ಸಿಂಧೂರಿ ಜಿಂಕೆಯಂತೆ ಹಾರುತ್ತ ಮನೆಯೊಳಗೇ ” ಅಮ್ಮ , ಅಮ್ಮಾ ” ಎಂದು ಜೋರಾಗಿ ಕೂಗುತ್ತ ಓಡಿಬಂದಳು. ಒಳಗಡೆ ಅಡುಗೆ ಮನೆಯಲ್ಲಿದ್ದ ಅಮ್ಮ ” ಏನೇ, ಸಿಂಧೂರಿ ಅದು, ಯಾಕೆ ಆ ರೀತಿ ಕೂಗುತ್ತ ಇದ್ದೀಯ? ಇಲ್ಲೇ ಇದ್ದೀನಿ, ಅದೇನು ಹೇಳು” ಅಂತ ಹೇಳಿದಳು. ಅದನ್ನು ಕೇಳಿದ ಸಿಂಧೂರಿ ಮನೆಯ ಪಡಸಾಲೆಯಿಂದ ಕುಣಿಯುತ್ತ ಅಡುಗೆ ಮನೆಗೆ ಹೋದಳು. ಅವಳು ಕುಣಿದು ಬರುವುದನ್ನು ನೋಡಿ ಅವಳ ಅಮ್ಮ ” ಲೇ, ಸಿಂಧೂರಿ, ವಯಸ್ಸು ಹದಿನಾಲಕ್ಕೂ ಆಯಿತು, ದೊಡ್ಡವಳಾಗಿದ್ದಿ ನೀನು, ಸ್ವಲ್ಪ ಗಂಭೀರವಾಗಿ ಇರುವುದನ್ನು ಕಲಿ , ಯಾವಾಗ ನೋಡಿದರು ಹುಡುಗರಂತೆ ಕುಣಿಯುತ್ತಾ , ಅವರ ಜೊತೇನೆ ಆಡುತ್ತ ಇರುತ್ತೀಯಲ್ಲ, ನಯ, ನಾಜೂಕಿನಿಂದ ಇರುವುದನ್ನು ಅಭ್ಯಾಸ ಮಾಡಿಕೊ” ಅಂತ ಎಂದಿನಂತೆ ಅವಳಿಗೆ ಬುದ್ಧಿ ಹೇಳಲು ಶುರು ಮಾಡಿದಳು. ಅದನ್ನು ಕೇಳಿಯೂ ಕೇಳದಂತೆ ” ಅಮ್ಮ, ಪಕ್ಕದ ಮನೆ ರಾಜು ಅಂಕಲ್ ಎಲ್ಲ ಮಕ್ಕಳನ್ನು ಕರೆದುಕೊಂಡು, ಇಲ್ಲೇ ಪಕ್ಕದಲ್ಲಿರುವ ದೇವರ ಬೆಟ್ಟಕ್ಕೆ ಹೋಗುತ್ತಾರಂತೆ, ನಾನು ಹೋಗುತ್ತಿನಮ್ಮ ಅವರ ಜೊತೆಗೆ, ಜೀಪಿನಲ್ಲಿ ಹೋಗುತ್ತಾರಂತೆ, ಚೆನ್ನಾಗಿರುತ್ತಮ್ಮ, ನಾನು ಹೋಗ್ತೀನಿ, ಇತ್ತೀಚಿಗಂತೂ ನನ್ನನ್ನು ಎಲ್ಲಿಯೂ ಕಳುಹಿಸುತ್ತಿಲ್ಲ ನೀನು, ಇದಕ್ಕಾದರೂ ನನ್ನನ್ನು ಕಳುಹಿಸು” ಎಂದು ಕಾಡಿಸತೊಡಗಿದಳು. ಅದಕ್ಕೆ ಅಮ್ಮ ” ಅಲ್ವೇ, ಅದೇನು ನೀನು ನೋಡಿರದ ಸ್ಥಳವೆನೇ, ಇಪ್ಪತ್ತು ಬಾರಿಯಾದರೂ ಹೋಗಿದ್ದೀಯ ಅಲ್ಲಿಗೆ, ಮತ್ತೇನು ಅಲ್ಲಿಗೆ ಹೋಗುವುದು, ಬೇಡ ಮನೆಯಲ್ಲಿಯೇ ಇರು ” ಎಂದು ಹೇಳಿದಳು. ಸಿಂಧೂರಿಯಾ ವಯಸ್ಸು ಹದಿನಾಲಕ್ಕೂ ಆದರೂ ಅವಳ ಬುದ್ದಿ ಮಾತ್ರ ಇನ್ನು ನಾಲಕ್ಕು ವರುಷದ ಮಕ್ಕಳ ಬುದ್ದಿ ಇತ್ತು. ಹುಟ್ಟುವಾಗ ಆದ ತೊಂದರೆಯಿಂದ ಅವಳ ಬುದ್ದಿ ವಯಸ್ಸಿಗೆ ತಕ್ಕಂತೆ ಇರಲಿಲ್ಲ. ಅವಳು ಚಿಕ್ಕವಳಾಗಿದ್ದಾಗ ಏನು ಅನ್ನಿಸುತ್ತಿರಲಿಲ್ಲ. ಆದರೆ ಸಿಂಧೂರಿ ದೊಡ್ಡವಳಾದ ಮೇಲೆ, ಅವಳ ಅಮ್ಮ ಅವಳು ಹೊರಗಡೆ ಹೋಗುವುದನ್ನು ಕಮ್ಮಿ ಮಾಡಿಸಿದ್ದಳು, ಏನನ್ನು ಅರಿಯದ ಅವಳಿಗೆ ಏನಾದರೂ ಆದರೆ ಎಂಬ ಹೆದರಿಕೆಗೆ, ಅವಳ ಮೇಲೆ ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಿದ್ದಳು. ಅವಳ ಅಮ್ಮ ” ಕಾಲ ಮೊದಲಿನಂತೆ ಇಲ್ಲ, ಇವಳಿಗೋ ಇನ್ನು ಏನು ಗೊತ್ತಾಗುವುದಿಲ್ಲ, ಚಿಕ್ಕ ಮಗುವಿನ ಹಾಗೆ, ಬೇಡ ಅಂದರೆ ಯಾಕೆ ಹೋಗಬಾರದು, ಏನಾಗುತ್ತದೆ ಎಂದೆಲ್ಲ ಹಠ ಮಾಡುತ್ತಾಳೆ, ಏನಂತ ಹೇಳುವುದು ಇವಳಿಗೆ” ಎಂದು ಸಿಂಧೂರಿಗೆ ಆಗಾಗ ತಿದ್ದುವ ಪ್ರಯತ್ನ ಮಾಡುತ್ತಲೇ ಇದ್ದಳು.
ಸಿಂಧೂರಿ ಅಡುಗೆ ಮನೆಯಲ್ಲಿ ದೇವರ ಬೆಟ್ಟಕ್ಕೆ ಹೋಗುತ್ತೇನೆಂದು ಹಠ ಮಾಡುವುದು ಕೇಳಿಸಿಕೊಂಡ ಅಪ್ಪ ” ಹೋಗಲಿ, ಬಿಡೆ, ರಾಜು ಜೊತೆಗಲ್ವ ? ಇದೇನು ಮೊದಲ ಬಾರಿಯಲ್ಲ, ಬೇಕಾದಷ್ಟು ಬಾರಿ ಹೋಗಿದ್ದಾಳೆ ಅವನ ಜೊತೆ, ಹೋಗಿ ಬರಲಿ” ಎಂದು ಹೇಳಿದ್ದೆ ತಡ ಸಿಂಧೂರಿ ಮತ್ತೆ ಕುಣಿದುಕೊಂಡೆ ರಾಜುವಿನ ಮನೆ ಕಡೆ ಹೊರಟಳು. ರಾಜು ಅಂಕಲ್ ಹಾಗು ಅವಳ ಜೊತೆ ಆಡಿ ಬೆಳೆದ ಹುಡುಗರು, ಹುಡುಗಿಯರು ಎಲ್ಲರು ಸೇರಿ, ದೊಡ್ಡ ಗುಂಪು ಮಾಡಿಕೊಂಡು ಜೀಪಿನಲ್ಲಿ ದೇವರ ಬೆಟ್ಟಕ್ಕೆ ಕಡೆ ಹೊರಟರು. ಜೀಪಿನಲ್ಲಿ ಕೂಗಾಡುತ್ತಾ, ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ದೇವರ ಬೆಟ್ಟವನ್ನು ತಲುಪಿದರು. ಬೆಟ್ಟವನ್ನು ಗುಂಪು ಗುಂಪಾಗಿ ಹತ್ತ ತೊಡಗಿದರು. ಹುಡುಗರ ಗುಂಪು ಮೊದಲು ಹೊರಟರೆ, ಹುಡುಗಿಯರ ಗುಂಪು ಅವರ ಹಿಂದೆ ಬೆಟ್ಟ ಹತ್ತುತ್ತಿತ್ತು. ಹುಡುಗಿಯರ ಗುಂಪಿನ ಜೊತೆ ಸಿಂಧೂರಿ ಆಟವಾಡುತ್ತ ಹೋಗುತ್ತಿದ್ದಳು. ಅವಳಿಗೆ ಬುದ್ದಿ ಕಮ್ಮಿ ಅಂತ ಅವಳನ್ನು ತಮ್ಮ ಜೊತೆಯಲ್ಲಿಯೇ ಇರುವಂತೆ ಹೇಳಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಬೆಟ್ಟದ ತುದಿ ಹತ್ತಿ, ಅಲ್ಲಿದ್ದ ಕಲ್ಲು ಬಂಡೆಗಳ ನಡುವೆ ಸುತ್ತಾಡುತ್ತ ಹೋಗುತ್ತಿದ್ದ ಹುಡುಗಿಯರ ಗುಂಪು, ಕಲ್ಲಿನ ಬಂಡೆಗಳ ನಡುವೆ ಇದ್ದ, ಒಂದು ಗುಹೆ ಮುಂದೆ ಬಂದು ನಿಂತಿತ್ತು. ಆ ಗುಹೆ ಸರಿ ಸುಮಾರು ಇಪ್ಪತ್ತರಿಂದ ಮೂವತ್ತು ಅಡಿ ಉದ್ದ ಇತ್ತು, ಈ ಕಡೆಯಿಂದ ಹೊರಟರೆ ಆ ಕಡೆಯಿಂದ ಬರಬಹುದಾಗಿತ್ತು, ಅದರ ಒಳಗಡೆ, ಒಬ್ಬರಿಗೊಬ್ಬರು ಕಾಣದಷ್ಟು ಕತ್ತಲೆ ಇರುತ್ತಿತ್ತು. ಹಾಗಾಗಿ ಅದರೊಳಗೆ ಹೋಗುವುದು ಬೇಡ ಎಂದು ಹುಡುಗಿಯರು, ಬೇರೆ ಕಡೆ ಹೋಗೋಣ ಎಂದು ಅವರದೇ ಲೋಕದಲ್ಲಿ ಏನೋ ಮಾತನಾಡುತ್ತ ಅಲ್ಲಿಂದ ಹೊರಟರು. ಆದರೆ ಸಿಂಧೂರಿ ಅವರ ಜೊತೆ ಹೋಗುವ ಬದಲು ಆಟವಾಡುತ್ತ ಗುಹೆಯೊಳಗೆ ಹೋಗಿಬಿಟ್ಟಳು. ಮಾತಿನ ಬರದಲ್ಲಿ ಇವಳನ್ನು ಮರೆತೇ ಬಿಟ್ಟಿದ್ದ ಹುಡುಗಿಯರಿಗೆ ಸಿಂಧೂರಿ ಅದರೊಳಗೆ ಹೋಗಿದ್ದು ಗೊತ್ತೇ ಆಗಲಿಲ್ಲ. ಸ್ವಲ್ಪ ಹೊತ್ತಿನ ನಂತರ ಸಿಂಧೂರಿ ಇಲ್ಲದ್ದನ್ನು ಗಮನಿಸಿ ವಾಪಸು ಆ ಗುಹೆಯ ಜಾಗಕ್ಕೆ ಓಡಿ ಬಂದರು. ಆದರೆ ಅಲ್ಲಿ ಸಿಂಧೂರಿ ಇಲ್ಲದ್ದನ್ನು ನೋಡಿ, ಅವಳು ಒಳಗಡೆ ಹೋಗಿರಬಹುದು ಎಂದು ಆ ಗುಹೆಯ ಇನ್ನೊಂದು ತುದಿಗೆ ಸುತ್ತು ಹಾಕಿ ಓಡಿಬಂದರು. ಅವರು ಅಲ್ಲಿಗೆ ತಲುಪಿ ಎರಡು ನಿಮಿಷ ಆದ ಮೇಲೆ ಸಿಂಧೂರಿ ಹೊರಗಡೆ ಬರುವುದನ್ನು ನೋಡಿ ಅವರಿಗೆ ಸ್ವಲ್ಪ ಸಮಾಧಾನ ಆಯಿತು. ಹೊರಗಡೆ ಬಂದ ಸಿಂಧೂರಿಯ ಕೂದಲೆಲ್ಲ ಕೆದರಿತ್ತು. ಅವಳ ಕಾಲಿನ ಮಂಡಿ ಕಿತ್ತು ರಕ್ತ ಬರುತ್ತಿತ್ತು. ಅದನ್ನು ನೋಡಿ ಎಲ್ಲ ಹುಡುಗಿಯರು ಗಾಬರಿಯಾಗಿ ” ಅಂಕಲ್, ಅಂಕಲ್, ಇಲ್ಲಿ ಬೇಗ ಬನ್ನಿ, ಸಿಂಧೂರಿಗೆ ರಕ್ತ ಬರುತ್ತಿದೆ ” ಎಂದು ಜೋರಾಗಿ ಕೂಗಿದರು. ಅಂಕಲ್ ಜೊತೆ ಉಳಿದ ಹುಡುಗರು ಸಹಿತ ಓಡಿ ಬಂದರು.
