ಆ ಕಂಪನಿ ಸರಿಯಾಗಿ ಒಂಬತ್ತು ಗಂಟೆಗೆ ಶುರುವಾಗುತ್ತಿತ್ತು. ತುಂಬಾ ದೊಡ್ಡ ಕಂಪನಿ ಏನು ಆಗಿರಲಿಲ್ಲ. ಇಡೀ ಕಂಪನಿಯಲ್ಲಿ ಎಲ್ಲ ಸೇರಿ ಸರಿ ಸುಮಾರು ಇಪ್ಪತ್ತೈದು ಜನ ಕೆಲಸ ಮಾಡುತ್ತಿದ್ದರು. ಎಲ್ಲ ಕೆಲಸಗಾರರು ಬೆಳಗ್ಗೆ ಒಂಬತ್ತಕ್ಕೆ, ಐದು ಅಥವಾ ಹತ್ತು ನಿಮಿಷ ಮುಂಚೆನೇ ಬಂದು ಕೆಲಸ ಶುರುಮಾಡಲು ತಯಾರು ಮಾಡಿಕೊಳ್ಳುತ್ತಿದ್ದರು. ಹೆಂಗಸರು ಎಂದಿನಂತೆ ತಮ್ಮ ಊಟದ ಡಬ್ಬಿ ಹಾಗು ವ್ಯಾನಿಟಿ ಬ್ಯಾಗ್ ಗಳನ್ನೂ ಒಂದು ಜಾಗದಲ್ಲಿಟ್ಟು ತಾವು ಕೆಲಸ ಮಾಡುವ ಇಲಾಖೆಗಳಿಗೆ ಹೋಗಿ ತಮ್ಮ ಕೆಲಸ ಶುರು ಮಾಡಲು ಅನುವಾಗುತ್ತಿದ್ದರು. ಅವತ್ತು ಕೂಡ ಎಂದಿನಂತೆ ಕಚೇರಿಯ ಕೆಲಸ ಶುರುವಾಗಿತ್ತು. ಎಂದಿನಂತೆ ಎಲ್ಲರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಮದ್ಯಾಹ್ನ ಊಟದ ಸಮಯ ಆದಾಗ ನಿಧಾನವಾಗಿ ಒಬ್ಬೊಬ್ಬರೇ ಊಟಕ್ಕೆ ತೆರಳ ತೊಡಗಿದರು. ಹೆಂಗಸರು ಕೂಡ ತಾವು ಊಟದ ಡಬ್ಬಿ ಇಟ್ಟ ಜಾಗಕ್ಕೆ ಬಂದು ಊಟದ ಡಬ್ಬಿಗಳನ್ನು ತೆಗೆದುಕೊಂಡು ಹೊರಗಡೆ ಇದ್ದ ಗಾರ್ಡನ್ ಗೆ ಊಟ ಮಾಡಲು ಹೊರಟರು. ಗಂಡಸರು ಕಂಪನಿಯ ಹೊರಗಡೆ ದಾರಿ ಬದಿಯಲ್ಲಿ ಸಿಗುವ ಮುದ್ದೆ ಊಟ ಮಾಡಲು ಹೊರಟರು. ಕಂಪನಿಯಲ್ಲಿ ಒಂದು ಗಂಟೆಯಾ ಕಾಲ ಊಟದ ಸಮಯ ನೀಡಲಾಗುತ್ತಿತ್ತು. ಹಾಗಾಗಿ ಅನೇಕರು ಊಟ ಮುಗಿಸಿ ಆದ ಮೇಲೆ ಸಣ್ಣ ವಾಕಿಂಗ್ ಮಾಡುತ್ತಿದ್ದರು. ಕೆಲವರು ಸಣ್ಣ ಪುಟ್ಟ ಸ್ವಂತ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಎಲ್ಲರಂತೆ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮನಾ, ಸ್ವಾತಿ, ಮಂಜುಳಾ ಮತ್ತು ಕವನ ಕೂಡ ತಮ್ಮ ಡಬ್ಬಿಗಳನ್ನು ತೆಗೆದುಕೊಂಡು ಊಟ ಮಾಡಲು ಹೊರಗಡೆ ಹೊರಟರು. ನಾಲ್ವರು ಎರಡು ವರುಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರ ನಡುವೆ ಒಳ್ಳೆ ಸ್ನೇಹವಿತ್ತು. ಹಾಗಾಗಿ ಯಾವಾಗಲೂ ಕಂಪನಿಗೆ ಒಟ್ಟಿಗೆ ಹೋಗಿ ಬಂದು ಮಾಡುತ್ತಿದ್ದರು. ಊಟದ ಸಮಯದಲ್ಲಿ ಕೂಡ ಒಟ್ಟಿಗೆ ಜೊತೆಯಲ್ಲಿ ಹೋಗುತ್ತಿದ್ದರು.
