ತಲೇ ಆ ದೊಡ್ಡ ಪಾತ್ರೆಯ ಅರ್ಧದಷ್ಟು ಉಪ್ಪಿಟ್ಟು ಆಗಿತ್ತು. ಸ್ವಲ್ಪ ರುಚಿ ನೋಡೋಣ ಅಂತ ತಿಂದರೆ ಹಾಕಿದ ಉಪ್ಪು ಕಮ್ಮಿಯಾಗಿತ್ತು. ಮತ್ತೆ ನೀರು ಸುರಿದು ಅದಕ್ಕೆ ಸ್ವಲ್ಪ ಉಪ್ಪು ಹಾಕಿ ತಿರುಗಿಸತೊಡಗಿದ. ನೀರು ಪೂರ್ತಿ ಬತ್ತಿ ಹೋಗುವ ತನಕ ತಿರುಗಿಸಿದ. ಆಮೇಲೆ ಸ್ಟವ್ ಆಫ್ ಮಾಡಿ ಪಾತ್ರೆಯನ್ನು ಮುಚ್ಚಿ ಹಾಗೆ ಸ್ವಲ್ಪ ಹೊತ್ತು ಬಿಟ್ಟ.
ಐದು ನಿಮಿಷ ಆದಮೇಲೆ ಉಪ್ಪಿಟ್ಟು ತಟ್ಟೆಗೆ ಹಾಕಿಕೊಂಡು ತಿನ್ನಲು ಶುರು ಮಾಡಿದ. ಉಪ್ಪಿಟ್ಟಿನ ರುಚಿ ಅತ್ಯಂತ ಕೆಟ್ಟದಾಗಿತ್ತು. ವಿಚಿತ್ರ ವಾಸನೆ ಬೇರೆ ಬರುತ್ತಿತ್ತು. ಫೆವಿಕಾಲ್ ಅಂಟಿದ ಹಾಗೆ ಅಂಟುತ್ತಿತ್ತು. ( ನೆನಪಿರಲಿ ಅವನು ರವೆ ಹುರಿದಿರಲಿಲ್ಲ) ಹಸಿವು ಬೇರೆ, ಮಾಡಿದ್ದು ಹಾಗೆ ಇಟ್ಟರೆ ಹೆಂಡತಿ ಹತ್ತಿರ ಬೈಗುಳ ಕೇಳಬೇಕು ಅಂತ ಹಂಗೋ ಹಿಂಗೋ ಮಾಡಿ ಒಂದು ತಟ್ಟೆ ಪೂರ್ತಿ ಮಾಡಿದ ಉಪ್ಪಿಟ್ಟು ತಿಂದ. ವಾಂತಿ ಬರುವ ಹಾಗೆ ಆಗಿದ್ದರಿಂದ ಮತ್ತೆ ಹಾಕಿ ಕೊಳ್ಳದೆ ಹಾಗೆ ಎದ್ದ.
ಒಂದು ಗಂಟೆ ಕಳೆಯುವಷ್ಟರಲ್ಲಿ ಮನೆಯ ಬೆಲ್ ಆಯಿತು. ಹೋಗಿ ಬಾಗಿಲು ತೆಗೆದ. ಅವನ ಹೆಂಡತಿ ಉಮಾ ಊರಿನಿಂದ ವಾಪಸು ಬಂದಿದ್ದಳು. ಒಳಗಡೆ ಬರುತ್ತಿದ್ದಂತೆ ” ಏನ್ರಿ ಇದು, ಇಷ್ಟು ಕೆಟ್ಟ ವಾಸನೆ ಬರುತ್ತಿದೆ, ಅಡುಗೆ ಮನೆಯಲ್ಲಿ ಏನಾದ್ರು ಸುಟ್ಟೀರಾ “ಅಂತ ಕೇಳುತ್ತ ಸೀದಾ ಅಡುಗೆ ಮನೆಗೆ ಹೋಗಿ ನೋಡಿದಳು. ಅಲ್ಲಿನ ಚಿತ್ರಣ ನೋಡುತ್ತಿದ್ದಂತೆ ಏನು ನಡೆದಿರಬಹುದೆಂದು ಅವಳಿಗೆ ಅರಿವಾಯಿತು. ರಾಜೀವ ಉಮಾಳಿಗೆ ” ಉಪ್ಪಿಟ್ಟು ಮಾಡಿದ್ದೆ ಕಣೆ” ಅಂತ ಹೇಳಿದ. ಉಮಾಳಿಗೆ ದೊಡ್ಡ ಪಾತ್ರೆಯಲ್ಲಿ ಅವನು ಮಾಡಿಟ್ಟಿದ್ದ ಅಷ್ಟು ಉಪ್ಪಿಟ್ಟನ್ನು ನೋಡಿ ” ಯಾವನ್ರಿ ತಿಂತಾರೆ ಎಷ್ಟು ಉಪ್ಪಿಟ್ಟನ್ನ” ಅಂತ ಕೇಳುವುದಕ್ಕೂ, ರಾಜೀವ ತನ್ನ ಹೊಟ್ಟೆ ಹಿಡಿದುಕೊಂಡು ಟಾಯ್ಲೆಟ್ ಗೆ ಓಡುವುದಕ್ಕೆ ಸರಿಯಾಯಿತು. ಉಮಾ ಉಪ್ಪಿಟ್ಟನ್ನು ಮೂಸಿ ನೋಡಿದಳು, ಅದು ಯಾಕೆ ಅಷ್ಟು ವಾಸನೆ ಅಂತ ಅವಳಿಗೆ ಗೊತ್ತಾಗಿ ಜೋರಾಗಿ ನಗಾಡತೊಡಗಿದಳು.
ರಾಜೀವ ಉಪ್ಪಿಟ್ಟಿಗೆ ಹಾಕಿದ್ದು ಹರಳೆಣ್ಣೆ!!
– ಶ್ರೀನಾಥ್ ಹರದೂರ ಚಿದಂಬರ
ಚಿತ್ರ ಕೃಪೆ: ಗೂಗಲ್
😂😂😂 ನಿಮ್ದೇ ಕಥೆ ನಾ ಇದು??
LikeLike
nandu mattu nammannana kathe…
LikeLike
ಉಪ್ಪಿಟ್ಟಿನ ಉಸಾಬರಿ ಸರಿಯಾಗಿ ಇದೆ…
LikeLike
Haha 😆.. thank you 🙏
LikeLike