ರಾಜು ಅಂಕಲ್ ” ಏನಾಯ್ತು ಸಿಂಧೂರಿ ? ಒಳಗಡೆ ಏನಾದ್ರು ಬಿದ್ದೆಯಾ ?” ಎಂದು ಕೇಳಿದರು. ಆದರೆ ಸಿಂಧೂರಿ ಮಾತ್ರ ಏನನ್ನು ಹೇಳದೆ ಮೌನವಾಗಿದ್ದಳು. ಅವಳಿಗೆ ತುಂಬ ಆಘಾತವಾದಂತೆ ಕಾಣಿಸುತ್ತಿದಳು. ರಾಜುವಿಗೆ ಏನು ಮಾಡ ಬೇಕೆಂದು ತಿಳಿಯದೆ, ” ಬನ್ನಿ, ಮನೆಗೆ ಹೊರಡೋಣ, ಸಿಂಧೂರಿಯಾ ಗಾಯಕ್ಕೆ ಟ್ರೀಟ್ಮೆಂಟ್ ಮಾಡಿಸಬೇಕು” ಎಂದು ಹೇಳಿ ಅಲ್ಲಿಂದ ಕೂಡಲೇ ಬೆಟ್ಟ ಇಳಿದು ಮನೆ ಕಡೆ ಹೊರಟರು. ಸಿಂಧೂರಿ ಮನೆ ತಲುಪಿದಾಗ ಅವಳ ಅಮ್ಮ ಸಿಂಧೂರಿಯನ್ನು ನೋಡಿ ಅಳುವುದಕ್ಕೆ ಶುರು ಮಾಡಿಕೊಂಡರು. ರಾಜು ಅವರು ” ಅವಳು ಕತ್ತಲೆ ಗುಹೆಯೊಳಗೆ ಹೋಗಿ, ಅಲ್ಲಿ ಬಿದ್ದಿದ್ದಾಳೆ ಅಷ್ಟೇ, ಗಾಯಕ್ಕೆ ಟೀಟ್ಮೆಂಟ್ ಕೊಟ್ಟರೆ ಸರಿಹೋಗುತ್ತೆ” ಅಂದರು. ಅವಳ ಅಮ್ಮನಿಗೆ ಗಾಯ ನೋಡಿ ಕರುಳು ಚುರ್ರ್ ಎಂದಿತು. ಗಾಯಕ್ಕೆ ಅರಿಶಿನ ಹಚ್ಚಿ ಪಟ್ಟಿ ಕಟ್ಟಿದರು. ಅಷ್ಟೆಲ್ಲ ಆದರೂ ಸಿಂಧೂರಿ ಮಾತ್ರ ಮೌನವಾಗಿ ಏನನ್ನು ಮಾತನಾಡದೆ ಸುಮ್ಮನೆ ಕೂತಿದ್ದಳು. ಅವಳ ಅಮ್ಮ ” ಹೆದರಿಕೊಂಡಿದ್ದಾಳೆ ಅನಿಸುತ್ತೆ, ದೃಷ್ಟಿ ತೆಗಿತೀನಿ, ಇರು” ಎಂದು ಒಳಗಡೆ ಹೋಗಿ ಪೊರಕೆ ತಂದು ಸಿಂಧೂರಿಯ ದೃಷ್ಟಿ ತೆಗೆದಳು. ಆಮೇಲೆ ಅವಳನ್ನು ಎಬ್ಬಿಸಿ ಒಳಗಡೆ ಕೋಣೆಗೆ ಕರೆದುಕೊಂಡು ಹೋದಳು. ಸಿಂಧೂರಿ ಹಾಸಿಗೆಯ ಮೇಲೆ ಸುಮ್ಮನೆ ಮಲಗಿಬಿಟ್ಟಳು. ಅವಳ ಅಮ್ಮ” ಸ್ವಲ್ಪ ಮಲಗು, ಎಲ್ಲ ಸರಿ ಹೋಗುತ್ತೆ” ಎಂದು ಹೇಳಿ ಹೊರಗಡೆ ಹೋದಳು.