ಎಂದಿನಂತೆ ಅವತ್ತು ಅವರು ಊಟ ಮುಗಿದ ಮೇಲೆ ಹೊರಗಡೆ ಇದ್ದ ಒಂದು ಅಂಗಡಿಯಲ್ಲಿ ಬಾಳೆ ಹಣ್ಣು ತಿನ್ನಲು ಒಂದು ಅಂಗಡಿಗೆ ಹೋದರು. ಬಾಳೆ ಹಣ್ಣು ತೆಗೆದುಕೊಂಡು ಸುಮನಾ ವ್ಯಾನಿಟಿ ಬ್ಯಾಗ್ ನಿಂದ ದುಡ್ಡು ಕೊಡಲು ಪರ್ಸ್ ತೆಗೆದಾಗ, ಪರ್ಸ್ ನಲ್ಲಿದ್ದ ನೂರು ರೂಪಾಯಿಯ ನೋಟು ಕಾಣೆ ಆಗಿತ್ತು. ಅವಳು ಇಟ್ಟುಕೊಂಡಿದ್ದ ಇನ್ನೂರ ಇವತ್ತು ರೂಪಾಯಿಯಲ್ಲಿ ನೂರು ರೂಪಾಯಿ ಮಾತ್ರ ಇರಲಿಲ್ಲ. ಬೆಳಿಗ್ಗೆ ಏಟಿಎಂ ನಲ್ಲಿ ದುಡ್ಡು ಡ್ರಾ ಮಾಡಿ ಪರ್ಸಿನಲ್ಲಿ ಅದನ್ನು ಇಟ್ಟುಕೊಂಡಿದ್ದು ಅವಳಿಗೆ ಚೆನ್ನಾಗಿ ನೆನಪಿತ್ತು. ಹೇಗೆ ಕಾಣೆಯಾಯಿತು ಅಂತ ಯೋಚನೆ ಮಾಡುತ್ತಾ, ಏನನ್ನು ಮಾತನಾಡದೆ ಬರುತ್ತಿದ್ದುದ್ದನ್ನು ನೋಡಿ ಕವನ ” ಏನಾಯ್ತು” ಅಂತ ಕೇಳಿದಳು. ಸುಮನಾ ವಿಷ್ಯ ತಿಳಿಸಿದಾಗ ಕವನ ” ಹಿಂದಿನ ವಾರ ನನ್ನ ಪರ್ಸ್ನಲ್ಲಿದ್ದ ಐವತ್ತು ರೂಪಾಯಿ ಕೂಡ ಹೀಗೆ ಕಾಣೆಯಾಗಿತ್ತು, ಕಣೆ,” ಅಂತ ಅಂದಳು. ಮಂಜುಳಾ ಹಾಗು ಸ್ವಾತಿ ಕೂಡ ಕೆಲವು ದಿನಗಳ ಹಿಂದೆ ನಮ್ಮ ಹಣ ಕೂಡ ಕಾಣೆಯಾಗಿತ್ತು ಅಂತ ಹೇಳಿದರು. ಅದಕ್ಕೆ ಸುಮನಾ “ಹಾಗಾದರೆ ಯಾರೋ ಹಣವನ್ನು ಕಳವು ಮಾಡುತ್ತಾ ಇದ್ದಾರೆ, ನಾವು ಆಫೀಸ್ನಲ್ಲಿ ದೂರು ಕೊಡಬೇಕು ” ಅಂತ ಹೇಳಿದಳು. ಆಗ ಕವನ ” ಅಯ್ಯೋ ಬಿಡೆ, ದೂರು ಗೀರು ಅಂತ ಯಾಕೆ ಸುಮ್ಮನೆ ತಲೆಬಿಸಿ ” ಅಂತ ಹೇಳಿ ದೂರು ಕೊಡಲು ಬಿಡಲಿಲ್ಲ.
