ಅವತ್ತು ವಿದ್ಯುತ್ ಚಿತಾಗಾರದ ಮುಂದೆ ಜನರ ಗುಂಪು ನಿಧಾನವಾಗಿ ಜಾಸ್ತಿಯಾಗುತ್ತಲೇ ಇತ್ತು. ಬೆಳಿಗ್ಗೆ ೭ ಗಂಟೆಯಿಂದ ಒಂದೊಂದೇ ದೇಹಗಳು ಚಿತಾಗಾರಕ್ಕೆ ಬರುತ್ತಲೇ ಇದ್ದವು. ಬರುತ್ತಿದ್ದ ಪ್ರತಿಯೊಂದು ದೇಹದ ಜೊತೆಗೆ ಸಂಬಂದಿಕರು ಮತ್ತು ಸ್ನೇಹಿತರು ಇರುತ್ತಿದ್ದಿದ್ದರಿಂದ ಅಲ್ಲಿ ನಿಧಾನವಾಗಿ ಜನ ಜಂಗುಳಿ ಜಾಸ್ತಿಯಾಗುತ್ತಲೇ ಇತ್ತು. ವಿದ್ಯುತ್ ಕಂಪನಿಯವರು ಏನೋ ನಿರ್ವಹಣೆ ಕಾರ್ಯವಿದೆ ಹಾಗಾಗಿ ವಿದ್ಯುತ್ ಕೊಡಲು ವಿಳಂಬ ಆಗುತ್ತದೆ ಅಂದವರು ಮದ್ಯಾಹ್ನ ಆದರೂ ಚಿತಾಗಾರಕ್ಕೆ ವಿದ್ಯುತ್ ಕೊಟ್ಟಿರಲಿಲ್ಲ. ವಿದ್ಯುತ್ ಕಂಪನಿಯ ಅವ್ಯವಸ್ಥೆ ಇಂದ ಪ್ರತಿಯೊಬ್ಬರು ತೊಂದರೆ ಅನುಭವಿಸುವ ಪರಿಸ್ಥಿತಿ ಬಂದೊದಗಿತ್ತು. ಮದ್ಯಾಹ್ನದ ವೇಳೆಯಾ ಹೊತ್ತಿಗೆ ನಾಲಕ್ಕು ದೇಹಗಳು ಅಂತಿಮ ಯಾತ್ರೆಗೆ ಸಿದ್ದವಾಗಿ ಬಂದಿದ್ದವು. ಚಿತಾಗಾರಕ್ಕೆ ಮರಣ ಹೊಂದಿದವರ ಕಡೆಯವರು ಹಾಗು ಜೊತೆಯಲ್ಲಿ ಬಂದ ಬಂಧು ಬಾಂಧವರು, ಸ್ನೇಹಿತರು ಕಾಯುತ್ತಲೇ ಇದ್ದರು. ಬೆಳೆಗ್ಗೆ ಬಂದವರ ಮುಖದಲ್ಲಿ ದುಃಖ ಮರೆಯಾಗಿ ಅಸಹನೆ ಕಾಣಿಸತೊಡಗಿತ್ತು. ದೇಹದ ಪಕ್ಕದಲ್ಲಿಯೇ ಕುಳಿತ್ತಿದ್ದ ಬಂದುಗಳು ಹಾಗು ಸ್ನೇಹಿತರು ನಿಧಾನವಾಗಿ ಅಲ್ಲಿಂದ ಎದ್ದು ಬೇರೆ ಬೇರೆ ಕಡೆ ನಿಂತು ಮಾತನಾಡುತ್ತ ವಿದ್ಯುತ್ ಕಂಪೆನಿಯವರನ್ನು ಬೈಯ್ಯತೊಡಗಿದ್ದರು. ದೇಹದ ಪಕ್ಕದಲ್ಲಿ ಸತ್ತವರ ಹೆಂಡತಿ ಅಥವಾ ಗಂಡ ಮತ್ತು ಅವರ ಮಕ್ಕಳು ಬಿಟ್ಟು ಬೇರೆ ಯಾರು ಇರಲಿಲ್ಲ. ಕೆಲವರು ತಮ್ಮ ಮೊಬೈಲ್ನಲ್ಲಿ ಆಗಲೇ ತಮ್ಮ ತಮ್ಮ ವ್ಯವಹಾರದ ಬಗ್ಗೆ ಮಾತು ಶುರುಮಾಡಿದ್ದರು. ಅನೇಕರು ” ಈಗ ಬಂದೆ, ವಿದ್ಯುತ್ ಬಂದರೆ ಫೋನ್ ಮಾಡಿ, ಕೂಡಲೇ ಬಂದುಬಿಡುತ್ತೇನೆ ” ಅಂತ ಹೇಳಿ ತಮ್ಮ ತಮ್ಮ ಮನೆಗೆ ಹೊರಡಲು ಶುರು ಮಾಡಿದ್ದರು.