ರಾತ್ರಿ ಎಷ್ಟು ಹೊತ್ತು ಆದರೂ ಸಿಂಧೂರಿ ಏಳದಿದ್ದುದ್ದನ್ನು ನೋಡಿ ಅವಳ ಅಮ್ಮ ಸಿಂಧೂರಿ ಮಲಗಿದ್ದ ಕೋಣೆಗೆ ಬಂದಳು. ಸಿಂಧೂರಿ ಕಣ್ಣು ಬಿಟ್ಟುಕೊಂಡು ಎದುರಿನ ಗೋಡೆಯನ್ನು ಕಣ್ಣು ಪಿಳುಕಿಸದೇ ಹಾಗೆ ನೋಡುತ್ತಾ ಕುಳಿತ್ತಿದ್ದಳು. ಅವಳ ಅಮ್ಮ” ಏನಾಯ್ತು ಸಿಂಧೂ, ಇನ್ನು ನೋವಿದೆಯಾ ” ಎಂದು ಕೇಳಿದರು. ಸಿಂಧೂರಿ ಅದಕ್ಕೂ ಉತ್ತರ ಕೊಡದೆ ಸುಮ್ಮನೆ ಗೋಡೆಯನ್ನೇ ದಿಟ್ಟಿಸಿ ನೋಡುತ್ತಾ ಇದ್ದಳು. ಅವಳು ಯಾವತ್ತೂ ಹಾಗಿರಲಿಲ್ಲ ಮತ್ತು ಸಣ್ಣ ಪುಟ್ಟ ಗಾಯಕೆಲ್ಲ ಅವಳು ಗಮನ ಕೊಡುತ್ತಲೇ ಇರಲಿಲ್ಲ. ಈಗ ನೋಡಿದರೆ ಬರಿ ಮಂಡಿ ತರಚಿ ಆದ ಗಾಯಕ್ಕೆ ಅವಳು ಏನನ್ನು ಮಾತನಾಡದೆ, ಏನೋ ತಲೆ ಮೇಲೆ ಬಿದ್ದವಳಂತೆ ಇದ್ದುದ್ದನ್ನು ನೋಡಿ, ಅವಳ ಅಮ್ಮನಿಗೆ ಅನುಮಾನ ಶುರುವಾಯಿತು. ಅವಳ ಹತ್ತಿರ ಕೂತು ಅವಳ ತಲೆ ಸವರುತ್ತ ” ಏನಾಯ್ತು ಪುಟ್ಟ, ಆ ಕತ್ತಲೆಯಲ್ಲಿ ಏನಾದರೂ ನೋಡಿಕೊಂಡು ಹೆದರಿದೆಯಾ” ಅಂತ ಕೇಳಿದಳು. ಸಿಂಧೂರಿ ನಿಧಾನವಾಗಿ ಅಮ್ಮನ ಕಡೆ ತಿರುಗಿ” ಅಮ್ಮ, ಏನನ್ನು ನೋಡಲಿಲ್ಲ, ಆದರೆ ಒಳಗಡೆ ನನ್ನ ಯಾರೋ ಗಟ್ಟಿಯಾಗಿ ಹಿಡಿದುಕೊಂಡು, ನನ್ನ ಬಾಯಿ ಮುಚ್ಚಿ, ಇಡೀ ಮೈಯನ್ನ ಹಿಂಡಿ ಹಿಪ್ಪೆ ಮಾಡಿದರಮ್ಮ, ಆಮೇಲೆ ನನ್ನನ್ನು ಕತ್ತಲಲ್ಲಿ ತಳ್ಳಿ ಹೊರಟು ಹೋದರು, ಆದರೆ ಯಾರು ಅಂತ ಗೊತ್ತಾಗಲೇ ಇಲ್ಲಾ, ನನಗೆ ತುಂಬ ನೋವು ಆಯ್ತಮ್ಮಾ “ಅಂತ ಅಮ್ಮನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳತೊಡಗಿದಳು. ಅದನ್ನು ಕೇಳಿದ ಅವಳ ಅಮ್ಮನಿಗೆ ಭೂಮಿ ಕುಸಿದಂತಾಯಿತು. ಮೈಯೆಲ್ಲಾ ಒಮ್ಮೆ ನಡುಗಿಹೋಯಿತು. ಏನನ್ನು ಕಲ್ಪಿಸಿಕೊಳ್ಳಲು