
ಅಂದು ಪ್ರತಾಪನ ತಮ್ಮ ಪ್ರವೀಣನ ಮದುವೆಯಾ ಎಲ್ಲ ಕಾರ್ಯ ಮುಗಿದು, ಹೆಂಡತಿ ಸುಮಾಳನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ಕೂಡ ಆಗಿ ಎಲ್ಲರು ಸಂತೋಷದಿಂದ ಮಾತನಾಡುತ್ತ ಮನೆಯಲ್ಲಿ ಕುಳಿತ್ತಿದ್ದರು. ಮನೆಗೆ ಬಂದಿದ್ದ ನೆಂಟರು ಎಲ್ಲೆಲ್ಲಿ ಜಾಗ ಸಿಗುತ್ತೋ ಅಲ್ಲೇ ಕುಳಿತುಕೊಂಡು ಮಾತನಾಡುತ್ತ ಕುಳಿತ್ತಿದ್ದರು. ಮಕ್ಕಳು ಜೋರಾಗಿ ಕೂಗಾಡುತ್ತಾ ಆಟವಾಡುತ್ತಿದ್ದರು. ಪ್ರತಾಪನ ಎಂಟು ವರುಷದ ಮಗ ಬಹಳ ಚೂಟಿ ಹಾಗು ತುಂಬಾ ತುಂಟನಾಗಿದ್ದ. ಮನೆಯಲ್ಲಿ ಅಷ್ಟು ಮಕ್ಕಳಿದ್ದರು ಇಡೀ ಮನೆಯಲ್ಲಿ ಅವನ ಗಲಾಟೆನೇ ಜಾಸ್ತಿ ಕೇಳುತ್ತಿತ್ತು. ಪ್ರವೀಣನ ಸ್ನೇಹಿತರು ಹಾಗು ಸುಮನಳ ಸ್ನೇಹಿತೆಯರು, ಪ್ರವೀಣ ಮತ್ತು ಸುಮನಾಳ ಮೊದಲ ರಾತ್ರಿಗೆ ಕೋಣೆಯನ್ನು ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಅಲಂಕಾರ ಮಾಡುತ್ತಿದ್ದರು. ಅವರು ಎಲ್ಲರು ಸೇರಿ ಪ್ರವೀಣ ರೂಮಿಗೆ ಬರುವ ಮುನ್ನ ಸಿಕ್ಕಾಪಟ್ಟೆ ಕಾಡಿಸಿ ಸರಿಯಾಗಿ ದುಡ್ಡು ವಸೂಲು ಮಾಡಬೇಕು, ರಾತ್ರಿ ಹೇಗೆಲ್ಲ ಕಾಟ ಕೊಡಬೇಕು ಎಂದೆಲ್ಲ ಮಾತನಾಡುತ್ತ ಯೋಜನೆ ಹಾಕುತ್ತಿದ್ದರು.
ರಾತ್ರಿ ಊಟ ಎಲ್ಲ ಆದ ಮೇಲೆ, ಅವರ ಯೋಜನೆಯಂತೆ ಪ್ರವೀಣ ಮತ್ತು ಸುಮನಾಳನ್ನು ಸಿಕ್ಕಾಪಟ್ಟೆ ಕಾಡಿಸಿ ಎಷ್ಟು ಬೇಕೋ ಅಷ್ಟು ದುಡ್ಡು ವಸೂಲು ಮಾಡಿ, ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ಅಲಂಕಾರ ಮಾಡಿದ ಕೋಣೆಯ ಒಳಗಡೆ ಬಿಟ್ಟರು. ಆಗಲೇ ರಾತ್ರಿ ೧೧ ಗಂಟೆ ದಾಟಿದ್ದರಿಂದ, ಬೆಳೆಗ್ಗಿನಿಂದ ಮದುವೆಯ ಗಲಾಟೆ ಹಾಗು ಸಿಕ್ಕಾಪಟ್ಟೆ ಕೆಲಸ ಮಾಡಿ ಸುಸ್ತಾಗಿದ್ದ ಎಲ್ಲರು ಮಲಗಲು ಹೊರಟರು. ಪ್ರವೀಣನ ಸ್ನೇಹಿತರು ಎಣ್ಣೆ ಪಾರ್ಟಿಗೆ ರೆಡಿ ಆದರು. ಸುಮನಾಳ ಸ್ನೇಹಿತೆಯರು ಗುಂಪು ಕಟ್ಟಿಕೊಂಡು ಮಾತನಾಡುತ್ತ ಕುಳಿತರು. ಆಗ ಪ್ರತಾಪನ ಹೆಂಡತಿ ಅಂಬಿಕಾ ತನ್ನ ಮಗ ಕಿರಣನನ್ನು ಎಲ್ಲ ಕಡೆ ಹುಡುಕುತ್ತಿದ್ದಳು. ಆದರೆ ಅವನ ಸುಳಿವು ಮಾತ್ರ ಎಲ್ಲೂ ಸಿಗಲಿಲ್ಲ. ಗಾಬರಿಯಾಗಿ ಪ್ರತಾಪನಿಗೆ ಕಿರಣ ಎಲ್ಲೂ ಕಾಣಿಸುತ್ತಿಲ್ಲ ಅಂತ ಹೇಳಿದಾಗ, ಅವನು ಕಿರಣನನ್ನು ಕೂಗುತ್ತ ಮನೆಯಲ್ಲ ಹುಡುಕತೊಡಗಿದನು. ಇವರಿಬ್ಬರು ಗಾಬರಿಯಾಗಿ ಹುಡುಕುತ್ತ ಇದ್ದುದ್ದನ್ನು ನೋಡಿ ಮಲಗಿದ್ದ ಎಲ್ಲರು ಎದ್ದು ಹುಡುಕತೊಡಗಿದರು. ಅಲ್ಲಿಯವರೆಗೆ ಸಂತೋಷದಿಂದ, ನಗೆಗಡಲಿಂದ ತುಂಬಿದ್ದ ಮನೆ ಒಮ್ಮೆಲೇ ಭಯ, ದುಗುಡದಿಂದ ತುಂಬಿ ಹೋಯಿತು. ಕೋಣೆಯ ಒಳಗಡೆ ಇದ್ದ ಪ್ರವೀಣ ಮತ್ತು ಸುಮನಾಳಿಗೆ ಹೇಳುವುದು ಬೇಡ ಅಂತ ಎಲ್ಲ ತೀರ್ಮಾನ ಮಾಡಿ, ಎಲ್ಲರು ಮನೆಯ ಸುತ್ತ ಮುತ್ತ, ಅಕ್ಕ ಪಕ್ಕದ ಬೀದಿ, ಪರಿಚಯಸ್ಥರ ಮನೆ, ಹೀಗೆ ಒಬ್ಬಬ್ಬರೂ ಒಂದು ಕಡೆ ಹುಡುಕ ತೊಡಗಿದರು. ಕೆಲವರಂತೂ ಹೆದರಿ ಮನೆಯ ನೀರಿನ ಟ್ಯಾಂಕ್ ಸಹಿತ ಹುಡುಕಿ ನೋಡಿದರು. ಆದರೆ ಕಿರಣನ ಸುಳಿವು ಮಾತ್ರ ಸಿಗಲಿಲ್ಲ.
