ಹರ್ಷ ಹುಟ್ಟಿ ಬೆಳೆದಿದ್ದೆಲ್ಲ ನಗರ ಪ್ರದೇಶದಲ್ಲೇ ಆಗಿದ್ದರಿಂದ ಅವನಿಗೆ ಹಳ್ಳಿಯ ಜೀವನ ಶೈಲಿ ಬಗ್ಗೆ ಅಷ್ಟಾಗಿ ಅರಿವಿರಲಿಲ್ಲ. ಯಾವಾಗಲಾದರೂ ಅಪ್ಪ ಅಮ್ಮನ ಜೊತೆಗೆ ಮದುವೆ ಅಥವಾ ಗೃಹಪ್ರವೇಶ ಅಂತ ಹಳ್ಳಿಗೆ ಹೋದರು, ಬೆಳಿಗ್ಗೆ ಹೋಗಿ ಸಂಜೆ ಅಲ್ಲಿಂದ ಹೊರಟು ಬರುತ್ತಿದ್ದ. ಹರ್ಷ ಯಾವತ್ತೂ ಹಳ್ಳಿಗಳಲ್ಲಿ ಒಂದೆರಡು ದಿವಸ ಕೂಡ ಉಳಿದುಕೊಂಡಿರಲಿಲ್ಲ. ಒಂದು ದಿನ ಹಳ್ಳಿಯಲ್ಲಿದ್ದ ಅವನ ದೊಡ್ಡಪ್ಪನ ಮಗಳ ಮದುವೆ ನಿಶ್ಚಯ ಆಯಿತು. ದೊಡ್ಡಪ್ಪ ಮದುವೆಯನ್ನು ತಮ್ಮ ಹಳ್ಳಿಯ ಮನೆಯಲ್ಲಿ ಮಾಡುವುದು ಅಂತ ತೀರ್ಮಾನ ಮಾಡಿದ್ದರು. ಹಾಗಾಗಿ ಮದುವೆಗೆ ಮೂರು ದಿವಸ ಮುಂಚೆನೇ ಬರಬೇಕು, ಅಂತ ದೊಡ್ಡಪ್ಪ ಹರ್ಷನ ಅಪ್ಪನಿಗೆ ತಾಕೀತು ಮಾಡಿದ್ದರು. ಹರ್ಷನ ಅಪ್ಪ ಕೂಡ ಹಳ್ಳಿಗೆ ಹೋಗಿ ಉಳಿಯದೆ ಬಹಳ ವರುಷಗಳು ಆಗಿದ್ದರಿಂದ, ಒಂದು ವಾರ ಕಚೇರಿಗೆ ರಜಾ ಹಾಕಿ, ಊರಿಗೆ ಹೋಗಿ ಮದುವೆ ಮುಗಿಸಿಕೊಂಡು ಬರುವುದು ಅಂತ ಯೋಜನೆ ಹಾಕಿದರು. ಹರ್ಷನಿಗೂ ಕಾಲೇಜಿಗೆ ರಜಾ ಇದ್ದುದ್ದರಿಂದ ಒಂದು ಟ್ರಿಪ್ ಆಗುತ್ತೆ ಬಿಡು ಅಂತ ಮನಸ್ಸಿನಲ್ಲಿ ಅಂದುಕೊಂಡು ಹೊರಡಲು ತಯಾರಾದ. ದೊಡ್ಡಪ್ಪನ ಮನೆ ತೋಟದ ಮಧ್ಯೆ ಇದೆ ಹಾಗು ತೋಟದ ಸುತ್ತ ಸಿಕ್ಕಾಪಟ್ಟೆ ಕಾಡು ಇದೆ, ಬೆಟ್ಟಗಳಿವೆ, ನದಿ ಇದೆ ಎಂತೆಲ್ಲ ಕೇಳಿದ್ದ. ಯಾವಾಗಲು ಬೆಳಿಗ್ಗೆ ಹೋಗಿ ಸಂಜೆ ವಾಪಸು ಹೊರಡುತ್ತಿದ್ದರಿಂದ ಅಲ್ಲಿ ಏನನ್ನು ನೋಡಲಾಗಿಲ್ಲ, ಈ ಸಲ ಎಲ್ಲ ನೋಡಿ ಎಂಜಾಯ್ ಮಾಡಿಕೊಂಡು ಬಂದರಾಯಿತು ಅಂತ ಅಂದುಕೊಂಡ. ಮದುವೆಗೆ ನಾಲಕ್ಕು ದಿನ ಮುಂಚಿತವಾಗಿ ಹರ್ಷನ ಅಪ್ಪ ಅಮ್ಮ ಮತ್ತು ತಂಗಿ ಸಮೇತ ಹಳ್ಳಿಗೆ ತಮ್ಮ ಕಾರಿನಲ್ಲಿ ಹೊರಟರು.