ಗಂಟೆಗಟ್ಟಲೆ ಕಾದು ಸುಸ್ತಾಗಿ ಕೆಲವರು ಅಲ್ಲೇ ಪಕ್ಕದಲ್ಲಿ ಇದ್ದ ಹೋಟೆಲ್ಲಿಗೆ ಟೀ ಕುಡಿದು ಬರೋಣ ಅಂತ ಹೋಗಿ ಸ್ವಲ್ಪ ಹೊಟ್ಟೆಗೂ ಕೂಡ ಹಾಕಿ ಕೊಂಡು ಬಂದರು. ಹೊರಗಡೆ ಹೋದವರು ಆಗಾಗ ಚಿತಾಗಾರದಲ್ಲಿಯೇ ಉಳಿದವರಿಗೆ ಫೋನ್ ಮಾಡಿ “ವಿದ್ಯುತ್ ಬಂತಾ ? ಇನ್ನು ಬಂದಿಲ್ವಾ ? ಯಾವಾಗ ಬರುತ್ತಂತೆ? ಬಂದ ಕೂಡಲೇ ತಿಳಿಸಿ, ತಕ್ಷಣವೇ ಅಲ್ಲಿಗೆ ಬಂದು ಬಿಡುತ್ತೀನಿ” ಅಂತ ಹೇಳುತ್ತಿದ್ದರು. ಹೆಂಗಸರು ತಮ್ಮ ಮಕ್ಕಳು ಮನೆಯಲ್ಲಿಯೇ ಇದ್ದಾರೆ, ಹೋಗಿ ನೋಡಿಕೊಂಡು ಬರುತ್ತೇವೆ ಅಂತ ಹೊರಟರು. ಬರುವಾಗ ಜೋರಾಗಿ ದುಃಖಿಸಿಕೊಂಡು ಅಳುತ್ತಿದ್ದವರೆಲ್ಲ ಕ್ರಮೇಣ ಅಳು ನಿಲ್ಲಿಸಿ, ವಿದ್ಯುತ್ ಬಂತಾ , ಯಾವಾಗ ಬರುತ್ತೋ ಅಂತ ಯೋಚನೆ ಶುರು ಮಾಡಿದ್ದರು. ಅಂತಿಮ ಕ್ರಿಯೆ ಮಾಡಿಸಲು ಬಂದಿದ್ದ ಪುರೋಹಿತರು ಆಗಲೇ ವಾಪಸು ಹೊರಟು ಹೋಗಿದ್ದರು. ಸತ್ತವರ ಮನೆಯವರಿಗೆ ಪುರೋಹಿತರು ಮತ್ತೆ ಸಿಗುತ್ತಾರೋ ಇಲ್ಲವೋ ಅಂತ ಯೋಚನೆ ಶುರುವಾಗಿತ್ತು. ಪ್ರತಿ ಅರ್ಧ ಗಂಟೆಗೆ ಕೆಲವರು ಚಿತಾಗಾರದ ಒಳಗಡೆ ಹೋಗಿ ” ಯಾವಾಗ ಬರುತ್ತೆ ” ಅಂತ ಕೇಳಿವುದು, ಚಿತಾಗಾರದವರು ” ಇನ್ನು ಸ್ವಲ್ಪ ಹೊತ್ತು ಆಗುತ್ತೆ” ಅಂತ ಉತ್ತರ ಕೊಡುವುದು ನಡೆದೇ ಇತ್ತು. ಮದ್ಯಾಹ್ನದ ವೇಳೆಗೆ ಸತ್ತವರ ಕಡೆಯವರಲ್ಲಿ ಮನೆಯವರು ಮತ್ತು ಬಹಳ ಆತ್ಮೀಯರು ಬಿಟ್ಟು ಉಳಿದವರು ಹೊರಟು ಹೋಗಿದ್ದರು. ಮನೆಯವರು ಕೂಡ ದೇಹದ ಪಕ್ಕದಿಂದ ಎದ್ದು ಹೋಗಿ ದೂರದಲ್ಲಿ ಒಂದು ಕಡೆ ನಿಂತು ಕಾಯುತ್ತ ನಿಂತಿದ್ದರು. ಚಿತಾಗಾರದ ಕಾರಿಡಾರಿನಲ್ಲಿ ಸಾಲಾಗಿ ಇಟ್ಟಿದ್ದ ದೇಹಗಳ ಮಾತ್ರ ಎಲ್ಲಿಗೂ ಹೋಗಲಾಗದೆ ಅನಾಥವಾಗಿ ಮಲಗಿದ್ದವು.