ಹೀಗೆ ಕೆಲವು ದಿನಗಳು ಕಳೆದವು. ಅವತ್ತು ತಿಂಗಳ ಸಂಬಳ ಆಗಿತ್ತು. ಎಲ್ಲರ ಮುಖದಲ್ಲಿ ಸ್ವಲ್ಪ ಜಾಸ್ತಿನೇ ಉತ್ಸಾಹ ಎದ್ದು ಕಾಣುತಿತ್ತು. ಕವನ ಕೂಡ ಬೇಗ ಬೇಗ ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುತ್ತಾ, ಸಂಬಳ ಡ್ರಾ ಮಾಡಿಕೊಂಡು ಹೋಗಬೇಕು ಅಂತ ಮನಸ್ಸಿನ್ನಲ್ಲೇ ಏನೇನು ಖರ್ಚು ಮಾಡಬೇಕು, ಏನೇನು ತೆಗೆದುಕೊಳ್ಳಬೇಕು, ಅಂದುಕೊಳ್ಳುತ್ತ ಕೆಲಸ ಮಾಡುತ್ತಿದ್ದಳು. ಸಂಜೆ ೬ ಗಂಟೆಗೆ ಕೆಲಸ ಮುಗಿಸಿ ತನ್ನ ವ್ಯಾನಿಟಿ ಬ್ಯಾಗ್ ತೆಗೆದುಕೊಳ್ಳುತ್ತಿರುವಾಗಲೇ ಸುಮನಾ ಕೂಡ ಅಲ್ಲಿಗೆ ಬಂದಳು. ಕವನ ವ್ಯಾನಿಟಿ ಬ್ಯಾಗ್ ತೆಗೆದು ತನ್ನ ಮೊಬೈಲ್ ನೋಡಿದಳು. ಬ್ಯಾಂಕಿನಿಂದ ಒಂದು ಮೆಸೇಜ್ ಬಂದಿತ್ತು. ಅದನ್ನು ನೋಡಿ ಅವಳಿಗೆ ದೊಡ್ಡ ಆಘಾತವಾಯಿತು. ಮೆಸೇಜ್ನಲ್ಲಿ ಅವಳ ಅಕೌಂಟ್ನಿಂದ ಸುಮಾರು ಹತ್ತು ಸಾವಿರ ಡ್ರಾ ಆಗಿದೆ ಎಂದಿತ್ತು. ಅದನ್ನು ನೋಡಿ ಗಾಬರಿಯಾಗಿ ಅವಳು ಅಳುತ್ತ ಕುಳಿತಳು. ಬೆಳಿಗ್ಗೆ ಸಂಬಳ ಕ್ರೆಡಿಟ್ ಆಗಿದೆ ಅಂತ ಮೆಸೇಜ್ ಇತ್ತು. ಈಗ ನೋಡಿದರೆ ಸಂಬಳದ ಜೊತೆಗೆ ಬ್ಯಾಲೆನ್ಸ್ ಇದ್ದ ಹಣವನ್ನು ಕೂಡ ಯಾರೋ ಡ್ರಾ ಮಾಡಿದ್ದರು. ಸುಮನಾ ಕೂಡಲೇ ವಿಷ್ಯವನ್ನು ಆಫೀಸಿಗೆ ತಿಳಿಸಿದಳು. ನಡೆದ ವಿಷಯ ಇಡೀ ಕಂಪನಿಯಲ್ಲಿ ಕೂಡಲೇ ಮಿಂಚಿನಂತೆ ವೇಗವಾಗಿ ಹರಡಿತು. ಯಾರು ಕೂಡ ಮನೆಗೆ ಹೋಗದೆ ಎಲ್ಲರು ಬಂದು ಆಫೀಸಿನ ಮುಂದೆ ಸೇರಿದರು. ಆಫೀಸಿನ ಮ್ಯಾನೇಜರ್ ಬಂದು ಕವನಳಿಗೆ ವಿವರವಾಗಿ ಏನಾಯಿತು ಅಂತ ಹೇಳಲು ಹೇಳಿದರು. ಕವನ “ನನ್ನ ಅಕೌಂಟ್ ನಿಂದ ನಾನು ಇವತ್ತು ಯಾವುದೇ ಹಣ ಡ್ರಾ ಮಾಡಿಲ್ಲ, ನನ್ನ ಡೆಬಿಟ್ ಕಾರ್ಡ್ ನನ್ನ ಪರ್ಸ್ ನಲ್ಲಿಯೇ ಇದೆ. ಆದರೆ ದುಡ್ಡು ಮಾತ್ರ ಡ್ರಾ ಆಗಿದೆ ಅಂತ ಮೆಸೇಜ್ ಬಂದಿದೆ” ಅಂತ ಹೇಳಿದಳು. ಅದಕ್ಕೆ ಮ್ಯಾನೇಜರ್ ” ನೋಡು, ಮೊದಲು ನೀನು ನಿನ್ನ ಅಕೌಂಟ್ ಇರುವ ಬ್ಯಾಂಕಿಗೆ ಹೋಗಿ ವಿಚಾರಿಸು, ಅವರು ಏನು ಹೇಳುತ್ತಾರೆ ಅಂತ ನೋಡಿ, ಆಮೇಲೆ ನಾವು ಆಕ್ಷನ್ ತೆಗೆದುಕೊಳ್ತೀವಿ” ಅಂತ ಹೇಳಿದರು.
ಮರುದಿನ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ, ಬ್ಯಾಂಕಿನಲ್ಲಿ ಅವಳ ಕಂಪ್ಲೈಂಟ್ ತೆಗೆದುಕೊಂಡು ಮದ್ಯಾಹ್ನ ಬರಲು ಹೇಳಿದರು. ಮದ್ಯಾಹ್ನ ಮತ್ತೆ ಬ್ಯಾಂಕಿಗೆ ಹೋದಾಗ ” ಹಣವನ್ನು ಏಟಿಎಂ ನಲ್ಲಿಯೇ ಡ್ರಾ ಆಗಿದೆ , ಮದ್ಯಾಹ್ನ ಒಂದು ಕಾಲಿಗೆ ಹಣ ಡ್ರಾ ಆಗಿದೆ, ಯಾವ ಏಟಿಎಂ ನಲ್ಲಿ ಡ್ರಾ ಆಗಿದ್ದು ಅಂತ ಇದರಲ್ಲಿ ಅಡ್ರೆಸ್ ಇದೆ ” ಅಂತ ಹೇಳಿ ಅಡ್ರೆಸ್ ಕೊಟ್ಟರು. ಆ ಏಟಿಎಂ ಬೇರೆ ಯಾವುದು ಆಗಿರದೆ ಕಂಪನಿಯ ಪಕ್ಕದಲ್ಲಿಯೇ ಇದ್ದ ಏಟಿಎಂ ಅಂತ ಗೊತ್ತಾಯಿತು. ಆಫೀಸಿನಲ್ಲಿ ವಿಷಯ ತಿಳಿಸಿದಾಗ ಎಲ್ಲರಿಗು ಬಹಳ ಆಶ್ಚರ್ಯವಾಯಿತು. ಕವನ ಹಣವನ್ನು ಡ್ರಾ ಮಾಡದಿದ್ದರೆ ಯಾರು ಡ್ರಾ ಮಾಡಿರಬಹುದು, ಅದು ಅವಳ ಕಾರ್ಡ್ ಉಪಯೋಗಿಸಿ ಅಂತ ಕುತೂಹಲ ಕೂಡ ಆಯಿತು. ಯಾರೇ ತೆಗೆದುಕೊಂಡರು ಹಣ ಡ್ರಾ ಮಾಡಲು ಪಿನ್ ಬೇಕೇ ಬೇಕಲ್ವಾ? ಇದು ಹೇಗೆ ಸಾಧ್ಯ? ಅಂತ ಮಾತನಾಡತೊಡಗಿದರು. ಆಗ ಸುಮನಾ ಹಿಂದೆ ತನ್ನ ಪರ್ಸ್ ನಿಂದ ಕಾಣೆಯಾಗಿದ್ದ ಹಣದ ಬಗ್ಗೆ ಹೇಳಿದಳು. ಅದನ್ನು ಕೇಳಿ ಅಲ್ಲಿದ್ದ ಒಬ್ಬಬ್ಬೊರೇ ನಿಧಾನವಾಗಿ ಅವರವರ ಅನುಭವ ಹೇಳಿಕೊಳ್ಳತೊಡಗಿದರು. ಕೆಲಸ ಮಾಡುತ್ತಿದ್ದ ಎಲ್ಲ ಹೆಂಗಸರ ಪರ್ಸ್ ನಿಂದ ನೂರು, ಇವತ್ತು ರೂಪಾಯಿ ಹೀಗೆ ಅನೇಕ ಬಾರಿ ಕಾಣೆ ಆಗಿದ್ದ ವಿಷಯ ಹೊರಬಂತು. ಆಗ ಎಲ್ಲರಿಗು ಇಷ್ಟು ದಿವಸ ಕಂಪನಿಯಲ್ಲಿ ನಡೆಯುತ್ತಿದ್ದ ಕಳ್ಳತನದ ಬಗ್ಗೆ, ಹಾಗೆ ಆ ಕಳ್ಳ ನಮ್ಮಲ್ಲಿಯೇ ಇದ್ದಾನೆ ಎಂದು ಗೊತ್ತಾಯಿತು.