ಪ್ರತಾಪ ಕೂಡಲೇ ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿದ್ದ ತನ್ನ ದೊಡ್ಡಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಅವರು ಕೂಡಲೇ ನಾನು ಬರುತ್ತೇನೆ ಗಾಬರಿಯಾಗಬೇಡ ಅಂತ ಹೇಳಿದರು. ಕಿರಣ ಕಾಣಿಸದೆ ಆಗಲೇ ಎರಡು ಗಂಟೆ ಕಳೆದು ಹೋಗಿತ್ತು. ಅಂಬಿಕಾ ತನ್ನ ಮಗನನ್ನು ನೆನಸಿಕೊಂಡು ಜೋರಾಗಿ ಅಳತೊಡಗಿದ್ದಳು. ಪ್ರತಾಪ ಅವಳನ್ನು ಏನು ಆಗಲ್ಲ ಅಂತ ಸಮಾಧಾನ ಮಾಡುತ್ತಿದ್ದ. ಅಷ್ಟರಲ್ಲಿ ಪ್ರತಾಪನ ದೊಡ್ಡಪ್ಪ ಪೊಲೀಸ್ ಟೀಮ್ ನೊಂದಿಗೆ ಅಲ್ಲಿಗೆ ಬಂದರು. ಅವರು ಯಾರು ಅವನನ್ನು ಕೊನೆಯಾದಾಗಿ ನೋಡಿದ್ದರು ಅಂತ ಮಲಗಿದ್ದ ಮಕ್ಕಳನ್ನು ಎಬ್ಬಿಸಿ ಕೇಳಲು ಹೇಳಿದರು. ಆದರೆ ನಿದ್ದೆಗಣ್ಣಿನಲ್ಲಿದ್ದ ಯಾವ ಮಕ್ಕಳು ಸರಿಯಾಗಿ ಉತ್ತರ ಕೊಡಲಿಲ್ಲ. ಪೊಲೀಸ್ ಟೀಮ್ನಲ್ಲಿದ್ದ ಕೆಲವರು ಎಲ್ಲಾದರೂ ಸಿ ಸಿ ಕ್ಯಾಮೆರಾ ಅವರ ಮನೆಯ ದಾರಿಯಲ್ಲಿದೆಯೇ ಅಂತ ಹುಡುಕಲು ಹೋದರು. ಪ್ರತಾಪನ ದೊಡ್ಡಪ್ಪ ಯಾರೋ ಕಿಡ್ನಾಪ್ ಮಾಡಿರಬಹುದು ಅಂತ ಸಂಶಯ ವ್ಯಕ್ತ ಪಡಿಸಿ, ಪ್ರತಾಪ ಮತ್ತು ಅಂಬಿಕಾ ಇಬ್ಬರ ಫೋನ್ ಅನ್ನು ಸರ್ವಲೆಯನ್ಸ್ ಗೆ ಹಾಕಲು ಹೇಳಿದರು. ಪ್ರತಾಪ್, ಅಂಬಿಕಾ, ನೆಂಟರು, ಸ್ನೇಹಿತ ಸ್ನೇಹಿತೆಯರು ಯಾರು ಏನನ್ನು ಮಾತನಾಡದೆ ಆಘಾತದಿಂದ ಸುಮ್ಮನೆ ಕುಳಿತುಬಿಟ್ಟರು. ಮನೆಯಲ್ಲಿ ಸ್ಮಶಾನ ಮೌನ ಆವರಿಸಿ ಬಿಟ್ಟಿತು.
ಆಗ ಪ್ರವೀಣ ಮತ್ತು ಸುಮನಾ ಇದ್ದ ಕೋಣೆಯಿಂದ ಡಬ್ ಎಂದು ಜೋರಾಗಿ ಸದ್ದು ಕೇಳಿಸಿತು. ಕೂಡಲೇ ಎಲ್ಲರು ಅವರ ಕೋಣೆಯತ್ತ ಓಡಿದರು. ಪ್ರತಾಪ ಕೋಣೆಯ ಹತ್ತಿರ ಹೋಗಿ ” ಪ್ರವೀಣ, ಪ್ರವೀಣ” ಅಂತ ಕೂಗಿ ಬಾಗಿಲು ಬಡಿದ. ಒಳಗಡೆಯಿಂದ ” ಬಂದೆ” ಅಂತ ಪ್ರವೀಣ ಉತ್ತರ ಕೊಟ್ಟ. ಒಂದು ನಿಮಿಷದ ನಂತರ ಪ್ರವೀಣ ಬಾಗಿಲು ತೆಗೆದ. ಒಳಗಡೆ ಮಂಚದ ಮೇಲೆ ಇಂಗು ತಿಂದ ಮಂಗನ ಹಾಗೆ ಸುಮನಾ ಮೈ ತುಂಬ ಬೆಡ್ ಶೀಟ್ ಹೊದ್ದುಕೊಂಡು ಕುಳಿತ್ತಿದ್ದಳು. ಮಂಚದ ಪಕ್ಕದಲ್ಲಿ ಕಿರಣ ಕಣ್ಣು ಪಿಳ ಪಿಳ ಅಂತ ಒಡೆದ ಬಲೂನ್ ಹಿಡಿದುಕೊಂಡು ಕೂತಿದ್ದ. ಅಂಬಿಕಾ ಓಡಿ ಹೋಗಿ ಕಿರಣನನ್ನು ತಬ್ಬಿಕೊಂಡು, ಅವನನ್ನು ಮುದ್ದು ಮಾಡುತ್ತಾ ಜೋರಾಗಿ ಅಳತೊಡಗಿದಳು. ಯಾರಿಗೂ ಅಲ್ಲಿ ಏನು ನಡೆಯಿತು ಅಂತ ಅರ್ಥ ಆಗಲಿಲ್ಲ.
