
ಭಾರತದ ರಾಷ್ಟ್ರಪತಿಗಳ ಸಂಬಳ ಈಗ ಬರೋಬ್ಬರಿ ಐದು ಲಕ್ಷ ಜೊತೆಗೆ ವಿವಿಧ ರೀತಿಯ ಭತ್ಯೆ ಗಳು ಸಹ ಇದೆ. ಈಗ ನಮ್ಮ ಭಾರತದ ಹದಿನಾಲ್ಕನೇ ರಾಷ್ಟ್ರಪತಿಯಾಗಿ ರಾಮ ನಾಥ್ ಕೊವಿಂದ್ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ -೧೯ ಕಾರಣದಿಂದಾಗಿ ರಾಷ್ಟ್ರಪತಿ ಸಮೇತ , ಪ್ರಧಾನ ಮಂತ್ರಿ, ಲೋಕ ಸಭಾ ಸದಸ್ಯರು ಹಾಗು ವಿಧಾನ ಸಭಾ ಸದಸ್ಯರು ಶೇಕಡಾ ಎಪ್ಪತ್ತರಷ್ಟು ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ಆದರೆ ಇದೇನು ಅಂತಹ ದೊಡ್ಡ ವಿಷಯ ಅಲ್ಲ ಬಿಡಿ, ಯಾಕೆಂದರೆ ಅವರೇನು ಆ ಸಂಬಳದಿಂದ ಜೀವನ ಮಾಡುತ್ತಿಲ್ಲ.
ನಮ್ಮ ಭಾರತದ ಮೊದಲ ರಾಷ್ಟ್ರಪತಿ Dr. ರಾಜೇಂದ್ರ ಪ್ರಸಾದ್ ಅವರು. ಅತಿ ಹೆಚ್ಚು ವರುಷಗಳ ಕಾಲ ಅಂದರೆ ಹನ್ನೆರಡು ವರುಷಗಳ ಕಾಲ ರಾಷ್ಟ್ರಪತಿಯಾಗಿ ಭಾರತವನ್ನು ಪ್ರತಿನಿಧಿಸಿದರು. ವೃತ್ತಿಯಲ್ಲಿ Dr. ರಾಜೇಂದ್ರ ಪ್ರಸಾದ್ ಅವರು ವಕೀಲ. ಇವರು ಡಾಕ್ಟರೇಟ್ ಪಡೆದಿದ್ದು ಕೂಡ ಕಾನೂನು ವಿಷಯದಲ್ಲೇ ( ಅಲಹಾಬಾದ್ ಯೂನಿವರ್ಸಿಟಿ , 1937ರಲ್ಲಿ). ವಕೀಲಿ ವೃತ್ತಿ ಮಾಡುವಾಗ ಬಿಹಾರ ರಾಜ್ಯದಲ್ಲೇ ದುಬಾರಿ ವಕೀಲರು ಎಂದೆನಿಸಿಕೊಂಡಿದ್ದರು. ಮೊದಲಿಂದಲೂ ಅವರ ಮನೆಯವರು ಬಹಳ ಅನುಕೂಲಸ್ಥರು. ಹಾಗಾಗಿ ಅವರ ಜೀವನ ಶೈಲಿ ಕೂಡ ಹಾಗೆ ಶ್ರೀಮಂತಿಕೆಯಿಂದ ಕೂಡಿತ್ತು. ಇತ್ತು. ಯಾವಾಗ ಗಾಂಧೀಜಿಯವರೊಡನೆ Dr. ರಾಜೇಂದ್ರ ಪ್ರಸಾದ್ ಅವರ ಒಡನಾಟ ಶುರುವಾಯಿತೊ, ಅಲ್ಲಿಂದ ಅವರ ಜೀವನ ಶೈಲಿ ಸಂಪೂರ್ಣವಾಗಿ ಬದಲಾಗಿ ಹೋಯಿತು. ಶ್ರೀಮಂತಿಕೆಯ ಜೀವನದಿಂದ ಹೊರಬಂದು ತುಂಬ ಸರಳ ಜೀವನ ಆರಂಭಿಸಿದರು. ಅವರು ತಮ್ಮನ್ನು ಸ್ವತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಉಪ್ಪಿನ ಸತ್ಯಾಗ್ರಹ ಹಾಗಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಕಾರಾಗೃಹ ಶಿಕ್ಷೆ ಕೂಡ ಅನುಭವಿಸಿದರು. ಬಿಹಾರದಲ್ಲಿ ದೊಡ್ಡ ರಾಜಕೀಯ ನಾಯಕರಾಗಿ ಬೆಳೆಯುತ್ತ ಹೋದರು. ೧೯೪೬ ರ ಚುನಾವಣೆಯಲ್ಲಿ ಗೆದ್ದು ಆಹಾರ ಮತ್ತು ವ್ಯವಸಾಯ ಮಂತ್ರಿ ಕೂಡ ಆಗಿದ್ದರು.
ಭಾರತಕ್ಕೆ ಸ್ವತಂತ್ರ ಸಿಕ್ಕ ಮೇಲೆ ಭಾರತದ ಮೊದಲ ರಾಷ್ಟ್ರಪತಿಯಾಗಿ ಆಯ್ಕೆಯಾಗಿ, ಅಲ್ಲಿಂದ ಹನ್ನೆರಡು ವರುಷಗಳ ಕಾಲ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಹಿಸಿದರು. ಆಗ ಅವರ ಸಂಬಳ ಎಷ್ಟು ಗೊತ್ತಾ ? ಹತ್ತು ಸಾವಿರ ರೂಪಾಯಿಗಳು. ಆದರೆ Dr. ರಾಜೇಂದ್ರ ಪ್ರಸಾದ್ ಅರ್ಧ ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದರು. ನನಗೆ ಅಷ್ಟು ಸಂಬಳದ ಅಗತ್ಯ ಇಲ್ಲ ಹಾಗಾಗಿ ನಾನು ಪೂರ್ತಿ ಸಂಬಳ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದರು. ಅವರ ಕೊನೆಯ ಅವಧಿಯಲ್ಲಿ ಕೇವಲ ಕಾಲು ಭಾಗ ಸಂಬಳ ಮಾತ್ರ ತೆಗೆದುಕೊಳ್ಳುತ್ತಿದ್ದರು. ಸರಳ ಜೀವನಕ್ಕೆ ಒತ್ತು ಕೊಡುತ್ತಿದ್ದ ಅವರಿಗೆ ದುಡ್ಡು ಮುಖ್ಯವಾಗಿರಲಿಲ್ಲ.
ಈಗಿನ ನಮ್ಮ ನಾಯಕರಲ್ಲಿ ಇಂತಹ ಗುಣವನ್ನು ನಾವು ಕಾಣಲು ಸಾಧ್ಯವೇ?
– ಶ್ರೀನಾಥ್ ಹರದೂರ ಚಿದಂಬರ
ಚಿತ್ರ ಕೃಪೆ: ಗೂಗಲ್
Super 👍👍👍
LikeLike