ಮ್ಯಾನೇಜರ್ ಬಂದು ” ನೋಡಿ, ಹೊರಗಡೆ ವ್ಯಕ್ತಿಯಿಂದ ಇದು ಸಾಧ್ಯವೇ ಇಲ್ಲ, ಕಳ್ಳ ನಮ್ಮಲ್ಲಿಯೇ ಇದ್ದಾನೆ, ಅವರೇ ಮುಂದೆ ಬಂದು ಒಪ್ಪಿಕೊಳ್ಳಿ, ನನ್ನ ವಯುಕ್ತಿಕ ನಂಬರ್ ತೆಗೊಳ್ಳಿ, ನೀವೇ ನಾಳೆ ಬೆಳಿಗ್ಗೆಯೊಳಗೆ ಫೋನ್ ಮಾಡಿ ನನಗೆ ಖುದ್ದಾಗಿ ತಿಳಿಸಿ, ಇಲ್ಲದಿದ್ದರೆ ನಾವು ಪೊಲೀಸ್ ಕಂಪ್ಲೇಂಟ್ ಕೊಡಬೇಕಾಗುತ್ತೆ ” ಎಂದು ಹೇಳಿದರು. ಆದರೆ ಮರುದಿನವೂ ಕೂಡ ಯಾರು ಮುಂದೆ ಬಂದು ಹೇಳದಿದ್ದುದ್ದನ್ನು ನೋಡಿ, ಮ್ಯಾನೇಜರ್ ಪೊಲೀಸ್ಗೆ ಫೋನ್ ಮಾಡಿದರು. ಪೊಲೀಸರು ಮರುದಿನ ಬರುತ್ತೇವೆ, ಕಂಪನಿಯಲ್ಲಿ ಎಲ್ಲರು ನಾಳೆ ಇರಲೇಬೇಕು ಅಂತ ಹೇಳಿದರು.
ಮರುದಿನ ಪೊಲೀಸರು ಬಂದು ಯಾರು ಯಾರು ದುಡ್ಡು ಕಳೆದುಕೊಂಡಿದ್ದರೋ ಅವರ ಹತ್ತಿರ ಮಾತನಾಡಿ, ಕವನಳ ಹತ್ತಿರ ಅವಳ ಬ್ಯಾಂಕಿನ ಅಕೌಂಟ್ ಡೀಟೇಲ್ಸ್ ಮತ್ತು ಅಡ್ರೆಸ್ ತೆಗೆದುಕೊಂಡು ವಾಪಸು ಹೋದರು. ಯಾವುದೇ ಸಿಸಿ ಟಿವಿ ಇಲ್ಲದ ಕಾರಣ ಕಂಪನಿಯಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮೂರು ನಾಲಕ್ಕು ದಿವಸ ಪೊಲೀಸರಿಂದ ಏನು ಸುದ್ದಿ ಬರಲಿಲ್ಲ. ಕಂಪನಿಯಲ್ಲಿ ಆಗಲೇ ಅವರು ಮಾಡಿರಬಹುದಾ ? ಇವರು ಮಾಡಿರಬಹುದಾ ? ಅಂತ ಗುಸು ಗುಸು ಅಂತ ಮಾತು ಮಾತುಗಳು ಶುರುವಾಗಿತ್ತು.