ಹೆದರುತ್ತಿದ್ದಳೋ ಅದೇ ಮಗಳಿಗೆ ಆಗಿದೆ, ದೇವರೇ, ಏನಪ್ಪಾ ಮಾಡಲಿ, ಇವಳಿಗೆ ಹೇಗೆ ಸಂಭಾಳಿಸಲಿ” ಎಂದು ಮಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ತಾನು ಅಳಲು ಶುರು ಮಾಡಿದಳು. ಕೂಡಲೇ ಸಾವರಿಸಿಕೊಂಡು ” ನಿನಗೆ ಏನು ಆಗಿಲ್ಲ, ಹೆದರಬೇಡ, ನಿನ್ನ ಜೊತೆ ನಾನು ಅಪ್ಪ ಎಲ್ಲ ಇದ್ದೇವೆ, ಈ ರೀತಿ ಆಯಿತು ಅಂತ ಯಾರಿಗೂ ಹೇಳಬೇಡ ” ಎಂದು ಹೇಳಿ ಅವಳನ್ನು ಮತ್ತೆ ಮಲಗಿಸಿ ಹೊರಗಡೆ ಹೋದಳು.
ಆದರೆ ಸಿಂಧೂರಿ ಮಾತ್ರ ” ನನ್ನ ಮೈಯನ್ನು ಯಾಕೆ ಹಾಗಿ ಒತ್ತಿ ಹಿಂಡಿದರು, ಅದು ಯಾವ ರೀತಿ ಆಟ, ಅಷ್ಟು ನೋವು ಯಾಕೆ ಮಾಡಬೇಕು, ಮತ್ತೆ ನನ್ನನ್ನು ತಳ್ಳಿ ಯಾಕೆ ಹೋಗಬೇಕಿತ್ತು” ಎಂದು ಮುಗ್ದವಾಗಿ ಯೋಚಿಸುತ್ತಿದ್ದಳು. ಹೊರಗಡೆ ಹೋದ ಅವಳ ಅಮ್ಮ ” ಅಯ್ಯೋ ದೇವರೇ, ಈ ಮುಗ್ಧೆಗೆ ಇಂತಹ ಅನ್ಯಾಯ ಮಾಡಿದೆ ನೀನು ” ಎಂದು ಅಳುತ್ತ ಕುಳಿತಳು. ಅಮ್ಮನಿಗೆ ” ಇವಳು ಹೊರಗಡೆ ಹೋಗಿ ಎಲ್ಲರ ಹತ್ತಿರ ಹೇಳಿದರೆ ಅವಳ ಮಾನ ಹರಾಜು ಆಗಿ ಹೋಗುತ್ತದೆ, ಅವಳ ಮೇಲೆ ಅತ್ಯಾಚಾರ ಆಗದಿದ್ದರೂ, ಆಗೇ ಹೋಗಿದೆ ಅಂತ ಜನ ಮಾತನಾಡುತ್ತಾರೆ, ಆಮೇಲೆ ಅವಳ ಜೀವನ ಹಾಳಾಗಿ ಹೋಗುತ್ತದೆ, ಏನಪ್ಪಾ ಮಾಡುವುದು” ಅಂತ ಭಯಪಟ್ಟು ಸಿಂಧೂರಿಯ ಅಪ್ಪನ ಹತ್ತಿರ ಆದ ವಿಷಯವನ್ನೆಲ್ಲ ಹೇಳಿದಳು. ಸಿಂಧೂರಿಯ ಅಪ್ಪ ” ನೋಡು, ಏನೇ ಆದರೂ ಈ ವಿಷಯ ಹೊರಗಡೆ ಬರಲೇ ಬಾರದು, ಬಂದರೆ ನಮ್ಮ ಮನ ಮರ್ಯಾದೆ ಹಾಳಾಗಿ, ತಲೆ ಎತ್ತಿ ತಿರುಗುವಂತಿಲ್ಲ, ಸಿಂಧೂರಿಯನ್ನು ಹೊರಗಡೆ ಕಳಿಸಲೇ ಬೇಡ, ಶಾಲೆಯನ್ನು ಕೂಡ ಬಿಡಿಸಿ ಬಿಡೋಣ, ಮನೆಯಲ್ಲಿ ಇರಲಿ” ಎಂದು ಹೇಳಿದರು.
