
ದಾರಿಯಲ್ಲಿ ಅಪ್ಪ ಮತ್ತು ಅವನ ನಾಲಕ್ಕು ವರುಷದ ಮಗ ನಡೆದುಕೊಂಡು ಹೋಗುತ್ತಿದ್ದರು. ಮಗ ತನ್ನ ಅಪ್ಪನ ಕೈ ಹಿಡಿದುಕೊಂಡು ಕುಣಿಯುತ್ತ, ಅಪ್ಪನ ಕೈಯನ್ನು ಜಗ್ಗುತ್ತಾ , ಆಟವಾಡಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ. ಅವತ್ತು ಮಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ಯಾಕಂದರೆ ಅಪ್ಪ ಅವನಿಗೆ ಹೊಸ ಚಪ್ಪಲಿ ಕೊಡಿಸುತ್ತೇನೆ ಅಂತ ಸಂತೆಗೆ ಕರೆದುಕೊಂಡು ಹೋಗುತ್ತಿದ್ದರು. ಅದುವರೆಗೆ ಮಗ ಯಾವತ್ತು ಚಪ್ಪಲಿಯೇ ಹಾಕಿರಲಿಲ್ಲ, ಹಾಗಾಗಿ ಅಪ್ಪ ಕೊಡಿಸುವ ಚಪ್ಪಲಿ ಹೇಗಿರಬಹುದು ಎಂಬ ಕಾತುರ ಅವನನ್ನು ಹಾಗೆ ಕುಣಿಸುತ್ತಿತ್ತು. ಹಳ್ಳಿಯಿಂದ ಸುಮಾರು ನಾಲ್ಕು ಕಿಲೋಮೀಟರು ನಡೆದು, ಸಂತೆ ನಡೆಯುತ್ತಿದ್ದ್ದ ಜಾಗಕ್ಕೆ ಇಬ್ಬರು ಬಂದರು. ಮಗ ಮನೆಯಲ್ಲಿ ಹಿಡಿದ ಅಪ್ಪನ ಕೈ ಇನ್ನು ಹಾಗೆ ಹಿಡಿದುಕೊಂಡಿದ್ದ. ಸಂತೆ ಒಳಗೆ ಬಂದ ಮೇಲೆ, ಮಗ ಅಲ್ಲಿನ ಜನ ಜಂಗುಳಿ ನೋಡಿ ಇನ್ನು ಸ್ವಲ್ಪ ಗಟ್ಟಿಯಾಗಿ ಅಪ್ಪನ ಕೈ ಹಿಡಿದುಕೊಂಡ. ಅಪ್ಪ ಒಂದೊಂದೇ ಚಪ್ಪಲಿ ಅಂಗಡಿಗಳಿಗೆ ಹೋಗಿ, ಮಗನ ಕಾಲಿಗೆ ಚಪ್ಪಲಿಗಳನ್ನು ಹಾಕಿ ನೋಡಿ, ಚೆನ್ನಾಗಿ ಕಾಣುತ್ತಾ, ಅಳತೆ ಸರಿ ಇದೆಯಾ ಅಂತ ನೋಡುತ್ತಾ, ಅಂಗಡಿಯವನಿಗೆ ಅದರ ಬೆಲೆ ಎಷ್ಟು ಎಂದು ಕೇಳಿ, ಮುಂದಿನ ಅಂಗಡಿಗೆ ಹೋಗುತ್ತಿದ್ದ. ಚಪ್ಪಲಿ ಮಾತ್ರ ತೆಗೆದುಕೊಳ್ಳುತ್ತಿರಲಿಲ್ಲ. ಮಗನಿಗೆ ಎಲ್ಲ ಚಪ್ಪಲಿಗಳು ಚೆನ್ನಾಗಿ ಕಾಣಿಸುತ್ತಿತ್ತು ಹಾಗು ಇಷ್ಟವಾಗುತ್ತಿತ್ತು. ಆದರೆ ಅಪ್ಪ ಮಾತ್ರ ಏನಕ್ಕೆ ಯಾವುದು ಕೊಡಿಸುತ್ತಿಲ್ಲ ಅಂತ ಅಸಹನೆ ಶುರುವಾಯಿತು. ಹೀಗೆ ಅಪ್ಪ ನಾಲ್ಕೈದು ಅಂಗಡಿಗೆ ಹೋಗಿ ವಿಚಾರಿಸಿ, ನಂತರ ಮಗನಿಗೆ ಕಳ್ಳೆ ಪುರಿ ಕೊಡಿಸಿ ಒಂದು ಕಡೆ ಕೂತನು.