ಹಳ್ಳಿ ಮುಟ್ಟಿದಾಗ ಆಗಲೇ ರಾತ್ರಿ ಎಂಟು ಗಂಟೆ ಆಗುತ್ತಾ ಬಂದಿತ್ತು. ಆಗಲೇ ಮನೆಗೆ ತುಂಬಾ ಜನ ನೆಂಟರು ಬಂದು ಸೇರಿಕೊಂಡಿದ್ದರು. ಮದುವೆಯ ಸಡಗರ ಎದ್ದು ಕಾಣುತ್ತಿತ್ತು. ಇವರು ಹೋದ ಕೂಡಲೇ ತುಂಬಾ ಜನ ಬಂದು ಮಾತನಾಡಿಸತೊಡಗಿದರು. ಹರ್ಷನಿಗೆ ಅದರಲ್ಲಿ ಅನೇಕರು ಯಾರು ಅಂತಾನೇ ಗೊತ್ತಿರಲಿಲ್ಲ. ಆದರೂ ಎಲ್ಲರನ್ನು ನೋಡಿ ಗೊತ್ತಿದ್ದವರಂತೆ ನಾಟಕ ಮಾಡಿದ. ಹರ್ಷ ತಾನಿದ್ದ ಎಲ್ಲ ಬ್ಯಾಗ್ ಗಳನ್ನೂ ತೆಗೆದುಕೊಂಡು ಕೋಣೆಯಲ್ಲಿ ಇಟ್ಟು , ಕೈ ಕಾಲು ತೊಳೆದು ಊಟಕ್ಕೆ ಬಂದ. ಮನೆಯ ದೊಡ್ಡ ವರಾಂಡದಲ್ಲಿ ಸಾಲಾಗಿ ಬಾಳೆ ಎಲೆ ಹಾಕಿದ್ದರು. ಹರ್ಷ ಕಷ್ಟ ಪಟ್ಟು ನೆಲದ ಮೇಲೆ ಕುಳಿತು ಊಟ ಮಾಡಿ ಮುಗಿಸಿದ. ಊಟ ಆದ ಮೇಲೆ ಸ್ವಲ್ಪ ಹೊತ್ತು ಅಲ್ಲಿದ್ದವರೆಲ್ಲ ಎಲೆ ಅಡಿಕೆ ಹಾಕಿಕೊಂಡು ಮಾತನಾಡುತ್ತ ಕುಳಿತರು. ಹರ್ಷನು ಅವರ ಜೊತೆ ಮಾತನಾಡುತ್ತ ಕುಳಿತನು. ಸ್ವಲ್ಪ ಹೊತ್ತು ಮಾತನಾಡಿ ಎಲ್ಲರು ಮಲಗಲು ಹೊರಟರು.
ಮುಂಜಾನೆ ಇನ್ನು ಸರಿಯಾಗಿ ಬೆಳಕು ಆಗಿರಲಿಲ್ಲ, ಹೊರಗಡೆ ಪೂರ್ತಿ ಮಂಜು ಕವಿದಿತ್ತು. ಹರ್ಷನಿಗೆ ಹೊಸ ಜಾಗ ಆಗಿದ್ದರಿಂದ ಬೇಗನೆ ಎಚ್ಚರವಾಗಿತ್ತು. ಆಗ ಅವನಿಗೆ ಹೊರಗಡೆ ಯಾರೋ ಹಾಡುವ ಧ್ವನಿ ಕೇಳಿಸಿತು. ಇವನು ಯಾರಪ್ಪ ಇಷ್ಟೋತ್ತಿಗೆ ಹಾಡುತ್ತಿದ್ದಾರೆ ಅಂತ ಅಂದುಕೊಂಡ. ೫ ನಿಮಿಷದ ನಂತರ ಬೇರೊಬ್ಬರು ಹಾಡುವ ಧ್ವನಿ ಕೇಳಿಸಿತು. ಗಮನವಿಟ್ಟು ಕೇಳಿದ, ಮೊದಲು ಕೇಳಿದ ಧ್ವನಿ ಆಗಿರಲಿಲ್ಲ. ಅದು ಬೇರೆ ಧ್ವನಿ ಆಗಿತ್ತು. ಹತ್ತು ನಿಮಿಷದ ನಂತರ ಮತ್ತೆ ಬೇರೊಬ್ಬರು ಹಾಡುವ ಧ್ವನಿ ಕೇಳಿತು. ಹರ್ಷನಿಗೆ ಏನು ಅಂತ ಗೊತ್ತಾಗಲಿಲ್ಲ. ಹೊರಗಡೆ ಮಂಜು ಕವಿದಿದ್ದರಿಂದ ಏನು ಕಾಣಿಸುತ್ತಿರಲಿಲ್ಲ. ಒಂದು ಗಂಟೆ ಕಳೆದರು ಯಾರಾದರೊಬ್ಬರು ಹಾಡುವುದು ಕೇಳುತ್ತಲೇ ಇತ್ತು. ಸ್ವಲ್ಪ ಹೊತ್ತಿಗೆ ನಿಂತು ಅದು ನಿಂತು ಹೋಯಿತು. ಆದರೆ ಹರ್ಷನಿಗೆ ಹೊರಗಡೆ ಯಾಕೆ ಒಬ್ಬರಾದ ಮೇಲೆ ಹಾಡುತ್ತಿದ್ದರು ಅನ್ನುವ ರಹಸ್ಯ ಮಾತ್ರ ಗೊತ್ತಾಗಲಿಲ್ಲ.