ಯಾವಾಗ ಮನೆಯಲ್ಲಿ ಸಿಂಧೂರಿಯನ್ನು ಹೊರಗಡೆ ಹೋಗುವುದನ್ನೇ ನಿರ್ಬಂಧ ಮಾಡಿದರೋ, ಸಿಂಧೂರಿ ನಾನು ಹೊರಗಡೆ ಹೋಗಬೇಕೆಂದು ಹಠ ಮಾಡತೊಡಗಿದಳು. ಅವಳ ಅಪ್ಪ” ನೋಡು, ನಿನಗೆ ಏನು ಗೊತ್ತಾಗಲ್ಲ, ಸುಮ್ಮನೆ ನಾವು ಹೇಳಿದಂತೆ ಕೇಳು ಅಷ್ಟೇ ” ಎಂದು ಹೇಳಿ ಅವಳ ಹೆದರಿಸಿ ಬಾಯಿ ಮುಚ್ಚಿಸಿದರು. ಸಿಂಧೂರಿ ಯಾವಾಗ ಹೊರಗಡೇನು ಬರದೇ, ಶಾಲೆಗೂ ಬರುವದನ್ನು ನಿಲ್ಲಿಸಿದಳೋ ಅವಳ ಬಗ್ಗೆ ಊರಲ್ಲಿ ಬೇರೆ ಬೇರೆ ರೀತಿಯ ಕಥೆಗಳು ಹುಟ್ಟಿಕೊಳ್ಳತೊಡಗಿದವು. ಅವತ್ತು ದೇವರಗುಡ್ಡದಲ್ಲಿ ನಡೆದ ಘಟನೆ ಒಬ್ಬರ ಬಾಯಿಂದ ಒಬ್ಬರ ಬಾಯಿಗೆ ಹರಡುತ್ತಾ, ವಿವಿಧ ರೂಪಗಳನ್ನು ಪಡೆಯುತ್ತ ಹೋಯಿತು. ಯಾವ ವಿಷ್ಯವನ್ನು ಮುಚ್ಚಿಡಲು ಸಿಂಧೂರಿಯ ಅಪ್ಪ ಅಮ್ಮ ಪ್ರಯತ್ನ ಪಟ್ಟಿದ್ದರೋ, ಆ ವಿಷಯ ಬೇರೆಯದೇ ರೂಪ ಪಡೆದುಕೊಂಡಿತ್ತು.
ಯಾವಾಗ ಊರಿನ ತುಂಬಾ ವಿಷಯ ಹರಡಿ, ಸಿಂಧೂರಿಯ ಅಪ್ಪ ಅಮ್ಮ ಹೋದಲೆಲ್ಲಾ ” ಅಯ್ಯೋ ಪಾಪ, ಹೀಗಾಗಬಾರದಿತ್ತು, ಆದರೂ ಮಗಳು ಹಾಳಾಗಿದ್ದು ಮುಚ್ಚಿಡಬಾರದಿತ್ತು, ಪೋಲಿಸಿಗೆ ಹೇಳಬೇಕಿತ್ತು, ಇನ್ನು ಅವಳ ಕಥೆ ಅಷ್ಟೇ, ಮಾನ ಮರ್ಯಾದೆ ಹೋದಮೇಲೆ ಬದುಕಿರಬೇಕೇ ” ಎಂದು ಬಾಯಿಗೆ ಬಂದಂತೆ ಮಾತನಾಡತೊಡಗಿದರು. ಏನು ಆಗಬಾರದು ಎಂದು ಪ್ರಯತ್ನ ಪಟ್ಟಿದ್ದರೋ ಅದೇ ಆಗಿ ಹೋಗಿತ್ತು. ಸಿಂಧೂರಿಯ ಅಪ್ಪ ಅಮ್ಮ ಅವಮಾನದಿಂದ ಕುಸಿದುಹೋದರು. ಮಾನಸಿಕವಾಗಿ ಜರ್ಜಿತಗೊಂಡು, ಹೇಗಾದರೂ ಮಾಡಿ ಇದಕ್ಕೆಲ್ಲ ಒಂದು ಅಂತ್ಯ ಹಾಡಲೇ ಬೇಕು ಎಂದು ಅವರು ಒಂದು ನಿರ್ಧಾರ ಮಾಡಿದರು.
