ನಮ್ಮ ಭಾರತ ಈ ಮಟ್ಟಿಗೆ ಸಮೃದ್ಧಿಯಿಂದ ಇರಲು ಕಾರಣ ನಮ್ಮಲ್ಲಿ ಹರಿಯುತ್ತಿರುವ ಅನೇಕ ನದಿಗಳು. ಅವುಗಳನ್ನು ನಾವು ಎಷ್ಟರ ಮಟ್ಟಿಗೆ ಕಾಪಾಡಿಕೊಂಡು ಬಂದಿದ್ದೇವೆ ಅನ್ನುವುದು ನಾವು ನಾಚಿಕೆಯಿಂದ ತಲೆತಗ್ಗಿಸುವ ವಿಚಾರ. ಅದರ ಬಗ್ಗೆ ಇಲ್ಲಿ ಚರ್ಚೆ ಬೇಡ. ನಮ್ಮ ದೇಶದಲ್ಲಿ ಹರಿಯುತ್ತಿರುವ ಬಹುತೇಕ ನದಿಗಳು ಒಂದೋ ಹಿಮಾಲಯದ ಕಣಿವೆಗಳಲ್ಲಿ ಹಾಗು ಪಶ್ಚಿಮದ ಘಾಟಿಗಳಲ್ಲಿ ಹುಟ್ಟಿ ಪಶ್ಚಿಮದಿಂದ ಪೂರ್ವಕ್ಕೆ ಅನೇಕ ರಾಜ್ಯಗಳ ಮೂಲಕ ಹರಿದು ಬಂಗಾಳ ಕೊಲ್ಲಿಯಲ್ಲಿ ಒಂದಾಗುತ್ತದೆ. ಆದರೆ ಬೆರಳೆಣಿಕೆಯಷ್ಟು ನದಿಗಳು ಮಾತ್ರ ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ಕಡೆಗೆ ಹರಿದು ಅರಬ್ಬೀ ಸಮುದ್ರ ಸೇರುವುದು.
ಹಿಮಾಲಯದ ಕಣಿವೆಗಳಲ್ಲಿ ಹುಟ್ಟಿ ಭಾರತದಲ್ಲಿ ಹರಿಯುವ ನದಿಗಳಲ್ಲಿ ಪ್ರಮುಖ ನದಿಗಳೆಂದರೆ ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು. ಗಂಗಾ ನದಿ ಅನೇಕ ರಾಜ್ಯಗಳಿಗೆ ಜೀವ ನದಿಯಾಗಿದೆ. ಯಮುನಾ ನದಿ ಹಿಮಾಲಯದ ತಪ್ಪಲ್ಲಲ್ಲಿ ಹುಟ್ಟಿದರೂ ಗಂಗಾ ನದಿಯೊಂದಿಗೆ ಸೇರಿ ನಂತರ ಬಂಗಾಳ ಕೊಲ್ಲಿ ಸೇರುವುದು. ಅದೇ ರೀತಿ ಗಂಗಾ ನದಿಗೆ ಸೇರುವ ಅನೇಕ ನದಿಗಳಲ್ಲಿ ಪ್ರಮಖವಾಗಿ ಯಮುನಾ, ಅಲಕನಂದಾ, ಭಾಗೀರಥಿ, ಗೋಮತಿ, ಘಾಗ್ರಾ ಮತ್ತು ಬ್ರಹ್ಮಪುತ್ರ. ಗಂಗಾ ನದಿಯ ಪ್ರಯಾಣವೇ ಒಂದು ಅದ್ಭುತ.

ಗೋದಾವರಿ, ಕೃಷ್ಣ, ನಮ್ಮ ಕರುನಾಡಿನ ಜೀವ ನದಿ ಕಾವೇರಿ ಕೂಡ ಸೇರುವುದು ಕೂಡ ಬಂಗಾಳ ಕೊಲ್ಲಿಯಲ್ಲೇ. ತುಂಗಭಧ್ರಾ ಮತ್ತು ಭೀಮ ನದಿಗಳು ಕೃಷ್ಣ ನದಿಗೆ ಸೇರಿ ಬಂಗಾಳ ಕೊಲ್ಲಿಗೆ ಸೇರುತ್ತದೆ. ಮಹಾನದಿ, ಪಾಲಾರ್ ಕೂಡ ಸೇರುವುದು ಬಂಗಾಳ ಕೊಲ್ಲಿಗೆ. ಈ ಎಲ್ಲ ನದಿಗಳು ಹರಿಯುತ್ತಿರುವುದು ಪಶ್ಚಿಮದಿಂದ ಪೂರ್ವದೆಡೆಗೆ.
ಹಾಗಾದರೆ ಯಾವ ನದಿಗಳು ಪೂರ್ವದಿಂದ ಪಶ್ಚಿಮದೆಡಗೆ ಹರಿಯುತ್ತಿರುವುದು?
ಆ ನದಿಗಳ ಹೆಸರು ನರ್ಮದಾ, ತಾಪಿ, ಸಾಬರ್ಮತಿ, ಮಾಹಿ ಮತ್ತು ಲೂನಿ. ಈ ನದಿಗಳು ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ಅರಬ್ಬೀ ಸಮುದ್ರವನ್ನು ಸೇರುತ್ತವೆ.