ಕಿರಣ ಏನು ನಡೆಯಿತು ಅಂತ ಹೇಳಿದ ಮೇಲೆ ಎಲ್ಲರಿಗು ಅರ್ಥ ಆಗಿದ್ದು ಏನೆಂದರೆ, ಕಿರಣ ಆಟವಾಡುವಾಗ ಪ್ರವೀಣನ ಸ್ನೇಹಿತರು ಪ್ರವೀಣನಿಗೆ ರಾತ್ರಿ ಹೇಗೆ ಕಾಡಿಸಿ ದುಡ್ಡು ವಸೂಲು ಮಾಡಬೇಕು ಅಂತ ಮಾತನಾಡುವುದನ್ನು ಕೇಳಿಸಿಕೊಂಡ ಅವನು, ತಾನು ಚಿಕ್ಕಪ್ಪನ್ನನ್ನು ಕಾಡಿಸಿ ದುಡ್ಡು ಕೇಳಬೇಕು ಅಂತ ಯಾರಿಗೂ ಗೊತ್ತಾಗದಂತೆ ಒಂದು ಬಲೂನ್ ತೆಗೆದುಕೊಂಡು ಅವರು ಮಲಗುವ ಮಂಚದ ಕೆಳಗೆ ಹೋಗಿ ಕೂತಿದ್ದ. ಬೆಳಗ್ಗಿನಿಂದ ಆಡಿದ ಪರಿಣಾಮ ಸುಸ್ತಾಗಿ ಅವನಿಗೆ ಅಲ್ಲೇ ನಿದ್ದೆ ಬಂದು ಅಲ್ಲಿಯೇ ಮಲಗಿಬಿಟ್ಟಿದ್ದ. ರಾತ್ರಿ ಕೈಲಿದ್ದ ಬಲೂನ್ ಹೆಂಗೋ ಒಡೆದಿದೆ, ಅದರ ಸದ್ದಿಗೆ ಮಲಗಿದ್ದ ಕಿರಣನಿಗೆ ಎಚ್ಚರವಾಗಿದೆ. ಕೂಡಲೇ ಮಂಚದ ಕೆಳಗಡೆಯಿಂದ ಹೊರಗೆ ಬಂದು ಚಿಕ್ಕಪ್ಪನ ಹತ್ತಿರ ದುಡ್ಡು ಕೇಳಿದ್ದ ಅಷ್ಟೇ.
ಅದನ್ನು ಕೇಳಿ ಅಲ್ಲಿಯವರೆಗೆ ಭಯ ದುಗುಡದಲ್ಲಿದ್ದ ಎಲ್ಲರ ಮುಖದಲ್ಲಿ ಪ್ರವೀಣ ಮತ್ತು ಸುಮನಾಳ ಪರಿಸ್ಥಿತಿ ನೆನಸಿಕೊಂಡು ನಗು ಉಕ್ಕಿ ಬಂತು.
ಪ್ರವೀಣ ಮತ್ತು ಸುಮನಾಳ ಮೊದಲ ರಾತ್ರಿಯನ್ನು ಬಲೂನ್ ಕಸಿದುಕೊಂಡಿತ್ತು.
ಕಿಡ್ನಾಪ್ ಆಗಿದ್ದಾನೆ ಅಂದುಕೊಂಡಿದ್ದ ಕಿರಣನ ಸುಳಿವು ಬಲೂನ್ ಕೊಟ್ಟಿತ್ತು.
– ಶ್ರೀನಾಥ್ ಹರದೂರ ಚಿದಂಬರ