ಐದು ದಿವಸ ಕಳೆದ ಮೇಲೆ, ಪೊಲೀಸರು ಕಂಪನಿಗೆ ಬಂದರು. ಅವರ ಕೈಯಲ್ಲಿ ಒಂದು ಲ್ಯಾಪ್ ಟಾಪ್ ಇತ್ತು. ಮ್ಯಾನೇಜರ್ ಹಾಗು ಕಂಪನಿ ಡೈರೆಕ್ಟರ್, ಹಾಗು ಪೊಲೀಸರು ಆಫೀಸ್ ರೂಮಿಗೆ ಹೋಗಿ ಕುಳಿತರು. ಪೊಲೀಸರು ಅವರಿಗೆ ಲ್ಯಾಪ್ಟಾಪ್ನಲ್ಲಿ ಏನನ್ನೋ ತೋರಿಸುತ್ತಿದ್ದರು. ಸ್ವಲ್ಪ ಹೊತ್ತು ಕಳೆದ ಮೇಲೆ ಎಲ್ಲರು ಹೊರಗಡೆ ಬಂದರು. ಪೊಲೀಸರು ಮ್ಯಾನೇಜರ್ ಗೆ ಏನೋ ಹೇಳಿ ಅಲ್ಲಿಂದ ಹೊರಟು ಹೋದರು. ಪ್ರತಿಯೊಬ್ಬರು ಬಹಳ ಕುತೂಹಲದಿಂದ ನೋಡುತ್ತಲೇ ಇದ್ದರು. ಪೊಲೀಸರಿಗೆ ಏನಾದರೂ ಸುಳಿವು ಸಿಕ್ಕಿತೇ, ಯಾರು ಕಳ್ಳ ಅಂತ ಗೊತ್ತಾಯಿತೇ ಅಂತ ತಿಳಿದುಕೊಳ್ಳಲು ಕಾಯುತ್ತಿದ್ದರು. ಆದರೆ ಮ್ಯಾನೇಜರ್ ಅವರಿಗೆ ” ನಾಳೆ ಹೇಳ್ತಿವಿ ಏನು ಆಯಿತು ಅಂತ” ಎಂದು ಹೇಳಿದರು.
ಮರುದಿನ ಬೆಳಿಗ್ಗೆ ಎಲ್ಲರು ಆಫೀಸಿನ ಮುಂದೆ ಏನಾಯ್ತು ಅಂತ ಕೇಳಲು ಬಂದು ಸೇರಿದರು. ಮ್ಯಾನೇಜರ್ ಬರುತ್ತಿದ್ದಂತೆ ” ಎಲ್ಲರೂ , ಏನಾಯ್ತು ? ಯಾರು ಕದ್ದಿದ್ದು ಅಂತ ಗೊತ್ತಾಯ್ತಾ ? ” ಅಂತ ಕೇಳಿದರು. ಅದಕ್ಕೆ ಮ್ಯಾನೇಜರ್ ” ಇವತ್ತು ಯಾರು ಕೆಲಸಕ್ಕೆ ಬಂದಿಲ್ಲ? ” ಅಂತ ಕೇಳಿದರು. ಅದಕ್ಕೆ ಅಲ್ಲಿದ್ದವರೆಲ್ಲ ಯಾರು ಬಂದಿಲ್ಲ ಅಂತ ಗಮನಿಸಿದಾಗ, ಅವತ್ತು ಸ್ವಾತಿ ಕೆಲಸಕ್ಕೆ ಬಂದಿರಲಿಲ್ಲ. ಸುಮನಾ ” ಈ ರೀತಿ ಯಾಕೆ ಕೇಳುತ್ತಿದ್ದೀರಿ? ಸ್ವಾತಿ ಯಾಕೆ ಬಂದಿಲ್ಲ? ಏನಾಯಿತು? ಯಾರು ಕದ್ದಿದ್ದು ಅಂತ ಕೇಳಿದರೆ, ನೀವು ಯಾಕೆ ಕೆಲಸಕ್ಕೆ ಬರದವರ ಬಗ್ಗೆ ಕೇಳುತ್ತಿದ್ದೀರಿ? ಅಂತ ಕೇಳಿದಳು. ಆಗ ಮ್ಯಾನೇಜರ್” ಯಾಕೆಂದರೆ ದುಡ್ಡು ಕದಿಯುತ್ತಿದ್ದುದು ಬೇರೆ ಯಾರು ಅಲ್ಲ, ಅದು ಸ್ವಾತಿ” ಅಂತ ಹೇಳಿದರು. ಅದನ್ನು ಕೇಳಿ ಯಾರಿಗೂ ಅದನ್ನು ನಂಬಲಾಗಲಿಲ್ಲ. ಸ್ವಾತಿಯ ಆತ್ಮೀಯ ಸ್ನೇಹಿತೆಯರಾದ ಸುಮನ, ಕವನ ಮತ್ತು ಮಂಜುಳಾಳಿಗೆ ತುಂಬ ಆಘಾತವಾಯ್ತು.