ನರ್ಮದಾ ನದಿಯು ಮಧ್ಯಪ್ರದೇಶದ ಜೀವ ನದಿಯಾಗಿದೆ. ಮಧ್ಯಪ್ರದೇಶದ ಅನುಪ್ಪುರ ಜಿಲ್ಲೆಯ ಅಮರಕಂತಕ್ ಎಂಬಲ್ಲಿ ಹುಟ್ಟಿ, 1312 ಕಿಲೋಮೀಟರು ದೂರ ಹರಿಯುತ್ತ ಗುಜರಾತು ತಲುಪಿ ಅಲ್ಲಿಂದ ಅರಬ್ಬೀ ಸಮುದ್ರ ಸೇರುತ್ತದೆ.
ತಾಪಿ ( ತಪ್ತಿ) ನದಿಯು ಕೂಡ ಮಧ್ಯಪ್ರದೇಶದಲ್ಲಿ ಹುಟ್ಟಿ ಮಹಾರಾಷ್ಟ್ರದ ಮೂಲಕ ಗುಜರಾತನ್ನು ತಲುಪಿ, ಅಲ್ಲಿಂದ ಅರಬ್ಬೀ ಸಮುದ್ರ ಸೇರುತ್ತದೆ. ತಾಪಿ ನದಿಯು ಸರಿ ಸುಮಾರು 724 ಕಿಲೋಮೀಟರು ಉದ್ದ ಹರಿಯುತ್ತದೆ.
ಸಾಬರ್ಮತಿ ನದಿಯು ರಾಜಸ್ತಾನದ ಅರಾವಳಿ ಘಟ್ಟದಲ್ಲಿ ಹುಟ್ಟಿ, ಮುನ್ನೂರ ಎಪ್ಪತ್ತೊಂದು ಕಿಲೋಮೀಟರು ಹರಿದು ಗುಜರಾತಿನ ಮೂಲಕ ಅರಬ್ಬೀ ಸಮುದ್ರ ಸೇರುತ್ತದೆ.
ಮಾಹಿ ( ಮಾಹಿಸಾಗರ) ನದಿಯು ಮಧ್ಯಪ್ರದೇಶದಲ್ಲಿ ಹುಟ್ಟಿ, ರಾಜಸ್ತಾನದ ಮೂಲಕ ಹರಿದು ಗುಜರಾತನ್ನು ಸೇರಿ ಅಲ್ಲಿಂದ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಮಾಹಿ ನದಿಯ ಉದ್ದ ಐನೂರ ಎಂಬತ್ತು ಕಿಲೋಮೀಟರ್ಗಳು.
ಲೂನಿ ನದಿಯು ಥಾರ್ ಮರುಭೂಮಿಯಲ್ಲಿರುವ ಅತಿ ದೊಡ್ಡ ನದಿಯಾಗಿದೆ. ಅಜಮೇರಿನ ಅರಾವಳಿ ಘಟ್ಟದಲ್ಲಿರುವ ಪುಷ್ಕರ ಕಣಿವೆಯಲ್ಲಿ ಹುಟ್ಟಿ ಗುಜರಾತಿನ ಕಚ್ಚ್ ಎಂಬಲ್ಲಿ ಹರಿದು ಅರಬ್ಬೀ ಸಮುದ್ರ ಸೇರುತ್ತದೆ.
ನದಿಗಳ ಪಯಣ, ನದಿಗಳ ಕೂಡುವ ಸ್ಥಳ, ಒಂದಾಗಿ ಹರಿದು ಸಮುದ್ರ ಸೇರುವ ತನಕ ಅವುಗಳು ನಮ್ಮೆಲ್ಲರ ಜೀವನಾಡಿಯಾಗಿರುತ್ತವೆ. ನದಿಗಳ ಹರಿವಿನಲ್ಲಿರುವ ನಿಗೂಢತೆ, ಯಾವುದೇ ಸ್ವಾರ್ಥವಿಲ್ಲದೆ ಎಲ್ಲ ಜೀವ ಜಂತುಗಳಿಗೆ ಆಧಾರವಾಗುವಿಕೆ , ತನ್ನ ದಾರಿಯಲ್ಲಿ ಸಿಗುವ ಪ್ರತಿ ಪ್ರಾಣಿ, ಪಕ್ಷಿ ಹಾಗು ನಮ್ಮನ್ನು ಉದ್ದಾರ ಮಾಡಿಕೊಂಡು ಕೊನೆಗೆ ಸಮುದ್ರದಲ್ಲಿ ಸೇರಿ ತನ್ನ ತನವನ್ನು ಕಳೆದುಕೊಳ್ಳುವುದರಿಂದ ಏನೋ ಹೆಚ್ಚಿನ ನದಿಗಳಿಗೆ ನಮ್ಮ ಭಾರತದಲ್ಲಿ ಹೆಣ್ಣಿನ ಹೆಸರು ಕೊಟ್ಟಿದ್ದಾರೆ.
ಜೀವನಾಡಿಗಳಾಗಿರುವ ಎಲ್ಲ ನದಿಗಳನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಜವಾಬ್ಧಾರಿ.
– ಶ್ರೀನಾಥ್ ಹರದೂರ ಚಿದಂಬರ.
ನಮ್ಮ ಕಾವೇರಿ, ತುಂಗೆಯರು.. ಇಲ್ಲಿನ ಅರಬ್ಬಿ ಸಮುದ್ರ ಬಿಟ್ಟು ಅಲ್ಲಿ ತನಕ ಬಂಗಾಳ ಕೊಲ್ಲಿ ಹುಡುಕಿ ಹೋಗ್ತಾರೆ ಅನ್ನೋದು ನಿಜಕ್ಕೂ ಆಶ್ಚರ್ಯಕರವಾದ
LikeLike
ಧನ್ಯವಾದಗಳು.. ಪ್ರಕೃತಿಯ ಕೈ ಚಳಕ
LikeLike