ಮದ್ಯಾಹ್ನ ಕಳೆದು ಸಂಜೆ ಆಗುತ್ತಾ ಬಂದಿದ್ದರಿಂದ ಕಾಯುತ್ತ ಉಳಿದವರ ಮುಖದಲ್ಲಿ ಅಸಹನೆ, ಕೋಪ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಒಂದೊಂದು ಕ್ಷಣವನ್ನು ಕಾಯುವುದು ಕೂಡ ಅವರಿಗೆ ಸಹನೀಯವಾಗಿರಲಿಲ್ಲ. ವಿದ್ಯುತ್ ಮಂಡಳಿ, ಸರಕಾರ, ನಾಯಕರು ನಾವು ಉತ್ಪಾದಿಸುವ ವಿದ್ಯುತ್ ಅನ್ನು ಬೇರೆ ರಾಜ್ಯದವರಿಗೆ ಮಾರಿ ನಡೆಸುತ್ತಿದ್ದ ಭ್ರಷ್ಟಾಚಾರದ ಬಗ್ಗೆ ಅವರೆಲ್ಲರಿಗೂ ಶಾಪ ಹಾಕಿ, ಬಾಯಿಗೆ ಬಂದ ಹಾಗೆ ಬೈದು, ಏನನ್ನು ಬೈಯಲು ಉಳಿಯದೆ ಕೇವಲ ವಿದ್ಯುತ್ ಬಂದರೆ ಸಾಕು ಅನ್ನುವ ಹಾಗೆ ಹೋಗಿತ್ತು. ಸಂಜೆ ಆರು ಗಂಟೆ ಆಗುತ್ತಾ ಬಂದಿತ್ತು, ಒಳಗಡೆಯಿಂದ ಚಿತಾಗಾರದ ಕೆಲಸಗಾರ ಬಂದು ” ವಿದ್ಯುತ್ ಬಂದಿದೆ, ಒಳಗಡೆ ದೇಹ ಸುಡುವ ಫರ್ನೇಸ್ ಕಾದ ಕೂಡಲೇ ಶುರು ಮಾಡುತ್ತೇವೆ ಅಂತ ಹೇಳಿದರು. ಎಲ್ಲರ ಮುಖದಲ್ಲಿ ಮಂದಹಾಸ ಕಾಣಿಸಿತು. ಅಬ್ಬಾ, ಕೊನೆಗೂ ವಿದ್ಯುತ್ ಬಂತಲ್ಲಾ, ಇನ್ನೇನು ಒಂದು ಬಾರಿ ಫರ್ನೇಸ್ ತಯಾರು ಆಯಿತು ಅಂದರೆ, ಒಂದಾದ ಮೇಲೆ ಒಂದು ದೇಹ ಸುಟ್ಟು ಬಿಡುತ್ತಾರೆ, ಹತ್ತು ನಿಮಿಷದಲ್ಲಿ ಮುಗಿದೇ ಹೋಗುತ್ತದೆ” ಅಂತ ಮಾತನಾಡಲು ಶುರು ಮಾಡಿದರು. ಬಿಟ್ಟು ಹೋದವರಿಗೆ ಫೋನ್ ಮಾಡಿ ತಿಳಿಸಲು ಶುರು ಮಾಡಿದರು. ಕ್ರಿಯೆ ಮಾಡಲು ಪುರೋಹಿತರಿಗೆ ಫೋನ್ ಮಾಡಲು ಶುರು ಮಾಡಿದರು. ಕಾದು ಕಾದು ಸುಸ್ತಾಗಿ ಹೋಗಿದ್ದ ಎಲ್ಲರಿಗು ಬೇಗ ಮುಗಿದು ಹೋದರೆ ಸಾಕು ಅಂತ ಅನ್ನಿಸಲು ಶುರುವಾಗಿತ್ತು.
