ಜಲಿಯನ್ ವಾಲಾ ಬಾಗ್, ಸಾವಿರದ ಒಂಬೈನೂರ ಹತ್ತೊಂಬತ್ತು, ಏಪ್ರಿಲ್ ೧೯ ಮದ್ಯಾಹ್ನ ೩:೩೦, ಬರೋಬ್ಬರಿ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಗೆ ಅಲ್ಲಿ ಸೇರಿದ್ದರು. ಅದರಲ್ಲಿ ಭಾಷಣ ಮಾಡುವವರು, ಕೇಳುವವರು, ಮಕ್ಕಳು, ವಯಸ್ಸಾದವರು, ಹೆಂಗಸರು ಎಲ್ಲರು ಸೇರಿದ್ದರು. ಸಿಖ್ಖರು, ಹಿಂದೂಗಳು , ಮುಸ್ಲಿಮರು, ಕ್ರೈಸ್ತರು .. ಹೀಗೆ ಎಲ್ಲ ಧರ್ಮದವರು ಒಟ್ಟುಗೂಡಿದ್ದರು. ಯಾರ ಕೈಯಲ್ಲಿ ಕೂಡ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ಅವರ ಕೈಯಲ್ಲಿ ಇದ್ದುದು ಕೇವಲ ಭಾರತದ ಧ್ವಜ. ಅದೇ ಅವರೆಲ್ಲರ ಪ್ರತಿಭಟನೆಯ ಅಸ್ತ್ರವಾಗಿತ್ತು. ಎಲ್ಲ ಕಡೆ ವಂದೇ ಮಾತರಂ ಎಂಬ ಕೂಗು ಪ್ರತಿಧ್ವನಿಸುತ್ತಿತ್ತು. ಪ್ರತಿಭಟನೆ ಶುರುವಾಗಿ ಎಲ್ಲರು ಬ್ರಿಟಿಷರ ವಿರುದ್ಧ ಕೂಗಲು ಶುರು ಮಾಡಿದ್ದರು ಅಷ್ಟೇ. ಆಗ ಅಲ್ಲಿಗೆ ತನ್ನ ಜೊತೆಗೆ ತೊಂಬತ್ತು ಜನ ಸೈನಿಕರನ್ನು ಕರೆ ತಂದು ಜಲಿಯನ್ ವಾಲಾ ಬಾಗ್ ನ ಹೊರಗಡೆ ಮತ್ತೆ ಒಳಗಡೆ ಹೋಗುವ ಏಕ ಮಾತ್ರ ದ್ವಾರದ ಎದುರು ಬಂದು ಆತ ನಿಂತಿದ್ದ. ಯಾಕೆಂದರೆ ಪ್ರತಿಭಟನೆ ಮಾಡುತ್ತಿದ್ದ ಜಾಗಕ್ಕೆ ಹೋಗಲು ಬರಲು ಇದ್ದಿದ್ದು ಒಂದೇ ದಾರಿ ಹಾಗು ಅದು ಬಹಳ ಕಿರಿದಾಗಿತ್ತು. ಬಂದವನೇ ಯಾವುದೇ ಮುನ್ಸೂಚನೆ ಕೊಡದೆ ಪ್ರತಿಭಟನಾಕಾರರ ಮೇಲೆ ಒಂದೇ ಸಮನೆ ಗುಂಡಿನ ಮಳೆಗೆರೆಯತೊಡಗಿದ. ಅಲ್ಲಿದ್ದವರು ತಪ್ಪಿಸಿಕೊಳ್ಳಲಿಕ್ಕೆ ದ್ವಾರದ ಬಳಿ ಬಂದು ಗುಂಡಿಗೆ ಸಿಕ್ಕು ಬಲಿಯಾಗತೊಡಗಿದರು. ಕೆಲವರು ತಪ್ಪಿಸಿಕೊಳ್ಳಲು ಗೋಡೆ ಹತ್ತಲು ಶುರು ಮಾಡಿದರು . ಅವರ ಮೇಲೂ ಸಹಿತ ಗುಂಡು ಸಿಡಿಸಲಾಗುತ್ತಿತ್ತು. ಗುಂಡಿನ ಏಟು ತಿಂದು ಕೆಳಗೆ ಬೀಳಲಾರಂಬಿಸಿದರು ಗುಂಡಿನಿಂದ ತಪ್ಪಿಸಿಕೊಳ್ಳಲು ಅಲ್ಲೇ ಮದ್ಯದಲ್ಲಿ ಇದ್ದ ಭಾವಿಗೆ (The Martyrs’ Well) ಹಾರಲು ಶುರು ಮಾಡಿದರು. ಜೀವ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡತೊಡಗಿದರು. ಆದರೆ ಅವತ್ತು ಅನೇಕರಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ. ದೇಶಕ್ಕಾಗಿ ಅವತ್ತು ಅನೇಕ ಜನ ಜೀವ ಕಳೆದುಕೊಂಡವರು.