ಮ್ಯಾನೇಜರ್ ನಡೆದ ವಿವರವನ್ನು ಹೇಳಲು ಶುರು ಮಾಡಿದರು. ಸ್ವಾತಿ ತನ್ನ ಪ್ರೇಮಿಗೆ ದುಡ್ಡು ಕೊಡಲು ಆಗಾಗ ಕಂಪನಿಯಲ್ಲಿ ಇದ್ದ ಉಳಿದ ಹೆಂಗಸರ ಪರ್ಸಿನಿಂದ ದುಡ್ಡನ್ನು ಯಾರಿಗೂ ಗೊತ್ತಾಗದಂತೆ ತೆಗೆಯುತ್ತಿದ್ದಳು. ಅವಳಿಗೆ ಎಲ್ಲರು ಒಂದೇ ಕಡೆ ವ್ಯಾನಿಟಿ ಬ್ಯಾಗ್ ಇಡುತ್ತಿದ್ದುದು ಅನುಕೂಲವಾಗಿತ್ತು. ತನ್ನ ವ್ಯಾನಿಟಿ ಬ್ಯಾಗ್ನಿಂದ ಊಟದ ಡಬ್ಬ ತೆಗೆದುಕೊಳ್ಳುವಾಗ ಅಥವಾ ಊಟ ಮಾಡಿ ವಾಪಸು ಇಡುವಾಗ ಕೈಗೆ ಸಿಕ್ಕ ಬೇರೆಯವರ ವ್ಯಾನಿಟಿ ಬ್ಯಾಗ್ನಿಂದ ಹಣ ಎಗರಿಸುತ್ತಿದ್ದಳು. ಕವನಳ ಜೊತೆ ಕೂಡ ಅವಳು ಅನೇಕ ಬಾರಿ ಊಟ ಮುಗಿದ ಮೇಲೆ ಏಟಿಎಂ ಗೆ ಹೋಗಿ ಹಣ ಡ್ರಾ ಮಾಡಿದ್ದಳು. ಹಾಗೆ ಮಾಡುವಾಗ ಕವನಳ ಏಟಿಎಂ ಪಿನ್ ತಿಳಿದುಕೊಂಡಿದ್ದಳು. ನೂರು, ಐವತ್ತು ಕದಿಯುತ್ತಿದ್ದ ಅವಳಿಗೆ ಅವಳ ಪ್ರೇಮಿ ದೊಡ್ಡ ಮೊತ್ತದ ಹಣ ಕದಿಯಲು ಹೇಳಿ, ಹೇಗೆ ಮಾಡಬೇಕು ಅಂದು ಉಪಾಯ ಹೇಳಿದ್ದಾನೆ. ಮೊದಲು ಸ್ವಾತಿ ಊಟಕ್ಕೆ ಹೊರಗೆ ಹೋಗುವ ಮುನ್ನ ಕವನಳ ಪರ್ಸ್ ನಿಂದ ಏಟಿಎಂ ಕಾರ್ಡ್ ತೆಗೆದುಕೊಂಡಿದ್ದಾಳೆ, ನಂತರ ಅದನ್ನು ಹೊರಗಡೆ ನಿಂತಿದ್ದ ಪ್ರೇಮಿಗೆ ನೀಡಿ ಅದರ ಪಿನ್ ಕೂಡ ಹೇಳಿದ್ದಾಳೆ. ಅವನು ಏಟಿಎಂ ಗೆ ಹೋಗಿ ಹಣ ತೆಗೆದುಕೊಂಡು, ಊಟ ಮುಗಿಸಿಕೊಂಡು ಬಂದ ಸ್ವಾತಿ ಕೈಗೆ ವಾಪಸು ಕೊಟ್ಟಿದ್ದಾನೆ. ಸ್ವಾತಿ ಕವನಳಿಗೆ ಗೊತ್ತಾಗದಂತೆ ವಾಪಸು ಏಟಿಎಂ ಕಾರ್ಡನ್ನು ಅವಳ ವ್ಯಾನಿಟಿ ಬ್ಯಾಗಿನಲ್ಲಿದ್ದ ಪರ್ಸಿನಲ್ಲಿ ಇಟ್ಟಿದ್ದಾಳೆ. ಪೊಲೀಸರು ಯಾವಾಗ ಏಟಿಎಂ ನಲ್ಲಿದ್ದ ಸಿಸಿ ಟಿವಿ ಯಲ್ಲಿ ಯಾವುದೋ ಯುವಕ ಹಣ ಡ್ರಾ ಮಾಡಿದ್ದು ಗೊತ್ತಾಯಿತೋ ಅವರು ಎರಡು ದಿವಸ ಕಂಪನಿಯ ಹೊರಗಡೆ ಯಾರಿಗೂ ಗೊತ್ತಾಗದಂತೆ ಪ್ರತಿಯೊಬ್ಬರನ್ನು ಗಮನಿಸಿದ್ದಾರೆ. ಸ್ವಾತಿ ಯಾವಾಗ ಕೆಲಸ ಮುಗಿದ ಮೇಲೆ ಅದೇ ಯುವಕನ ಜೊತೆಗೆ ಬೈಕಿನಲ್ಲಿ ಹೋಗುವುದನ್ನು ಕಂಡರೋ ಅವರಿಗೆ ಕಳ್ಳ ಯಾರೆಂದು ಗೊತ್ತಾಗಿದೆ. ನಂತರ ಅವರಿಬ್ಬರನ್ನು ಬಂಧಿಸಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಿದಾಗ ಎಲ್ಲವನ್ನು ಬಾಯಿ ಬಿಟ್ಟಿದ್ದಾರೆ.