ಯಾಕೆ ಹಾಡುತ್ತಿದ್ದರು ಅಂತ ಆಮೇಲೆ ಅಪ್ಪನಿಗೆ ಕೇಳಿದರಾಯಿತು, ಮೊದಲು ಫ್ರೆಶ್ ಅಪ್ ಆಗೋಣ ಈಗ ಅಂತ ಎದ್ದು ಹೊರಗಡೆ ಬಂದು, ಅಪ್ಪನಿಗೆ ಟಾಯ್ಲೆಟ್ ಎಲ್ಲಿದೆ ಅಂತ ಕೇಳಿದ. ಅಪ್ಪ ಅವನನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಒಂದು ಹಳದಿ ಪ್ಲಾಸ್ಟಿಕ್ ಕಟ್ಟಿದ ಸಣ್ಣ ಕೋಣೆಯ ಬಳಿ ನಿಲ್ಲಿಸಿದರು. ಹರ್ಷ ” ಈ ಟಾಯ್ಲೆಟ್ ಗೆ ಬಾಗಿಲೇ ಇಲ್ವಲ್ಲಾ ” ಅಂತ ಕೇಳಿದ. ಅವರ ಅಪ್ಪ ಆ ಪ್ಲಾಸ್ಟಿಕ್ ಶೀಟ್ ಎತ್ತಿ ತೋರಿಸಿ ” ಈ ಟಾಯ್ಲೆಟ್ ಗೆ ಬಾಗಿಲು ಇಲ್ಲ, ಈ ಪ್ಲಾಸ್ಟಿಕ್ ಶೀಟನ್ನೇ ಬಾಗಿಲು ಅಂತ ಅಂದುಕೋ ” ಅಂತ ಹೇಳಿದರು. ಹರ್ಷ ” ಯಾರಾದರೂ ಬಂದರೆ ಏನು ಗತಿ” ಅಂತ ಕೇಳಿದ. ಅದಕ್ಕೆ ಅಪ್ಪ ” ಏನಾದರೂ ಜೋರಾಗಿ ಹಾಡುತ್ತ ಕುಳಿತುಕೋ, ಹಾಡುತ್ತ ಕುಳಿತರೆ ಒಳಗಡೆ ಇದ್ದಾರೆ ಅಂತ ಯಾರು ಬರಲ್ಲ ” ಅಂತ ಹೇಳಿ ಹೋದರು.
ಆಗ ಹರ್ಷನಿಗೆ ಮುಂಜಾನೆ ಒಬ್ಬರಾದ ಮೇಲೆ ಒಬ್ಬರು ಹಾಡುತ್ತಿದ್ದುದರ ಹಿಂದಿನ ರಹಸ್ಯ ಏನು ಅಂತ ಗೊತ್ತಾಯ್ತು.
ನಂತರ ಅದರ ಒಳಗಡೆ ಹೋದ ಹರ್ಷ ಅಪ್ಪ ಹೇಳಿದಂತೆ ಒಂದು ಹಾಡನ್ನು ಜೋರಾಗಿ ಹಾಡುತ್ತ ಕುಳಿತ.
ಆ ಹಾಡು ” ಮಂಜು ಮಂಜು ಬೆಳ್ಳಿ ಮಂಜು, ಮಂಜಿನ ಹೂವ ರಾಶಿಯಲಿ “
– ಶ್ರೀನಾಥ್ ಹರದೂರ ಚಿದಂಬರ