ಸತ್ತವರ ಮನೆಯವರಲ್ಲಿ ಕೆಲವರು ಒಳಗಡೆ ಹೋಗಿ ತಾವು ತಂದ ದೇಹವನ್ನು ಮೊದಲು ಸುಡಲು ಅಲ್ಲಿ ಕೆಲಸ ಮಾಡುವವರಿಗೆ ಲಂಚ ಕೊಟ್ಟು ಬೇಗ ಮುಗಿಸಿಕೊಂಡು ಹೋಗುವ ಯೋಜನೆ ಕೂಡ ಹಾಕಲು ಶುರು ಮಾಡಿದ್ದರು. ಅಲ್ಲಿ ಕೆಲಸ ಮಾಡುವವರಿಗೆ ಝಣ ಝಣ ಕಾಂಚಾಣ ಮಾಡುವ ಸುಯೋಗ ಒದಗಿ ಬಂದಿತ್ತು. ವಿದ್ಯುತ್ ಕಂಪನಿಯವರು ದಿನ ಹೀಗೆ ವಿದ್ಯುತ್ ತೆಗೆಯುತ್ತಿದ್ದರೇ ದಿನ ಮಾಡುವುದಕ್ಕಿಂತ ಜಾಸ್ತಿ ಹಣ ಮಾಡಬಹುದು ಅನ್ನುವ ದುರಾಸೆ ಬಂದು ಹೋಯ್ತು.
ಚಿತಾಗಾರದವರು ಫರ್ನೇಸ್ ಕಾದ ಮೇಲೆ ಒಂದೊಂದೇ ದೇಹವನ್ನು ಸುಡತೊಡಗಿದರು. ದೇಹದ ಜೊತೆಗೆ ಬಂದವರು ಅಬ್ಬಾ ಅಂತೂ ಮುಗಿಯಿತಲ್ಲ, ತಮ್ಮ ಕರ್ತವ್ಯ ಮುಗಿಯುತು ಅನ್ನುವ ಭಾವದಿಂದ ಅಲ್ಲಿಂದ ಹೊರ ನಡೆಯತೊಡಗಿದರು. ಅವರ ಭಾವನೆಗಳು ಅವರುಗಳು ತಂದಿದ್ದ ದೇಹದ ಜೊತೆಗೇನೇ ಸುಟ್ಟು ಹೋಗಿತ್ತು.
ಚಿತಾಗಾರದವರು ನಿರ್ವಿಕಾರ ಭಾವದಿಂದ ಅವತ್ತಿನ ಕೆಲಸ ಮುಗಿಸಿ, ಜೇಬು ತುಂಬಿದ್ದರಿಂದ ಸಂತೋಷವಾಗಿ, ಚಿತಾಗಾರದ ಲೈಟ್ ಆಫ್ ಮಾಡಿ ಅಲ್ಲಿಂದ ಹೊರಟರು. ಇಡೀ ಚಿತಾಗಾರ ಮತ್ತೆ ಕತ್ತಲೆಯಲ್ಲಿ ಮುಳುಗಿಹೋಯಿತು.
ಫರ್ನೇಸ್ ನಿಧಾನವಾಗಿ ಮತ್ತೆ ತಣ್ಣಗಾಗತೊಡಗಿತು.
ಒಮ್ಮೆ ಸಣ್ಣಗೆ ಗಾಳಿ ಬೀಸಿ ಹೊರಟುಹೋಯಿತು. ಮರಣ ಹೊಂದಿದವರ ಆತ್ಮಗಳು ಅವ್ಯವಸ್ಥೆ, ಭ್ರಷ್ಟಾಚಾರ, ದುರಾಸೆಯಿಂದ ಬಿಡುಗಡೆ ಹೊಂದಿ ಸಾಕಪ್ಪ ಎಂದು ಬಿಟ್ಟ ನಿಟ್ಟುಸಿರೇ ಇರಬೇಕು.
– ಶ್ರೀನಾಥ್ ಹರದೂರ ಚಿದಂಬರ
ಮನುಷ್ಯನ ಜನನದೊಂದಿಗೆ ಶುರುವಾದ ಭ್ರಷ್ಟಾಚಾರ, ವಂಚನೆ, ಮೋಸದ ಪಯಣ ಅವನ ಮರಣದ ವರೆಗೂ ಸಾಗುತ್ತದೆ.. ಇದೇ ವಿಪರ್ಯಾಸ
LikeLike
Thank you Renuka for your views…
LikeLike