ನಿಮಗೆಲ್ಲ ನೆನಪಿರಲಿ ಈ ಹತ್ಯಾಕಾಂಡವನ್ನು ಮಾಡಿದ ಆ ನರ ರಾಕ್ಷಸನ ಹೆಸರು ” Reginald Edward Harry Dyer “.
1919ರಲ್ಲಿ ದೇಶದೆಲ್ಲಡೆ ಸ್ವಾತಂತ್ರ್ಯಕ್ಕಾಗಿ ಹೋರಾಟದ ಕಾವು ಬಹಳ ಜೋರಾಗಿತ್ತು. ಗಾಂಧೀಜಿ ಆಗಷ್ಟೇ ಹೋರಾಟಕ್ಕೆ ದುಮುಕಿದ್ದರು. ಅವರದು ಅಹಿಂಸೆಯ ಮಾರ್ಗವಾಗಿತ್ತು. ಯಾವಾಗ ದೇಶದ ಪ್ರಜೆಗಳು ಹೋರಾಟದ ಹಾದಿ ಹಿಡಿಯತೊಡಗಿದರೋ ಆಗ ಬ್ರಿಟಿಷರು ಹೋರಾಟವನ್ನು ಮಟ್ಟ ಹಾಕಲು ತಂದಿದ್ದೆ “Rowlatt Act” (Anarchical and Revolutionary Crimes Act of 1919). ಆ ಯಾಕ್ಟಿನ ಪ್ರಕಾರ ಯಾವುದೇ ಕಾರಣ ಕೊಡದೆ, ಯಾವುದೇ ವಿಚಾರಣೆ ಇಲ್ಲದೆ, ಯಾರಾನ್ನಾದರೂ ಬಂದಿಸಿ ಕಾರಾಗೃಹಕ್ಕೆ ಹಾಕಬಹುದಾಗಿತ್ತು. ಇದರ ವಿರುದ್ಧ ಗಾಂಧೀಜಿ ಹೋರಾಟ ಆರಂಭಿಸಿದರು. ಇದೆ ಹೋರಾಟದ ಒಂದು ಭಾಗವಾಗಿ ಪಂಜಾಬಿನ ಅಮೃತಸರಕ್ಕೆ ಭೇಟಿ ನೀಡಿ ಪ್ರತಿಭಟನೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಬ್ರಿಟಿಷರು ಅದಕ್ಕೆ ಅವಕಾಶ ನೀಡಲಿಲ್ಲ. ಅದರ ವಿರುದ್ಧ ಪಂಜಾಬಿನ ಜನತೆ ಪ್ರತಿಭಟನೆಗೆ ಸೇರಿದ್ದೇ ಗೋಲ್ಡನ್ ಟೆಂಪಲ್ ಹತ್ತಿರ ಇರುವ ಜಲಿಯನ್ ವಾಲಾ ಬಾಗ್ ಎಂಬ ಉದ್ಯಾನವನದಲ್ಲಿ. ಉದ್ಯಾನವನದ ಸುತ್ತ ೧೦ ಅಡಿಗಿಂತ ದೊಡ್ಡ ಗೋಡೆಯಿದೆ. ಚಿಕ್ಕ ಚಿಕ್ಕ ೬ರಿಂದ ೭ ದ್ವಾರಗಳಿದ್ದರು ಅಂದು ಎಲ್ಲವನ್ನು ಮುಚ್ಚಿ ಹಾಕಲಾಗಿತ್ತು. ಒಳಗೆ ಹೋಗಿ ಮತ್ತು ಬರಲು ಒಂದೇ ದ್ವಾರ ಇತ್ತು. ಬಹುಷಃ ಇದೆ ಕಾರಣದಿಂದ ಅವತ್ತು ಅಷ್ಟು ಸಾವುಗಳು ಆಗಲು ಕಾರಣವಾಗಿದ್ದು.