ಎಲ್ಲವನ್ನು ಕೇಳಿಸ್ಕೊಂಡ ಎಲ್ಲರಿಗು ತುಂಬ ಆಘಾತವಾಯಿತು ಅದರಲ್ಲೂ ಸ್ವಾತಿ ಸ್ನೇಹಿತೆಯರಾದ ಸುಮನಾ, ಮಂಜುಳಾ ಹಾಗು ಕವನಳಿಗೆ ಇದನ್ನು ನಂಬಲು ಆಸಾಧ್ಯವಾಗಿತ್ತು. ಊಟಕ್ಕೆ ಹೊರಡುವಾಗ ಸ್ವಾತಿ ಏನಾದರೂ ನೆಪ ಹೇಳಿ ಕೊನೆಯಲ್ಲಿ ಬರುತ್ತಿದ್ದಳು ಇಲ್ಲವೇ ಊಟ ಆದ ಮೇಲೆ ಕೂಡ ಏನಾದರು ಕಾರಣ ನೀಡಿ ಒಬ್ಬಳೇ ಕೊನೆಯಲ್ಲಿ ವ್ಯಾನಿಟಿ ಬ್ಯಾಗ್ ಗಳನ್ನೂ ಇಡುತ್ತಿದ್ದ ರೂಮಿಗೆ ಹೋಗುತ್ತಿದ್ದಳು. ಅವಾಗ ಅವರಿಗೆ ಏನು ಅನ್ನಿಸಿರಲಿಲ್ಲ. ಇದೆಲ್ಲ ಕೇಳಿ ಆದ ಮೇಲೆ ಅವಳು ಹಾಗೆ ಮಾಡುತ್ತಿದ್ದ ಹಿಂದಿನ ಕಾರಣ ಇದೆ ಅಂತ ಅವರಿಗೆ ಗೊತ್ತಾದರು, ಪ್ರೇಮಿಗೊಸ್ಕರ ಕಳ್ಳತನ ಮಾಡಿದಳೆಂದು ನಂಬಲು ಅವರಿಗೆ ಆಗಲಿಲ್ಲ.
ಅನೇಕ ದಿನಗಳ ನಡೆದ ಘಟನೆ ಅರಗಿಸಿಕೊಳ್ಳಲಾಗದೆ ಸುಮನಾ, ಕವನ ಮತ್ತು ಮಂಜುಳ, ನಡೆದಿದ್ದು ನಿಜವೇ ಎಂಬ ಸಂದಿಗ್ಧತೆಯಲ್ಲೇ ಸಮಯ ಕಳೆಯತೊಡಗಿದರು. ಮತ್ತೆ ಸ್ವಾತಿಯನ್ನು ಅವರು ನೋಡಲೇ ಇಲ್ಲ ಹಾಗು ಅವರಿಗೆ ಸರಿಯಾದ ಉತ್ತರ ಸಿಗಲೇ ಇಲ್ಲ.
– ಶ್ರೀನಾಥ್ ಹರದೂರ ಚಿದಂಬರ
👌👌
LikeLike
👍👍👍
LikeLike
Thank you 😊
LikeLike