ಆದರೆ ಮಗನ ತಾಳ್ಮೆ ತಪ್ಪಿಹೋಗಿತ್ತು ಹಾಗು ಮನಸ್ಸೆಲ್ಲ ಚಪ್ಪಲಿ ಕಡೆ ಇದ್ದುದ್ದರಿಂದ ಕಳ್ಳೆ ಪುರಿ ತಿನ್ನುವ ಮನಸ್ಸಿರಲಿಲ್ಲ. ಮಗನಿಗೆ ಅಪ್ಪ ಯಾಕೆ ಯಾವುದು ಚಪ್ಪಲಿ ಕೊಡಿಸುತ್ತಿಲ್ಲ ಎಂಬ ಪ್ರಶ್ನೆಯೇ ಕಾಡಿಸುತ್ತಿತ್ತು. ಮದ್ಯಾಹ್ನ ಸಂತೆಗೆ ಬಂದವರು ಸಂಜೆ ಆಗುತ್ತಾ ಬಂದಿದ್ದರು ಅಪ್ಪ ಮಾತ್ರ ಚಪ್ಪಲಿ ಕೊಡಿಸಿರಲಿಲ್ಲ. ಮಗನ ಮುಖ ಸಪ್ಪಗಾಗಿ ಹೋಗಿತ್ತು. ನಿಧಾನವಾಗಿ ಅಂಗಡಿಯವರೆಲ್ಲ ಅಂಗಡಿ ಮುಚ್ಚಲು ಅವರು ತಂದಿದ್ದ ಸಾಮಾನುಗಳನ್ನು ಚೀಲಗಳಲ್ಲಿ ತುಂಬತೊಡಗಿದರು. ಆಗ ಅಪ್ಪ ಎದ್ದು ಮೊದಲು ನೋಡಿದ್ದ ಚಪ್ಪಲಿ ಅಂಗಡಿಯವನ ಹತ್ತಿರ ಹೋಗಿ ಇವರು ನೋಡಿ ಬಿಟ್ಟು ಬಂದಿದ್ದ ಹವಾಯಿ ಚಪ್ಪಲಿ ತೆಗೆದು ಮತ್ತೆ ಮಗನ ಕಾಲಿಗೆ ಹಾಕಿ, ಅಂಗಡಿಯವನ ಹತ್ತಿರ ಚೌಕಾಸಿ ಮಾಡಲು ಶುರು ಮಾಡಿದ. ಅಂಗಡಿಯವನು ಮುಚ್ಚುವ ಗಡಿಬಿಡಿ ಇದ್ದಿದ್ದರಿಂದ ಅಪ್ಪ ಹೇಳಿದ ಬೆಲೆಗೆ ಚಪ್ಪಲಿ ಕೊಟ್ಟ. ಚಪ್ಪಲಿಯನ್ನು ಕಾಲಿಗೆ ಹಾಕಿಕೊಂಡ ಮೇಲೆ ಮಗನಿಗೆ ಬಹಳ ಸಂತೋಷವಾಗಿ, ಅಷ್ಟರವರೆಗೂ ಆಗಿದ್ದ ಬೇಜಾರು ಮಾಯವಾಯಿತು. ಆದರೆ ಅಪ್ಪ ಯಾಕೆ ಅಷ್ಟು ಹೊತ್ತು ಕಾಯಿಸಿ ಚಪ್ಪಲಿ ಕೊಡಿಸಿದರು ಅಂತ ಮಾತ್ರ ಮಗನಿಗೆ ಅರ್ಥವಾಗಲಿಲ್ಲ. ಅಪ್ಪನ ಹತ್ತಿರ ಆ ಚಪ್ಪಲಿಗೆ ಕೊಟ್ಟ ದುಡ್ಡು ಬಿಟ್ಟು ಬೇರೆ ಇರಲಿಲ್ಲ ಎಂಬ ಸತ್ಯ ಗೊತ್ತಾಗುವಷ್ಟು ಮಗ ದೊಡ್ಡವನಾಗಿರಲಿಲ್ಲ.
ಅಪ್ಪ ಮಗ ಇಬ್ಬರು ಮತ್ತೆ ಮನೆ ಕಡೆ ಹೊರಟರು. ಮಗನ ಗಮನ ಪೂರ್ತಿ ಅವನ ಚಪ್ಪಲಿ ಮೇಲೆ ಇತ್ತು. ಪದೇ ಪದೇ ಹೊಸ ಚಪ್ಪಲಿ ಹಾಕಿದ್ದ ತನ್ನ ಕಾಲುಗಳನ್ನು ನೋಡಿಕೊಂಡು ಖುಷಿ ಪಡುತ್ತಾ ಅಪ್ಪನ ಕೈ ಹಿಡಿದುಕೊಂಡು ನಡೆಯುತ್ತಿದ್ದನು. ಅಪ್ಪ ಮಾತ್ರ ಅವಾಗವಾಗ ನಿಂತು ಬಗ್ಗಿ ತನ್ನ ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಏನೋ ಮಾಡುತ್ತಿದ್ದರು, ಆದರೆ ಮಗನ ಗಮನ ತನ್ನ ಹೊಸ ಚಪ್ಪಲಿ ಕಡೆ ಇದ್ದುದ್ದರಿಂದ ಅಪ್ಪ ಏನು ಮಾಡುತ್ತಿದ್ದಾರೆ ಅಂತ ನೋಡಲು ಹೋಗಲಿಲ್ಲ.
ಅಪ್ಪನ ಹಳೆಯ ಹವಾಯಿ ಚಪ್ಪಲಿಯು ಸವೆದು ಉಂಗುಷ್ಟ ಕಿತ್ತು ಬರಬಾರದು ಅಂತ ಹಾಕಿದ ಪಿನ್ ಜಾರಿ ಪದೇ ಪದೇ ಕಿತ್ತು ಬರುತ್ತಿತ್ತು.
ಉಂಗುಷ್ಟ ಕಿತ್ತಾಗೆಲ್ಲ್ಲ ನಿಟ್ಟುಸಿರು ಬಿಡುತ್ತ ಅದನ್ನು ಸರಿ ಮಾಡಲು ಅಪ್ಪ ಪದೇ ಆದೆ ಬಗ್ಗುತ್ತಿದ್ದ.
ತನ್ನ ಕಾಲಿಗೆ ಹಾಕಿದ್ದ ಹೊಸ ಹವಾಯಿ ಚಪ್ಪಲಿಯನ್ನು ನೋಡಲು ಮಗ ಪದೇ ಪದೇ ಬಗ್ಗುತ್ತಿದ್ದ.
– ಶ್ರೀನಾಥ್ ಹರದೂರ ಚಿದಂಬರ