ಬ್ರಿಟಿಷರ ಪ್ರಕಾರ ಆರು ಸಾವಿರದಿಂದ ಏಳು ಸಾವಿರದವರೆಗೆ ಜನ ಸೇರಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ಅದಕ್ಕಿಂತ ಜಾಸ್ತಿ ಜನ ಸೇರಿದ್ದರು. ಆಗ ಕೋಲೋನಿಲ್ ಡೈಯರ್ ಅಲ್ಲಿಗೆ ತೊಂಬತ್ತು ಸೈನಿಕರೊಂದಿಗೆ ( 54th sikhs, Gurkha rifles ಮತ್ತು 59th Sind rifles) ಅಲ್ಲಿಗೆ ಬಂದ. ಸೇರಿದ್ದ ಜನರಿಗೆ ಯಾವುದೇ ಮುನ್ಸೂಚನೆ ಕೊಡದೆ ಗುಂಡು ಹೊಡೆಯಲು ತನ್ನ ಸೈನಿಕರಿಗೆ ಅಪ್ಪಣೆ ಕೊಟ್ಟ. ಯಾವಾಗ ಗುಂಡುಗಳು ಬಂದು ದೇಹಗಳನ್ನು ತೂತು ಮಾಡತೊಡಗಿತೋ ಜನರು ದಿಕ್ಕಾಪಾಲಾಗಿ ಓಡತೊಡಗಿದರು. ತಪ್ಪಿಸಿಕೊಳ್ಳರು ತೆರೆದಿದ್ದ ಬಾಗಿಲಿಗೆ ಬಂದು ಎದುರಿಗೆ ನಿಂತು ಗುಂಡು ಹೊಡೆಯುತ್ತ ನಿಂತಿದ್ದ ಸೈನಿಕರಿಂದ ನೇರವಾಗಿ ಗುಂಡೇಟು ತಿಂದು ಪ್ರಾಣ ಬಿಟ್ಟರು. ಅವತ್ತು ದೇಶಕ್ಕಾಗಿ ಜೀವ ತೆತ್ತವರ ಸಂಖ್ಯೆ 379. ಅವರಲ್ಲಿ 337 ಜನ ಗಂಡಸರಿದ್ದರೆ 42 ಹುಡುಗರಿದ್ದರು. ಅತಿ ಕ್ರೂರ ಅಂದರೆ ಅವರಲ್ಲಿ ಆರು ವರುಷದ ಒಂದು ಮಗುವಿತ್ತು. ಗಾಯಗೊಂಡವರು ಸಂಖ್ಯೆ ಎರಡು ಸಾವಿರಕ್ಕೂ ಹೆಚ್ಚು. ಇದು ಬ್ರಿಟಿಷರು ಕೊಟ್ಟ ಲೆಕ್ಕ. ಆದರೆ ಅಲ್ಲಿ ಸತ್ತಿದ್ದು ಸಾವಿರದ ಐನೂರುಕ್ಕು ಜಾಸ್ತಿ ಎನ್ನುತ್ತಾರೆ.
ಬ್ರಿಟಿಷರು ಕೊಟ್ಟ ಲೆಕ್ಕದ ಪ್ರಕಾರ ಅವತ್ತು ಆ ನರ ರಾಕ್ಷಸ ಗುಂಡು ಹಾರಿಸಿದ್ದು ಒಟ್ಟು 1650 ಸುತ್ತು.
ಜಲಿಯನ್ ವಾಲಾ ಬಾಗ್ನಲ್ಲಿದ್ದ ಭಾವಿಯೊಳಗೆ ಸಿಕ್ಕ ಶವಗಳ ಸಂಖ್ಯೆ ೧೨೦.
ಅಂದು ಇಂತಹ ನರಮೇಧವನ್ನು ಸಹಿತ ಬ್ರಿಟಿಷರು ಸಮರ್ಥಿಸಿಕೊಂಡರು.
ಅವತ್ತು ನಡೆದ ನರಮೇಧ ಇವತ್ತಿಗೂ ಚರಿತ್ರೆಯಲ್ಲಿ ಯಾವತ್ತಿಗೂ ನಮಗೆ ಅತಿ ನೋವು ಕೊಡುವ ಪುಟವಾಗಿ ಉಳಿದಿದೆ.
ಇಂತಹ ನರಮೇಧವನ್ನು ನಡೆಸಲು Reginald Edward Harry Dyer ಗೆ ಅಪ್ಪಣೆ ಕೊಟ್ಟ ಅವತ್ತಿನ ಲೆಫ್ಟಿನೆಂಟ್ ಗವರ್ನರ ಆಫ್ ಪಂಜಾಬ್ Michael O’Dwyer ನ್ನು ಉಧಮ್ ಸಿಂಗ್ ಇಪ್ಪತ್ತೊಂದು ವರುಷಗಳ ಬಳಿಕ ಗುಂಡು ಹೊಡೆದು ಕೊಂದನು.
ನಮ್ಮ ಚರಿತ್ರೆಯಲ್ಲಿ ನಡೆದ ಇಂತಹ ಒಂದೊಂದು ಘಟನೆಯನ್ನು ಪ್ರತಿ ದಿನ ನಾವು ಸ್ಮರಿಸಿಕೊಳ್ಳಬೇಕು, ಯಾಕೆಂದರೆ ಇವತ್ತು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಅಷ್ಟು ಸುಲಭವಾಗಿ ಬಂದಿಲ್ಲ.
– ಶ್ರೀನಾಥ್ ಹರದೂರ ಚಿದಂಬರ
ಚಿತ್ರಕೃಪೆ : ಗೂಗಲ್
ತುಂಬಾ ಚೆನ್ನಾಗಿ ಬರೆದಿದ್ದೀರಿ..
LikeLike
ಧನ್ಯವಾದಗಳು..
LikeLike
Nice article 👌
LikeLike