ಮಾರನೆಯ ದಿವಸ ಪಕ್ಕದ ಮನೆಯ ರಾಜು ಸಿಂಧೂರಿಯ ಬಗ್ಗೆ ವಿಚಾರಿಸುವ ಎಂದು ಅವರ ಮನೆಗೆ ಬಂದರು. ಮನೆಯ ಬೆಲ್ ಎಷ್ಟು ಮಾಡಿದರು ತೆಗೆಯದಿದ್ದುದ್ದನ್ನು ನೋಡಿ ಕಿಟಕಿಯಿಂದ ಇಣುಕಿ ನೋಡಿದರು. ಅಲ್ಲಿಯ ದೃಶ್ಯ ನೋಡಿ ಅವರ ಎದೆ ಒಡೆದುಹೋದಂತಾಯಿತು. ಪಡಸಾಲೆಯಲ್ಲಿ ಸಿಂಧೂರಿಯ ಅಪ್ಪ ಅಮ್ಮ ನೇಣು ಹಾಕಿಕೊಂಡಿದ್ದರು. ರಾಜು ಕೂಡಲೇ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸರು ಬಂದು ಬಾಗಿಲು ಒಡೆದು ಒಳಗಡೆ ಹೋಗಿ ನೋಡಿದರು. ಪಡಸಾಲೆಯಲ್ಲಿ ಸಿಂಧೂರಿಯ ಅಪ್ಪ ಅಮ್ಮ ನೇಣು ಹಾಕಿಕೊಂಡಿದ್ದರೇ , ಕೋಣೆಯಲ್ಲಿ ಸಿಂಧೂರಿಯ ದೇಹ ಅವಳ ಹಾಸಿಗೆಯ ಮೇಲೆ ಬಿದ್ದಿತ್ತು. ಅವಳ ಬಾಯಿಯಿಂದ ನೊರೆ ಬಂದಿತ್ತು.
ಸಿಂಧೂರಿಯ ಅಪ್ಪ ಅಮ್ಮ ಅವಳಿಗೆ ವಿಷವುಣಿಸಿ ತಾವು ನೇಣು ಹಾಕಿಕೊಂಡು, ಇಹಲೋಕ ತ್ಯಜಿಸಿದ್ದರು.
ಸಂಸ್ಕಾರ ಮರೆತು ಜೊತೆಯಲ್ಲೇ ಬೆಳೆದ ಹೆಣ್ಣುಮಕ್ಕಳ ಜೊತೆಗೆ ಕೆಟ್ಟ ಕೆಲಸ ಮಾಡುವಂತ, ಮಾನಸಿಕವಾಗಿ ನೊಂದ ಪೋಷಕರ ಜೊತೆಯಲ್ಲಿ ನಿಲ್ಲವುದನ್ನು ಮರೆತು, ಮಾನಸಿಕವಾಗಿ ಅವರನ್ನೇ ಕೊಲ್ಲುವಂತ ಈ ಸಮಾಜದಲ್ಲಿ, ನಾವು ಬದುಕುವುದು ಬೇಡ ಅಂತ ನಿರ್ಧಾರ ಮಾಡಿದ್ದರು.
ಅಂತಹ ನಿರ್ಧಾರ ತೆಗೆದುಕೊಂಡಿದ್ದು ಸರಿಯೇ? ತಪ್ಪೇ? ಉತ್ತರಿಸಲು ಅವರಿಲ್ಲ.
– ಶ್ರೀನಾಥ ಹರದೂರ ಚಿದಂಬರ